ಶನಿವಾರ, ಫೆಬ್ರವರಿ 27, 2021
29 °C

ಚಿತ್ತಾಪುರ ಕ್ಷೇತ್ರದಲ್ಲಿ ಕಮಲ ಅರಳಿಸಲು ಹೆಚ್ಚಿದ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ ಕ್ಷೇತ್ರದಲ್ಲಿ ಕಮಲ ಅರಳಿಸಲು ಹೆಚ್ಚಿದ ಕಸರತ್ತು

ಚಿತ್ತಾಪುರ: 2013ರ ವಿಧಾನಸಭೆ ಚುನಾವಣೆಯಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಿಂದ ಕೆಜೆಪಿ ವರಿಷ್ಠರಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಿಜೆಪಿ ಮತ್ತು ಅಭ್ಯರ್ಥಿಯಾಗಿದ್ದ ವಾಲ್ಮೀಕ ನಾಯಕ ಅವರನ್ನು ಸೋಲಿಸುವುದೇ ನನ್ನ ಗುರಿ ಎಂದು ಗುಡುಗಿದ್ದರು. ಇಂದು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಲಿದ್ದಾರೆ.

ಪ್ರಸ್ತುತ ಕ್ಷೇತ್ರವು ಕಾಂಗ್ರೆಸ್ ಹಿಡಿತದಲ್ಲಿದ್ದು ಪ್ರಿಯಾಂಕ್ ಎಂ.ಖರ್ಗೆ ಪ್ರತಿನಿಧಿಸುತ್ತಿದ್ದರಿಂದ ಬರುವ ಚುನಾವಣೆಯಲ್ಲಿ ಈ ಮತಕ್ಷೇತ್ರ ಪ್ರತಿಷ್ಠೆಯ ಕಣವಾಗಲಿದೆ. 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಕಮಲ ಅರಳಿ ವಾಲ್ಮೀಕ ನಾಯಕನಾಲ್ಕು ವರ್ಷ ಶಾಸಕರಾಗಿ ಅಧಿಕಾರ ಚಲಾಯಿಸಿದ್ದಾರೆ. 2013ರಲ್ಲಿ ಪರಾಭವ ಹೊಂದಿರುವ ವಾಲ್ಮೀಕ ಅವರು ಕ್ಷೇತ್ರದಲ್ಲಿ ತಮಗಿರುವ ಅನುಕಂಪ, ಬೆಂಬಲದ ಸದುಪಯೋಗ ಮಾಡಿಕೊಂಡು ಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಪಕ್ಷದ ಟಿಕೆಟ್ ಪಡೆದು ವಿಧಾನಸಭೆ ಪ್ರವೇಶ ಮಾಡಬೇಕು ಎಂದು ತೀವ್ರ ಕಸರತ್ತಿನಲ್ಲಿ ನಿರತರಾಗಿದ್ದಾರೆ.

ಕಾಂಗ್ರೆಸ್‌ಗೆ ಗುಡ್ ಬೈ ಹೇಳಿರುವ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ, ಹಿರಿಯ ಮುಖಂಡರಾದ ಲಿಂಗಾರೆಡ್ಡಿ ಭಾಸರೆಡ್ಡಿ, ಶ್ರೀನಿವಾಸ ಸಗರ, ಶಶಿಕಾಂತ ಪಾಟೀಲ್ ಭಂಕೂರ, ಭೀಮರೆಡ್ಡಿ ಕುರಾಳ, ಬಾಬುಮಿಯ್ಯಾ ಕಲಗುರ್ತಿ ಈಗಾಗಲೇ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಈಗ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿರುವ ಸೋಮಶೇಖರ ಪಾಟೀಲ್, ಭೀಮಣ್ಣ ಸೀಭಾ, ಶರಣಪ್ಪ ನಾಟಿಕಾರ ಅವರು ಇಂದು ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ಧ್ವಜ ಹಿಡಿಯಲಿದ್ದಾರೆ.

ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಡಿ. 9ರಂದು ನಡೆಯುತ್ತಿರುವ ನವ ಕರ್ನಾಟಕ್ಕಾಗಿ ಪರಿವರ್ತನಾ ಯಾತ್ರೆಯಲ್ಲಿ ಪಕ್ಷದ ಮತ್ತು ತಮ್ಮ ಶಕ್ತಿ ಪ್ರದರ್ಶನ ಮಾಡಲೆಂದು ಆಕಾಂಕ್ಷಿಗಳು, ಪಕ್ಷದ ಮುಖಂಡರು ಎಲ್ಲಾ ಶಕ್ತಿ ಉಪಯೋಗಿಸಿ ಯಡಿಯೂರಪ್ಪ ಅವರನ್ನು ಸಂತುಷ್ಟಗೊಳಿಸುವ ಯತ್ನದಲ್ಲಿ ನಿರತರಾಗಿದ್ದಾರೆ.

ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ್ ಅವರು ಚಿತ್ತಾಪುರ ಮತಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿಯಾಗಿ ರಾಜಕೀಯ ಚಟುವಟಿಕೆ ಚುರುಕುಗೊಳಿಸಿದ್ದಾರೆ. ಕ್ಷೇತ್ರದ ತುಂಬೆಲ್ಲಾ ತಮ್ಮ ಬೆಂಬಲಿಗರ ಸಂಖ್ಯೆ ದಿನೆ ದಿನೆ ಹೆಚ್ಚಿಸಿಕೊಂಡು ರಾಜಕೀಯ ಮುಖಂಡರು, ಕಾರ್ಯಕರ್ತರ ಮನವೊಲಿಸುವ ಕೆಲಸದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿರುವ ಮುಖಂಡರ ಹಾಗೂ ಹೊಸದಾಗಿ ಸೇರ್ಪಡೆಯಾಗುತ್ತಿರುವ ಸೋಮಶೇಖರ ಪಾಟೀಲ್ ಅವರ ಗುಂಪಿನೊಂದಿಗೆ ಗುರುತಿಸಿಕೊಂಡಿರುವ ಅರವಿಂದ ಅವರು ಪಕ್ಷದ ವರಿಷ್ಠರ ಮೇಲೆ ಒತ್ತಡ ತಂದು ಚುನಾವಣಾ ಅಖಾಡಕ್ಕಿಳಿಯುವ ಪ್ರಯತ್ನ ಜೋರಾಗಿ ನಡೆಸುತ್ತಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಾಬುರಾವ್ ಚವ್ಹಾಣ್ ಅವರು ‘ಕ್ಷೇತ್ರದ ಕಾರ್ಯಕರ್ತರು ಸ್ಪರ್ಧೆ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ’ ಎಂದು ಹೇಳುವ ಮೂಲಕ ‘ನಾನೂ ಚಿತ್ತಾಪುರ ಕ್ಷೇತ್ರ ಆಕಾಂಕ್ಷಿಯಾಗಿದ್ದೇನೆ’ ಎನ್ನುವ ಸಂದೇಶವನ್ನು ಪಕ್ಷದ ವರಿಷ್ಠರಿಗೆ ರವಾನಿಸಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದ ಗೋಪಾಲ ರಾಠೋಡ್ ಅವರು ಬಿಎಸ್‌ವೈ ಅವರನ್ನು ಭೇಟಿ ಮಾಡಿ ‘ನಾನೂ ಆಕಾಂಕ್ಷಿ’ ಎಂದು ಮನವಿ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಈ ಹಿಂದೆ ಸ್ಪರ್ಧೆ ಮಾಡಿದ್ದ ಈಗ ಬಿಜೆಪಿಯಲ್ಲಿರುವ ಬಸವರಾಜ ಬೆಣ್ಣೂರಕರ್ ಅವರೂ ಚುನಾವಣಾ ಕಣಕ್ಕಿಳಿಯುವ ಪ್ರಯತ್ನ ನಡೆಸುತ್ತಿದ್ದಾರೆ.

ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಲು ಲಂಬಾಣಿ ಸಮುದಾಯದ ಮುಖಂಡರಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಪಕ್ಷದ ವರಿಷ್ಠರು ಯಾರ ಮೇಲೆ ಕರುಣೆ ತೋರುತ್ತಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ. 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ವಾಲ್ಮೀಕ ನಾಯಕ ಅವರನ್ನು ಗೆಲ್ಲಿಸಲು ಪಣ ತೊಟ್ಟು ಯಶಸ್ಸು ಪಡೆದ ಯಡಿಯೂರಪ್ಪ, ನಂತರ ಕೆಜೆಪಿ ಕಟ್ಟಿದ್ದರು. ಅಂದು ವಾಲ್ಮೀಕ ಅವರು ಯಡಿಯೂರಪ್ಪ ಬೆಂಬಲಕ್ಕೆ ನಿಂತುಕೊಳ್ಳದೆ ಬಿಜೆಪಿಯಲ್ಲೆ ಉಳಿದು ಸ್ಪರ್ಧೆ ಮಾಡಿದ್ದರಿಂದ ಸಹಜವಾಗಿ ಬಿಎಸ್‌ವೈ ಮುನಿಸು ಇನ್ನೂ ಕಡಿಮೆಯಾಗದಿದ್ದರೆ ಅದರ ಲಾಭ ಪಡೆಯಲು ಅರವಿಂದ ಚವ್ಹಾಣ್ ಅವರ ಬೆಂಬಲಿಗರು ತುದಿಗಾಲಲ್ಲಿ ನಿಂತುಕೊಂಡಿದ್ದಾರೆ ಎನ್ನುವ ಚರ್ಚೆ ರಾಜಕೀಯ ವಲಯದಿಂದ ಕೇಳಿಬಂದಿದೆ.

ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಕುರಿತು ಅಂತಿಮ ಪ್ರಕಟಣೆ ಹೊರಬೀಳುವವರೆಗೆ ಟಿಕೆಟ್ ಕೇಳುವ ಹಕ್ಕು ಪಕ್ಷದ ಎಲ್ಲರಿಗೂ ಇದೆ. ಆಯ್ಕೆ ಮಾಡುವುದು ವರಿಷ್ಠರ ಕೆಲಸ. ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸುವುದೇ ನಮ್ಮ ಮೊದಲ ಗುರಿಯಾಗಿದೆ ಎಂದು ಬಿಜೆಪಿಯಲ್ಲಿನ ಮೂಲ ಮತ್ತು ಹೊಸದಾಗಿ ಪಕ್ಷಕ್ಕೆ ಬಂದಿರುವ ಮುಖಂಡರು, ಕಾರ್ಯಕರ್ತರು ಹೇಳಿದ್ದಾರೆ.

ನವ ವಧುವಿನಂತೆ ಶೃಂಗಾರ: ಬಿಜೆಪಿ ಪರಿವರ್ತನಾ ಯಾತ್ರೆ ನಿಮಿತ್ತ ಪಟ್ಟಣವು ನವ ವಧುವಿನಂತೆ ಶೃಂಗಾರಗೊಂಡಿದೆ. ಪ್ರತಿ ರಸ್ತೆ, ಪ್ರಮುಖ ಸ್ಥಳಗಳಲ್ಲಿ ಬ್ಯಾನರ್, ಕಟೌಟ್, ಫ್ಲೆಕ್ಸ್, ಸ್ವಾಗತ ಕಮಾನುಗಳು ರಾರಾಜಿಸುತ್ತಿವೆ. ಸಮಾರಂಭ ನಡೆಸಲು ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ. ತಾಲ್ಲೂಕಿನ ಪ್ರತಿ ಗ್ರಾಮ, ಪಟ್ಟಣ, ನಗರ, ತಾಂಡಾಗಳ ಪ್ರತಿ ಬೂತ್‌ನಿಂದ ಕಾರ್ಯಕರ್ತರು ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್ ಹೇಳಿದ್ದಾರೆ.

* * 

ನಾನೂ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಅಪಾರ ಸಂಖ್ಯೆಯ ಮುಖಂಡರು, ಕಾರ್ಯಕರ್ತರು ಬೆಂಬಲ ವ್ಯಕ್ತ ಮಾಡಿದ್ದಾರೆ. ಪಕ್ಷದ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿ ಪಕ್ಷದ ಕೆಲಸ ಮಾಡುತ್ತೇನೆ.

ಅರವಿಂದ ಚವ್ಹಾಣ್, ಅಧ್ಯಕ್ಷ, ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.