ಶುಕ್ರವಾರ, ಫೆಬ್ರವರಿ 26, 2021
30 °C
ಶಾಲಾ ಕಾಲೇಜುಗಳಿಗೆ ರಜೆ– ಬಿಗಿ ಬಂದೋಬಸ್ತ್‌

ಶವವಾಗಿ ಪತ್ತೆಯಾದ ಯುವಕ: ಕೊಲೆ ಶಂಕೆ– ಹೊನ್ನಾವರ ಉದ್ವಿಗ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶವವಾಗಿ ಪತ್ತೆಯಾದ ಯುವಕ: ಕೊಲೆ ಶಂಕೆ– ಹೊನ್ನಾವರ ಉದ್ವಿಗ್ನ

ಹೊನ್ನಾವರ: ಬುಧವಾರ ರಾತ್ರಿ ಹಿಂದೂ– ಮುಸ್ಲಿಂ ಗಲಭೆ ನಡೆದಿದ್ದ ಇಲ್ಲಿನ ಶನಿ ದೇವಸ್ಥಾನದ ಹಿಂಭಾಗದಲ್ಲಿರುವ ಶೆಟ್ಟಿಕೆರೆಯಲ್ಲಿ, ಪಟ್ಟಣದ ಪರೇಶ ಮೇಸ್ತ (19) ಎಂಬ ಯುವಕನ ಶವ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.

ಇದರಿಂದ ಆಕ್ರೋಶಗೊಂಡ ಸ್ಥಳೀಯರು, ಉದ್ರಿಕ್ತ ಮುಸ್ಲಿಮರೇ ಗಲಭೆಯಲ್ಲಿ ಯುವಕನನ್ನು ಕೊಂದಿದ್ದಾಗಿ ಆರೋಪಿಸಿ ಪ್ರತಿಭಟನೆಗಿಳಿದರು. ಇದರಿಂದ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಉಂಟಾಯಿತು.

ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲ್ಲೂಕು ಆಸ್ಪತ್ರೆಗೆ ತಂದಾಗ, ಆಸ್ಪತ್ರೆಯ ಮುಂಭಾಗದಲ್ಲಿಯೇ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ‘ಕೊಲೆ ಆರೋಪಿಗಳನ್ನು ಬಂಧಿಸಬೇಕು. ಹಾಗೂ ಬಂಧಿತ ಹಿಂದೂಗಳನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು. ಆಸ್ಪತ್ರೆಯ ಎದುರು ಜನ ಹಾಗೂ ಪೊಲೀಸರು ಸುತ್ತುವರಿದಿದ್ದರಿಂದ ಆಸ್ಪತ್ರೆಯ ಒಳಗೆ ಹೋಗಲಾಗದೆ ರೋಗಿಗಳು ವಾಪಸ್ ತೆರಳಬೇಕಾಯಿತು.

ಹೊನ್ನಾವರ ಪಟ್ಟಣ, ಸಮೀಪದ ಕರ್ಕಿ, ಹಳದೀಪುರ ಹಾಗೂ ಕಾಸರಕೋಡಿನ ಎಲ್ಲ ಶಾಲಾ– ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿತ್ತು. ವ್ಯಾಪಾರ ವಹಿವಾಟು, ಬಸ್ ಸಂಚಾರ ಹಾಗೂ ಇತರ ವಾಹನಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪಟ್ಟಣದ ಎಲ್ಲೆಡೆ ಬಂದ್ ವಾತಾವರಣ ಕಂಡುಬಂದಿತು.

ಆ ಬಳಿಕ, ಮೃತದೇಹವನ್ನು ಕೇಸರಿ ಧ್ವಜಗಳಿದ್ದ ವಾಹನದಲ್ಲಿಟ್ಟು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಕೆಲವರು, ಪೊಲೀಸರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಬಿಜೆಪಿ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪಶ್ಚಿಮ ವಲಯ ಐಜಿಪಿ ಹೇಮಂತ ನಿಂಬಾಳ್ಕರ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಸ್ಥಳದಲ್ಲಿ ಹಾಜರಿದ್ದರು. ಸಾವಿರಾರು ಪೊಲೀಸರು ಪಟ್ಟಣದಲ್ಲಿ ಬೀಡು ಬಿಟ್ಟಿದ್ದು ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.

**

ಹೆಣದ ಮೇಲೆ ಶಿಲಾನ್ಯಾಸ ಮಾಡಿದ ಸಿ.ಎಂ: ಕರಂದ್ಲಾಜೆ

ಉಡುಪಿ: ‘ಜಿಹಾದಿಗಳಿಂದ ಕೊಲೆಯಾದ ಪರೇಶ ಮೇಸ್ತ ಮೃತದೇಹದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೇರವೇರಿಸಿದ್ದಾರೆ’ ಎಂದು ಸಂಸದೆ ಶೋಭಾ ಕರದ್ಲಾಂಜೆ ಆರೋಪಿಸಿದರು.

‘ಯುವಕ ಕಾಣೆಯಾದ ವಿಷಯ ಪೊಲೀಸರಿಗೆ ಗೊತ್ತಿತ್ತು. ಮುಖ್ಯಮಂತ್ರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಮುಚ್ಚಿಡಲಾಗಿತ್ತು. ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತನೊಬ್ಬ ಕೊಲೆಯಾಗಿರುವ ಮಾಹಿತಿ ತಿಳಿದಿದ್ದರೂ ಪ್ರಕರಣವನ್ನು ಮುಚ್ಚಿ ಹಾಕಿ, ಆತನ ಹೆಣದ ಮೇಲೆ ಸಿದ್ದರಾಮಯ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಲಾನ್ಯಾಸ ಮಾಡಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

**

ಪರೇಶ, ಬಂದರಿನಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ. ಬುಧವಾರ ರಾತ್ರಿ ಶನಿ ದೇವಸ್ಥಾನದ ಸಮೀಪ ಹೋದವನು ನಂತರ ನಾಪತ್ತೆಯಾಗಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದೆ.

-ಕಮಲಾಕರ ಬುದವಂತ ಮೇಸ್ತ, ಮೃತ ಪರೇಶನ ತಂದೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.