ಶುಕ್ರವಾರ, ಫೆಬ್ರವರಿ 26, 2021
29 °C

ಅನುಮಾನ

ಹೀರಾ.ಆರ್ Updated:

ಅಕ್ಷರ ಗಾತ್ರ : | |

ಅನುಮಾನ

ಫೋನು ಬಂದ ವಿಚಾರ ನಾನು ಯಾರಿಗೂ ಹೇಳಿರಲಿಲ್ಲ.ನನಗೆ ಏನೋ ಅನುಮಾನ. ಯಾರದಾದರೂ ಕೈವಾಡ ಇರಬಹುದೋ ಎಂದು ಯೋಚನೆ ಮಾಡುತ್ತಾ ಹಳೆ ಕುರ್ಚಿ ಮೇಲೆ ಕೂತಿದ್ದೆ. ಪುನಃ ಫೋನು ಬಂದಾಗ ಈ ಸಾರಿ ಧೈರ್ಯ ತಗೊಂಡು ಗಂಟಲು ಸರಿಪಡಿಸಿ ಮಾತನಾಡಲು ಪ್ರಯತ್ನ ಪಟ್ಟರೂ ಒಂದೂ ಅಕ್ಷರನೂ ಬಾಯಿಂದ ಹೊರಡಲಿಲ್ಲ. ಯಾಕೆ? ತಿಳಿಯದಾಯಿತು ನನಗೆ.

ನಾನೇನು ಸತೀಶನನ್ನು ಇಷ್ಟಪಟ್ಟಿರಲಿಲ್ಲ. ಮನೆಯಲ್ಲಿ ಮೆಟ್ರಿಮೊನಿಗೆ ರಿಜಿಸ್ಟರ್ ಮಾಡಿದ್ದರು. ಅಪ್ಪ ಬೇಡ ಎಂದು ಹೇಳಿದರೂ ಅಮ್ಮನ ಬಲವಂತ.

ಅಮ್ಮನಿಗೆ ನನ್ನದೇ ಯೊಚನೆ ಶುರುವಾಯಿತು. ಎಲ್ಲಾ ಕಡೆ ಹೇಳಿ ರಿಜಿಸ್ಟರ್ ಮಾಡಿದರೂ ಯಾಕೋ ನನ್ನ ಹಣೆ ಬರಹ ಸರಿ ಇರಲಿಲ್ಲವೆಂದು ಕಾಣುತ್ತದೆ. ಒಂದೋ ಜಾತಕ ಕೂಡಿ ಬರುತ್ತಿರಲಿಲ್ಲ. ಇಲ್ಲ ಹುಡುಗನ ಮನೆಯವರು ಒಪ್ಪುತ್ತಿರಲಿಲ್ಲ. ಎರಡೂ ಸರಿ ಹೋದರೆ ನನಗೆ ಒಪ್ಪಿಗೆ ಆಗುತ್ತಿರಲಿಲ್ಲ. ಎಷ್ಟೋ ಸಲ ಮದುವೆ ಮಾಡಿಕೊಳ್ಳದೆ ಒಂಟಿಯಾಗಿ ಇದ್ದರೆ ಹೇಗೆ? ಎಂದುಕೊಳ್ಳುತ್ತಿದ್ದೆ.

ಸುಮಾರಾಗಿ ಒಂದು ವರ್ಷದ ತನಕ ಅಮ್ಮ ಬೇಗ ಎದ್ದು ಅಡುಗೆ ಮಾಡಿ ಅಡ್ರೆಸ್‌ಗಳಿಗೆ ಹೋಗುತ್ತಿದ್ದರು. ಒಮ್ಮೊಮ್ಮೆ ರಿಜಿಸ್ಟರ್ ಮಾಡಿದ ಕಡೆ ಪೆನ್ನು, ಕಾಗದ ತಗೊಂಡು ಹೋಗುವರು. ಫೈಲ್‌ಗಳ ರಾಶಿ ನೋಡಿ ನೋಡಿ ರೇಗಿ ಹೋಗುತ್ತಿತ್ತು. ಅವರು ಏನೂ ಹೇಳದಿದ್ದರೂ ಮನೆಗೆ ಬಂದಾಗ ಅವರ ಮುಖಚರ್ಯೆಯಿಂದ ಇವತ್ತು ಯಾವ ಗಂಡೂ ಬುಟ್ಟಿಗೆ ಬಿದ್ದಿಲ್ಲ ಎಂದು ತಿಳಿಯುತ್ತಿತ್ತು. ಯಾರೂ ಮಾತನಾಡುವ ಹುಮ್ಮಸ್ಸಿನಲ್ಲಿ ಇರುತ್ತಿರಲಿಲ್ಲ. ಒಂದೋ ಎರಡೋ ಕೆಲಸ. ಅಡ್ರೆಸ್ ಸಿಕ್ಕಿದ ನಂತರ ಹುಡುಗನ ಮನೆಗೆ ಫೋನ್ ಮಾಡಬೇಕು. ಎಲ್ಲಾ ವಿವರ ಕೇಳಿ ತಿಳಿದುಕೊಳ್ಳಬೇಕು. ಅದನ್ನು ಬರೆಯಬೇಕಾದರೆ ಏನೋ ಒಂದು ತಪ್ಪು ಆಗುತ್ತಿತ್ತು.

ಮನೆಯಲ್ಲಿ ಎಲ್ಲರ ಹತ್ತಿರ ಮನಸ್ತಾಪ. ಪಾಪ ಅಮ್ಮನಿಗೋ ಸಾಕಾಗಿ ಹೋಗಿತ್ತು. ನಾನು ಏನು ಮಾಡಲಿ? ನನ್ನದೇನೂ ತಪ್ಪಿಲ್ಲವಲ್ಲ. ಕೇವಲ ಆಕರ್ಷಣೆ ಒಂದೇ ಅಲ್ಲ. ನಾನು ಜೀವನ ಪೂರ್ತಿ ಅವರ ಬಳಿ ಬಾಳಬೇಕು. ನನ್ನ ಅನಿಸಿಕೆಗಳಿಗೆ ಅವರು ಸ್ಪಂದಿಸಬೇಕು. ಇದೆಲ್ಲವೂ ನನಗೆ ಒಪ್ಪಿಗೆ ಆಗಬೇಕು. ಆದರೆ... ನನ್ನ ಮನಸ್ಸಿಗೆ ಯಾವುದೂ ಸರಿ ಕಂಡುಬಂದಿರಲಿಲ್ಲ.

ಆವತ್ತು ಅಮ್ಮ ‘ನೋಡೇ ಭಾನುವಾರ ಶ್ರಾವಣಿಯ ಚಿಕ್ಕಮ್ಮ ಅವರ ನಾದಿನಿಯ ಮಗನನ್ನು ಕರೆದುಕೊಂಡು ಬರುತ್ತಾರಂತೆ. ನೀನು ಫ್ರೆಂಡ್ಸ್ ಗಿಂಡ್ಸ್ ಎಂದು ಜಾಗ ಖಾಲಿ ಮಾಡಬೇಡ. ಬೆಳಿಗ್ಗೆನೇ ನೀರು ಹಾಕಿಕೊ. ಎಣ್ಣೆ ಸೀಗೆಪುಡಿ ತಂದು ಇಟ್ಟಿದ್ದೀನಿ’ ಎಂದರು.

‘ಯಾರಮ್ಮ ನನಗೆ ತಿಳಿಯದೇ ಎಲ್ಲಾ ತಯಾರಿ ಮಾಡುತ್ತಿಯಲ್ಲಾ’ ಎಂದೆ. ಭಜನೆಗೆ ಹೋದಾಗ ಶ್ರಾವಣಿ ಬಳಿ ನಿನ್ನ ಜಾತಕ, ಫೋಟೊ ಕೊಟ್ಟಿದ್ದೆ. ನಾದಿನಿಗೆ ಹೇಳಿದಳಂತೆ. ಶಾಸ್ತ್ರಿಗಳ ಬಳಿ ಜಾತಕ ತೋರಿಸಿ ಗ್ರಹ ಮೈತೃತ್ವ ಚೆನ್ನಾಗಿದೆ. ಫೋಟೊ ನೋಡಿ ಹುಡುಗ ಒಪ್ಪಿದ್ದಾನೆ ಎಂದು ಫೋನ್ ಮಾಡಿದ್ದರು.

‘ಇನ್ನೇನು ವಿವರ ಬೇಕು? ಅವರು ಬಂದ ನಂತರ ತಿಳಿಯುತ್ತೆ’ ಎಂದರು. ನನಗೆ ಅಮ್ಮನ ಪೀಕಲಾಟ ನೋಡಿ ಅಯ್ಯೋ ಅನಿಸಿತು. ನೋಡೋಣ ಬಂದವರು ಹೇಗಿರುವರೆಂದು ತಿಳಿಯುತ್ತಲ್ಲ. ಅಜ್ಜಿ ಯಾವಾಗಲೂ ಹೇಳುತ್ತಿದ್ದರು ‘ಸುಮ್ಮನೆ ಯಾಕೆ ಊಹೆ ಮಾಡುವುದು’ ಎಂದು ನಾನು ಸುಮ್ಮನಾದೆ.

ಸರಿಯಾಗಿ ನಾಲ್ಕು ಗಂಟೆಗೆ ಮನೆಯ ಎದುರುಗಡೆ ದೊಡ್ಡದಾದ ಕಾರು ಬಂದು ನಿಂತಿತು. ಅದನ್ನು ನೋಡಿ ನಾನು ಅಯ್ಯೋ ದೇವರೇ? ಇವರನ್ನು ನಾವು ಸುಧಾರಿಸಲು ಆಗುವುದೆ ಎಂದುಕೊಂಡೆ. ಒಳಗಡೆ ಕಿಟಕಿಯ ಪರದೆಯಿಂದ ಇಣುಕಿದಾಗ ಕಾಣುವುದೇನು? ನಮ್ಮ ಕಾಲೇಜಿನಲ್ಲಿ ಓದುತ್ತಿದ್ದ ನಮ್ಮ ಸಹಪಾಠಿ. ಬಂದವರಿಗೆ ತಂಪಾದ ಪಾನಕ ಕೊಟ್ಟದ್ದಾಯಿತು. ಮಾತುಕತೆ ಶುರು ಮಾಡಿದರು.

ಹುಡುಗನ ತಂದೆ, ತಾಯಿ ಇಬ್ಬರೂ ನನ್ನನ್ನು ಒಪ್ಪಿಕೊಂಡಿರುವ ಬಗ್ಗೆ ತಿಳಿಸಿದಾಗ ನನ್ನ ಅಮ್ಮನ ಮುಖದಲ್ಲಿದ್ದ ಆನಂದ ನಾನು ಮರೆಯಲಾರೆ. ನನ್ನನ್ನು ಹೊರಗಡೆ ಕರೆದರು. ನಾನು ತುಂಬಾ ನಾಚಿಕೆಯಿಂದ ಹುಡುಗನನ್ನು ನೋಡಲೇ ಇಲ್ಲ. ತಿಂಡಿ, ಕಾಫಿ ಕೊಡಲು ಹೇಳಿದರು. ಆವಾಗಲೂ ನಾನು ತಲೆ ಎತ್ತಲೇ ಇಲ್ಲ.

ಹಿರಿಯರೆಲ್ಲರೂ ನಮ್ಮಿಬ್ಬರನ್ನು ಪರಸ್ಪರ ಭೇಟಿ ಮಾಡಿಸಿ, ಹೊರಗಡೆ ಹೋಗಲು ಅನುಮತಿ ನೀಡಿದರು. ನಾನು ಕೂಡಲೇ ಹೊರಟೆ. ಕಾರಿನಲ್ಲಿ ಕುಳಿತುಕೊಳ್ಳುವಾಗ ಸಂಕೋಚ ಸ್ವಭಾವದ ನಾನು ಏನೂ ಮಾತನಾಡದೇ ಸುಮ್ಮನೆ ಕೂತಿದ್ದು ಸತೀಶನಿಗೆ ತುಂಬಾ ಬೇಜಾರು ಆಗಿರಬೇಕು. ಮನೆಗೆ ವಾಪಸು ಬಂದಾಗ ಲಗ್ನ ಪತ್ರಿಕೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು.

ಫಕ್ಕನೇ ಎಚ್ಚರವಾಯಿತು. ಪುನಃ ಫೋನಿನ ಕರೆ. ನನಗೆ ಎದೆ ಬಡಿತ ಶುರು ಆಯಿತು.‘ಫೋನ್ ಯಾರದ್ದು ನೋಡೇ’ ಎಂದು ಅಮ್ಮ ಹೇಳಿದಾಗ ಆ ಕಡೆಯಿಂದ ‘ಹಲೋ ಹಲೋ’ ಎಂದು ಫೋನ್ ಇಟ್ಟರು. ನನಗೆ ಇನ್ನೂ ಭಯ ಶುರು ಆಯಿತು. ಮೂರನೇಯ ಸಲ ಫೋನ್ ಬಂದಾಗ ನಾನೇ ಗಂಟಲು ಸರಿ ಪಡಿಸಿ ‘ಹಲೋ’ ಎಂದೆ.

ಆ ಕಡೆಯಿಂದ ‘ಹಲೋ ಯಾರು ಮಾತನಾಡುವುದು?’ ಎಂದಾಗ ‘ನಾನು ಸಂಪದಾ ಮಾತನಾಡುವುದು’ ಎಂದುಬಿಟ್ಟೆ. ಕೂಡಲೇ ನಾಲಗೆ ಕಚ್ಚಿಕೊಂಡೆ. ಆ ಕಡೆಯಿಂದ ‘ಹಲೋ, ನಾನು ಸತೀಶ ಮಾತನಾಡುವುದು. ಆವಾಗದಿಂದ ನಾನು ಫೋನ್ ಮಾಡುತ್ತಾ ಇದ್ದೇನೆ. ಹಲೋ ಹಲೋ ಎಂದರೂ ಉತ್ತರವಿಲ್ಲ’ ಎಂದರು.

ನನಗೆ ಒಂದೇ ಸಲ ಅಯ್ಯೋ ದೇವರೇ, ಏನೆಲ್ಲಾ ಅಪಾರ್ಥ, ಅನರ್ಥ ಭಾವಿಸಿದೆ. ಸದ್ಯ ನನ್ನ ಅನುಮಾನ ಯಾರಿಗೂ ಹೇಳಿರಲಿಲ್ಲ. ಒಳ್ಳೆಯದಾಯಿತು ಎಂದುಕೊಂಡು ‘ಇಲ್ಲ, ಇಲ್ಲಿ ನನಗೇನೂ ಕೇಳಿಸುತ್ತಿಲ್ಲ ಎಂದು ಉಗುಳು ನುಂಗಿದೆ. ಅವರು ‘ಹೂಂ, ನನಗೆ ಅರ್ಜೆಂಟಾಗಿ ಅಫೀಸು ಕೆಲಸದ ಮೇಲೆ ಡೆಲ್ಲಿಗೆ ಬರಬೇಕಾಯಿತು. ನಿನಗೆ ಹೇಳಲು ಆಗಲಿಲ್ಲ. ಏರ್‌ಪೋರ್ಟಿನಿಂದ ಫೋನ್ ಮಾಡಿದರೆ ಉತ್ತರವಿಲ್ಲ. ಅದಕ್ಕೆ ಹೋಟೆಲ್ ತಲುಪಿದ ಕೂಡಲೇ ಫೋನ್ ಮಾಡಿದೆ. ಎಲ್ಲಾ ಕ್ಷೇಮ ತಾನೆ?’ ಎಂದಾಗ ನಾನು ನನ್ನಲ್ಲೇ ಅಯ್ಯೋ ಮಂಕೆ ನನ್ನ ಬುದ್ಧಿಗೆ ಏನು ಹೇಳಬೇಕೆಂದು ತಿಳಿಯದೆ ಅವರ ಬಳಿ ಮಾತನಾಡಲು ಶುರು ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.