ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದಲ್ಲಿ 400 ನಕಲಿ ಖಾತೆಗಳ ಸೃಷ್ಟಿ!

Last Updated 9 ಡಿಸೆಂಬರ್ 2017, 9:03 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರಸಭೆಯ ನಕಲಿ ಖಾತೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ‘ಒಂದೇ ವರ್ಷದಲ್ಲಿ ನಗರಸಭೆ ಕೆಲ ಸದಸ್ಯರು ಅಧಿಕಾರಿಗಳ ಮೇಲೆ ‘ದಬ್ಬಾಳಿಕೆ’ ನಡೆಸಿ ಸುಮಾರು 400 ನಕಲಿ ಖಾತೆಗಳ ಸೃಷ್ಟಿಸಿರುವ ಮಹತ್ವದ ಸುಳಿವು ದೊರೆತಿದೆ ಎಂದು ತಿಳಿದು ಬಂದಿದೆ.

ಜೈಭಿಮ್ ನಗರದ ನಿವಾಸಿಯೊಬ್ಬರಿಗೆ ನಕಲಿ ಖಾತೆ ಪ್ರತಿ ನೀಡಿ ವಂಚಿಸಿದ ಪ್ರಕರಣದಲ್ಲಿ ನಗರಸಭೆ ವ್ಯವಸ್ಥಾಪಕ ಶಿವಶಂಕರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ ನಗರ ಠಾಣೆ ಪೊಲೀಸರಿಗೆ ‘ನಕಲಿ ಖಾತೆ’ ದಂಧೆಯ ಹಿಂದಿನ ‘ಕರಾಳ’ ಸೂತ್ರಧಾರರ ಮಾಹಿತಿ ಲಭ್ಯವಾಗಿದ್ದು, ಅದಕ್ಕಾಗಿ ಪೊಲೀಸರು ಏಳು ಸದಸ್ಯರು ಮತ್ತು ಒಬ್ಬ ಸದಸ್ಯೆಯ ಅಳಿಯನಿಗೆ ನೋಟಿಸ್‌ ನೀಡಲು ಮುಂದಾಗಿದ್ದು, ಕೆಲ ಸದಸ್ಯರು ತಲೆಮರೆಸಿಕೊಳ್ಳುವ ಯತ್ನ ನಡೆಸಿದ್ದಾರೆ.

ಶುಕ್ರವಾರ ವ್ಯವಸ್ಥಾಪಕ ಶಿವಶಂಕರ್ ಅವರನ್ನು ನಗರಸಭೆ ಕಚೇರಿಗೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ ಪೊಲೀಸರು, ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಶಂಕರ್ ಅವರ ತನಿಖೆಗೆ ಪಡೆದುಕೊಂಡ ಅವಧಿ ಶುಕ್ರವಾರ ಕೊನೆಗೊಂಡಿತು. ಹೀಗಾಗಿ ಸಂಜೆ ಪೊಲೀಸರು ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದರು. ನ್ಯಾಯಾಧೀಶರು ಅವರನ್ನು ಡಿಸೆಂಬರ್‌ 22ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಗರಸಭೆಯ ದ್ವಿತೀಯ ದರ್ಜೆ ಸಹಾಯಕ ಮುನಿಕೃಷ್ಣಪ್ಪ ಅವರು ತಲೆ ಮರೆಸಿಕೊಂಡೆ, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಅವರು ನಗರ ಪೊಲೀಸ್‌ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸುವ ಜತೆಗೆ ತನಿಖಾಧಿಕಾರಿಗೆ ಸಹಕರಿಸಬೇಕಿದೆ.

ವ್ಯವಸ್ಥಿತ ಜಾಲದ ‘ದಂಧೆ’
2015ರ ಜುಲೈನಿಂದ 2016ರ ಮೇ ನಡುವೆ ನಗರಸಭೆಯಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುವ ಕೆಲಸ ದೊಡ್ಡ ಪ್ರಮಾಣದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಈ ಅವಧಿಯಲ್ಲಿ ಗಂಗಾಧರ ಸ್ವಾಮಿ ಅವರು ಆಯುಕ್ತರಾಗಿ ಮತ್ತು ಹಾಲಿ ಸದಸ್ಯ ಕೆ.ವಿ.ಮಂಜುನಾಥ್‌ ಅವರು ಅಧ್ಯಕ್ಷರಾಗಿದ್ದರು.

ನಗರಸಭೆಯಲ್ಲಿ ಖಾತೆದಾರರಿಗೆ ನೀಡುವ ಖಾತೆಯ ನಕಲು ಪ್ರತಿಗೆ ಸಹಿ ಹಾಕುವ ಅಧಿಕಾರ ಆಯುಕ್ತರಿಗೆ ಇರುತ್ತದೆ. ಆದರೆ ಗಂಗಾಧರ ಸ್ವಾಮಿ ಅವರು ಅದನ್ನು ವ್ಯವಸ್ಥಾಪಕ ಶಿವಶಂಕರ್ ಅವರಿಗೆ ‘ನಿಯೋಜಿತ ಅಧಿಕಾರ’ವಾಗಿ ವರ್ಗಾಯಿಸಿದ್ದರು. ಇದನ್ನೇ ‘ಬಂಡವಾಳ’ ಮಾಡಿಕೊಂಡ ಅಧ್ಯಕ್ಷ ಮಂಜುನಾಥ್‌ ಮತ್ತು ಕೆಲ ಹಿರಿಯ ಸದಸ್ಯರು ವ್ಯವಸ್ಥಾಪಕನ ಮೇಲೆ ನಿರಂತರ ‘ಒತ್ತಡ’ ತಂದು ಒಂದು ವರ್ಷದ ಅವಧಿಯಲ್ಲಿ ಸುಮಾರು 400 ಖಾತೆಗಳಿಗೆ ಸಹಿ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.

‘ಒಂದು ನಕಲಿ ಖಾತೆ ಸೃಷ್ಟಿಗೆ ಸುಮಾರು ₹20 ಸಾವಿರದ ವರೆಗೆ ಸದಸ್ಯರು ಪಡೆದುಕೊಳ್ಳುತ್ತಿದ್ದರು. ಅದರಲ್ಲಿ ಮುನಿಕೃಷ್ಣಪ್ಪ ಮತ್ತು ಶಿವಶಂಕರ್‌ ಅವರಿಗೆ ₹500 ರಿಂದ ₹1,000 ನೀಡಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಕೆಲ ಸಂದರ್ಭದಲ್ಲಿ ಶಿವಶಂಕರ್ ಅವರ ಮೇಲೆ ದೌರ್ಜನ್ಯ ನಡೆಸಿ ಸಹಿ ಹಾಕಿಸಿಕೊಳ್ಳಲಾಗಿದೆ ಎನ್ನುವ ವಿಚಾರ ತಿಳಿದು ಬಂದಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಇತ್ತೀಚೆಗೆ ನಗರಸಭೆಯ ಆವರಣದಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಜೈಭಿಮ್ ನಗರದ ನಿವಾಸಿ ವಿ.ಮುನಿಯಪ್ಪ ಎಂಬುವರು ಶಾಸಕ ಡಾ.ಕೆ.ಸುಧಾಕರ್ ಅವರ ಗಮನಕ್ಕೆ ನಕಲಿ ಖಾತೆ ನೀಡಿ ವಂಚಿಸಿದ್ದನ್ನು ಗಮನಕ್ಕೆ ತಂದಿದ್ದರು. ಈ ವೇಳೆ ಶಾಸಕರು ನಗರ ಠಾಣೆ ಪೊಲೀಸರನ್ನು ಕರೆಯಿಸಿ ದೂರು ದಾಖಲಿಸಿ ವಿಚಾರಣೆ ನಡೆಸುವಂತೆ ಸೂಚಿಸಿದ್ದರು.

ಪ್ರಕರಣ ದಾಖಲಾದರೆ ತಮ್ಮ ಬಣ್ಣ ಬಯಲಾಗುತ್ತದೆ ಎಂದು ಅರಿತ ಕೆಲ ಸದಸ್ಯರು ‘ಎಫ್‌ಐಆರ್‌’ ಮಾಡದಂತೆ ಪೊಲೀಸರಿಗೆ ಸೂಚಿಸಿ ಎಂದು ಶಾಸಕರಿಗೆ ದುಂಬಾಲು ಬಿದ್ದಿದ್ದರು. ಆದರೆ ಈ ವಿಚಾರದಲ್ಲಿ ಶಾಸಕರು ಮಧ್ಯಪ್ರವೇಶ ಮಾಡಲು ಒಪ್ಪದ ಕಾರಣ ಸದ್ಯ ಸದಸ್ಯರ ‘ದುರಾಡಳಿತ’ದಿಂದ ಆಗಿರುವ ‘ಅಕ್ರಮ’ಗಳು ಬಯಲಿಗೆ ಬರುತ್ತಿವೆ.

ನನ್ನ ಪಾತ್ರ ಇಲ್ಲ
ತಮ್ಮ ವಿರುದ್ಧದ ಆರೋಪ ಕುರಿತು ಕೆ.ವಿ.ಮಂಜುನಾಥ್ ಅವರನ್ನು ಪ್ರಶ್ನಿಸಿದರೆ, ‘ನಕಲಿ ಖಾತೆ ದಂಧೆಗೂ ನನಗೂ ಸಂಬಂಧವಿಲ್ಲ. ನಾನು ಅಧ್ಯಕ್ಷನಾಗಿದ್ದ ವೇಳೆ ಯಾವತ್ತೂ ಶಿವಶಂಕರ್ ಅವರಿಗೆ ನಕಲಿ ಖಾತೆಗೆ ಸಹಿ ಹಾಕಿ ಎಂದು ಲಿಖಿತವಾಗಿ ಆದೇಶ ಕೊಟ್ಟಿಲ್ಲ. ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗಮನ ಕೊಟ್ಟಿದ್ದೇನೆ. ವಿನಾ ಇದ್ಯಾವುದೂ ನನಗೆ ಗೊತ್ತಿಲ್ಲ’ ಎಂದು ಹೇಳಿದರು.

ಬಂಧನದ ಭೀತಿ
ನಗರ ಠಾಣೆ ಪೊಲೀಸರು ಕೆ.ವಿ.ಮಂಜುನಾಥ್‌ ಸೇರಿದಂತೆ ಕೆಲ ಸದಸ್ಯರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಕೊಡಲು ಅವರ ಮನೆಗೆ ಅಲೆದಾಡುತ್ತಿದ್ದಾರೆ. ಸದಸ್ಯರು ಪೊಲೀಸರ ಕೈಗೆ ಸಿಗದಂತೆ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದಾರೆ ಎನ್ನಲಾಗಿದೆ. ಸದಸ್ಯರು ನೋಟಿಸ್‌ ಪಡೆದು ವಿಚಾರಣೆಗೆ ಹಾಜರಾಗಿದ್ದರೆ ಬಂಧಿಸಿ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುನಿಕೃಷ್ಣ ಬದಲಾವಣೆ ತಡೆ
ನಗರಸಭೆಯಲ್ಲಿ ನಕಲಿ ಖಾತೆ ಹಾವಳಿಯ ದೂರುಗಳು ಜೋರಾಗಿ ಕೇಳಿ ಬಂದಾಗ 2016ರ ಸೆಪ್ಟೆಂಬರ್‌ ತಿಂಗಳಲ್ಲಿ ಶಾಸಕ ಸುಧಾಕರ್ ಅವರು ಮುನಿಕೃಷ್ಣಪ್ಪ ಅವರನ್ನು ಖಾತೆ ವಿಭಾಗದಿಂದ ಬೇರೆಡೆ ವರ್ಗಾಯಿಸುವಂತೆ ಅಂದಿನ ಪ್ರಭಾರ ಪೌರಾಯುಕ್ತ ನಾಗೇಂದ್ರ ಅವರಿಗೆ ಸೂಚಿಸಿದ್ದರು ಎನ್ನಲಾಗಿದೆ. ಇದಕ್ಕೆ ಕೆ.ವಿ.ಮಂಜುನಾಥ್‌ ಮತ್ತು ರಫೀಕ್‌ ಅವರು ಒಪ್ಪದೆ ಮುನಿಕೃಷ್ಣಪ್ಪ ಅವರನ್ನು ಖಾತೆ ವಿಭಾಗದಲ್ಲಿಯೇ ಇರುವಂತೆ ನೋಡಿಕೊಂಡಿದ್ದರು ಎನ್ನುವ ವಿಚಾರ ಕೂಡ ಬಯಲಾಗಿದೆ. ಆದರೆ ಇದನ್ನು ಈ ಇಬ್ಬರು ಸದಸ್ಯರು ಅಲ್ಲಗಳೆಯುತ್ತಾರೆ.

* * 

ನಮ್ಮಲ್ಲಿರುವ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡು ಹೋಗಿದ್ದಾರೆ. ನಾವು ಅದನ್ನು ನ್ಯಾಯಾಲಯದಿಂದ ಬಿಡುಗಡೆ ಮಾಡಿಸಿಕೊಳ್ಳಬೇಕು.
ಉಮಾಕಾಂತ್, ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT