ಶನಿವಾರ, ಮಾರ್ಚ್ 6, 2021
18 °C

ಮಿನಿ ವಿಧಾನಸೌಧ ಕಟ್ಟಡ ಬಿರುಕು!

ಕೆ.ವಿ.ನಾಗರಾಜ್ Updated:

ಅಕ್ಷರ ಗಾತ್ರ : | |

ಮಿನಿ ವಿಧಾನಸೌಧ ಕಟ್ಟಡ ಬಿರುಕು!

ನರಸಿಂಹರಾಜಪುರ: ತಾಲ್ಲೂಕಿನ ಎಲ್ಲ ಸರ್ಕಾರಿ ಇಲಾಖಾ ಕಚೇರಿಗಳನ್ನು ಒಂದೇ ಸೂರಿನಡಿಗೆ ತಂದು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಿರ್ಮಿಸಲಾಗಿರುವ ಮಿನಿ ವಿಧಾನ ಸೌಧದ ಕಟ್ಟಡ ಗೋಡೆಗಳು ಬಿರುಕು ಬಿಟ್ಟಿದ್ದು, ಸಾರ್ವಜನಿಕರು ಹಾಗೂ ಇಲಾಖೆ ನೌಕರರಲ್ಲಿ ಆತಂಕ ಮೂಡಿಸಿದೆ.

ತಾಲ್ಲೂಕು ಕೇಂದ್ರದ ಹೃದಯ ಭಾಗದಲ್ಲಿದ್ದ ತಾಲ್ಲೂಕು ಕಚೇರಿಯನ್ನು ಹಲವು ಪರ ವಿರೋಧಗಳ ನಡುವೆ ಅಂದಿನ ಬಿಜೆಪಿ ಸರ್ಕಾರ ಬೈಪಾಸ್ ರಸ್ತೆಯ ಸಮೀಪ ಮೀಸಲಿಟ್ಟಿದ್ದ ನಿವೇಶನದಲ್ಲಿ ನಿರ್ಮಿಸಿತ್ತು. ಈ ಕಟ್ಟಡ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2009 ಜನವರಿ 13ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. 2010 ಜನವರಿ 20ರಂದು ಜಿಲ್ಲಾಧಿಕಾರಿ ಯಾಗಿದ್ದ ಆರ್. ನಾರಾಯಣಸ್ವಾಮಿ ಕಟ್ಟಡವನ್ನು ಉದ್ಘಾಟಿಸಿದ್ದರು.

ಇಲ್ಲಿ ಪ್ರಸ್ತುತ ಕಂದಾಯ ಇಲಾಖೆ, ಖಜಾನೆ, ಅಬಕಾರಿ, ನೋಂದಣಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಕಟ್ಟಡ ಉದ್ಘಾಟನೆಗೊಂಡ ಕೇವಲ ನಾಲ್ಕು ವರ್ಷದೊಳಗೆ ಭಾರಿ ಪ್ರಮಾಣದಲ್ಲಿ ಬಿರುಕು ಬಿಟ್ಟಿತ್ತು. ಅಲ್ಲದೆ, ಹಲವು ಕೊಠಡಿಗಳಲ್ಲಿ ಭಾರಿ ಪ್ರಮಾಣದಲ್ಲಿ ಬಿರುಕು ಕಾಣಿಸಿ ಕೊಂಡಿತ್ತು. ಇದಕ್ಕೆ ಸಿಮೆಂಟ್‌ನಿಂದ ತೆಪೆ ಹಚ್ಚುವ ಕಾರ್ಯ ಮಾಡಲಾಗಿತ್ತು. ಪ್ರಸ್ತುತ ಪುನಃ ತಳಪಾಯದಿಂದಲೇ ಭಾರಿ ಪ್ರಮಾಣದ ಬಿರುಕುಗಳು ಕಾಣಿಸಿಕೊಂಡಿವೆ. ಕೋಟ್ಯಂತರ ಮೊತ್ತದ ಕಟ್ಟಡವನ್ನು ತರಾತುರಿಯಲ್ಲಿ ನಿರ್ಮಿಸಲಾಗಿದ್ದು, ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಕಟ್ಟಡವನ್ನು ನಿರ್ಮಾಣ ಮಾಡುವಾಗ ತಳಪಾಯದಿಂದ ಕಲ್ಲಿನ ಗೋಡೆಯನ್ನು ನಿರ್ಮಿಸಿಲ್ಲ. ಬದಲಾಗಿ ಪ್ರತ್ಯೇಕವಾಗಿ ಗೋಡೆಗಳನ್ನು ನಿರ್ಮಿಸಲಾಗಿದೆ. ಇದರಿಂದ ಗೋಡೆ ಗಳು ಕುಸಿದು ಬಿರುಕು ಬಿಟ್ಟಿವೆ ಎಂದು ಹೆಸರು ಹೇಳಲಿಚ್ಛಿಸದ ಎಂಜಿನಿಯರ್ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಟ್ಟಡವು ಯಾವುದೇ ಸಂದರ್ಭ ದಲ್ಲಿ ಕುಸಿಯುವ ಸಾಧ್ಯತೆಯಿದೆ. ತಹಶೀಲ್ದಾರರ ಚೇಂಬರ್ ನಲ್ಲೂ ಸಹ ಬಿರುಕು ಬಿಟ್ಟಿದೆ. ಕಳಪೆ ಕಾಮಗಾರಿ ಯಾಗಿರುವುದರಿಂದ ಗುತ್ತಿಗೆದಾರ, ಇಲಾಖೆಯ ಎಂಜಿನಿಯರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಕಟ್ಟಡವನ್ನು ದುರಸ್ತಿಪಡಿಸಿ ನೌಕರರಿಗೆ ರಕ್ಷಣೆ ಒದಗಿಸ ಬೇಕೆಂದು ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ವಿನಾಯಕ್ ಮಾಳೂರು ದಿಣ್ಣೆ ಹೇಳಿದರು.

ಕಟ್ಟಡದ ನೆಲಮಟ್ಟದ ಅಂತಸ್ತಿನ ಕಾಮಗಾರಿಯೇ ಕಳಪೆಯಾಗಿದ್ದು, ಇನ್ನು ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಮೇಲಂತಸ್ತಿನ ಕಟ್ಟಡದ ಕಾಮಗಾರಿಯೂ ಅಪೂರ್ಣವಾ ಗಿರುವುದರಿಂದ ಮಳೆಗಾಲದಲ್ಲಿ ಮಳೆ ನೀರು ಕಟ್ಟಡದ ಒಳಭಾಗದಲ್ಲಿ ಬರುತ್ತದೆ.

ಯಾವುದೇ ಅಪಾಯ ಸಂಭವಿಸುವ ಮೊದಲೇ ಸಂಬಂಧ ಪಟ್ಟವರು ಕೂಡಲೇ ಇತ್ತ ಗಮನಹರಿಸಬೇಕು. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

* * 

ಮಿನಿ ವಿಧಾನಸೌಧದ ಕಟ್ಟಡ ಬಿರುಕು ಬಿಟ್ಟಿರುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಪಡೆಯಲಾಗುವುದು.

ಡಿ.ಎನ್.ಜೀವರಾಜ್

ಶಾಸಕ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.