7

ಕಣ್ಣೆರಡು ನೋಟ ಒಂದೇ

Published:
Updated:
ಕಣ್ಣೆರಡು ನೋಟ ಒಂದೇ

ಮನೆಯ ಹೊರಗೆ ದುಡಿಯುವ ಹೆಣ್ಣು ಮನೆಯ ಒಳಗೆ ಗಂಡ–ಸಂಸಾರ ಎಂಬ ನೇಗಿಲಿಗೆ ಕೊರಳೊಡ್ಡಲೇ ಬೇಕು. ದುಡಿಮೆ ಗಂಡಿನದ್ದಾದರೇನು, ಹೆಣ್ಣಿನದ್ದಾದರೇನು ಅದು ಇಡೀ ಕುಟುಂಬದ್ದು ಎನ್ನುವ ಮನೋಧರ್ಮ ಬೆಳೆದದ್ದೇ ಆದರೆ ‘ಕಣ್ಣೆರೆಡಾದರೂ ನೋಟ ಒಂದೇ’ ಆಗುವುದು.

‘ಚಿನ್ನೂ.. ಬೇಗ ಬಾ ತಿಂಡಿ ತಿನ್ನು, ಯೂನಿಫಾರಂ ಹಾಕ್ಕೋ ಬಾ. ಹೋಮ್‌ವರ್ಕ್‌ ಬುಕ್ ತಗೊಂಡ್ಯಾ? ಸ್ಕೂಲ್ ವ್ಯಾನ್ ಬರೋ ಹೊತ್ತಾಯ್ತು ಶೂಸ್ ಹಾಕ್ಕೊಡ್ತೀನಿ ಬಾ...’

‘ರೀ, ನಿಮ್ ಊಟದ ಬ್ಯಾಗ್ ಒಣಗೋಕೆ ಇಟ್ಟಿದ್ದೆ ತಗೊಂಡ್ಬನ್ರೀ. ಡಬ್ಬಿ ಹಾಕ್ಕೊಡ್ತೀನಿ, ನಿಮ್ಮ ಕರ್ಚೀಫ್ ಅಲ್ಲೇ ನಿಮ್ಮ ಆಫೀಸ್ ಬ್ಯಾಗ್ ಮೇಲೇನೇ ಇಟ್ಟಿದ್ದೀನ್ರೀ ನೋಡಿ... ನಿಮ್ ಬಟ್ಟೆ ಐರನ್ ಆಗಿದೆ, ಅಲ್ಲೇ ಹ್ಯಾಂಗರ್‌ನಲ್ಲಿ ಹಾಕಿದೀನಿ ನೋಡ್ರೀ.. ನಾ ಆಡುಗೆ ಮನೇಲಿದೀನಿ, ಬಿಟ್ಟು ಬಂದ್ರೆ ಸೀದುಹೋಗುತ್ತೆ. ಪ್ಲೀಸ್ ನೀವೇ ನೋಡ್ರಿ ಅಲ್ಲೇ ಇದೆ...’ ಇದು ಗೃಹಿಣಿಯರು ಬೆಳಿಗ್ಗೆ ಬಳಸುವ ಸಾಮಾನ್ಯ ಶಬ್ದರತ್ನಗಳು.

‘ಅಯ್ಯೋ ಟೈಮ್ ಆಗೋಯ್ತು, ಎಷ್ಟು ಬೇಗ ಬೇಗ ಮಾಡಿದ್ರೂ ತುದಿಗಟ್ಟಿನಲ್ಲೇ ಆಫೀಸ್‌ಗೆ ತಲುಪಲು ಆಗುವುದು. ಒಂದಿನಾನಾದ್ರೂ ಬೇಗ ಹೋಗೋಣ ಅಂದ್ರೆ ಆಗೋಲ್ಲ, ಬಸ್ಸಿನಲ್ಲಿ ಆಪಾಟಿ ರಷ್ ಇರುತ್ತೆ.’ ಉದ್ಯೋಗಕ್ಕೆ ಹೋಗುವ ಗೃಹಿಣಿಯರಿಂದ ಮೇಲಿನದರ ಜೊತೆಗೆ ಈ ಮತ್ತಷ್ಟು ವಿಶೇಷಣಗಳು.

ಹೌದು... ಕಾಲ ಬದಲಾಗಿದೆ. ಉದ್ಯೋಗ ಎನ್ನುವುದು ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಗಂಡು–ಹೆಣ್ಣು ಇಬ್ಬರೂ ಸರಿ ಸಮಾನರಾಗಿ ಎಲ್ಲ ಉದ್ಯೋಗಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಮೂಲತಃ ಹೆಣ್ಣಿಗೆ ಒಂದೇ ಸಮಯದಲ್ಲಿ ಅನೇಕ ಕೆಲಸಗಳನ್ನು ಮಾಡುವ ಶಕ್ತಿಯಿದೆ (ಮಲ್ಟಿ ಟಾಸ್ಕಿಂಗ್). ಸ್ತ್ರೀಯರ ಮೂಡ್ ಬಹುಬೇಗ ವ್ಯತ್ಯಯ ಆಗುತ್ತೆ ಅನ್ನುವುದು ನನ್ನದೇ ಅನುಭವ. ಅದನ್ನು ನಾವು ಹೊಂದಾಣಿಕೆ ಅಂತ ಕೂಡ ಅನ್ನೋಣವೇ. ಹಾಗೆನ್ನುವುದೇ ಅನುಕೂಲಸಿಂಧು ಕೂಡ.

ನನ್ನ ಸಹೋದ್ಯೋಗಿ ಗೆಳತಿಯೊಬ್ಬಳಿಗೆ ಹುಣಸೂರಿಗೆ ವರ್ಗ ಆದಾಗ ಮಗಳ ಶಾಲೆ ಅರ್ಧ ವರ್ಷ ಆಗಿತ್ತು. ಮಗುವಿನ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಎಂದು ತಾನೇ ಪ್ರತಿನಿತ್ಯ ಮಂಡ್ಯದಿಂದ ಹುಣಸೂರಿಗೆ ಓಡಾಡುತ್ತಿದ್ದಳು. ಬೆಳಗ್ಗೆ ಏಳಕ್ಕೆ ಮನೆ ಬಿಟ್ಟರೆ ರಾತ್ರಿ ಹತ್ತೂವರೆಗೆ ಮನೆ ಸೇರುತ್ತಿದ್ದುದು. ಈ ಪಾಡು ಮೂರ್ನಾಲ್ಕು ತಿಂಗಳದ್ದು. ಆ ಸಮಯದಲ್ಲಿ ಅವಳು ಬೆಳ್ಳಂಬೆಳಿಗ್ಗೆಯೇ ಎದ್ದು ಗಂಡ ಮಗಳಿಗೆ ತಿಂಡಿ, ಅಡುಗೆ ಮಾಡಿ ಮಗಳ ಡಬ್ಬಿಗೆ ಹಾಕಿಟ್ಟು, ತಾನೂ ತಿಂದು, ತನ್ನ ಡಬ್ಬಿಗೂ ಹಾಕಿಕೊಂಡು ಹೊರಡಬೇಕಿತ್ತು. ಟ್ರಾವೆಲ್ ಮಾಡುವ ಆಯಾಸ.

ಇಷ್ಟರ ಜೊತೆಗೆ ಬ್ಯಾಂಕಿನಲ್ಲೂ ವಿಪರೀತ ಕೆಲಸವಿರುತ್ತಿತ್ತು. ಆದರೂ ‘ಅಯ್ಯೋ ಹಣೇಬರಹವೇ, ಯಾಕಪ್ಪಾ ಬೇಕಿತ್ತು ನಂಗೆ ಇವೆಲ್ಲಾ’ ಅನ್ನೋ ಹೆಣ್ಣುಮಕ್ಕಳ ಸಾಮಾನ್ಯ ಡೈಲಾಗನ್ನು ಒಂದು ದಿನವಾದರೂ ಹೇಳಿದ್ದನ್ನು ನಾ ಕೇಳಲಿಲ್ಲ. ಅವಳನ್ನು ನೋಡಿ ನಾನು ಹೊಟ್ಟೆ ಉರಿದುಕೊಳ್ತಿದ್ದೆ. ಕೇಳಿದರೆ ‘ಕಷ್ಟ ಅಂದ್ಕೊಂಡ್ರೆ ಕಷ್ಟ, ಇಷ್ಟ ಅಂದ್ಕೊಂಡ್ರೆ ಇಷ್ಟ. ಕಷ್ಟ ಅಂದ್ಕೊಂಡ್ರೆ ಪರಿಹಾರ ಆಗುತ್ತಾ? ಇಲ್ವಲ್ಲಾ..

ಹಾಗಿದ್ರೆ ಇಷ್ಟ ಮಾಡ್ಕೊಂಡ್ರೆ ನೆಮ್ಮದಿ ತಾನೇ? ಇವೆಲ್ಲಾ ನಮ್ ನಮ್ ಮೈಂಡ್ ಸೆಟ್’ ಅಂತಿದ್ಳು. ಇಂದಿಗೂ ಐದು ಕೋಣೆಯ ದೊಡ್ಡ ಮನೆಯ ಪೂರ್ತಿ ಕೆಲಸ ಅವಳದ್ದೇ. ಜೊತೆಗೆ ಉದ್ಯೋಗ. ಇವೆಲ್ಲದರ ನಡುವೆ ನಗುನಗುತ್ತ ಅನ್ನಪೂರ್ಣೆಯಂತೆ ಅವತಾರವೆತ್ತಿ, ಬಂದು ಹೋಗುವವರಿಗೆ ಆತಿಥ್ಯ ನೀಡುವ ಕೆಲಸವೂ. ಒಮ್ಮೆಯೂ ಅದಕ್ಕಾಗಿ ಮರುಗಿದ್ದು ಕಾಣೆ.

ಹೌದಲ್ವಾ, ಸಣ್ಣ ಪುಟ್ಟದ್ದಕ್ಕೆ ನಾವು ಎಷ್ಟೊಂದು ಕೊರಗಿ, ಸೊರಗಿ, ಹೊರಲಾರದ ಬಂಡೆ ತನ್ನ ತಲೆಯ ಮೇಲೆ ಮಾತ್ರವೇ ಬಿದ್ದಿದೆ ಎಂದುಕೊಳ್ಳುವ ಅನೇಕರಿಗೆ ನನ್ನ ಗೆಳತಿ ಒಂದು ಮಾದರಿ.

ನಿಮಗೊಂದು ವಿಷಯವನ್ನು ನಾನು ಹೇಳಲೇಬೇಕು. ‘ಹೆಣ್ಣಿಗೆ ಹೆಣ್ಣೇ ಶತ್ರು’ ಎನ್ನುವ ಮಾತಿದೆಯಲ್ಲಾ ಅದು ಸುಳ್ಳು ಅನಿಸಿದ್ದು ನನ್ನ ಹಿಂದಿನ ಶಾಖೆಯಲ್ಲಿ. ಶೇ.50 ನಮ್ಮದೇ ಸಾಮ್ರಾಜ್ಯ. ಅಂದರೆ ಸುಮಾರು 15ಜನ ಹೆಣ್ಣುಮಕ್ಕಳೆ ಸಹೋದ್ಯೋಗಿಗಳು.

ಹೊಸ ಬಟ್ಟೆ ಹಾಕಿಕೊಂಡು ಬಂದರೆ ‘ಪಾರ್ಟಿ ಕೊಡಿಸ್ಬೇಕು’ ಅಂತ ಒಬ್ಬರಿಗೊಬ್ಬರು ರೇಗಿಸಿಕೊಳ್ಳುತ್ತ, ನಿತ್ಯವೂ ಒಬ್ಬರಿಗೊಬ್ಬರು ಬೆಳಿಗ್ಗೆ ಕಂಡ ಕೂಡಲೇ ನಿಧಿ ಸಿಕ್ಕವರ ಹಾಗೆ ಮುಖದ ತುಂಬ ನಗೆ ಹರಡುತ್ತ ಗುಡ್‌ಮಾರ್ನಿಂಗ್ ಹೇಳಿ, ಮಧ್ಯಾಹ್ನ ಹರಟುತ್ತ, ವಿನೋದ ಮಾಡುತ್ತ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದ ಸಂತಸದ ಕ್ಷಣಗಳು ಇಂದಿಗೂ ಮೆಲುಕು ಹಾಕುವಂಥದ್ದು.

ಮಧ್ಯಾಹ್ನ ಊಟದ ವೇಳೆಯೇ ಅಡುಗೆ ರೆಸಿಪಿಗಳ ಹಂಚಿಕೆ ಮತ್ತು ನಾಳೆಯ ಅಡುಗೆಯ ಕಡೆ ಒಂದು ಯೋಜನೆ.. ಹೀಗೆ ನಮ್ಮ ಡೈನಿಂಗ್ ಹಾಲ್ ಒಂದು ಮಿನಿ ಪ್ರಪಂಚವಾಗಿತ್ತು. ಒಮ್ಮೆಮ್ಮೆ ಹುಸಿಮುನಿಸೂ ತಲೆಯೆತ್ತುತ್ತಿತ್ತು. ಹೆಣ್ಣುಮಕ್ಕಳ ಪ್ರಪಂಚ ಅಂದಮೇಲೆ ಅದೂ ಇರಲೇಬೇಕಲ್ವಾ...!

ನಾ ಕಂಡ ಹಾಗೆ ನನ್ನ ಸಹೋದ್ಯೋಗಿಗಳ ಪೈಕಿ ಹೆಣ್ಣುಮಕ್ಕಳು ಹೆಚ್ಚು ಕೆಲಸವಂತರು. ಮನೆಯಲ್ಲಿ ಎಂಥದ್ದೇ ಬೇಸರದ ಸಂದರ್ಭವನ್ನು ಎದುರಿಸಿ ಬಂದಿದ್ದರೂ ಕೆಲಸಕ್ಕೆ ಬಂದ ಕೂಡಲೇ ಎಲ್ಲ ನೋವನ್ನೂ ಮರೆತು ಅತ್ಯಂತ ಸಕ್ಷಮ ಕಾರ್ಯತತ್ಪರತೆ ತೋರಿಸುವುದನ್ನು ಕಂಡಿದ್ದೇನೆ. ಇಷ್ಟಾಗ್ಯೂ ಬಹುತೇಕ ಹೆಣ್ಣುಮಕ್ಕಳು ತಮ್ಮ ಸಹೋದ್ಯೋಗಿಗಳೊಂದಿಗೆ ನಗುನಗುತ್ತ ಕೆಲಸ ಮಾಡುವುದನ್ನೂ ಗಮನಿಸಿದ್ದೇನೆ.

ಆ ನೋವೆಲ್ಲ ನೆನಪಾಗುವುದು, ಕಣ್ಣೀರಾಗುವುದು ಮತ್ತೆ ಮಧ್ಯಾಹ್ನದ ಊಟದ ವೇಳೆ, ಅದೂ ಯಾರಾದರೂ ಗುರುತಿಸಿ ಕೇಳಿದರೆ ಮಾತ್ರ... ಮತ್ತೆ ಊಟದ ನಂತರದ ಕಚೇರಿಯ ಕೆಲಸ. ಪುರುಷ ಸಹೋದ್ಯೋಗಿಗಳನ್ನು ಕಡೆಗಣಿಸುತ್ತಿದ್ದೇನೆಂದಲ್ಲಾ. ಹೋಲಿಸಿ ನೋಡುವುದೂ ತಪ್ಪಾಗಬಹುದು. ಆದರೂ ನನ್ನ ಇಪ್ಪತ್ತೈದು ವರ್ಷಗಳ ಸೇವಾವಧಿಯಲ್ಲಿ ಪ್ರಾಮಾಣಿಕತೆ, ಶ್ರದ್ಧೆ, ಸಮಯಪ್ರಜ್ಞೆ, ನಿಷ್ಠೆ ಹೆಣ್ಣುಮಕ್ಕಳಲ್ಲೇ ಹೆಚ್ಚು ಎನಿಸಿದ್ದರೆ ನನ್ನನ್ನು ಪಕ್ಷಪಾತಿಯೆನ್ನಬೇಡಿ! ಇದಕ್ಕೆ ಅಪವಾದಗಳೂ ಇಲ್ಲವೆಂದೇನಿಲ್ಲ; ಆದರೆ ಅವು ಬೆರಳೆಣಿಕೆಯಷ್ಟು.

ಸಂಜೆಯಾಗುತ್ತಿದ್ದಂತೆಯೇ ಹೆಣ್ಣುಮಕ್ಕಳ ಕಣ್ಣು ಗಡಿಯಾರದ ಕಡೆಗೆ. (ಇದನ್ನು ಜೋಕ್ ಅನ್ನಬೇಡಿ ಪ್ಲೀಸ್! ಹೆಣ್ಣುಮಕ್ಕಳು ಹೆಚ್ಚು ನೋಡುವುದು ಗಂಡ–ಮಕ್ಕಳಿಗಿಂತ ಕನ್ನಡಿ ಮತ್ತು ಗಡಿಯಾರಗಳನ್ನು...!) ಯಥಾ ಪ್ರಕಾರ ಕೆಲಸ ಮುಗಿದ ಕೂಡಲೇ ಮನೆಯತ್ತ ಮನಸ್ಸು ಓಡುತ್ತದೆ.

ಇನ್ನೊಂದು ವಿಷಯ. ಆರ್ಥಿಕ ವರ್ಷಾಂತ್ಯದಲ್ಲಿ ಸಾಮಾನ್ಯವಾಗಿ ಆರ್ಥಿಕ ಸಂಸ್ಥೆಗಳಲ್ಲಿ ಕೆಲಸ ಜಾಸ್ತಿ ಇರುತ್ತೆ. ಆಫೀಸಿನಿಂದ ಹೊರಡುವುದು ಲೇಟ್ ಆಗಲೂಬಹುದು. ನನ್ನ ಪರಿಚಯದವರೊಬ್ಬರ ತುಂಬುಕುಟುಂಬದಲ್ಲಿ ಇದೇ ದೊಡ್ಡ ಹಗರಣವಾಗಿ ಹೋಗಿತ್ತು. ‘ನೀನೊಬ್ಬಳೇನಾ ಕೆಲಸ ಮಾಡೋಳು, ಇಲ್ಲಿ ನಾನೊಬ್ಬಳು ಮನೇಲಿದೀನಿ ಕತ್ತೆ ಚಾಕರಿ ಮಾಡೋಕೆ ಅಂತ ನೀನು ಎಲ್ಲ ಕೆಲಸ ನನ್ ಮೇಲೇನೇ ಬಿಟ್ಟು ಮಜವಾಗಿ ತಣ್ಣಗೆ ಆಫೀಸಿನಲ್ಲೇ ಇದ್ಬಿಡ್ತೀಯಾ’ ಅಂತ ಅತ್ತೆ ಮೂದಲಿಸುತ್ತಿದ್ದರಂತೆ. ಅಲ್ಲೋ ಆಫೀಸಿನಲ್ಲಿ ವಿಪರೀತ ಕೆಲಸ ಇದ್ದು ಎಲ್ಲರೂ ಕೆಲಸ ಮಾಡುತ್ತಿದ್ದಾಗ ಗಡಿಯಾರದ ಗಂಟೆ ಠಣ್ ಅಂತ ಶಬ್ದ ಮಾಡಿದ ಕೂಡಲೇ ಹೊರಡುತ್ತೇನೆ ಅಂತ ಬ್ಯಾಗ್ ನೇತುಹಾಕಿಕೊಳ್ಳುವ ಹಾಗೂ ಇರಲಿಲ್ಲ.

ಇದಕ್ಕೆ ವಿರುದ್ಧವಾದ ಸಂದರ್ಭ ನನ್ನ ಕಿರಿಯ ಸಹೋದ್ಯೋಗಿಯೊಬ್ಬರದ್ದು. ಮನೆಯಲ್ಲಿ ಇವಳು, ಇವಳ ಪತಿ ಮತ್ತು ಪುಟ್ಟ ಕಂದ. ಮಗುವನ್ನು ನೋಡಿಕೊಳ್ಳುವ ಕಿಂಡರ್ ಗಾರ್ಟನ್ ಅವರು ‘ಸಂಜೆ ಆರು ಗಂಟೆಯ ಮೇಲೆ ನಾವು ಬಾಗಿಲು ಹಾಕುತ್ತೇವೆ. ಬೇಗ ಬರಬೇಕು’ ಅಂದಿದ್ರು. ಅವಳ ಪತಿ ಬೇರೆ ಊರಿನಲ್ಲಿ ಕೆಲಸ. ಬರುವುದು ರಾತ್ರಿ ಹತ್ತಕ್ಕೆ. ಮಗುವನ್ನು ನೋಡಿಕೊಳ್ಳೋರು ಯಾರು ಅನ್ನೋದೇ ಯಕ್ಷಪ್ರಶ್ನೆ. ಆಫೀಸಿನಲ್ಲಿ ಹೆಚ್ಚು ಕೆಲಸ ಅಂದಾಗ ಈಕೆಗೆ ಪೀಕಲಾಟ.

ಇಷ್ಟರೊಟ್ಟಿಗೆ ಪುರುಷ ಸಹೋದ್ಯೋಗಿಗಳ ಜೊತೆ ಕೆಲಸ ಮಾಡುವಾಗ ಎದುರಿಸಬೇಕಾದ ಸಂದರ್ಭಗಳ ನಿರ್ವಹಣೆಯಲ್ಲೂ ಹೆಣ್ಣು ಅತ್ಯಂತ ಸೂಕ್ಷ್ಮವಾಗಿರಬೇಕು. ಐದಾರು ವರ್ಷಗಳ ಹಿಂದಿನ ಮಾತಿದು: ನನ್ನ ಪಕ್ಕದ ಆಫೀಸಿನ ಹುಡುಗಿಯೊಬ್ಬಳು ಅವಳ ಆಫೀಸ್‌ಇನ್‌ಚಾರ್ಜ್ ಪುರುಷ ಸಹೋದ್ಯೋಗಿಯಿಂದ ತನಗೆ ಬರುತ್ತಿದ್ದ ಮೆಸೇಜ್‌ಗಳನ್ನು ಯಾರಿಗೂ ತೋರಿಸಲಾಗದೆ, ಧೈರ್ಯವಾಗಿ ಎದುರಿಗೇ ಅವನಿಗೇ ಹೇಳಲೂ ಆಗದೆ ಪರಿಸ್ಥಿತಿಗೆ ಹೆದರಿ ನಿತ್ಯವೂ ಕಣ್ಣೀರಿಡುತ್ತಿದ್ದು ನಾ ಬಲ್ಲೆ.

ಇಂತಹ ಸಂದರ್ಭಗಳಲ್ಲೇ ಹೆಣ್ಣು ಮಾನಸಿಕವಾಗಿ ಕುಗ್ಗದ ಹಾಗೆ ಕುಟುಂಬಸ್ಥರು, ಸ್ನೇಹಿತರು ಸಹೋದ್ಯೋಗಿಗಳು ಸಹಕಾರ ಕೊಡಬೇಕು. ಅದು ಸಾಮಾಜಿಕ ನ್ಯಾಯ ಕೂಡ.

ಹೆಣ್ಣು ಸಹಜವಾಗಿಯೇ ಭಾವನಾಜೀವಿ. ಹಾಗಾಗಿ ಅವಳ ಮೂಡ್‌ಗಳು ತುಂಬಾ ಸ್ವಿಂಗ್ ಆಗುತ್ತಿರುತ್ತವೆ. ಅದರಲ್ಲೂ ಹಾರ್ಮೋನುಗಳ ವ್ಯತ್ಯಾಸದ ಸಂದರ್ಭಗಳಲ್ಲಿ ಹೆಚ್ಚು. ಇದನ್ಯಾಕೆ ಹೇಳಿದೆ ಅಂದ್ರೆ, ಮನೆಯ ಎಲ್ಲವನ್ನೂ ಮರೆತು ಕಚೇರಿಯ ಕೆಲಸಗಳಲ್ಲಿ ಹೇಗೆ ಮೈಮರೆತು ತೊಡಗಿಕೊಳ್ಳುತ್ತಾಳೋ, ಹಾಗೆಯೇ ಆಫೀಸಿನಿಂದ ಮನೆಗೆ ಬಂದ ಕೂಡಲೇ ಆಕೆ ‘ಉದ್ಯೋಗಸ್ಥಸ್ತ್ರೀ’ ಎನ್ನುವುದನ್ನೂ ನೆನಪಿಗೆ ತಾರದೆ ಅಪ್ಪಟ ಗೃಹಿಣಿಯಾಗಬಲ್ಲಳು. ತಾನು, ತನ್ನ ಮನೆ, ತನ್ನ ಕುಟುಂಬದ ಸ್ವಾಸ್ಥ್ಯ ಎನ್ನುವ ಕಡೆ ಲಕ್ಷ್ಯ. ಪುಟ್ಟ ಮಕ್ಕಳಿದ್ದರೆ ಅವರ ಓದಿನ ಕಡೆ ಮತ್ತು ಅವರ ಸಂಸ್ಕಾರದ ಕಡೆ ಗಮನ , ಬೆಳೆಯುತ್ತಿರುವ ಹೆಣ್ಣುಮಕ್ಕಳಿದ್ದರೆ ಓದಿನ ಜೊತೆ ಅವರ ರಕ್ಷಣೆಯ ಚಿಂತೆ, ಬೆಳೆದ ಗಂಡುಮಕ್ಕಳಾದರೆ ಇದರ ಜೊತೆ ಅವರ ಸಹವಾಸ, ಹವ್ಯಾಸ, ಅಭ್ಯಾಸಗಳ ಕಡೆ ಕಣ್ಣು..... ಹೆಣ್ಣೆಂದರೆ ಅದಕ್ಕೇ ಇಂದಿಗೂ ಒಂದು ಅಚ್ಚರಿ.

ಹೆಣ್ಣು–ಗಂಡಿನ ಜೊತೆಜೊತೆಗೆ ಸರಿಸಮಾನವಾಗಿ ಹೆಜ್ಜೆ ಹಾಕಿ ಅವನೆಲ್ಲ ಜವಾಬ್ದಾರಿಗಳಿಗೆ ತನ್ನ ಹೆಗಲನ್ನೂ ಕೊಡುತ್ತಿದ್ದಾಳೆ. ಆದರೆ ಒಬ್ಬರ ಆದಾಯ ಇದ್ದ ಸಂದರ್ಭಕ್ಕೂ, ಇಬ್ಬರೂ ದುಡಿದಾಗ ಇರುವ ಜೀವನ ನಿರ್ವಹಣೆಯ ಹೊಣೆಗೂ ವ್ಯತ್ಯಾಸವಿದೆ. ಇಬ್ಬರೂ ದುಡಿದಾಗ ಜೀವನ ಸುಲಭ. ಹಾಗಾಗಿ ಹೆಣ್ಣುಮಕ್ಕಳೂ ಹೆಚ್ಚು ಹೆಚ್ಚು ಉದ್ಯೋಗಸ್ಥರಾಗಿದ್ದಾರೆ. ಮತ್ತು ಇದಕ್ಕೆ ಪ್ರಮುಖವಾಗಿ ಇನ್ನೂ ಹಲವು ಕಾರಣಗಳು:

- ತಾನು ಇಷ್ಟು ವಿದ್ಯೆ ಕಲಿತು ಮನೆಯಲ್ಲಿ ಕುಳಿತುಕೊಂಡರೆ ವಿದ್ಯೆ ವ್ಯರ್ಥವಾಗುತ್ತದೆ.

- ಜಾಗತೀಕರಣದ ಪ್ರಭಾವದಿಂದ ಕೊಳ್ಳುಬಾಕ ಸಂಸ್ಕೃತಿಗೆ ನಾವು ಪಕ್ಕಾಗಿರುವುದು.

- ಬೇರೆಯವರೊಂದಿಗೆ ತಮ್ಮನ್ನು ತಾವು ಹೋಲಿಸಿಕೊಂಡು ನೋಡುವ ಹೆಣ್ಣಿನ ಸಹಜ ಗುಣ.

- ಉದ್ಯೋಗ ತಂದುಕೊಡುವ ಆರ್ಥಿಕ ಸ್ವಾತಂತ್ರ್ಯ, ಆತ್ಮವಿಶ್ವಾಸ, ಅಂತಸ್ತು, ಘನತೆ ಮತ್ತು ಗೌರವ.

ಬಹು ಮುಖ್ಯ ಅಂದರೆ ಕುಟುಂಬದಲ್ಲಿ ಪರಸ್ಪರ ಪ್ರೀತಿ, ಗೌರವ, ಸಹಕಾರ. ಹಾಗಿದ್ದಾಗ ಬದುಕು ಸುಲಲಿತ. ಉಪ್ಪು, ಸಿಹಿ, ಖಾರ, ಹುಳಿ – ಎಲ್ಲವೂ ಹದವಾಗಿದ್ದರೆ ಮಾತ್ರವೇ ರುಚಿಯಾದ ಅಡುಗೆ. ಹಾಗೆಯೇ ಎಲ್ಲ ಭಾವಗಳು ಸಾಮರಸ್ಯದಿಂದ ಕೂಡಿದರೇ ಬದುಕು ಸುಂದರ.

ಇಂದಿನ ಪುರುಷರೂ ಹಿಂದಿನ ಕಾಲದ ಹಾಗೆ ಕೈಕಟ್ಟಿ ಕುಳಿತು, ತಾವು ಕುಳಿತ ಜಾಗಕ್ಕೇ ಸೇವೆ ಬಯಸದೆ, ತಮ್ಮ ಪತ್ನಿಯ ಅನೇಕ ಗೃಹಕೃತ್ಯಗಳನ್ನು ಹಂಚಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ. ಅದರಲ್ಲೂ ಐ.ಟಿ. ಸೆಕ್ಟರ್‌ನಲ್ಲಿ ಇರುವ ಮಹಿಳೆಯರು ಹಗಲೆನ್ನದೆ, ಇರುಳೆನ್ನದೆ, ಕಾಲ-ಸಮಯದ ಪರಿವೆಯಿಲ್ಲದೆ ದುಡಿದು ಹೈರಾಣಾಗಿ ಬರುವಾಗ ಅದೆಷ್ಟೋ ಬಾರಿ ಪತಿಯೇ ಮನೆಗೆಲಸಗಳನ್ನು ಮಾಡಿಕೊಡುವ ಪರಿಪಾಠವೂ ಇದೆ.

ನಾ ಮನೆಗೆ ಬಂದ ಕೂಡಲೇ ಏನಾದರೂ ಕೆಲಸ ಮಾಡೋಕಂತ ಹೊರಟರೆ ನನ್ನ ಪತಿ ’ಅಲ್ಲೂ ಬೆಳಿಗ್ಗೆಯಿಂದ ದುಡಿದು ಸುಸ್ತಾಗಿ ಬಂದಿದೀಯ. ಮೊದಲು ರೆಸ್ಟ್ ಮಾಡು, ಜೀವವನ್ನು ತುಂಬ ಜೀರ್ಣಿಸಬಾರ್ದು’ ಅಂತ ಹೇಳುತ್ತ ಏಷ್ಟೋ ಬಾರಿ ನನ್ನ ಕೈಯಿಂದ ಮನೆಯ ಸುತ್ತುಗೆಲಸಗಳನ್ನು ಕಿತ್ತುಕೊಂಡು ಮಾಡುತ್ತಾರೆ. ನನ್ನ ಮನೆಯವರಂಥವರಿದ್ದರೆ ಉದ್ಯೋಗಸ್ಥ ಮಹಿಳೆಗೆ ಬಾಳು ಭಾರವಾಗದು.

ಗಂಡು–ಹೆಣ್ಣಿಬ್ಬರೂ ಜೋಡೆತ್ತಿನ ಬಂಡಿಯ ಎರಡು ಜೀವಗಳು. ಸರಿಸಮಾನವಾಗಿ ನಡೆದರೆ ಜೀವನ ಸುಗಮವಾಗಿರುತ್ತದೆ ಎನ್ನುವುದಕ್ಕೆ ಇದನ್ನು ಒಂದು ಉದಾಹರಣೆಯೆನ್ನಬಹುದು.

ಬಹುತೇಕ ಎಲ್ಲರ ಬದುಕು ಧಾವಂತದಲ್ಲಿಯೇ ದೂಡುತ್ತದೆ. ಆದರೆ ಉದ್ಯೋಗಸ್ಥ ಗೃಹಿಣಿ ಸ್ವಲ್ಪ ಆರ್ಗನೈಸ್ಡ್ ಆಗಿದ್ದರೆ ಇದರಿಂದ ಹೊರತಾಗಿರಬಹುದು. ನಾ ನೋಡಿದ ಹಾಗೆ ನನ್ನ ಅನೇಕ ಮಹಿಳಾ ಸಹೋದ್ಯೋಗಿಗಳು ರಜಾ ದಿನಗಳಲ್ಲಿಯೇ ಯೋಜನೆ ರೂಪಿಸಿ, ವಾರಕ್ಕೆ ಬೇಕಾದ ಸಾಂಬಾರಿನ ಪುಡಿ, ದೋಸೆ ಇಡ್ಲಿಯ ಹಿಟ್ಟುಗಳನ್ನು ತಯಾರಿಸಿಟ್ಟುಕೊಳ್ಳುತ್ತಾರೆ. ಹಿಂದಿನ ದಿನವೇ ಟಿ.ವಿ. ನೋಡುತ್ತಲೇ ಮರುದಿನದ ತಿಂಡಿ ಅಡುಗೆಗೆ ಬೇಕಾದ ತರಕಾರಿಗಳನ್ನು ಹೆಚ್ಚಿಟ್ಟುಕೊಳ್ಳುವುದರಿಂದ ಆರಂಭವಾಗಿ, ಮನೆಯ ಎಲ್ಲ ಕೆಲಸಗಳನ್ನು ಹೆಣ್ಣು ಅತ್ಯಂತ ಪ್ರೀತಿಯಿಂದಲೇ ಮಾಡುವುದನ್ನು ಕಂಡಿದ್ದೇನೆ. ಹಾಗೆಯೇ ಗೊಣಗುಟ್ಟುತ್ತ ‘ಮಾಡ್ಬೇಕಲ್ಲಾ’ ಅಂತ ಮಾಡುವವರನ್ನೂ ಕಂಡಿದ್ದೇನೆ.

ನಾ ಬೇರೆಯಲ್ಲ, ಅವನು/ಳು ಬೇರೆಯಲ್ಲ ಎನ್ನುವ ಅದ್ವೈತ ತತ್ವದಂತೆ ಇಬ್ಬರೂ ತಮ್ಮ ಇಡೀ ಬದುಕನ್ನೇ ಒಂದು ಎಂದುಕೊಂಡು ದಾಂಪತ್ಯಜೀವನ ನಡೆಸುವಾಗ ಇದು ನನ್ನ ಹಣ, ಇದು ನಿನ್ನ ಹಣ ಎನುವುದು ಹಾಸ್ಯಾಸ್ಪದವೆನಿಸುವುದು. ತಾನು ದುಡಿಯುವವಳು, ತನಗೇಕೆ ಅವನ/ಅವಳ ಹಂಗು ಎನ್ನುವ ಅಹಮಿಕೆ ಹೆಣ್ಣಿಗಾಗಲೀ, ಗಂಡಿಗಾಗಲೀ ಬಾರದಂತೆ ಸಂಭಾಳಿಸಿಕೊಳ್ಳುವುದು ಇಂದಿನ ಅತಿ ಜರೂರುಗಳಲ್ಲಿ ಒಂದು.

ದುಡಿಮೆ ಗಂಡಿನದ್ದಾದರೇನು, ಹೆಣ್ಣಿನದ್ದಾದರೇನು ಅದು ಇಡೀ ಕುಟುಂಬದ್ದು ಎನ್ನುವ ಮನೋಧರ್ಮ ಬೆಳೆದದ್ದೇ ಆದರೆ ’ಕಣ್ಣೆರೆಡಾದರೂ ನೋಟ ಒಂದೇ’ ಆಗುವುದು.

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry