ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇಶ್ವರದಲ್ಲಿ ಕಲ್ಯಾಣ್‌ ಆಭರಣ ಮಳಿಗೆ ಉದ್ಘಾಟನೆ

Last Updated 8 ಡಿಸೆಂಬರ್ 2017, 20:17 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರದ 11ನೇ ಅಡ್ಡರಸ್ತೆಯಲ್ಲಿ ನೂತನವಾಗಿ ತೆರೆಯಲಾದ ಕಲ್ಯಾಣ್‌ ಆಭರಣ ಮಳಿಗೆಯು ಶುಕ್ರವಾರ ಉದ್ಘಾಟನೆಗೊಂಡಿತು.

ಮಾರ್ಗೊಸಾ ರಸ್ತೆಯಲ್ಲಿರುವ ಮಳಿಗೆಯಲ್ಲಿ ಬೆಳಿಗ್ಗೆ ಆಯೋಜಿಸಿದ್ದ ಸಮಾರಂಭದಲ್ಲಿ ನಟರಾದ ಶಿವರಾಜ್‌ ಕುಮಾರ್‌, ಪ್ರಭು ಗಣೇಶನ್‌, ನಟಿ ಮಂಜು ವಾರಿಯರ್‌ ಭಾಗವಹಿಸಿದ್ದರು. ಮಳಿಗೆ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

ಕಲ್ಯಾಣ್‌ ಜ್ಯುವೆಲರ್ಸ್‌ ಅಧ್ಯಕ್ಷ ಟಿ.ಎಸ್‌.ಕಲ್ಯಾಣರಾಮನ್‌, ‘ಬೆಂಗಳೂರಿನ ಜನರು ನಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಇಲ್ಲಿಯ ಜನರಿಗೆ ಗುಣಮಟ್ಟದ ಆಭರಣಗಳು, ವಿಶಾಲ ಶ್ರೇಣಿಯ ವಿನ್ಯಾಸಗಳನ್ನು ನೀಡಲು ಬಯಸುತ್ತೇವೆ’ ಎಂದರು.

‘ನಗರದಲ್ಲಿ 2010ರಲ್ಲಿ ಮೊದಲ ಮಳಿಗೆ ತೆರೆದಿದ್ದೆವು. ಈಗ ಮಲ್ಲೇಶ್ವರದ ಮಳಿಗೆ ಸೇರಿ ರಾಜ್ಯದಾದ್ಯಂತ 13 ಮಳಿಗೆಗಳನ್ನು ಹೊಂದಿದ್ದೇವೆ. ಕೇರಳದ ತ್ರಿಶ್ಯೂರ್‌ನಲ್ಲಿ ಪ್ರಧಾನ ಕಚೇರಿ ಇದ್ದು, ದೇಶ ಹಾಗೂ ಪಶ್ಚಿಮ ಏಷ್ಯಾದಲ್ಲಿ 117 ಮಳಿಗೆಗಳಿವೆ’ ಎಂದು ಹೇಳಿದರು.

ಕಲ್ಯಾಣ್‌ ಜ್ಯುವೆಲರ್ಸ್‌ ವ್ಯವಸ್ಥಾಪಕ ನಿರ್ದೇಶಕ ಟಿ.ಎಸ್‌.ಕಲ್ಯಾಣರಾಮನ್‌, ಕಾರ್ಯಕಾರಿ ನಿರ್ದೇಶಕರಾದ ರಾಜೇಶ್‌ ಕಲ್ಯಾಣರಾಮನ್‌ ಮತ್ತು ರಮೇಶ್‌ ಕಲ್ಯಾಣರಾಮನ್‌ ಹಾಜರಿದ್ದರು.

ಮರ ಕಡಿದಿದ್ದಕ್ಕೆ ನಿವಾಸಿಗಳ ಪ್ರತಿಭಟನೆ: ಮಳಿಗೆಯ ಅಂದವು ಜನರಿಗೆ ಕಾಣುವುದಿಲ್ಲ ಎಂಬ ಕಾರಣಕ್ಕೆ, ಮಳಿಗೆಯ ಎದುರಿಗಿದ್ದ ಮರವನ್ನು ಕಡಿಯಲಾಗಿದೆ ಎಂದು ಆರೋಪಿಸಿ ನಿವಾಸಿಗಳು, ಉದ್ಘಾಟನಾ ಕಾರ್ಯಕ್ರಮದ ವೇಳೆ ಪ್ರತಿಭಟನೆ ನಡೆಸಿದರು.

ಕಾಡುಮಲ್ಲೇಶ್ವರ ಗೆಳೆಯರ ಬಳಗದ ಪದಾಧಿಕಾರಿಗಳ ಜತೆ ಮಳಿಗೆ ಎದುರು ಸೇರಿದ್ದ ನಿವಾಸಿಗಳು, ‘ನಮ್ಮ ಮರ ನಮ್ಮ ಹಕ್ಕು’, ‘ಮರ ಕಡಿಯುವುದನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

ಬಳಗದ ಅಧ್ಯಕ್ಷ ಬಿ.ಕೆ.ಶಿವರಾಮ್, ‘30 ವರ್ಷಗಳ ಹಳೆ ಮರವನ್ನು ಕಡಿದಿರುವುದು ಅಕ್ಷಮ್ಯ ಅಪರಾಧ. ಅರಣ್ಯ ಇಲಾಖೆಯ ಅಧಿಕಾರಿಗಳು ಮರ ಕಡಿಯಲು ಅನುಮತಿ ನೀಡಿರುವುದಾಗಿ ಮಳಿಗೆಯ ಸಿಬ್ಬಂದಿ ಹೇಳುತ್ತಿದ್ದಾರೆ. ಆ ಬಗ್ಗೆ ತಿಳಿದುಕೊಳ್ಳಲು ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದೇವೆ. ಅದಕ್ಕೆ ಉತ್ತರ ಬಂದ ಬಳಿಕ ಮಳಿಗೆಯ ವಿರುದ್ಧದ ಹೋರಾಟ ಮಾಡುತ್ತೇವೆ’ ಎಂದರು.

‘ಎರಡು ದಿನಗಳ ಹಿಂದೆ ಮರ ಕಡಿಯಲಾಗಿದೆ. ಅಂದೇ ನಿವಾಸಿಗಳು, ಮಳಿಗೆ ಬಳಿ ಸೇರಿ ಪ್ರತಿಭಟನೆ ನಡೆಸಿದ್ದರು. ಮಲ್ಲೇಶ್ವರದಲ್ಲಿ 100 ಸಸಿಗಳನ್ನು ನೆಡುವುದಾಗಿ ಮಳಿಗೆಯ ನೌಕರರು ಹೇಳಿದ್ದರು. ಇದುವರೆಗೂ ಎಲ್ಲಿಯೂ ಸಸಿಗಳನ್ನು ನೆಟ್ಟಿಲ್ಲ. ಹೀಗಾಗಿ ಉದ್ಘಾಟನೆ ವೇಳೆ ಪ್ರತಿಭಟನೆ ನಡೆಸಬೇಕಾಯಿತು’ ಎಂದು ಅವರು ಹೇಳಿದರು.

ಸಸಿ ನೆಟ್ಟ ಶಿವರಾಜ್‌ ಕುಮಾರ್: ಪ್ರತಿಭಟನಾನಿರತ ನಿವಾಸಿಗಳ ಮನವೊಲಿಸಲು ಮುಂದಾದ ನಟ ಶಿವರಾಜ್‌ ಕುಮಾರ್‌, ಸ್ಥಳದಲ್ಲೇ ಸಸಿಯೊಂದನ್ನು ನೆಟ್ಟು ಎಲ್ಲರನ್ನೂ ಸಮಾಧಾನಪಡಿಸಿದರು. ಬಳಿಕ ನಿವಾಸಿಗಳು ಪ್ರತಿಭಟನೆ ಕೈಬಿಟ್ಟರು.

’ಮರ, ಹಸಿರು ಎಲ್ಲರಿಗೂ ಇಷ್ಟ. ನನಗೆ ಬಲು ಇಷ್ಟ. ಇಲ್ಲಿದ್ದ ಮರವನ್ನು ಕಡಿದಿದ್ದು ತಪ್ಪು. ಅದಕ್ಕೆ ಕಾರಣ ಯಾರು ಎಂಬುದು ನನಗೆ ಗೊತ್ತಿಲ್ಲ. ಈಗ ಒಂದು ಸಸಿ ನೆಟ್ಟಿದ್ದೇನೆ. ಮುಂದೆ ನೂರು‌ ಸಸಿ ನೆಡುತ್ತೇವೆ’ ಎಂದು ಶಿವರಾಜ್‌ ಕುಮಾರ್‌ ಹೇಳಿದರು.

**

ಮರ ಕಡಿಯಲು ಅನುಮತಿ

‘ಮರ ಕಡಿಯಲು ಅನುಮತಿ ಕೋರಿ ಕಟ್ಟಡದ ಮಾಲೀಕ ಎನ್‌.ರಘುರಾವ್‌, ಬಿಬಿಎಂಪಿಯ ಪಶ್ಚಿಮ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದರು. ವಲಯ ಅರಣ್ಯಧಿಕಾರಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ವರದಿ ನೀಡಿದ್ದರು. ಅದರನ್ವಯ ಡಿ. 5ರಂದು ಅನುಮತಿ ಪತ್ರ ನೀಡಿದ್ದಾರೆ’ ಎಂದು ಕಲ್ಯಾಣ್‌ ಜ್ಯುವೆಲರ್ಸ್‌ ಪ್ರತಿನಿಧಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT