ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರು ಸಮರ್ಪಣೆ: ಸಿಎಂ ಉದ್ಘಾಟನೆ

Last Updated 9 ಡಿಸೆಂಬರ್ 2017, 8:24 IST
ಅಕ್ಷರ ಗಾತ್ರ

ಆನೇಕಲ್‌: ಪಟ್ಟಣದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಕಾವೇರಿ ನೀರು ಸಮರ್ಪಣೆ ಕಾರ್ಯಕ್ರಮವನ್ನು ಶನಿವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ ಮಾಡಲಿದ್ದು ಪಟ್ಟಣವು ಐತಿಹಾಸಿಕ ಸಮಾರಂಭಕ್ಕಾಗಿ ಮಧುವಣಗಿತ್ತಿಯಂತೆ ಸಜ್ಜಾಗಿದೆ.

ಆನೇಕಲ್‌ಗೆ ₹176 ಕೋಟಿ ವೆಚ್ಚದಲ್ಲಿ ಕಾವೇರಿ ನೀರು ಪೂರೈಕೆ ಯೋಜನೆಯ ಉದ್ಘಾಟನೆ, ₹ 240ಕೋಟಿ ವೆಚ್ಚದಲ್ಲಿ ತಾಲ್ಲೂಕಿನ 64 ಕೆರೆಗಳಿಗೆ ನೀರು ಪೂರೈಕೆ ಮಾಡುವ ಯೋಜನೆ, ₹13.25 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನಕ್ಕೆ ಶಂಕುಸ್ಥಾಪನೆ, ₹ 125 ಕೋಟಿ ವೆಚ್ಚದಲ್ಲಿ ಆನೇಕಲ್ ಯೋಜನಾ ಪ್ರಾಧಿಕಾರದ ವತಿಯಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಕೃಷಿ ಮೇಳ, ವಸ್ತು ಪ್ರದರ್ಶನ ಸೇರಿದಂತೆ ₹ 1,200 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದ್ದು, ಆನೇಕಲ್‌ನ ಎಎಸ್‌ಬಿ ಕಾಲೇಜು ಮೈದಾನದಲ್ಲಿ ಬೆಳಗ್ಗೆ ನಡೆಯಲಿದೆ.

ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಬಿ.ಶಿವಣ್ಣ ಭೇಟಿ ನೀಡಿ ಮುಖ್ಯಮಂತ್ರಿ ಭೇಟಿಯ ಹಿನ್ನೆಲೆಯಲ್ಲಿ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದರು. ಜಿಲ್ಲಾಧಿಕಾರಿ ವಿ.ಶಂಕರ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಅರ್ಚನಾ, ಎಸ್ಪಿ ಅಮಿತ್‌ ಸಿಂಗ್, ಡಿವೈಎಸ್ಪಿ ಎಸ್.ಕೆ.ಉಮೇಶ್‌ ಹಾಜರಿದ್ದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ಆನೇಕಲ್‌ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನವಾಗಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆಯಾಗುತ್ತಿದೆ. ಇದರಿಂದ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿದೆ ಎಂದರು.

25 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಗುವುದು. ವಿದ್ಯುತ್ ಸಮಸ್ಯೆ ಪರಿಹಾರಕ್ಕಾಗಿ ತಾಲ್ಲೂಕಿನ 10 ಸ್ಥಳಗಳಲ್ಲಿ ₹ 81 ಕೋಟಿ ವೆಚ್ಚದಲ್ಲಿ ಬೆಸ್ಕಾಂ ಸಬ್‌ಸ್ಟೇಷನ್‌ಗಳನ್ನು ನಿರ್ಮಿಸಲಾಗುವುದು. ಈ ಕಾರ್ಯಕ್ರಮದ ಶಂಕುಸ್ಥಾಪನೆ ನಡೆಯಲಿದೆ ಎಂದರು.

ಶಾಸಕ ಬಿ.ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್, ಟಿ.ಬಿ.ಜಯಚಂದ್ರ, ರಮೇಶ್‌ಕುಮಾರ್, ಎಚ್.ಆಂಜನೇಯ, ಹೆಚ್.ಎಂ.ರೇವಣ್ಣ, ಕೃಷ್ಣಭೈರೇಗೌಡ, ತನ್ವೀರ್‌ಸೇಠ್‌, ಸಂಸದ ಡಿ.ಕೆ.ಸುರೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜು, ವಿಧಾನ ಪರಿಷತ್ ಸದಸ್ಯರಾದ ಎಂ.ನಾರಾಯಣಸ್ವಾಮಿ, ಕೆ.ಗೋವಿಂದರಾಜ್, ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿ.ನಾಗರಾಜು, ಪುರಸಭಾ ಅಧ್ಯಕ್ಷ ಲಕ್ಷ್ಮೀಕಾಂತರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ ನಾರಾಯಣ್, ಗಣ್ಯರು ಪಾಲ್ಗೊಳ್ಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT