ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆಗಾಗಿ ಧರ್ಮಾಧಿಕಾರಿಗಳ ಪಾದಯಾತ್ರೆ

Last Updated 9 ಡಿಸೆಂಬರ್ 2017, 5:57 IST
ಅಕ್ಷರ ಗಾತ್ರ

ಮೈಸೂರು: ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ನಗರದ ಎಲ್ಲ ವಾರ್ಡ್‌ಗಳಲ್ಲಿ ನಿವಾಸಿ ಕ್ಷೇಮಾಭಿವೃದ್ಧಿ ಸಮಿತಿ ರಚಿಸಲು ಮತ್ತು ಪಾದಯಾತ್ರೆ ನಡೆಸುವ ನಿರ್ಣಯವನ್ನು ಶುಕ್ರವಾರ ಇಲ್ಲಿ ನಡೆದ ಸರ್ವಧರ್ಮಗಳ ಧರ್ಮಾಧಿಕಾರಿಗಳ ಸ್ವಚ್ಛತಾ ಸಮಾವೇಶದಲ್ಲಿ ತೆಗೆದುಕೊಳ್ಳಲಾಯಿತು.

ಸ್ವಚ್ಛ ನಗರಿ ಸರ್ವೇಕ್ಷಣೆ ಜನವರಿ 4 ರಂದು ಆರಂಭವಾಗಲಿದ್ದು, ಮೈಸೂರಿಗೆ ಮತ್ತೆ ‘ಸ್ವಚ್ಛ ನಗರಿ’ ಪಟ್ಟ ತಂದುಕೊಡಲು ಪರಸ್ಪರ ಕೈಜೋಡಿಸುವುದಾಗಿ ಎಲ್ಲ ಧರ್ಮಗಳ ಧರ್ಮಾಧಿಕಾರಿಗಳು ನಿರ್ಧರಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಧರ್ಮಾಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 9 ವಲಯಗಳು ಮತ್ತು 65 ವಾರ್ಡ್‌ಗಳಲ್ಲಿರುವ ದೇವಾಲಯಗಳು, ಮಠ, ಮಸೀದಿ, ಚರ್ಚ್‌ ಮತ್ತು ಗುರುದ್ವಾರಗಳ ವ್ಯಾಪ್ತಿಯಲ್ಲಿ ಬರುವ ಮನೆಗಳನ್ನು ಒಗ್ಗೂಡಿಸಿ ನಿವಾಸಿ ಕ್ಷೇಮಾಭಿವೃದ್ಧಿ ಸಮಿತಿ ರಚಿಸುವ ನಿರ್ಣಯವನ್ನು ಸಭೆ ತೆಗೆದುಕೊಂಡಿತು.

ತಮ್ಮ ಆಡಳಿತದಲ್ಲಿರುವ ಶಿಕ್ಷಣ ಕೇಂದ್ರಗಳ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಸ್ವಚ್ಛತಾ ಸಮಿತಿ ರಚಿಸಿ ಅವುಗಳ ಮೂಲಕ ನಗರದ 13 ಲಕ್ಷಕ್ಕೂ ಅಧಿಕ ನಿವಾಸಿಗಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಸಭೆ ಮತ್ತು ಜಾಗೃತಿ ಜಾಥಾ ನಡೆಸಲು ನಿರ್ಧರಿಸಲಾಯಿತು.

ಈ ನಿರ್ಣಯಗಳ ಅನುಷ್ಠಾನಕ್ಕಾಗಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ಚಾಲನಾ ಸಮಿತಿ ರಚಿಸಲು ಸಮಾವೇಶದಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.

ರಾಮಕೃಷ್ಣ ಆಶ್ರಮದ ಮೋಕ್ಷಾತ್ಮಾನಂದ ಸ್ವಾಮೀಜಿ ಮಾತನಾಡಿ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಆಟೊ ಚಾಲಕರು ಮತ್ತು ಬಸ್ ಚಾಲಕರ ನೆರವು ಪಡೆದುಕೊಳ್ಳಬೇಕು. ಚಾಲಕರು ತಮ್ಮ ವಾಹನಗಳಲ್ಲಿ ಪ್ರಯಾಣಿಸುವವರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಮೈಸೂರು ಸರ್ಖಾಜಿ ಮೊಹಮ್ಮದ್‌ ಉಸ್ಮಾನ್‌ ಶರೀಫ್‌ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮನೆ, ಗಲ್ಲಿ, ರಸ್ತೆ ಮತ್ತು ಮೊಹಲ್ಲಾಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ನಗರ ತಾನಾಗಿಯೇ ಸ್ವಚ್ಛವಾಗುತ್ತದೆ. ಈ ಕೆಲಸದಲ್ಲಿ ಪಾಲಿಕೆ ಜೊತೆ ಕೈಜೋಡಿಸುತ್ತೇವೆ ಎಂದರು.

ಫಾದರ್‌ ವಿನ್ಸೆಂಟ್‌ ಮೊಂತೇರೊ ಮಾತನಾಡಿ, ಬೇರೆ ಬೇರೆ ವಿಚಾರಗಳ ಬಗ್ಗೆ ಚರ್ಚಿಸಲು ನಾವು ಈ ಹಿಂದೆ ಜತೆಯಾಗಿದ್ದೆವು. ಆದರೆ ಸ್ವಚ್ಛತೆಯ ವಿಚಾರದಲ್ಲಿ ಜತೆ ಸೇರಿದ್ದು ಇದೇ ಮೊದಲು. ಈ ಸಮಾವೇಶ ಎಲ್ಲರಿಗೂ ಮಾದರಿಯಾಗಲಿ ಎಂದರು.

ದೇವನು ಇದ್ದಾನೆ ಎಂಬ ನಂಬಿಕೆಯಿಂದ ನಾವು ದೇವಾಲಯ, ಮಸೀದಿ, ಚರ್ಚ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತೇವೆ. ಅದೇ ರೀತಿ ದೇವನು ಎಲ್ಲ ಕಡೆಯೂ ಇದ್ದಾನೆ ಎಂಬ ನಂಬಿಕೆಯಿಂದ ಇಡೀ ನಗರವನ್ನು ಸ್ವಚ್ಛವಾಗಿಡಬೇಕು ಎಂದು ಕರೆ ಕೊಟ್ಟರು.

ಆದಿಚುಂಚನಗಿರಿ ಮಠದ ಮೈಸೂರು ಶಾಖೆಯ ಸೋಮೇಶ್ವರನಾಥ ಸ್ವಾಮೀಜಿ, ಅವಧೂತ ದತ್ತಪೀಠದ ದತ್ತ ವಿಜಯಾನಂದತೀರ್ಥ ಸ್ವಾಮೀಜಿ, ಪಾಲಿಕೆ ಆಯುಕ್ತ ಜಿ.ಜಗದೀಶ್‌, ಮೇಯರ್‌ ಎಂ.ಜೆ.ರವಿಕುಮಾರ್‌, ಮಾದೇಗೌಡ, ಕ್ಲೀನ್‌ ಮೈಸೂರು ಫೌಂಡೇಷನ್‌ನ ಮಧುಕೇಶ್ವರ್‌, ಅಮೃತಾನಂದಮಯಿ ಆಶ್ರಮ, ಬ್ರಹ್ಮಕುಮಾರಿ ಸಮಾಜದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT