ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನನ್ನು ತೆಗೆಯಲು ಮಣಿಶಂಕರ್ ಸುಪಾರಿ: ಮೋದಿ

ಕಾಂಗ್ರೆಸ್‌ನಿಂದ ಅಮಾನತಾದ ನಾಯಕನ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪ್ರಧಾನಿ
Last Updated 8 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಭಾಭರ್ (ಗುಜರಾತ್): ‘ನನ್ನನ್ನು ತೆಗೆಯಲು ಮಣಿಶಂಕರ್ ಅಯ್ಯರ್ ಪಾಕಿಸ್ತಾನಿಯರಿಗೆ ಸುಪಾರಿ ನೀಡಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ತಮ್ಮನ್ನು ನೀಚ ಮನುಷ್ಯ ಎಂದು ಟೀಕಿಸಿದ್ದ ಮಣಿಶಂಕರ್ ಅಯ್ಯರ್ ವಿರುದ್ಧ ಸತತ ಎರಡನೇ ದಿನವೂ ಪ್ರಧಾನಿ ವಾಗ್ದಾಳಿ ಮುಂದುವರಿಸಿದ್ದಾರೆ.

ಇಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ಅವರು ಈ ಆರೋಪ ಮಾಡಿದರು. ‘ಶ್ರೀಮಾನ್ ಮಣಿಶಂಕರ್ ಅಯ್ಯರ್... ಏನು ಮಾಡಿದ್ದರು ಎಂಬುದು ನಿಮಗೆ ಗೊತ್ತೆ’ ಎಂದು ಪ್ರಧಾನಿ ಸಾರ್ವಜನಿಕರನ್ನು ಪ್ರಶ್ನಿಸಿ ಮಾತು ಆರಂಭಿಸಿದರು. ‘ಅಯ್ಯರ್ ನನ್ನ ಬಗ್ಗೆ ಹೇಗೆಲ್ಲಾ ಕೆಟ್ಟದಾಗಿ ಮಾತನಾಡಿದ್ದಾರೆ ಗೊತ್ತಾ? ಅವರು ಬೈದದ್ದು ನನ್ನನ್ನಾ ಅಥವಾ ಗುಜರಾತನ್ನಾ ಅಥವಾ ಸುಸಂಸ್ಕೃತ ಭಾರತೀಯ ಸಮಾಜವನ್ನಾ? ಅವರ ಬೈಗುಳಗಳ ಬಗ್ಗೆ ಮಾತನಾಡುವುದು ಬೇಡ. ಡಿಸೆಂಬರ್ 18ರ ಫಲಿತಾಂಶದ ಮೂಲಕ ಗುಜರಾತಿಗರು ಆ ಬೈಗುಳಗಳಿಗೆ ಉತ್ತರ ನೀಡಲಿದ್ದಾರೆ’ ಎಂದು ಮೋದಿ ಹೇಳಿದರು.

‘ನಾನು ಆಗಷ್ಟೇ ಪ್ರಧಾನಿಯಾಗಿದ್ದೆ. ಈ ಮನುಷ್ಯ ಪಾಕಿಸ್ತಾನಕ್ಕೆ ಹೋಗಿ ಕೆಲವು ಪಾಕಿಸ್ತಾನಿಯರನ್ನು ಭೇಟಿ ಮಾಡಿದ್ದರು. ಅದೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿವೆ. ‘ಮೋದಿಯನ್ನು ಹಾದಿಯಿಂದ ತೆಗೆಯುವವರೆಗೂ ಭಾರತ–ಪಾಕಿಸ್ತಾನ ಸಂಬಂಧ ಸುಧಾರಿಸುವುದಿಲ್ಲ’ ಎಂದು ಸಭೆಯೊಂದರಲ್ಲಿ ಅಯ್ಯರ್ ಕೆಲವು ಪಾಕಿಸ್ತಾನಿಯರಿಗೆ ಹೇಳಿದ್ದರು’ ಎಂದು ಮೋದಿ ಆರೋಪಿಸಿದರು

‘ಹಾದಿಯಿಂದ ತೆಗೆ ಎಂಬುದರ ಅರ್ಥ ಏನು ಎಂಬುದನ್ನು ಯಾರಾದರೂ ಹೇಳುತ್ತೀರಾ. ನೀವು ಪಾಕಿಸ್ತಾನಕ್ಕೆ ಹೋಗಿದ್ದು ನನ್ನ ವಿರುದ್ಧ ಸುಪಾರಿ ಕೊಡುವುದಕ್ಕಾ?’ ಎಂದು ಮೋದಿ ಹರಿಹಾಯ್ದಿದ್ದಾರೆ.

‘ಜನರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಅಂಬಾ ಮಾತೆ ನನ್ನನ್ನು ರಕ್ಷಿಸುತ್ತಿದ್ದಾಳೆ. ಅಯ್ಯರ್ ಅವರ ಈ ಮಾತುಕತೆ ನಡೆದು ಮೂರು ವರ್ಷ ಕಳೆದಿದೆ. ಅದನ್ನೆಲ್ಲಾ ಮುಚ್ಚಿ ಹಾಕಲು ಕಾಂಗ್ರೆಸ್ ಪ್ರಯತ್ನಿಸಿತ್ತು. ಇವರು ಅಯ್ಯರ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ’ ಎಂದು ಕಾಂಗ್ರೆಸ್‌ ಅನ್ನು ಕುಟುಕಿದ್ದಾರೆ.

**

ಕಾಂಗ್ರೆಸ್ ನನಗೆಲ್ಲವನ್ನೂ ನೀಡಿದೆ. ಕಾಂಗ್ರೆಸ್ ಇಲ್ಲದೆ ಭಾರತಕ್ಕೆ ಭವಿಷ್ಯವೇ ಇಲ್ಲ. ನನ್ನ ಹೇಳಿಕೆಯಿಂದ ಈ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾದರೆ, ಪಕ್ಷ ವಿಧಿಸುವ ಯಾವುದೇ ಶಿಕ್ಷೆಯನ್ನು ಅನುಭವಿಸುತ್ತೇನೆ.

-ಮಣಿಶಂಕರ್ ಅಯ್ಯರ್

**

ಮಣಿಶಂಕರ್ ಅಯ್ಯರ್‌ ಅವರನ್ನು ಪಕ್ಷದಿಂದ ಅಮಾನತು ಮಾಡಿರುವುದು ಕಾಂಗ್ರೆಸ್‌ನ ಚುನಾವನಾ ತಂತ್ರವಷ್ಟೆ. ಇಂಥಹದ್ದನ್ನು ಕಾಂಗ್ರೆಸ್ ಮೊದಲಿನಿಂದಲೂ ಮಾಡಿಕೊಂಡೇ ಬರುತ್ತಿದೆ.

-ಅರುಣ್ ಜೇಟ್ಲಿ, ಕೇಂದ್ರ ಹಣಕಾಸು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT