ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಟಿ ಕಿಮ್ಮತ್ತು ತಲೆಮಾಂಸದ ಗಮ್ಮತ್ತು

Last Updated 8 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೀಗರೂಟ, ದೇವರ ಹರಕೆ ತೀರಿಸುವ ವೇಳೆ, ಪಿತೃಪಕ್ಷ – ಹೀಗೆ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಈ ಭಾಗದ ಜನರು ಮಟನ್ ಚಾಪ್ಸ್, ಬೋಟಿ ಫ್ರೈ, ತಲೆಕಾಲು ಸಾರನ್ನು ಮಾಡಿಕೊಂಡು ಉಣ್ಣುತ್ತಾರೆ. ಹಾಸನ ಮತ್ತು ಮಂಡ್ಯ ಜಿಲ್ಲೆಗಳ ಈ ಮೂರು ಸಿಗ್ನೇಚರ್ ತಿನಿಸುಗಳು ವರ್ಲ್ಡ್ ಫೇಮಸ್ಸು. ಹದವಾಗಿ ಬೆಂದ ತಲೆಮಾಂಸ ಬೆಣ್ಣೆಯಷ್ಟೇ ಮೃದು; ಚೆನ್ನಾಗಿ ಮಸಾಲೆ ಹಿಡಿದ ಮಟನ್ ಚಾಪ್ಸ್ ಹೊಟ್ಟೆ ಸೇರುತ್ತಿದ್ದರೆ ನಾಲಗೆಯಲ್ಲಿನ ರುಚಿಮೊಗ್ಗುಗಳಲ್ಲಿ ರಸ ಚಿಮ್ಮುತ್ತದೆ.

ಇನ್ನು ಬಾಡೂಟ ಮಾಡಿದ ದಿನವಷ್ಟೇ ರಮ್ ಅಥವಾ ವಿಸ್ಕಿ ಕುಡಿಯುವ ಅಭ್ಯಾಸ ಇಟ್ಟುಕೊಂಡವರಿಗೆ ಬೋಟಿ ಫ್ರೈ ಸಖತ್ ಕಾಂಬಿನೇಷನ್. ಅದಕ್ಕೆ ಹೇಳುವುದು ಬೋಟಿ ಗೊಜ್ಜಿನ ಕಿಮ್ಮತ್ತನ್ನು ಬಲ್ಲವನೇ ಬಲ್ಲ ಎಂದು! ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾಗ ನಾಟಿಶೈಲಿಯ ವಿವಿಧ ಖಾದ್ಯಗಳ ರೆಸಿಪಿ ಇಲ್ಲಿವೆ. ಒಮ್ಮೆ ಟ್ರೈ ಮಾಡಿ ನೋಡಿ...

ಬೋಟಿ ಫ್ರೈ
ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ಚಪಾತಿ, ಇಡ್ಲಿ ಇವೆಲ್ಲಕ್ಕೂ ಅದ್ಭುತ ಕಾಂಬಿನೇಷನ್ ಬೋಟಿ ಫ್ರೈ. ಬೋಟಿ, ಲಿವರ್, ಬ್ಲಡ್‌ನ ಜೊತೆಗೆ ಚೆನ್ನಾಗಿ ಬೆಂದ ಕಡಳೆಕಾಳು ಗೊಜ್ಜಿನ ರುಚಿಯನ್ನು ಇಮ್ಮಡಿಗೊಳಿಸುತ್ತದೆ. ಬೋಟಿ ಫ್ರೈನಲ್ಲಿ ಜಿಡ್ಡು ತುಳುಕಿಸುವ ಛರ್ಬಿ ಇದ್ದರಂತೂ ಅದರ ಖದರ‍್ರೇ ಬೇರೆ.

ಬೇಕಾಗುವ ಸಾಮಾಗ್ರಿಗಳು: ಬೋಟಿ - 1ಕೆ.ಜಿ., ಕಡಲೆಕಾಳು, ಕೊತ್ತಂಬರಿಸೊಪ್ಪು - ಸ್ವಲ್ಪ, ಧನಿಯಾ ಪುಡಿ, ಖಾರಪುಡಿ, ಈರುಳ್ಳಿ, ಕಾಯಿ ತುರಿ, ಕಡ್ಲೆ, ಶುಂಠಿ, ಬೆಳ್ಳುಳ್ಳಿ, ಲವಂಗ, ಕಾಳುಮೆಣಸು, ಚಕ್ಕೆ, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಬೋಟಿ ಫ್ರೈ ರುಚಿ ಅದನ್ನು ಸ್ವಚ್ಛಗೊಳಿಸುವುದರ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ, ಮೊದಲಿಗೆ ಕುದಿಯುವ ನೀರಿನಲ್ಲಿ ಬೋಟಿಯನ್ನು ಹಾಕಿ ಚೆನ್ನಾಗಿ ಬೇಯಿಸಬೇಕು. ಹೀಗೆ ಮಾಡಿದಾಗಲೇ ಬೋಟಿ ಚರ್ಮವನ್ನು ಚೆನ್ನಾಗಿ ಎರೆಯಲು ಸಾಧ್ಯ. ಬೋಟಿಯನ್ನು ಸ್ವಚ್ಛಗೊಳಿಸಿದ ನಂತರ ಅದನ್ನು ಒಂದು ಸಾಧಾರಣ ಸೈಜ್‌ನಲ್ಲಿ ಕತ್ತರಿಸಿಕೊಳ್ಳಬೇಕು. ನಂತರ, ಲಿವರ್ ಮತ್ತು ಬ್ಲಡ್ ಅನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಬೇಕು.

ಮೊದಲಿಗೆ ಹಿಂದಿನ ದಿನ ರಾತ್ರಿ ನೆನೆಸಿಟ್ಟುಕೊಂಡ ಕಡಲೆಕಾಳಿಗೆ ಸ್ವಲ್ಪ ನೀರು ಹಾಕಿ ಎರಡು ವಿಶಲ್ ಕೂಗಿಸಿಕೊಳ್ಳಬೇಕು. ಬೇಕಿದ್ದಲ್ಲಿ ಬಾಳೆಕಾಯಿ ಕೂಡ ಬಳಕೆ ಮಾಡಬಹುದು. ಬಾಳೆಕಾಯಿ ಹಾಕುವುದಾದರೆ ಅದರ ಸಿಪ್ಪೆಯನ್ನು ತೆಗೆದು ಸಣ್ಣದಾಗಿ ಹೆಚ್ಚಿಕೊಂಡು ಬೇಯಿಸಿಟ್ಟುಕೊಳ್ಳಬೇಕು.

ನಂತರ, ಒಲೆಯ ಮೇಲೆ ಒಂದು ಬಾಣಲೆ ಇಟ್ಟು ಎರಡು ಚಮಚ ಎಣ್ಣೆ ಹಾಕಿ ಉದ್ದಕ್ಕೆ ಕತ್ತರಿಸಿಕೊಂಡ ಒಂದು ಅಥವಾ ಒಂದೂವರೆಯಷ್ಟು ಈರುಳ್ಳಿಯನ್ನು ಹಾಕಿ ಹುರಿದುಕೊಳ್ಳಬೇಕು. ಹೀಗೆ ಹುರಿಯುವಾಗ ಅದಕ್ಕೆ ಒಂದು ಬೆಳ್ಳುಳ್ಳಿ, ಸ್ವಲ್ಪ ಶುಂಠಿ, ಕಾಳುಮೆಣಸು ಹಾಕಿಕೊಂಡು ತಿಳಿ ಕಂದುಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ನಂತರ ಅದನ್ನು ಆರಲು ಬಿಡಬೇಕು. ಆಮೇಲೆ ಕಾಯಿತುರಿ, ಕಡ್ಲೆ, ಕೊತ್ತಂಬರಿ ಸೊಪ್ಪು, ಚಕ್ಕೆ, ಲವಂಗ, ಎರಡು ಚಮಚ ಧನಿಯಾ, ಎರಡು ಚಮಚ ಖಾರಪುಡಿ ಹಾಕಿಕೊಂಡು ಹುರಿದಿರುವ ಶುಂಠಿ, ಬೆಳ್ಳುಳ್ಳಿ, ಈರುಳ್ಳಿಯನ್ನು ಅದಕ್ಕೆ ಮಿಶ್ರಣ ಮಾಡಿ, ಸ್ವಲ್ಪ ನೀರು ಹಾಕಿ ಸಣ್ಣದಾಗಿ ರುಬ್ಬಿಕೊಳ್ಳಬೇಕು.

ಒಲೆಯ ಮೇಲೆ ಕುಕ್ಕರ್ ಇಟ್ಟು ಎರಡು ಚಮಚ ಎಣ್ಣೆ ಹಾಕಿ, ಒಗ್ಗರಣೆಗೆ ಒಂದು ಈರುಳ್ಳಿಯನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ಅದಕ್ಕೆ ಬೋಟಿಯನ್ನು ಹಾಕಿ ಸ್ವಲ್ಪ ಉಪ್ಪು ಹಾಗೂ ಸ್ವಲ್ಪ ಅರಿಶಿಣಪುಡಿಯನ್ನು ಹಾಕಿ ಐದು ನಿಮಿಷ ಕೈಯಾಡಿಸಬೇಕು. ನಂತರ ಅದಕ್ಕೆ ರುಬ್ಬಿ ಇಟ್ಟುಕೊಂಡ ಮಸಾಲೆಯನ್ನು ಹಾಕಬೇಕು. ತೆಳುವಾಗದ ರೀತಿಯಲ್ಲಿ ಸ್ವಲ್ಪ ನೀರು ಹಾಕಿಕೊಂಡರೆ ಸಾಕು. ನಂತರ ಬೇಯಿಸಿಟ್ಟುಕೊಂಡ ಕಡಲೆಕಾಳು ಹಾಗೂ ಬಾಳೆ ಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ತಿರುವಬೇಕು. ನಂತರ ಮುಚ್ಚಳ ಮುಚ್ಚಿ ಮೂರು ವಿಷಲ್ ಕೂಗಿಸಿದರೆ ಘಮಘಮಿಸುವ ಬೋಟಿ ಗೊಜ್ಜು ರೆಡಿ.

*


ತಲೆಕಾಲು ಸಾರು
ರೊಟ್ಟಿ ಮತ್ತು ತಲೆ ಮಾಂಸ ಸೂಪರ್ ಕಾಂಬಿನೇಷನ್. ಹಾಗೆಯೇ, ಮುದ್ದೆಗೂ ತಲೆಕಾಲು ಸಾರು ಚೆನ್ನಾಗಿ ಹೊಂದಿ ಬರುತ್ತದೆ. ಹದವಾಗಿ ಬೆಂದ ತಲೆಮಾಂಸ ಬೆಣ್ಣೆಯಷ್ಟೇ ಮೃದುವಾಗಿರುತ್ತದೆ. ಇನ್ನು ಕಾಲಿನ ಮೂಳೆಯಲ್ಲಿರುವ ರಸವನ್ನು ಹೀರುವಾಗ ಸಿಕ್ಕುವ ಆನಂದವನ್ನು ಮೂಳೇ ಕಚ್ಚಿಯೇ ತಿಳಿಯಬೇಕು.

ಬೇಕಾಗುವ ಸಾಮಗ್ರಿಗಳು: ಕುರಿ ಅಥವಾ ಆಡಿನ ತಲೆ-ಕಾಲು – 1ಕೆ.ಜಿ., ಈರುಳ್ಳಿ – 2, ಬೆಳ್ಳುಳ್ಳಿ – 2, ಶುಂಠಿ – ಸ್ವಲ್ಪ , ಚಕ್ಕೆ, ಲವಂಗ, ಕಾಳುಮೆಣಸು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಧನಿಯಾ ಪುಡಿ – 3ಚಮಚ, ಖಾರಪುಡಿ – 2ಚಮಚ, ಸ್ವಲ್ಪ ಕಾಯಿ ಹಾಗೂ ಕಡ್ಲೆ. ಅರಿಶಿಣಪುಡಿ – ಸ್ವಲ್ಪ, ಎಣ್ಣೆ – 3ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಮೊದಲಿಗೆ ಒಲೆಯ ಮೇಲೆ ಕುಕ್ಕರ್ ಇಟ್ಟು ಅದು ಬಿಸಿಯಾದ ನಂತರ ಕಾಲಿನ ಮಾಂಸವನ್ನು ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ನಾಲ್ಕು ವಿಶಲ್ ಕೂಗಿಸಬೇಕು. ಕಾಲುಗಳು ಒರಟಾಗಿರುವುದರಿಂದ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ತಲೆ-ಕಾಲನ್ನು ಒಟ್ಟಿಗೆ ಕೂಡ ಹಾಕಿ ಬೇಯಿಸಬಹುದು. ಆದರೆ, ಕಾಲನ್ನು ಮೊದಲೇ ಬೇಯಿಸಿಟ್ಟುಕೊಂಡರೆ ಒಳ್ಳೆಯದು.

ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಕಾಳು ಮೆಣಸು – ಎಲ್ಲವನ್ನೂ ಹಾಕಿ ಹುರಿದುಕೊಳ್ಳಬೇಕು. ಕಂದುಬಣ್ಣಕ್ಕೆ ತಿರುಗಿದ ನಂತರ ಕೆಳಗಿಟ್ಟು ಆರಿಸಿಕೊಳ್ಳಬೇಕು. ನಂತರ, ಅದನ್ನು ಮಿಕ್ಸಿಗೆ ಹಾಕಿಕೊಂಡು ಸ್ವಲ್ಪ ಕೊತ್ತಂಬರಿಸೊಪ್ಪು ಸೇರಿಸಿ ಸಣ್ಣದಾಗಿ ರುಬ್ಬಿಕೊಳ್ಳಬೇಕು. ನಂತರ ಕುಕ್ಕರ್‌ಗೆ ಸ್ವಲ್ಪ ಎಣ್ಣೆ ಹಾಕಿ, ಕತ್ತರಿಸಿಟ್ಟುಕೊಂಡ ಅರ್ಧ ಈರುಳ್ಳಿ ಹಾಕಿ ಹುರಿದುಕೊಂಡ ನಂತರ ತಲೆಮಾಂಸವನ್ನು ಹಾಕಬೇಕು. ಅದಕ್ಕೆ ಈ ಮೊದಲೇ ಬೇಯಿಸಿಟ್ಟುಕೊಂಡ ಕಾಲಿನ ಮಾಂಸವನ್ನೂ ಮಿಶ್ರಣ ಮಾಡಬೇಕು.

ನಂತರ ಅರಿಶಿಣಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎರಡು ನಿಮಿಷ ಹುರಿದುಕೊಂಡ ಮೇಲೆ ರುಬ್ಬಿದ ಮಸಾಲೆಯಲ್ಲಿ ಮುಕ್ಕಾಲು ಭಾಗವನ್ನು ಹಾಕಿಕೊಂಡು ಐದು ನಿಮಿಷ ಹುರಿದುಕೊಳ್ಳಬೇಕು. ನಂತರ ಒಂದು ಲೋಟ ನೀರು ಹಾಕಿ, ಕುಕ್ಕರ್‌ನ ಮುಚ್ಚಳ ಮುಚ್ಚಿ ಮೂರು ವಿಶಲ್ ಕೂಗಿಸಿಕೊಳ್ಳಬೇಕು. ನಂತರ ಉಳಿದ ಮಸಾಲೆಗೆ ಧನಿಯಾ ಪುಡಿ, ಖಾರಪುಡಿ ಮಿಶ್ರಣ ಮಾಡಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು.

ವಿಶಲ್ ಬಂದ ನಂತರ ಮುಚ್ಚಳ ತೆರೆದು ರುಬ್ಬಿಟ್ಟುಕೊಂಡ ಖಾರವನ್ನು ಹಾಕಬೇಕು. ಧನಿಯಾ ಮತ್ತು ಖಾರಪುಡಿ ಮಿಶ್ರಣ ಹಾಕಿ ಸ್ವಲ್ಪ ಸಮಯ ಬೇಯಿಸಿಕೊಳ್ಳಬೇಕು. ನಂತರ ರುಬ್ಬಿಟ್ಟುಕೊಂಡ ಕಾಯಿ ತುರಿ ಮತ್ತು ಕಡ್ಲೆಯನ್ನು ಮಿಶ್ರಣವನ್ನು ಅದಕ್ಕೆ ಹಾಕಿ ಸ್ವಲ್ಪ ಸಮಯ ಬೇಯಿಸಿದರೆ ತಲೆಕಾಲು ಸಾರು ಸವಿಯಲು ಸಿದ್ಧ.

*


ಚಿಕನ್ ಚಾಪ್ಸ್‌
ಬೇಕಾಗುವ ಸಾಮಗ್ರಿಗಳು:
ಚಿಕನ್ – 1/2ಕೆ.ಜಿ., ಪುದೀನ – 3/4ಕಪ್‌, ಉದ್ದಕ್ಕೆ ಕತ್ತರಿಸಿಕೊಂಡ ಈರುಳ್ಳಿ – 3, ಅರಿಶಿಣ, ಧನಿಯಾ ಮತ್ತು ಖಾರಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಎಣ್ಣೆ.

ರುಬ್ಬಿಕೊಳ್ಳಲು: 50ಎಸಳು ಬೆಳ್ಳುಳ್ಳಿ, ಒಂದೂವರೆ ಟೀ ಸ್ಪೂನ್ ಕಾಳುಮೆಣಸು, ಎರಡು ಈರುಳ್ಳಿ, ಹಸಿಮೆಣಸಿನ ಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಚಕ್ಕೆ, ಲವಂಗ, ಶುಂಠಿ ಜೊತೆಗೆ ಸ್ವಲ್ಪ ನೀರನ್ನು ಹಾಕಿ ರುಬ್ಬಿಕೊಳ್ಳಬೇಕು.

ತಯಾರಿಸುವ ವಿಧಾನ: ಒಲೆಯ ಮೇಲೆ ಕುಕ್ಕರ್ ಇಟ್ಟು ಬಿಸಿ ಮಾಡಿ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಈರುಳ್ಳಿ ಹಾಕಿ ಹುರಿದುಕೊಳ್ಳಬೇಕು. ಕಂದುಬಣ್ಣಕ್ಕೆ ಬಂದ ನಂತರ ಅದಕ್ಕೆ ಪುದೀನ ಹಾಕಬೇಕು. ನಂತರ ಚಿಕನ್ ಹಾಕಬೇಕು. ಆಮೇಲೆ ರುಚಿಗೆ ತಕ್ಕಷ್ಟು ಉಪ್ಪು, ಅರಿಷಿಣ ಹಾಕಿ ಹುರಿದುಕೊಳ್ಳಬೇಕು. ಸಾಧಾರಣ ಹುರಿಯಲ್ಲಿ ನಾಲ್ಕೈದು ನಿಮಿಷ ಬೇಯಿಸಬೇಕು. ನಂತರ ಖಾರಪುಡಿ, ಧನಿಯಾ ಪುಡಿ ಮಿಶ್ರಣ ಜೊತೆಗೆ ರುಬ್ಬಿಟ್ಟುಕೊಂಡ ಮಸಾಲೆಯನ್ನು ಹಾಕಬೇಕು. ಸ್ವಲ್ಪ ಗರಂ ಮಸಾಲೆ ಹಾಕಿ ಕುಕ್ಕರ್ ಮುಚ್ಚಿ ಎರಡು ವಿಶಲ್ ಕೂಗಿಸಬೇಕು. ಬೆಂದ ನಂತರ ಚಿಕನ್ ಚಾಪ್ಸ್ ಅನ್ನು ರೊಟ್ಟಿ ಅಥವಾ ಚಪಾತಿ ಜೊತೆಗೆ ಸವಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT