7

ಒಂದೇ ವೇದ ನಾಲ್ಕಾಯಿತು

Published:
Updated:

ಇಂದು ವೇದ ಎಂದರೆ ‘ನಾಲ್ಕು ವೇದಗಳು; ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ’ ಎನ್ನುವ ಎಣಿಕೆಯಿದೆ. ಆದರೆ ಮೊದಲಿಗೆ ವೇದ ಎಂದರೆ ಒಂದೇ ಎನ್ನುವುದೇ ಬಳಕೆಯಲ್ಲಿದ್ದದ್ದು ಎಂದು ತಿಳಿಯುತ್ತದೆ. ಅಧ್ಯಯನದ ಅನುಕೂಲಕ್ಕಾಗಿ ವ್ಯಾಸಮಹರ್ಷಿ ಅದನ್ನು ನಾಲ್ಕಾಗಿ ವಿಂಗಡಿಸಿದರು ಎನ್ನುವುದು ಪರಂಪರೆಯಲ್ಲಿ ಬಂದಿರುವ ಶ್ರದ್ಧೆ. ಮನುಷ್ಯರು ಮಂದಮತಿಗಳಾಗುತ್ತಿರುವುದನ್ನು ಗಮನಿಸಿದ ವ್ಯಾಸರು ಕರುಣೆಯಿಂದ ವೇದವನ್ನು ವಿಭಾಗ ಮಾಡಿದರಂತೆ – ಒಂದೇ ಆಗಿದ್ದರೆ ಕಲಿಯಲು ಕಷ್ಟ ಎಂದು. ಹೀಗೆ ವಿಭಾಗ ಮಾಡಿದ ಮೇಲೆ ಅವರು ಶಿಷ್ಯರಾದ  ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತು ಎಂಬುವವರಿಗೆ ಕ್ರಮವಾಗಿ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಗಳನ್ನು ಉಪದೇಶಿಸಿದರು. ಬ್ರಹ್ಮನಿಂದ ಪ್ರೇರಿತರಾದ ವ್ಯಾಸರು ವೇದಗಳನ್ನು ವಿಭಾಗಿಸಲು ಉದ್ಯುಕ್ತರಾದರು ಎನ್ನುವುದು ‘ವಿಷ್ಣುಪುರಾಣ’ದ ಮಾತು. ಒಂದೇ ಆಗಿದ್ದ ವೇದವೃಕ್ಷವನ್ನು ವ್ಯಾಸರು ಬೇರೆ ಬೇರೆ ಮಾಡಿ, ನಾಲ್ಕು ವೇದವೃಕ್ಷಗಳನ್ನಾಗಿ ಮಾಡಿದರು; ಅಲ್ಲಿಂದ ಮುಂದೆ ವೇದವೃಕ್ಷಗಳ ಅರಣ್ಯವೇ ನಿರ್ಮಿತವಾಯಿತು – ಎನ್ನುವುದು ಅಲ್ಲಿಯೇ ಬರುವ ವಿವರಣೆ (ಸೋsಯಮೇಕೋ ಮಹಾವೇದತರುಸ್ತೇನ ಪೃಥಕೃತಃ | ಚತುರ್ಧಾ ಚ ತತೋ ಜಾತಂ ವೇದಪಾದಪಕಾನನಮ್‌ ||).

‘ಪೂರ್ವಂ ಭಗವತಾ ವೇದವ್ಯಾಸೇನ ಜಗದುಪಕಾರಾರ್ಥಂ ಏಕೀಭೂಯ ಸ್ಥಿತಾಃ ವೇದಾಃ ವ್ಯಸ್ತಾಃ | ಶಾಖಾಶ್ಚಾ ಪರಿಚ್ಛಿನ್ನಾಃ |

ಸಕಲವೇದಪರಿಪಾಲನಂತ್ವಶಕ್ಯಮೇಕೇನ ಪುರುಷೇಣೇತಿ ಶಾಖಾಭೇದಪ್ಋವೃತ್ತಿಃ |’

– ಇದು ಭಟ್ಟಭಾಸ್ಕರರ ಮಾತುಗಳು. ‘ಒಂದಾಗಿದ್ದ ವೇದಗಳನ್ನು ಹಿಂದೆ ಭಗವಾನ್‌ ವೇದವ್ಯಾಸರು ಜಗತ್ತಿನ ಉಪಕಾರಕ್ಕಾಗಿ ವಿಂಗಡಿಸಿದರು. ಆಗ ಶಾಖೆಗಳು ವ್ಯವಸ್ಥಿತವಾದವು. ಎಲ್ಲ ವೇದಗಳನ್ನೂ ಒಬ್ಬನೇ ಕಾಪಾಡುವುದು ಅಸಾಧ್ಯವೆಂದು ಈ ವಿಂಗಡಣೆಯಾಯಿತು’ ಎನ್ನುವುದು ಇದರ ತಾತ್ಪರ್ಯ.

ವೇದಕ್ಕೆ ‘ತ್ರಯೀ’ ಎಂಬ ಹೆಸರು ಕೂಡ ಉಂಟು. ತ್ರಯೀ ಎಂದರೆ ಮೂರು ಎಂದು. ಹೀಗಾಗಿ ಮೊದಲಿಗೆ ಮೂರು ವೇದಗಳೇ ಇದ್ದದ್ದು; ಆನಂತರದಲ್ಲಿ ಅಥರ್ವವೇದ ಸೇರಿಕೊಂಡಿತು ಎನ್ನುವ ಅಭಿಪ್ರಾಯವೂ ಇದೆ. 

ವೇದಮಂತ್ರಗಳ ವಿನಿಯೋಗ ನಡೆಯುವುದು ಯಜ್ಞದಲ್ಲಿ. (ಯಜ್ಞ – ಎಂದರೇನು ಎನ್ನುವುದನ್ನು ಮುಂದೆ ನೋಡೋಣವಾಗುತ್ತದೆ.) ಯಜ್ಞದಲ್ಲಿ ನಾಲ್ಕು ವೇದಗಳ ಪ್ರತಿನಿಧಿಗಳೂ ಇರಲೇಬೇಕು. ಹೀಗೆ ಯಜ್ಞದಲ್ಲಿ ಭಾಗವಹಿಸುವ ವೇದಾಧ್ಯಾಯಿಯನ್ನು ‘ಋತ್ವಿಜ’ ಎನ್ನುತ್ತಾರೆ. ಹೀಗೆ ಯಜ್ಞದಲ್ಲಿ ಭಾಗವಹಿಸುವ ಋಗ್ವೇದದ ಋತ್ವಿಜನನ್ನು ‘ಹೋತಾ’ ಎಂದೂ, ಯಜುರ್ವೇದದ ಋತ್ವಿಜನನ್ನು ‘ಅಧ್ವರ್ಯ’ ಎಂದೂ, ಸಾಮವೇದದವನಿಗೆ ‘ಉದ್ಗಾತಾ’ ಎಂದೂ, ಅಥರ್ವವೇದದವನಿಗೆ ‘ಬ್ರಹ್ಮಾ’ ಎಂದೂ ಕರೆಯುತ್ತಾರೆ. ದೇವತೆಗಳನ್ನು ಆಹ್ವಾನಿಸುವುದು ಹೋತೃವಿನ ಕೆಲಸ; ಯಜ್ಞವೇದಿಕೆಯನ್ನು ರಚಿಸಿ ಹೋಮಾದಿಗಳನ್ನು ನೆರವೇರಿಸುವುದು ಅಧ್ವರ್ಯವಿನ ಕೆಲಸ; ವೇದದ ಋಕ್ಕುಗಳನ್ನು ಹಾಡಿ ದೇವತೆಗಳನ್ನು ಸಂತೋಷಪಡಿಸುವುದು ಉದ್ಗಾತೃವಿನ ಕೆಲಸ; ಯಜ್ಞಕಾರ್ಯದ ಎಲ್ಲ ವಿಭಾಗಗಳನ್ನು ಗಮನಿಸುವ ಅಧ್ಯಕ್ಷಸ್ಥಾನದಲ್ಲಿರುವವನೇ ಬ್ರಹ್ಮಾ.

ವೇದಗಳನ್ನು ಅಧ್ಯಯನ ಮಾಡಲು ವೇದಾಂಗಗಳ ನೆರವು ಅನಿವಾರ್ಯ. ಒಂದೊಂದು ವೇದವನ್ನು ಅಧ್ಯಯನ ಮಾಡುವುದಕ್ಕೇ ಹತ್ತಾರು ವರ್ಷಗಳ ನಿರಂತರ ಅಧ್ಯಯನ ಬೇಕು; ಇದರ ಜೊತೆಗೆ ವೇದಾಂಗಗಳ ಅಧ್ಯಯನ. ಇಷ್ಟು ಅಧ್ಯಯನ ಮಾಡಿಯೂ ವೇದದ ರಹಸ್ಯವನ್ನು ಅರಿಯವುದು ಸುಲಭವಲ್ಲ ಎನ್ನುತ್ತದೆ ಪರಂಪರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry