ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರಿನಲ್ಲಿ ಕೃಷಿ ಮೇಳ ಆರಂಭ

Last Updated 9 ಡಿಸೆಂಬರ್ 2017, 6:13 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯ, ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳಿಂದ ವಿಶ್ವವಿದ್ಯಾಲಯದ ವಸ್ತು ಪ್ರದರ್ಶನ ಆವರಣದಲ್ಲಿ ಆಯೋಜಿಸಿದ ನಾಲ್ಕು ದಿನಗಳ ಕೃಷಿ ಮೇಳವು ಗೋ ಪೂಜೆ ನೆರವೇರಿಸುವ ಮೂಲಕ ಶುಕ್ರವಾರ ಆರಂಭವಾಯಿತು.

ನವಲಕಲ್‌ ಬೃಹನ್ಮಠದ ಸೋಮನಾಥ ಶಿವಾಚಾರ್ಯ ಹಾಗೂ ಗೋಲಪಲ್ಲಿಯ ಶ್ರೀವರದಾನಂದ ಸ್ವಾಮೀಜಿ ಅವರು ಗೋ ಪೂಜೆ ನೆರವೇರಿಸಿದರು. ಆನಂತರ, ವಿಶಾಲ ವೇದಿಕೆಯಡಿ ನಿರ್ಮಿಸಿದ ವಿಶೇಷ ಮಳಿಗೆಗಳ ಪ್ರದರ್ಶನವನ್ನು ರಿಬ್ಬನ್‌ ಕತ್ತರಿಸಿ ಉದ್ಘಾಟಿಸಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಂ. ಸಾಲಿಮಠ, ಸಂಶೋಧನಾ ನಿರ್ದೇಶಕ ಡಾ.ಐ. ಶಂಕರಗೌಡ, ವಿಸ್ತರಣಾ ನಿರ್ದೇಶಕ ಡಾ.ಎಸ್‌.ಕೆ. ಮೇಟಿ, ಡಾ.ವಾಸುದೇವನ್‌, ಡಾ. ಪ್ರಮೋದ ಕಟ್ಟಿ ಇದ್ದರು.

ಪ್ರದರ್ಶನದಲ್ಲಿ ಸಿರಿಧಾನ್ಯಕ್ಕೆ ಸಂಬಂಧಿಸಿದಂತೆ ಭಾಗವಹಿಸಿದ ಮಳಿಗೆಗಳನ್ನು ಸ್ವಾಮೀಜಿಗಳು ವೀಕ್ಷಿಸಿದರು. ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯಗಳು ಹಾಗೂ ಸಿಹಿ ತಿನಿಸುಗಳನ್ನು ಎಲ್ಲ ಗಣ್ಯರು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಳಿಗೆಗಳು ಖಾಲಿ: ವಿಶ್ವವಿದ್ಯಾಲಯದ ವಸ್ತು ಪ್ರದರ್ಶನ ಆವರಣದಲ್ಲಿ ಒಂದೇ ವೇದಿಕೆಯಡಿ 64 ಹೈಟೆಕ್‌ ಮಳಿಗೆಗಳನ್ನು ತೆರೆಯಲಾಗಿದೆ. ಹೊರಾಂಗಣದಲ್ಲಿ 200 ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಕೃಷಿ ಮೇಳದ ಮೊದಲ ದಿನವಾಗಿದ್ದರಿಂದ ಅನೇಕ ಮಳಿಗೆಗಳು ಖಾಲಿ ಉಳಿದಿರುವುದು ಕಂಡುಬಂತು. ಕೆಲವು ಮಳಿಗೆಗಳಲ್ಲಿ ವಸ್ತುಗಳ ಜೋಡಣೆಯನ್ನು ಮುಂದುವರಿದಿತ್ತು.

ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ವಸ್ತು ಪ್ರದರ್ಶನ ಹಾಗೂ ಮಾರಾಟದ ಜೊತೆಗೆ ಕೃಷಿಯೇತರ ವಸ್ತುಗಳ ಮಾರಾಟದ ಮಳಿಗೆಗಳು ಭಾಗವಹಿಸಿವೆ. ಸಂಚಾರಿ ಹೋಟೆಲ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಗುಳೇದಗುಡ್ಡ ಕರದಂಟು, ಉಡುಪಿ ಹೋಟೆಲ್‌ ಉಪಹಾರಗಳು, ಹುಬ್ಬಳ್ಳಿ ಗಿರ್ಮಿಟ್‌ ಗಾಡಿಗಳ ಸುತ್ತಲೂ ಜನರು ನೆರೆದಿದ್ದರು.

ಕೃಷಿ ಉಪಕರಣಗಳು, ಕೃಷಿ ಬೀಜಗಳು, ರಾಸಾಯನಿಕ ಗೊಬ್ಬರ ಕಂಪೆನಿಗಳು, ತೋಟಗಾರಿಕೆ ಬೆಳೆಗಳು, ಉದ್ಯಾನ ಸಸ್ಯಗಳು, ಖಾದಿ ಬಟ್ಟೆಗಳು, ಕೃಷಿ ಉತ್ಪನ್ನಗಳ ಮಾದರಿಗಳು ಪ್ರದರ್ಶನದಲ್ಲಿವೆ. ಪ್ರಮುಖವಾಗಿ ಸಿರಿಧಾನ್ಯ (ತೃಣಧಾನ್ಯ) ಪ್ರದರ್ಶನ ಹಾಗೂ ಸಿರಿಧಾನ್ಯ, ಅವುಗಳ ಉತ್ಪನ್ನಗಳ ಮಾರಾಟದ ಮಳಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ವಿಶ್ವವಿದ್ಯಾಲಯದ ಆಡಳಿತ ವಿಭಾಗದ ನೂತನ ಕಟ್ಟಡದಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಒಳನಾಡು ಮೀನುಗಾರಿಕೆ ಇಲಾಖೆಯಿಂದ ಮತ್ಸ್ಯ ಪ್ರದರ್ಶನ ವ್ಯವಸ್ಥೆ ಯನ್ನು ಮಾಡಲಾಗಿದೆ.

ಸಭಾಂಗಣ ಖಾಲಿ: ಕೃಷಿ ಮೇಳ ವೀಕ್ಷಣೆಗಾಗಿ ಬರುವ ಜನರೆಲ್ಲ ಮಳಿಗೆಯಿಂದ ಮಳಿಗೆಗೆ ಹೋಗು ವುದಕ್ಕೆ ಹೆಚ್ಚು ಉತ್ಸುಕರಾಗಿದ್ದರು. ಹೀಗಾಗಿ ಕಾರ್ಯಕ್ರಮದ ಸಭಾಂಗಣವು ಜನರಿಲ್ಲದೆ ಭಣಗುಡುತ್ತಿತ್ತು. ವೇದಿಕೆಯಲ್ಲಿ ಸಂಗೀತಗಾರರು ಗೀತೆಗಳನ್ನು ಹಾಡುತ್ತಿರುವುದು ಕೇಳಿಬಂತು.

ಮಧ್ಯಾಹ್ನ 2.45 ಕ್ಕೆ ರೈತರಿಂದ ರೈತರಿಗಾಗಿ ಸಂವಾದ ಕಾರ್ಯಕ್ರಮ ನಡೆಯಿತು. ಸಭಾಂಗಣದಲ್ಲಿ ಕೆಲವು ಕುರ್ಚಿಗಳು ಭರ್ತಿಯಾಗಿದ್ದವು. ರೈತರಿಗಿಂತ ನಗರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

ಸಭಾಂಗಣ ಖಾಲಿ

ಕೃಷಿ ಮೇಳ ವೀಕ್ಷಣೆಗಾಗಿ ಬರುವ ಜನರೆಲ್ಲ ಮಳಿಗೆಯಿಂದ ಮಳಿಗೆಗೆ ಹೋಗುವುದಕ್ಕೆ ಹೆಚ್ಚು ಉತ್ಸುಕರಾಗಿದ್ದರು. ಹೀಗಾಗಿ ಕಾರ್ಯಕ್ರಮದ ಸಭಾಂಗಣವು ಜನರಿಲ್ಲದೆ ಭಣಗುಡುತ್ತಿತ್ತು. ವೇದಿಕೆಯಲ್ಲಿ ಸಂಗೀತಗಾರರು ಗೀತೆಗಳನ್ನು ಹಾಡುತ್ತಿರುವುದು ಕೇಳಿಬಂತು. ಮಧ್ಯಾಹ್ನ 2.45 ಕ್ಕೆ ರೈತರಿಂದ ರೈತರಿಗಾಗಿ ಸಂವಾದ ಕಾರ್ಯಕ್ರಮ ನಡೆಯಿತು. ಸಭಾಂಗಣದಲ್ಲಿ ಕೆಲವು ಕುರ್ಚಿಗಳು ಭರ್ತಿಯಾಗಿದ್ದವು. ರೈತರಿಗಿಂತ ನಗರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

* * 

ಈ ವರ್ಷ ಸಿರಿಧಾನ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ವಹಿಸಲಾಗಿದೆ. ಸಿರಿಧಾನ್ಯಗಳು ಮತ್ತು ಅವುಗಳಿಂದ ತಯಾರಿಸಿದ ಉತ್ಪನ್ನಗಳ ಪ್ರದರ್ಶನ,ಮಾರಾಟದ ಮಳಿಗೆಗಳು ಭಾಗವಹಿಸಿವೆ.
ಡಾ. ಐ.ಶಂಕರಗೌಡ
ಸಂಶೋಧನಾ ನಿರ್ದೇಶಕ, ರಾಯಚೂರು ಕೃಷಿ ವಿವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT