ಮಾಲಿನ್ಯ: ಐಸಿಸಿ ನಿಯಮಾವಳಿ ಸೇರುವ ಸಾಧ್ಯತೆ

ನವದೆಹಲಿ: ದೆಹಲಿಯಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಕಾಡಿದ ಮಾಲಿನ್ಯದ ವಿಷಯ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ನಿಯಮಾವಳಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಫಿರೋಜ್ ಷಾ ಕೋಟ್ಲಾ ಅಂಗಣದಲ್ಲಿ ನಡೆದ ಮೂರನೇ ಮತ್ತು ಅಂತಿಮ ಟೆಸ್ಟ್‌ನ ಎರಡನೇ ದಿನದಿಂದ ಶ್ರೀಲಂಕಾ ಆಟಗಾರರನ್ನು ಮಾಲಿನ್ಯ ಕಾಡಿತ್ತು. ಹೀಗಾಗಿ ಅವರು ಮುಖಗವಸು ಧರಿಸಿ ಫೀಲ್ಡಿಂಗ್ ಮಾಡಿದ್ದರು.
ನಾಲ್ಕನೇ ದಿನ ಆ ತಂಡದ ಸುರಂಗಾ ಲಕ್ಮಲ್ ಅಂಗಣದಲ್ಲೇ ವಾಂತಿ ಮಾಡಿದ್ದರು. ಪಂದ್ಯದ ನಂತರ ಶ್ರೀಲಂಕಾ ಕ್ರಿಕೆಟ್ ಮಂಡಳಿಯವರು ಐಸಿಸಿಗೆ ದೂರು ಸಲ್ಲಿಸಿದ್ದರು.
‘ಮಾಲಿನ್ಯದಿಂದ ಆಗಿರುವ ತೊಂದರೆಯ ವಿಷಯವನ್ನು ಐಸಿಸಿಯ ವೈದ್ಯಕೀಯ ಸಮಿತಿ ಪರಿಶೀಲನೆ ನಡೆಸಲಿದೆ. ದೆಹಲಿಯ ವಾಯುವಿನ ಗುಣಮಟ್ಟವನ್ನು ಪರೀಕ್ಷಿಸಲಿದೆ. ಟೆಸ್ಟ್ ಆಡಿಸಲು ಅಲ್ಲಿ ಪೂರಕ ವಾತಾವರಣ ಇತ್ತೇ ಎಂಬುದನ್ನು ಕೂಡ ಪರೀಕ್ಷಿಸಿ ವರದಿ ಸಲ್ಲಿಸಲಿದೆ. ಫೆಬ್ರುವರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ’ ಎಂದು ಐಸಿಸಿ ವಕ್ತಾರರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಐಸಿಸಿಯಲ್ಲಿ ಆಟಕ್ಕೆ ಪೂರಕ ವಾತಾವರಣದ ನಿಯಮಾವಳಿಯಲ್ಲಿ ಹವಾಮಾನಕ್ಕೆ ಸಂಬಂಧಿಸಿದ ಪ್ರತ್ಯೇಕ ವಿಭಾಗ ಇದೆ. ಇದರಲ್ಲಿ ಉಪವಿಭಾಗವನ್ನಾಗಿ ಮಾಲಿನ್ಯದ ವಿಷಯ ಸೇರಿಸುವ ಸಾಧ್ಯತೆ ಇದೆ.
ದೆಹಲಿಯಲ್ಲಿ ನಡೆದದ್ದು 140 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಪ್ರಸಂಗ. ಆದ್ದರಿಂದ ಇದೇ ಮೊದಲ ಬಾರಿ ಇಂಥ ನಿರ್ಧಾರ ಕೈಗೊಳ್ಳುವ ಅನಿವಾರ್ಯ ಸ್ಥಿತಿ ಎದುರಾಗಿದೆ’ ಎಂದು ವಕ್ತಾರರು ಹೇಳಿದ್ದಾರೆ.
ಬಿಸಿಸಿಐ ಕೂಡ ತನ್ನ ನಿಯಮಾವಳಿಯಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಪಟ್ಟ ಅಂಶವನ್ನು ಸೇರಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಕ್ಷ ಡಾ.ಕೆ.ಕೆ.ಅಗರವಾಲ್ ಅವರು ಪತ್ರ ಬರೆದು ಸಲಹೆ ನೀಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.