ಶುಕ್ರವಾರ, ಮಾರ್ಚ್ 5, 2021
30 °C

ತೊಂಡೂರು ಮಸೀದಿ ಆಸ್ತಿ ವಾಪಸ್‌ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೊಂಡೂರು ಮಸೀದಿ ಆಸ್ತಿ ವಾಪಸ್‌ ನೀಡಿ

ಹಾವೇರಿ: ಸವಣೂರ ತಾಲ್ಲೂಕು ತೊಂಡೂರು ಗ್ರಾಮದ ಜುಮ್ಮಾ ಮಸೀದಿಗೆ ಸೇರಿದ ಒಟ್ಟು 73.33 ಎಕರೆ ವಕ್ಫ್‌ ಆಸ್ತಿಯನ್ನು ಖಾಸಗಿಯವರಿಗೆ ಪರಭಾರೆಗೊಳಿಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಜಿಲ್ಲಾಡಳಿತ ಭವನದ ಗುರುವಾರ ವಕ್ಫ್‌ ಆಸ್ತಿ ಭ್ರಷ್ಟಾಚಾರ ಮುಕ್ತ ಮಹಾಸಭಾದಿಂದ ಪ್ರತಿಭಟನೆ ನಡೆಯಿತು.

ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಘಟಕದ ವಕ್ತಾರ ಅನ್ವರ್ ಮಾಣಿಪ್ಪಾಡಿ ಮಾತನಾಡಿ, 2 ಜಿ ತರಂಗ ಗುಚ್ಛ ಹಗರಣಕ್ಕಿಂತಲೂ ಕರ್ನಾಟಕ ವಕ್ಫ್‌ ಮಂಡಳಿಯ ಆಸ್ತಿ ಅಕ್ರಮ ಮಾರಾಟ ಹಗರಣ ದೊಡ್ಡದಾಗಿದೆ ಎಂದರು.

ಕರ್ನಾಟಕ ವಕ್ಫ್‌ ಮಂಡಳಿಯ ಸುಮಾರು 55 ಸಾವಿರ ಎಕರೆ ಆಸ್ತಿ ಪೈಕಿ 28 ಸಾವಿರಕ್ಕೂ ಹೆಚ್ಚು ಅಕ್ರಮವಾಗಿ ಖಾಸಗಿಯವರಿಗೆ ಪರಭಾರೆ ಮಾಡಲಾಗಿದೆ. ಮಂಡಳಿಗೆ ನೋಂದಣಿ ಯಾಗದ 20 ಸಾವಿರ ಎಕರೆಗೂ ಅಧಿಕ ಆಸ್ತಿಯನ್ನು ಅಧಿಕಾರಿಗಳು ಹಾಗೂ ರಾಜಕಾರಣಿಗಳು ನುಂಗಿದ್ದಾರೆ ಎಂದು ದೂರಿದರು.

ಬಹುತೇಕ ಜಿಲ್ಲೆಗಳಲ್ಲಿ ಕರ್ನಾಟಕ ವಕ್ಫ್‌ ಮಂಡಳಿಯ ಆಸ್ತಿಯನ್ನು ಅಕ್ರಮ ಮಾರ್ಗಗಳ ಮೂಲಕ ಖಾಸಗಿಯವರು ಪರಭಾರೆ ಮಾಡಿಕೊಂಡಿದ್ದಾರೆ. ಸವಣೂರ ತಾಲ್ಲೂಕು ತೊಂಡೂರು ಗ್ರಾಮದಲ್ಲೂ ಖಾಸಗಿಯರು ಕಬಳಿಸಿದ್ದಾರೆ.

ಪರಭಾರೆಯಾದ ತೊಂಡೂರು ಜುಮ್ಮಾ ಮಸೀದಿಯ ಆಸ್ತಿಯನ್ನು ವಾಪಸ್‌ ಕೊಡಿಸುವಂತೆ ಹೈಕೋರ್ಟ್‌ ಸವಣೂರು ಉಪವಿಭಾಗಾಧಿಕಾರಿಗಳಿಗೆ ಆದೇಶ ನೀಡಿತ್ತು. ಆದರೆ, ಅವರು ಅದನ್ನು ಬೆಳಗಾವಿ ವಿಭಾಗೀಯ ವಕ್ಫ್ ಮಂಡಳಿಗೆ ವರ್ಗಾಯಿಸಿದ್ದಾರೆ ಎಂದರು.

ಮುಖಂಡ ರಹೀಮ್ ಉಚ್ಚಿಲ ಮಾತನಾಡಿ, ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಆಸ್ತಿಯನ್ನು ಕಬಳಿಸಿದ್ದಾರೆ. ಈಗ ದೇವಸ್ಥಾನ ಹಾಗೂ ಮಸೀದಿಗಳ ಆಸ್ತಿಯನ್ನು ಬಿಡುತ್ತಿಲ್ಲ ಎಂದು ಆರೋಪಿಸಿದರು.

ಕಾನೂನಿನ ಪ್ರಕಾರ ದೇವಸ್ಥಾಗಳಿಗೆ ಅಥವಾ ಮಸೀದಿಗಳಿಗೆ ನೀಡಿದ ಆಸ್ತಿಯನ್ನು ಯಾವುದೇ ಕಾರಣಕ್ಕೂ ಪರಭಾರೆ ಮಾಡಲು ಬರುವುದಿಲ್ಲ. ಆದರೆ, ಕೆಲ ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ಮಸೀದಿಗಳ ಆಸ್ತಿಯನ್ನು ಕಬಳಿಸಿದ್ದಾರೆ. ಈ ಬಗ್ಗೆ ಕೂಡಲೇ ಸೂಕ್ತ ತನಿಖೆ ನಡೆಸಬೇಕು. ಆಸ್ತಿಯನ್ನು ವಾಪಾಸ್‌ ಮಸೀದಿಗಳಿಗೆ ಕೊಡಿಸಬೇಕು ಎಂದು ಒತ್ತಾಯಿಸಿದರು.

ವಕ್ಫ್‌ ಮಂಡಳಿತ ಮಾಜಿ ಅಧ್ಯಕ್ಷ ಅಲ್ಲಾಬಕ್ಷ್‌ ತಿಮ್ಮಾಪುರ, ಮುಹಿರುದ್ದೀನ್‌, ನಯಾಜ್‌ ಅಹಮ್ಮದ್‌, ಸಾಬುದ್ದೀನ್‌ ಖಾನಮ್‌, ಯಾಸೀಂ ರಾಜ್‌ ಶಹೀನಾ, ಜರೀನಾ ಎಸ್‌., ಮಾಲತೇಶ ಜಾದವ್‌, ಸುರೇಶ ಅಂಗಡಿ, ನಾಸೀರ್‌ ಮಖಾಂದಾರ್‌, ಖಾಸಿಂ ಸಾಹೇಬ್‌, ಮುನಿರ್‌ ಅಹಮ್ಮದ್‌ ರಾಣೆಬೆನ್ನೂರ ಇದ್ದರು.

* * 

ವಕ್ಫ್‌ ಆಸ್ತಿ ಭ್ರಷ್ಟಾಚಾರ ಮುಕ್ತಿ ಮಹಾಸಭಾದಿಂದ ನಡೆಯುತ್ತಿರುವ ಪ್ರತಿಭಟನೆಗೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಅನ್ವರ್ ಮಾಣಿಪ್ಪಾಡಿ

ಬಿಜೆಪಿ ವಕ್ತಾರ, ರಾಜ್ಯ ಅಲ್ಪಸಂಖ್ಯಾತರ ಘಟಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.