3

ಹಿಂಗೊಂದ್‌ ‘ಸಾಹಿತ್ಯ’ ಪುರಾಣ

Published:
Updated:
ಹಿಂಗೊಂದ್‌ ‘ಸಾಹಿತ್ಯ’ ಪುರಾಣ

ಗಡಂಗಿನ ಮೂಲೆಯ ಮಂದ ಬೆಳಕಿನಲ್ಲಿ ಪ್ರಭ್ಯಾ, ಮದಿರೆಯ ಗ್ಲಾಸ್‌ ಮುಂದಿಟ್ಟುಕೊಂಡು ಮಂಕಾಗಿ ಕುಂತಿದ್ದು ನೋಡಿ ಕಕ್ಕುಲಾತಿಯಿಂದಲೇ, ‘ನೀ ಇಲ್ಲಿ ಕುಡ್ಯಾಕ್‌ ಕುಂತಿ ಅಂತಂದ್ರ ಮೈಸೂರು ಸಾಹಿತ್ಯ ಸಮ್ಮೇಳನದ ಗುಂಗಿನಿಂದ ಇನ್ನೂ ಹೊರ ಬಂದ್ಹಾಂಗ್‌ ಕಾಣಸ್ತಿಲ್‌ ಅನ್ನೋದು ಖಾತ್ರಿ ಆತು ನೋಡಪಾ’ ಎಂದು ಪೀಠಿಕೆ ಹಾಕಿದೆ.

‘ಏಯ್‌ ಹಂಗಲ್ಲೋ, ಸಾಹಿತ್ಯ ಸಮ್ಮೇಳನಕ್ಕೆ ನಾ ಯಾವ್‌ ಪುರುಷಾರ್ಥಕ್ಕ ಹೋಗಿದ್ದೆ ಅನ್ನೋ ಚಿಂತಿ ಹತ್ತೈತಿ. ಅದೇ ಚಿಂತ್ಯಾಗ ಕುಡಿದ್‌ ಚಿತ್‌ ಆಗ್‌ಬೇಕಂತ ಪಟ್‌ ಹಿಡಿದು ಕುಂತೀನಿ’ ಎಂದ.

‘ಯಾಕಪಾ, ಅಂಥಾದ್ದು ಏನಾಯ್ತು’ ಎಂದೆ. ಜಾತ್ರ್ಯಾಗ್‌ ಕನ್ನಡದ ಉಪದ್ರವಿ, ನಿರುಪದ್ರವಿ ಮನಸ್ಸುಗಳು ಚಿಂತಿಸಿ ಮಥಿಸಿ ಹೊಸ ಅಮೃತ ಬರ್ತದಂತ ನಾ ತಿಳ್ಕೊಂಡಿದ್ದೆ. ಅದು ಎಂಥಾ ಮೂರ್ಖತನ ಅನ್ನೋದು ಈಗ ಗೊತ್ತಾಗೈತಿ’ ಎಂದ.

ಸಮ್ಮೇಳನಾಧ್ಯಕ್ಷ ‘ಚಂಪಾ’ ಭಾಷಣದ ಭರಾಟೆ ಬಗ್ಗೆ ಬೈಬ್ಯಾಡಪಾ ಬುರುಡೆ ದಾಸಯ್ಯ’ ಎಂದೆ.

‘ಭರಾಟೆ – ಗಿರಾಟೆಗಿಂತ ‘ದುರ್ವಾಸ(ನೆ)’ ಮುನಿಗಳ ಮುನಿಸಿನ ಮುಂದs ಮೈಸೂರ್‌ ಪಾಕ್‌ ಕೂಡ ರುಚಿಸಲಿಲ್ಲ ನೋಡಪ’ ಎಂದ ಬೇಜಾರಿನಿಂದ.

‘ಏಯ್‌ ನಾಟ್ಕಾ ಆಡಬೇಡ, ‘ಚಂಪಾ’ ಬಾಯಿಬಿಟ್ಟರೆ ದುರ್ವಾಸನೆ ಬರ್ತದ’ ಎಂದು ಉಗ್ರ ಪ್ರತಾಪಿ ಸಿಂಹ ಗರ್ಜಿಸಿದ್ದು ಕೇಳಿ ಕರ್ಣಾನಂದ ಆಗಿರಬೇಕಲ್ಲ’ ಎಂದೆ.

‘ಹೆ ಹೆ ನಂಗ ಈ ಚಂ–ಪ್ರ ಪುರಾಣದ ಬಗ್ಗೆ ಹೆಚ್ಚು ಗೊತ್ತಿಲ್ಲ ಮಾರಾಯ. ನಾನಂತೂ ಹೆಂಡ್ತಿ ಮಕ್ಕಳನ್ನು ಬಿಟ್ಟ ಬಂದ್‌ ಖುಷ್ಯಾಗ ಮೂರೂ ದಿನಾ ಕುಡಿದುಕೊಂಡೇ ಓಲಾಡಿದ್ದೆ. ದಾರು ನಷೆದಾಗ್‌ ನಂಗs ಯಾವ ದುರ್ವಾಸನೆಯೂ ಮೂಗಿಗೆ ಬಡಿದಿಲ್ಲ ಬಿಡು. ಅದಿರಲಿ, ‘ಚಂಪಾ’, ಬಾಯಿ ಬಿಡದಿರುವುದು ನೋಡಿದ್ರ ಭುವನೇಶ್ವರಿ ಆಣೆಗೂ ಇನ್‌ ಮ್ಯಾಲ್‌ ಸಿಂಹದ ಬಾಯಿಗೆ ಬೀಳ್‌ಬಾರ್ದೆಂಬ ನಿರ್ಧಾರಕ್ಕ ಬಂದ್ಹಂಗ್‌ ಕಾಣಸ್ತೈತಿ’ ಎಂದ ಭೂ‍ಪ.

ಭಪ್ಪರೆ ಮಗನೆ, ‘ಚಂಪಾ’ಕ್ಕಿಂತ ಹೆಚ್ಚು ಚಾಲು ಅದಿ ಬಿಡು ಎಂದು ಮನಸ್ಸಲ್ಲೆ ಅಂದುಕೊಂಡು, ‘ಹೋಗ್ಲಿ ಬಿಡು. ಚಂ–ಪ್ರ ಪ್ರಹಸನ ಬದಿಗಿಟ್ಟು ಬ್ಯಾರೆ ವಿಷಯಾ ಮಾತಾಡೋಣ ಏನಂತಿ. ಕನಸಿನಲ್ಲಿ ಸಚಿವ ಅನಂತಕುಮಾರ್‌ ಮೂತ್ರ ಮಾಡಿಕೊಳ್ಳುತ್ತಾರೊ ಇಲ್ಲವೋ ಗೊತ್ತಿಲ್ಲ. ಆದ್ರ ‘ಚಂಪಾ ಬಾಯಿ ಬಿಟ್ಟರೆ ಗಬ್ಬು ವಾಸನೆ ಬರ್ತದ... ಎಂದು ಪ್ರತಾಪ್‌ ಹೇಳಿದ್ದಾರಲ್ಲೋ’ ಅಂದೆ.

‘ಏಯ್‌ ದೊಡ್ಡವರ ಉಸಾಬರಿ ನಮಗ್ಯಾಕೊ ಬಿಡೊ ...ಎಂದು ಹೇಳುತ್ತಲೇ ಮೈಮೇಲೆ ದೆವ್ವ ಬಂದವರ್‍ಹಾಂಗ್‌ ಏಕದಂ ದೊಡ್ಡ ದನಿಯಲ್ಲಿ, ‘ಚೆಡ್ಡಿ ಹೋಗಿ ಪ್ಯಾಂಟ್ ಬಂತು, ‘ಚಂಪಾ’ ಬಾಯಲ್ಲಿ ದುರ್ವಾಸನೆ ಬಂತು, ಡುಂ ಡುಂ... ಜಾತ್ರ್ಯಾಗ್‌ ಪುಗಸಟ್ಟೆ ಚಂ–ಪ್ರ ಪುರಾಣ್‌ ನೋಡಿ ಮಹದಾನಂದ ಆಯ್ತು...ಎಂದು ರಾಗವಾಗಿ ಹಾಡಲು ಶುರುವಿಟ್ಟುಕೊಂಡ. ಮಸ್ತ್‌ ನಶೆಯಲ್ಲಿದ್ದ ಕುಡುಕರೆಲ್ಲ ನಮ್ಮ ಕಡೆಗೆ ಒಂಥರಾ ನೋಡುದು ಗಮನಕ್ಕೆ ಬಂದ್‌ ಕೂಡಲೇ, ‘ಏಯ್‌ ಬಾಯ್ ಮುಚ್ಚೋ ಮಾರಾಯಾ‘ ಎಂದು ಸಣ್ಣಗೆ ಗದರಿದೆ. ಮಂತ್ರವಾದಿ ಭೂತ ಬೆದರಿಸಿದಂತೆ ಏನ್‌ ಅನಿಸಿತೊ ಏನೊ ಗಪ್ಪನೆ ಸುಮ್ಮನಾದ.

ಅವನ ಬಾಯಿಂದ ಹಾಡಿನ ಜತೆಗೆ ಗಪ್ಪೆಂದು ಗೋವಾ ಫೆನ್ನಿ ವಾಸನೆ ಬಡಿಯುತ್ತಿದ್ದಂತೆ ಮೂಗು ಮುಚ್ಚಿಕೊಂಡೆ. ‘ಏಯ್‌ ಮೂಗ್‌ ಯಾಕ್ ಮುಚ್ಕೊಂಡಿ. ತೆಗಿ ಕೈಯ್ಯ ಎಂದ’

‘ಮೊನ್ನೆ ಗುಜರಾತ್ನ್ಯಾಗ್‌ ಮೋದಿ ಸಾಹೇಬ್ರು ಮೂಗು ಮುಚ್ಚಿಕೊಂಡು ಇಂದಿರಾ ಗಾಂಧಿನ್ನ ಅನುಕರಣೆ ಮಾಡಿದ ಚಿತ್ರ ನೋಡಿದೇನಪಾ’ ಎಂದು ನನಗೆ ಸವಾಲೆಸೆದ.

‘ಹ್ಞೂ ನೋಡಿದೆ. ಅವ್ರು ಸ್ವಚ್ಛ್‌ ಭಾರತ್‌ ಅಂತ ಬಡಬಡಿಸುತ್ತಿದ್ದರ, ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌, ಮಹಾರಾಷ್ಟ್ರದ ಜಲ ಸಂಪನ್ಮೂಲ ಖಾತೆ ಸಚಿವ ರಾಮ್ ಶಿಂಧೆ ರಸ್ತೆ ಬದಿಯಲ್ಲಿಯೇ ಮೂತ್ರ ಮಾಡಿ ಗಬ್ಬೆಬ್ಬಿಸ್ತಿದ್ದಾರೆ. ಇಲ್ಲಿ ನೋಡಿದ್ರ ಚಡ್ಡಿ ಚತುರರೂ ಸಾಹಿತ್ಯ ಸಮ್ಮೇಳನದಾಗs ಮೂತ್ರದ ಕಾರಣಕ್ಕೆ ಸುದ್ದಿ ಮಾಡಾಕತ್ತಾರ.  ಬಿ. ಬಸವಲಿಂಗಪ್ಪನೋರು ‘ಕನ್ನಡ ಸಾಹಿತ್ಯವೆಲ್ಲ ಬೂಸಾ’ ಎಂದಿದ್ದರು. ಈಗ ‘ಚಂಪಾ’ದಕೀಯ ಗಬ್ಬು ನಾರುತ್ತಿದೆ ಎಂದು ಸಿಂಹಗಳೂ ಟೀಕ್ಯ್ಸಾಕತ್ತಾವ್‌. ಇದನ್ನೆಲ್ಲ ನೋಡಿ ಮೋದಿಗೂ ಮೂಗು ಮುಚ್ಚಿಕೊಳ್ಳುಹಂಗ್‌ ಆಗೇತಿ. ಸಿಕ್ಕ ಸಿಕ್ಕಲ್ಲಿ ಮೂತ್ರ ಮಾಡೊ ಸಚಿವರಿಗೂ, ಕಂಡ ಕಂಡ ಕಂಬಗಳಿಗೆ ಕಾಲು ಎತ್ತುವ ‘ಗ್ರಾಮ ಸಿಂಹ’ಗಳಿಗೂ ಏನೂ ವ್ಯತ್ಯಾಸನ ಇಲ್ಲದ್ಹಂಗಾಯ್ತಲ್ಲ’ ಎಂದೆ.

‘ಆಯ್ತ ಬಿಡಪ್ಪ, ಟೈಮಾಯ್ತು, ಲೇಟಾಗಿ ಹೋದ್ರ ಮನ್ಯಾಗ ಆಮ್‌ ಆದ್ಮಿ ಪಾರ್ಟಿ ಸ್ವಾಗತ ಕಾದಿರತೈತಿ. ಈ ಚಂ–ಪ್ರ ಪ್ರಸಂಗಕ್ಕೆ ನಿನ್ನ ಹತ್ರ ಏನರ ಮಸ್ತ್‌ ಪರಿಹಾರ ಇದ್ರ ಹೇಳು’ ಎಂದ.

‘ಮೊರಾರ್ಜಿ ದೇಸಾಯಿ ಅವರ ಸ್ವಮೂತ್ರ ಪಾನ’ ಎಂದು ಥಟ್ಟನೆ ಉತ್ತರಿಸಿದೆ. ‘ಏಯ್‌ ಹೋಗೊ ನಿನ, ಆಡಿದ್ರ ಮುತ್ತಿನ ಹಾರದಂತಿರಬೇಕು ಅಂತಾರ ಹಿರ‍್ಯಾರು. ನೀ ನೋಡಿದ್ರ ಆಡಿದ್ರ ದುರ್ವಾಸನೆ ಮತ್ತೆ ಮತ್ತೆ ಬರುವಂತಿರಬೇಕು’ ಅನ್ನಾಕತ್ತಿ ಎಂದು ಹೀಯಾಳಿಸಿದ.

‘ಏಯ್‌ ಹೋಗಲಿ ಬಿಡಪಾ. ಮುಂದಿನ ಧಾರವಾಡ ಸಮ್ಮೇಳನದಾಗ, ಈ ದುರ್ವಾಸನೆ ನಿಷೇಧ ಕುರಿತು ಠರಾವು ಪಾಸ್‌ ಮಾಡ್ಲೆಬೇಕು ನೋಡಪ. ಧಾರ್ವಾಡ್‌ ಮೊದ್ಲ ಸಾಹಿತಿಗಳ ಊರು. ಭಾಳ್‌ ಹುಷಾರಾಗಿರಬೇಕು’ ಎಂದೆ ಅರ್ಥಗರ್ಭಿತವಾಗಿ.

‘ಛಲೋ ಸಲಹಾ ಕೊಟ್ಟಿ ನೋಡ್‌’ ಎಂದು ಕಿಸೆದಾಗಿನ ಕಾಗದ ತುಂಡು ತೆಗೆದು ಠರಾವು ಬರೆದುಕೊಳ್ಳಲು ಮುಂದಾಗಿ ‘ಹ್ಞೂ ಹೇಳಪ’ ಅಂದ.

‘ಬಾಯಿ ಬಿಟ್ರ ದುರ್ವಾಸನೆ ಬ(ಬೀ)ರುವ ಸಾಹಿತಿಗಳಿಗೆ ಕನ್ನಡದ ಜಾತ್ರ್ಯಾಗ್‌ ಆಜೀವ ನಿಷೇಧ ಹೇರಬೇಕು...’ ಎಂದೆಲ್ಲ ಒದರತೊಡಗಿದೆ.

‘ಏಯ್‌ ಸಾಕ್‌ ಬಿಡಪಾ. ಈಗಲೇ ಕಸಾಪಕ್ಕೆ ಕಳಿಸಿ ಕೊಡುವೆ’ ಎಂದು ಧಿಗ್ಗನೆ ಎದ್ದು ನಿಂತ. ಈ ‘ಚಂ–ಪ್ರ’ ಪ್ರಸಂಗದ ನೆಪದಲ್ಲಿ ಒಂದೆರಡು ಬಿಯರ್‌ ಬಾಟಲ್‌ ಖಾಲಿ ಮಾಡಿದ್ದ ನನಗೂ ಅವಸರವಾಗಿದ್ದರಿಂದ ಎದ್ದು ಹೊರಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry