ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಮಾದರಿ ಪರಿಹಾರ ನೀಡಿ

Last Updated 9 ಡಿಸೆಂಬರ್ 2017, 9:11 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ರೈತರ ಬಗ್ಗೆ ಈ ಸರ್ಕಾರಗಳಿಗೆ ಆಸಕ್ತಿ ಇಲ್ಲ ಎಂದು ಸಂಸದ ಎಚ್‌.ಡಿ.ದೇವೇಗೌಡ ಆರೋಪಿಸಿದರು.

ಬರಗಾಲದಿಂದ ಬೆಳೆ ನಾಶವಾಗಿ ಸಂಕಷ್ಟದಲ್ಲಿರುವ ಅಡಿಕೆ, ತೆಂಗು ಬೆಳೆಗಾರರಿಗೆ ಪರಿಹಾರಕ್ಕೆ ಒತ್ತಾಯಿಸಿ ಕಡೂರು ಕ್ಷೇತ್ರದ ಶಾಸಕ ವೈ.ಎಸ್‌.ವಿ.ದತ್ತ ನೇತೃತ್ವದಲ್ಲಿ ಪಂಚನಹಳ್ಳಿಯಿಂದ ಚಿಕ್ಕಮಗಳೂರುವರೆಗೆ ನಡೆದ ಪಾದಯಾತ್ರೆಯ ಸಮಾರೋಪದಲ್ಲಿ ಅವರು ಮಾತನಾಡಿದರು. ಬೆಳೆ ನಾಶವಾಗಿರುವ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಬೆರಳು ತೋರಿಸುತ್ತಿವೆ. ಈ ಸರ್ಕಾರಗಳ ಧೋರಣೆ ನೋವು ಉಂಟು ಮಾಡಿದೆ ಎಂದು ಹೇಳಿದರು.

‘ತೆಂಗು, ಅಡಿಕೆ ಇವೆಲ್ಲವೂ ವಾಣಿಜ್ಯ ಬೆಳೆಗಳು. ನಾಶವಾಗಿರುವ ಈ ಬೆಳೆಗಳಿಗೆ ಪರಿಹಾರ ಕೇಳಿದರೆ ಬರಗಾಲ ಪರಿಹಾರ ನಿಧಿಯಿಂದ ನೀಡುವ ರಾಗಿ, ಜೋಳಗಳಿಗೆ ನೀಡುವ ಲೆಕ್ಕಾಚಾರದಲ್ಲೇ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ತೆಂಗು, ಅಡಿಕೆಗೆ ಕೇರಳ ಮಾದರಿಯ ಪ್ಯಾಕೇಜ್‌ ಸರಿಯಾದುದು. ಆ ಮಾದರಿಯಲ್ಲೇ ಪರಿಹಾರ ನೀಡಬೇಕು. ರೈತರನ್ನು ಕಡೆಗಣಿಸಿದರೆ ಯಾವ ಸರ್ಕಾರವು ಉಳಿಯುವುದಿಲ್ಲ’ ಎಂದು ಹೇಳಿದರು.

‘ದತ್ತ ಅವರು ಅಡಿಕೆ, ತೆಂಗು ಬೆಳೆಗಾರರಿಗೆ ಪರಿಹಾರಕ್ಕೆ ಆಗ್ರಹಿಸಿ ಕಡೂರು ತಾಲ್ಲೂಕಿನ ಪಂಚನಹಳ್ಳಿಯಿಂದ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಸುಮಾರು 90 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಅವರು ಸ್ಪಂದಿಸುತ್ತಾರೆ. ಅವರಿಗೆ ರಾಜಕೀಯವಾಗಿ ಬೆಳೆಯುವ ಅವಕಾಶ ಹೆಚ್ಚು ಇದೆ’ ಎಂದು ಹೇಳಿದರು.

‘ಮಧ್ಯ ಕರ್ನಾಟಕದಲ್ಲಿ ಸುಮಾರು 2.5 ಲಕ್ಷ ಎಕರೆಯಲ್ಲಿನ ಮೆಕ್ಕಜೋಳ ನಾಶವಾಗಿದೆ. ಹಾವೇರಿಯಿಂದ ಚಿತ್ರದುರ್ಗದವರೆಗೆ ಹೊಲಗಳಿಗೆ ಹೋಗಿ ನೋಡಿದ್ದೇನೆ. ಈ ಬಗ್ಗೆ ಸರ್ಕಾರದ ಗಮನವನ್ನೂ ಸೆಳೆದಿದ್ದೇನೆ. ನಮ್ಮದು ರೈತರ ಪಕ್ಷ. ರೈತರು ದೇವರ ಸಮಾನ. ಕೊನೆ ಉಸಿರುವ ಇರುವವೆಗೂ ಅವರ ಪರವಾಗಿ ಹೋರಾಡುತ್ತೇನೆ’ ಎಂದರು.

‘ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಬಡಕುಟುಂಬಗಳ ವೃದ್ಧರಿಗೆ ತಲಾ ₹ 5 ಸಾವಿರ ಮಾಸಾಶನ ನೀಡುವುದಾಗಿ, ಗರ್ಭಿಣಿಯರಿಗೆ ಕೊನೆ ಮೂರು ತಿಂಗಳು ತಲಾ ₹ 6 ಸಾವಿರ ಮತ್ತು ಹೆರಿಗೆ ನಂತರ ಮೂರು ತಿಂಗಳು ತಲಾ ₹ 6 ಸಾವಿರ ನೀಡುವುದಾಗಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇವು ಬರಿ ಆಶಾಸ್ವನೆಗಳಲ್ಲ, ಅನುಷ್ಠಾನ ಮಾಡಿಯೇ ತೀರುತ್ತೇವೆ’ ಎಂದರು.

‘ಮಾಜಿ ಮುಖ್ಯಮಂತ್ರಿ, ಮಾಜಿ ಪ್ರಧಾನಿಯಾದ ನನಗೆ ಸಂಸತ್ತಿನ ಅಧಿವೇಶನದಲ್ಲಿ 3 ನಿಮಿಷ ಸಮಯ ನೀಡುತ್ತಾರೆ. 3 ನಿಮಿಷದಲ್ಲಿ ರೈತರ ಸಮಸ್ಯೆ ಹೇಳಲು ಸಾಧ್ಯ ಇದೆಯೇ? ಜನರು ನಮಗೆ ಶಕ್ತಿ ತುಂಬಬೇಕು. ಈವರೆಗೆ 12 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ, ಈ ಬಾರಿ ಜನರು ಪಕ್ಷವನ್ನು ಬೆಂಬಲಿಸುವ ವಿಶ್ವಾಸ ಇದೆ’ ಎಂದರು.

ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ‘ಕಾಫಿ ಬೆಳೆಗೆ ಶಂಖು ಹುಳು ಹಾವಳಿ, ಭತ್ತಕ್ಕೆ ಸೈನಿಕ ಹುಳು ಹಾವಳಿ ಕಾಡುತ್ತಿದೆ. ರೈತರು ಕಂಗಾಲಾಗಿದ್ದಾರೆ. ರೈತರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುವ ಸರ್ಕಾರಗಳನ್ನು ಸಹಿಸಲು ಸಾಧ್ಯ ಇಲ್ಲ’ ಎಂದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜೆಡಿಎಸ್‌ ಮುಖಂಡರಾದ ಎಚ್‌.ಎಚ್‌.ದೇವರಾಜ್‌, ರಂಜನ್‌ಅಜಿತ್‌ಕುಮಾರ್‌, ಅಮರನಾಥ್‌, ಚಂದ್ರೇಗೌಡ, ರಮೇಶ್‌, ಓಂಕಾರಮ್ಮ, ಸಾವಿತ್ರಿ ಶ್ರೀನಿವಾಸ್‌, ಗಂಗಾಧರ್‌, ರಂಗಪ್ಪ, ಬಸವರಾಜು, ಚಂದ್ರಪ್ಪ, ಕೋಡಿಹಳ್ಳಿ ಮಹೇಶ್‌, ಮಚ್ಚೇರಿ ಮಹೇಶ್‌, ಕೆಂಪಣ್ಣ, ಪಾಪಣ್ಣ ಇದ್ದರು.

ತಿಂಗಳಾಂತ್ಯಕ್ಕೆ ಆತ್ಮಚರಿತ್ರೆ ಬಿಡುಗಡೆ

ಶಾಸಕ ವೈಎಸ್‌ವಿ ದತ್ತ ಮಾತನಾಡಿ, ಎಚ್‌.ಡಿ.ದೇವೇಗೌಡ ಅವರ ಆತ್ಮಕತೆ ಈ ತಿಂಗಳ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಿದರು. ‘ದೇವೇಗೌಡ ಅವರ ಆತ್ಮಚರಿತ್ರೆಯನ್ನು ನಾನು ಬರೆಯುತ್ತಿದ್ದೇನೆ. ಅವರ ಆತ್ಮಚರಿತ್ರೆ ದೊಡ್ಡ ಸಾಹಸಗಾಥೆ. ಅದರಲ್ಲಿ ಸ್ಫೋಟಕ ಮಾಹಿತಿಗಳು ಇವೆ. ಹಳ್ಳಿಯ ಬುಡಮಟ್ಟದಿಂದ ಬಂದ ರೈತ ಕುಟುಂಬದ ವ್ಯಕ್ತಿಯೊಬ್ಬರು ದೇಶದ ಪ್ರಧಾನಿ ಪಟ್ಟಕ್ಕೇರಿದ ಆರೋಹಣ ಪ್ರಕ್ರಿಯೆ ಅದರಲ್ಲಿದೆ’ ಎಂದರು.

‘ಏಳುಬೀಳು ಸಾಹಸಗಾಥೆಗಳು ಇವೆ. ಪುಸ್ತಕದಲ್ಲಿ 500 ಪುಟಗಳು ಇವೆ. ದೇವೇಗೌಡ ಅವರ ಬಗ್ಗೆ ಜನರಿಗೆ ನಂಬಿಕೆ. ಅವರು ಒಳ್ಳೆಯದನ್ನು ಮಾಡುತ್ತಾರೆ ಎಂದು ಆಶಾಭಾವ ಎಲ್ಲರಿಗೂ ಇದೆ’ ಎಂದು ಹೇಳಿದರು.

ಒಕ್ಕಲೆಬ್ಬಿಸದಂತೆ ಜಿಲ್ಲಾಧಿಕಾರಿಯೊಂದಿಗೆ ಚರ್ಚೆ

‘ಮಸಗಲಿ ಮೀಸಲು ಅರಣ್ಯದಲ್ಲಿ ಒತ್ತುವರಿದಾರರನ್ನು ಒಕ್ಕಲೆಬ್ಬಿಸದಂತೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸುತ್ತೇನೆ. ಅರಣ್ಯ ಕಾಯ್ದೆ ಜಾರಿಗೆ ಬರುವುದಕ್ಕೂ ಮುನ್ನ ಒತ್ತುವರಿ ಮಾಡಿದ್ದವರ ಪರ ಹೋರಾಟ ಮಾಡುತ್ತೇನೆ’ ಎಂದು ಸಂಸದ ದೇವೇಗೌಡ ಭರವಸೆ ನೀಡಿದರು.

5 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕೆ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ದೇವೇಗೌಡ ಸ್ಪಷ್ಟಪಡಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT