ಮಂಗಳವಾರ, ಮಾರ್ಚ್ 2, 2021
29 °C

ಸಹೋದ್ಯೋಗಿ ಹತ್ಯೆಗೆ ಸುಪಾರಿ ಸಿಸಿಬಿ ವಶದಲ್ಲಿ ರವಿ ಬೆಳಗೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಹೋದ್ಯೋಗಿ ಹತ್ಯೆಗೆ ಸುಪಾರಿ ಸಿಸಿಬಿ ವಶದಲ್ಲಿ ರವಿ ಬೆಳಗೆರೆ

ಬೆಂಗಳೂರು: ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದ ಆರೋಪದ ಮೇಲೆ ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಸ್ಥಾಪಕ ರವಿ ಬೆಳಗೆರೆ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆಯ ಶಾರ್ಪ್‌ಶೂಟರ್ ಹಾಗೂ ಪಿಸ್ತೂಲು ಮಾರಾಟಗಾರ ಶಶಿಧರ್ ರಾಮಚಂದ್ರ ಮುಂಡೋಡಗಿ ಎಂಬಾತನಿಗೆ ಸುಪಾರಿ ನೀಡಿದ್ದ ರವಿ ಬೆಳಗೆರೆ, ಮುಂಗಡವಾಗಿ ₹ 15 ಸಾವಿರವನ್ನೂ ಕೊಟ್ಟಿದ್ದರು. ಗುರುವಾರ ರಾತ್ರಿ ಪೊಲೀಸರು ಶಶಿಧರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸುಪಾರಿ ಸಂಗತಿ ಬಹಿರಂಗಗೊಂಡಿದೆ.

ಈ ಮಾಹಿತಿಯ ಬೆನ್ನಲ್ಲೇ ಸಿಸಿಬಿ ಪೊಲೀಸರು ರವಿ ಬೆಳಗೆರೆ ವಿರುದ್ಧ ಶುಕ್ರವಾರ ಬೆಳಿಗ್ಗೆ ಸುಬ್ರಹ್ಮಣ್ಯಪುರ ಠಾಣೆಗೆ ದೂರು ಕೊಟ್ಟಿದ್ದು, ಕೊಲೆ ಯತ್ನ (ಐಪಿಸಿ 307), ಅಪರಾಧ ಸಂಚು (120ಬಿ) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಎಫ್‌ಐಆರ್ ದಾಖಲಿಸಿದರು.

ಬಳಿಕ ನ್ಯಾಯಾಲಯದಿಂದ ಸರ್ಚ್‌ ವಾರಂಟ್ ‍ಪಡೆದು ಮಧ್ಯಾಹ್ನ 1.30ರ ಸುಮಾರಿಗೆ ಪದ್ಮನಾಭನಗರದಲ್ಲಿರುವ ಅವರ ಮನೆ ಹಾಗೂ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿದ ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ತಂಡ, ಅವರನ್ನು ವಶಕ್ಕೆ ಪಡೆದುಕೊಂಡಿತು.

‘ದಾಳಿ ವೇಳೆ ರಿವಾಲ್ವರ್, ಡಬ್ಬಲ್‌ ಬ್ಯಾರಲ್‌ ಗನ್, 94 ಜೀವಂತ ಗುಂಡುಗಳು, 1.5 ಅಡಿ ಅಗಲದ ಆಮೆಯ ಚಿಪ್ಪು, ಗುಂಡೇಟು ಬಿದ್ದಿರುವ ಜಿಂಕೆ ಚರ್ಮ ಪತ್ತೆಯಾಗಿದೆ. ಶಸ್ತ್ರಾಸ್ತ್ರಗಳಿಗೆ ಪರವಾನಗಿ ಇರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅದಕ್ಕೆ ದಾಖಲೆ ಒದಗಿಸುವಂತೆ ಅವರ ಕುಟುಂಬ ಸದಸ್ಯರಿಗೆ ಸೂಚಿಸಿದ್ದೇವೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ತಾಹೀರ್‌ನಿಂದ ಸುಳಿವು: ನಾಡಪಿಸ್ತೂಲು ಮಾರಲು ನಗರಕ್ಕೆ ಬಂದು ಪರಪ್ಪನ ಅಗ್ರಹಾರ ಸಮೀಪದ ಲಾಡ್ಜ್‌ವೊಂದರಲ್ಲಿ ಉಳಿದುಕೊಂಡಿದ್ದ ಶಾರ್ಪ್‌ಶೂಟರ್ ತಾಹೀರ್ ಹುಸೇನ್ ಅಲಿಯಾಸ್ ಅನೂಪ್ ಗೌಡ ಎಂಬಾತನನ್ನು ಸಿಸಿಬಿ ಪೊಲೀಸರು ಡಿ.3ರಂದು ಬಂಧಿಸಿದ್ದರು. ತನ್ನ ಸಹಚರ ಶಶಿಧರ್ ಸಹ ಗನ್ ಮಾರಲು ನಗರಕ್ಕೆ ಬಂದಿರುವ ಹಾಗೂ ವ್ಯಕ್ತಿಯೊಬ್ಬರ ಹತ್ಯೆಗೆ ರವಿ ಬೆಳಗೆರೆಯಿಂದ ಆತ ಸುಪಾರಿ ಪಡೆದುಕೊಂಡಿದ್ದ ವಿಚಾರವನ್ನು ತಾಹೀರ್ ಬಾಯ್ಬಿಟ್ಟಿದ್ದ. ಆ ಸುಳಿವು ಆಧರಿಸಿ ಪೊಲೀಸರು ಗುರುವಾರ ರಾತ್ರಿ 11.15ರ ಸುಮಾರಿಗೆ ಶಶಿಧರ್‌ನನ್ನೂ ನಗರದಲ್ಲೇ ವಶಕ್ಕೆ ಪಡೆದಿದ್ದಾರೆ.

ಗನ್ ಕೊಟ್ಟಿದ್ದರು: ‘ಬೆಳಗೆರೆ ಸೂಚನೆಯಂತೆ ಆ.28ರಂದು ಸಹಚರ ವಿಜು ಬಡಿಗೇರ್ ಜತೆ ಅವರ ಪತ್ರಿಕಾ ಕಚೇರಿಗೆ ತೆರಳಿದ್ದೆ. ಆಗ, ‘ನನಗೆ ದ್ರೋಹ ಬಗೆದ ಸುನೀಲ್ ಹೆಗ್ಗರವಳ್ಳಿಯನ್ನು ಕೊಲೆ ಮಾಡು. ನಿನಗೆ ಎಷ್ಟು ಬೇಕೋ, ಅಷ್ಟು ಹಣವನ್ನು ಕೊಡುತ್ತೇನೆ. ಮುಂಗಡವಾಗಿ ಈ ₹ 15 ಸಾವಿರವನ್ನು ಇಟ್ಟುಕೊ’ ಎಂದು ಹೇಳಿ ಹಣ, ಗನ್, ನಾಲ್ಕು ಜೀವಂತ ಗುಂಡುಗಳು ಹಾಗೂ ಚಾಕುವನ್ನು ಕೊಟ್ಟರು. ನಂತರ ಸುನೀಲ್ ಮನೆ ತೋರಿಸಲು ತಮ್ಮ ಕಚೇರಿಯ ಒಬ್ಬ ಹುಡುಗನನ್ನು ನಮ್ಮ ಜತೆ ಕಳುಹಿಸಿದ್ದರು’ ಎಂದು ಶಶಿಧರ್ ಹೇಳಿಕೆ ನೀಡಿರುವುದಾಗಿ ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

‘ಮಧ್ಯಾಹ್ನ 1 ಗಂಟೆ ಸುಮಾರಿಗೆ ನಮ್ಮನ್ನು ಉತ್ತರಹಳ್ಳಿಯ ‘ಸಾಗರ್ ಸ್ಪ್ಲೆಂಡರ್ ಅಪಾರ್ಟ್‌ಮೆಂಟ್‌’ ಹತ್ತಿರ ಕರೆದುಕೊಂಡು ಹೋದ ಆ ಹುಡುಗ, ಸುನೀಲ್ ನೆಲೆಸಿರುವ ಫ್ಲ್ಯಾಟ್ ತೋರಿಸಿ ಹೊರಟು ಹೋದ. ನಾವು ಅವರ ಬರುವಿಕೆಗಾಗಿಯೇ ಒಂದೂವರೆ ತಾಸು ಕಾದೆವು. 2.30ರ ಸುಮಾರಿಗೆ ಸುನೀಲ್ ಫ್ಲ್ಯಾಟ್‌ನಿಂದ ಹೊರಬಂದರು. ನಾನು ಅವರತ್ತ ಗುಂಡು ಹಾರಿಸಲು ಗುರಿ ಇಟ್ಟಿದ್ದೆ. ಆದರೆ, ಕೆಲವೇ ಕ್ಷಣಗಳಲ್ಲಿ ಅವರು ಮರೆಯಾಗಿದ್ದರಿಂದ ಆ ದಿನ ಕೃತ್ಯ ಎಸಗಲು ಆಗಲಿಲ್ಲ.’

‘ನಂತರ ಪತ್ರಿಕಾ ಕಚೇರಿಗೆ ವಾಪಸ್ ಆಗಿ ಬೆಳಗೆರೆ ಅವರನ್ನು ಭೇಟಿಯಾದೆ. ಸುನೀಲ್ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು. ಮುಂದಿನ ತಿಂಗಳು ಬಂದು ಕೆಲಸ ಮುಗಿಸುತ್ತೇನೆ ಎಂದು ಹೇಳಿದ್ದೆ. ಅಲ್ಲದೆ ಅವರು ಕೊಟ್ಟಿದ್ದ ಗನ್, ಚಾಕು ಹಾಗೂ ಗುಂಡುಗಳನ್ನು ವಾಪಸ್ ಕೊಟ್ಟು ಹೊರಟು ಹೋಗಿದ್ದೆ. ಕೆಲವೇ ದಿನಗಳಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದಿದ್ದರಿಂದ, ಸುನೀಲ್‌ ಅವರ ತಂಟೆಗೆ ಹೋಗಿರಲಿಲ್ಲ’ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ.

ಭೀಮಾತೀರದ ನಂಟು: ‘ಭೀಮಾತೀರ ಹತ್ಯಾಕಾಂಡದ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಿದ್ದ ಬೆಳಗೆರೆ ಅವರಿಗೆ, 15 ವರ್ಷಗಳ ಹಿಂದೆ ಹಂತಕ ಚಂದಪ್ಪ ಹರಿಜನ್‌ ಮೂಲಕ ಶಶಿಧರ್‌ನ ಪರಿಚಯವಾಗಿತ್ತು. ಈತ ಆಗಲೇ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ತಂದು ವಿಜಯಪುರದಲ್ಲಿ ಮಾರಾಟ ಮಾಡುತ್ತಿದ್ದ’ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.

‘ಭೀಮಾತೀರದಲ್ಲಿ ರಕ್ತದೋಕುಳಿ ಹರಿಸಿದವರಲ್ಲಿ ಶಶಿಧರ್ ಕೂಡ ಒಬ್ಬ. 2006ರಲ್ಲಿ ನಡೆದ ಮುತ್ತು ಮಾಸ್ತರ್ ಕೊಲೆ, 2013ರಲ್ಲಿ ನಡೆದ ಬಸಪ್ಪ ಹರಿಜನ್ ಹತ್ಯೆ ಹಾಗೂ 2014ರಲ್ಲಿ ನಡೆದ ಬಸ್ ಕಂಡಕ್ಟರ್ ಸುರೇಶ್ ಲಾಳಸಂಗಿ ಕೊಲೆ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ. ಅಕ್ರಮ ಶಸ್ತ್ರಾಸ್ತ್ರ ಮಾರಾಟ ಆರೋಪದಡಿ ಇದೇ ಸೆ.14ರಂದು ಮಹಾರಾಷ್ಟ್ರದ ಮೀರಜ್‌ನಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು’ ಎಂದು ಸಿಸಿಬಿ ಡಿಸಿಪಿ ಜೀನೇಂದ್ರ ಕಣಗಾವಿ ತಿಳಿಸಿದರು.

ಆಘಾತವಾಯಿತು: ಸುನೀಲ್ ಹೆಗ್ಗರವಳ್ಳಿ

‘ನನ್ನ ಹತ್ಯೆಗೆ ರವಿ ಬೆಳಗೆರೆ ಸುಪಾರಿ ಕೊಟ್ಟಿರುವ ಸುದ್ದಿ ಕೇಳಿ ಆಘಾತವಾಯಿತು. ಬೆಳಿಗ್ಗೆ ಪೊಲೀಸ್ ಅಧಿಕಾರಿಗಳು ನನ್ನನ್ನು ಕಚೇರಿಗೆ ಕರೆಸಿಕೊಂಡು ವಿಷಯ ತಿಳಿಸಿದರು. ಆರಂಭದಲ್ಲಿ ಅವರ ಮಾತನ್ನು ನಂಬಲಿಲ್ಲ. ಆದರೆ, ಬೆಳಗೆರೆ ಮಾಡಿದ್ದ ಸಂಚನ್ನು ದಾಖಲೆಗಳ ಸಮೇತ ವಿವರಿಸಿದಾಗ, ಹಂತಕ ಶಶಿಧರ್‌ನ ಬಗ್ಗೆ ಮಾಹಿತಿ ಕೊಟ್ಟಾಗ, ಆತ ನಮ್ಮ ಅಪಾರ್ಟ್‌ಮೆಂಟ್ ಬಳಿ ಬಂದು ಹೋಗಿದ್ದನ್ನು ಗಮನಿಸಿದಾಗ, ಹಿಂದೆ ನಡೆದಿದ್ದ ಕೆಲವೊಂದು ಘಟನೆಗಳನ್ನು ಪರಾಮರ್ಶಿಸಿದಾಗ ಹತ್ಯಾ ಯತ್ನ ಸತ್ಯವೆನಿಸಿತು’ ಎಂದು ಸುನೀಲ್ ಹೆಗ್ಗರವಳ್ಳಿ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘2014ರಲ್ಲಿ ನಾನು ಹಾಯ್‌ ಬೆಂಗಳೂರು ಪತ್ರಿಕೆಯಲ್ಲಿ ಕೆಲಸ ಬಿಟ್ಟೆ. ಆಗ ಒಂದು ದಿನ ‘ಕಚೇರಿಗೆ ಯಾರೋ ಇನ್ವೆಸ್ಟರ್ಸ್ ಬರ್ತಿದ್ದಾರೆ. ನ್ಯೂಸ್ ಚಾನೆಲ್ ಬಗ್ಗೆ ಮಾತನಾಡಬೇಕು ಬಾ’ ಎಂದು ರವಿಬೆಳಗೆರೆ ಅವರು ನನ್ನನ್ನು ಕರೆಸಿಕೊಂಡರು. ಕಚೇರಿಗೆ ಹೋದಾಗ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೆಲ ಆರೋಪಿಗಳು ಅಲ್ಲಿದ್ದರು. ಅದನ್ನು ಗಮನಿಸಿದರೆ ಅಂದು ಕೂಡ ನನ್ನ ಹತ್ಯೆಗೆ ಸಂಚು ರೂಪಿಸಿದ್ದರು ಎನಿಸುತ್ತದೆ’ ಎಂದು ಸಂಶಯ ವ್ಯಕ್ತಪಡಿಸಿದರು.

‘ನಮ್ಮಿಬ್ಬರದು 17 ವರ್ಷಗಳ ಸ್ನೇಹ. ಅದರಲ್ಲಿ 14 ವರ್ಷ ಜತೆಯಲ್ಲೇ ಕೆಲಸ ಮಾಡಿದ್ದೇವೆ. ಯಾವ ಕಾರಣಕ್ಕೆ ಸುಪಾರಿ ಕೊಟ್ಟರು ಎಂಬುದು ತಿಳಿಯುತ್ತಿಲ್ಲ. ಆ ಕಾರಣವನ್ನು ರವಿ ಬೆಳಗೆರೆ ಅವರೇ ತಿಳಿಸಬೇಕು. ನನ್ನ ಮನೆಗೆ ಅನಗತ್ಯವಾಗಿ ಕೊರಿಯರ್‌ನವರು ಬಂದು ಹೋಗುತ್ತಿದ್ದುದು, ಮನೆ ಹತ್ತಿರ ಕೆಲವರು ಅನುಮಾನಾಸ್ಪದವಾಗಿ ಓಡಾಡುತ್ತಿದುದು..ಹೀಗೆ, ಸೇರಿದಂತೆ ಕೆಲವೊಂದು ಅಂಶಗಳನ್ನು ಗಮನಿಸಿದರೆ ಬಹಳ ದಿನಗಳಿಂದ ಸಂಚು ನಡೆದಂತೆ ಕಾಣಿಸುತ್ತದೆ.’

‘ಗೌರಿ ಲಂಕೇಶ್ ಹತ್ಯೆಯಾದ ಬಳಿಕ ರವಿಬೆಳಗೆರೆ ಅವರೇ ನನಗೆ ಕರೆ ಮಾಡಿದ್ದರು. ‘ಗೌರಿ ಹತ್ಯೆಯ ಸುದ್ದಿಯನ್ನು ನೀನೇ ಬರೆಯಬೇಕು. ಹಾಯ್‌ ಬೆಂಗಳೂರು ಪತ್ರಿಕೆ ನಡೆಸಲು ನನ್ನಿಂದ ಆಗುತ್ತಿಲ್ಲ. ಅದರ ಹೊಣೆಯನ್ನು ಸಂಪೂರ್ಣವಾಗಿ ನೀನೇ ವಹಿಸಿಕೊಳ್ಳುವಂತೆ. ಕೆಲಸಕ್ಕೆ ವಾಪಸಾಗು’ ಎಂದಿದ್ದರು. ತಮ್ಮ ತಪ್ಪಿನ ಅರಿವಾಗಿ ಮತ್ತೆ ಕರೆಯುತ್ತಿದ್ದಾರೆ ಎಂದುಕೊಂಡು ವಾಪಸ್ ಹೋಗಿದ್ದೆ. ಆದರೆ, ಹತ್ತಿರವಿಟ್ಟುಕೊಂಡೇ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ ಎಂಬುದು ಗೊತ್ತಿರಲಿಲ್ಲ’ ಎಂದು ಹೇಳಿದರು.

ವಿಜಯಪುರ ಜೈಲುಗಳಲ್ಲಿ ಸಿಕ್ಕ ಮಾಹಿತಿ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಅಧಿಕಾರಿಗಳು, ರಾಜ್ಯದಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಸುತ್ತಿದ್ದವರ ಮೇಲೆ ನಿಗಾ ಇಟ್ಟಿದ್ದರು. ಈ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು.

ಅಂತೆಯೇ ಅಕ್ಟೋಬರ್‌ನಲ್ಲಿ ವಿಜಯಪುರ ಕಾರಾಗೃಹಕ್ಕೆ ತೆರಳಿದ್ದ ಡಿಸಿಪಿ ಜೀನೇಂದ್ರ ಖಣಗಾವಿ ನೇತೃತ್ವದ ತಂಡ, ಅಬ್ಬಾಸ್ ಅಲಿ ಹಾಗೂ ಇಜಾಜ್ ಅಹಮದ್ ಪಟೇಲ್ ಎಂಬ ಆರೋಪಿಗಳನ್ನು ವಿಚಾರಣೆ ನಡೆಸಿತ್ತು. ಆಗ ಅವರು, ‘ಚಿಕ್ಕಬಳ್ಳಾಪುರದ ತಾಹೀರ್ ಹುಸೇನ್ ಈ ದಂಧೆಯಲ್ಲಿ ತೊಡಗಿದ್ದಾನೆ’ ಎಂದು ಹೇಳಿದ್ದರು. ಕಲಬುರ್ಗಿಯ ಆಳಂದ ಉಪಕಾರಾಗೃಹದ ಕೆಲ ಕೈದಿಗಳೂ ತಾಹೀರ್‌ನ ಹೆಸರನ್ನು ಬಾಯ್ಬಿಟ್ಟಿದ್ದರು. ಅಂದಿನಿಂದಲೂ ಎಸ್‌ಐಟಿ ತಾಹೀರ್ ಮೇಲೆ ನಿಗಾ ಇಟ್ಟಿತ್ತು. ಡಿ.3ರಂದು ಆತ ಸಿಸಿಬಿ ಬಲೆಗೆ ಬಿದ್ದಿದ್ದ.

‘ಜಿಂಕೆ ಚರ್ಮ ಅಭಿಮಾನಿ ಕೊಟ್ಟಿದ್ದು’

‘ರವಿ ಬೆಳಗೆರೆ ಅವರ ಕಚೇರಿಯಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳಿಗೆ ಪರವಾನಗಿ ಇದೆ. ಜಿಂಕೆ ಚರ್ಮವು 12 ವರ್ಷಗಳಿಂದ ಅವರ ಕಚೇರಿಯಲ್ಲಿದೆ. ಅದನ್ನು ಅಭಿಮಾನಿಯೊಬ್ಬರು ಅವರಿಗೆ ನೀಡಿದ್ದರು’ ಎಂದು ರವಿಬೆಳಗೆರೆ ಪರ ವಕೀಲ ದಿವಾಕರ್ ಸುದ್ದಿಗಾರರಿಗೆ ತಿಳಿಸಿದರು.

ಎಲ್ಲವನ್ನೂ ಈಗಲೇ ಹೇಳಲು ಸಾಧ್ಯವಿಲ್ಲ

ಬೆಂಗಳೂರು: ‘ಸಿಸಿಬಿ ಪೊಲೀಸರು ರವಿ ಬೆಳಗೆರೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಎಲ್ಲವನ್ನೂ ಈಗಲೇ ಹೇಳಲು ಸಾಧ್ಯವಿಲ್ಲ’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಶುಕ್ರವಾರ ಮಾತನಾಡಿದ ಅವರು, ‘ಬಂಧಿತ ಶಶಿಧರ್ ಮುಂಡೆವಾಡಿ ಸುಪಾರಿ ಕಿಲ್ಲರ್. ವಿಚಾರಣೆ ವೇಳೆ ಆತ ಬೆಳಗರೆ ಪ್ರಕರಣದ ಬಗ್ಗೆ ಬಾಯಿ ಬಿಟ್ಟಿದ್ದಾನೆ’ ಎಂದರು.

‘ಪರವಾನಗಿ ಇಲ್ಲದೆ ಬಂದೂಕು ಮಾರಾಟ ಮಾಡುವ ತಾಹೀರ್‌ ಹುಸೇನ್‌ ಅಲಿಯಾಸ್‌ ಅನೂಪ್‌ ಗೌಡನನ್ನು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದರು. ವಿಚಾರಣೆ ವೇಳೆ ಶಶಿಧರ್‌ಗೆ ಬಂದೂಕು ನೀಡಿರುವುದನ್ನು ತಾಹಿರ್ ತಿಳಿಸಿದ್ದಾನೆ. ಶಶಿಧರ್‌ನಿಂದ ವಶಪಡಿಸಿಕೊಂಡ ಬಂದೂಕನ್ನು ವಿಧಿ‌ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಬಂದೂಕು ಎಲ್ಲೆಲ್ಲಿ ಬಳಕೆಯಾಗಿದೆ ಎನ್ನುವುದು ಪ್ರಯೋಗಾಲಯ ವರದಿಯಿಂದ ಗೊತ್ತಾಗಲಿದೆ’ ಎಂದರು.

‘ಬೆಳಗೆರೆ ಪ್ರಕರಣಕ್ಕೂ ಗೌರಿ ಲಂಕೇಶ್‌ ಹತ್ಯೆಗೂ ಸಂಬಂಧ ಇದೆಯೇ ಎಂದು ತಕ್ಷಣ ಹೇಳಲು ಸಾಧ್ಯ ಇಲ್ಲ’ ಎಂದ ಸಚಿವರು, ‘ಬೆಳಗರೆ ಪ್ರಕರಣದ ಬಗ್ಗೆ ಪೊಲೀಸ್‌ ಕಮಿಷನರ್‌ ಶನಿವಾರ ಹೆಚ್ಚಿನ ಮಾಹಿತಿ ನೀಡಲಿದ್ದಾರೆ’ ಎಂದೂ ತಿಳಿಸಿದರು.

ಶಶಿಧರ್‌ನನ್ನು ನಗರದ 9ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಡಿ.18ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದೇವೆ

-ಸತೀಶ್ ಕುಮಾರ್

ಸಿಸಿಬಿ, ಜಂಟಿ ಪೊಲೀಸ್ ಕಮಿಷನರ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.