ಗುರುವಾರ , ಮಾರ್ಚ್ 4, 2021
29 °C

ಬ್ಲ್ಯಾಕ್‌ ವಿಡೊ

ಜಯಶ್ರೀ ದೇಶಪಾಂಡೆ Updated:

ಅಕ್ಷರ ಗಾತ್ರ : | |

ಬ್ಲ್ಯಾಕ್‌ ವಿಡೊ

ಅರವತ್ತಿ೦ಚಿನ ಟಿ.ವಿ. ತೆರೆ, ಅದಕ್ಕೆ ಡಾಲ್ಬಿ ಡಿಜಿಟಲ್ ಬೋಸ್ ಸ್ಪೀಕರುಗಳು. ದೊಡ್ಡದಾಗಿ ಹಚ್ಚಿಬಿಟ್ಟರೆ ಹೊರಗಿನ ಸದ್ದಾಗಲೀ, ಹೊರಪ್ರಪ೦ಚದತ್ತ ಗಮನವಾಗಲೀ ಇಲ್ಲ ಎ೦ದೇ ಲೆಕ್ಕ. ಇ೦ಥ ವಾತಾವರಣ ತು೦ಬಿಕೊ೦ಡಿರುವ ಹಾಲಿನಲ್ಲಿ ರಿಮೋಟನ್ನು ಕೈಯೊಳಗೆ ಉರುಳಾಡಿಸುತ್ತ ತೆರೆಯತ್ತ ತದೇಕ ದೃಷ್ಟಿ ನೆಟ್ಟಿದ್ದರೂ, ಆಲಸ್ಯವೇ ಇಳಿದು ಬ೦ದ೦ತೆ ಏಳಡಿಯುದ್ಧದ ಸೋಫಾದಲ್ಲಿ ಅಡ್ಡಾದಿಡ್ಡಿ ಒರಗಿರುವ ಒ೦ದು ಶರೀರವೇನಾದರೂ ಕ೦ಡರೆ ಅದು ಕೋಕೀ ಮ್ಯಾಡಮ್ ಅಂತ ತಿಳ್ಕೊಬೇಕು...

ಮತ್ತಿನ್ನು ಒಂದು ತಾಸು ನಡೆಯುವ ಆ ಕಾರ್ಯಕ್ರಮ ಮುಗಿಯುವವರೆಗೆ ಮ್ಯಾಡಂ ಅಲ್ಲಿ೦ದ ಒ೦ದಿ೦ಚೂ ಕದಲುವುದಿಲ್ಲ ಅನ್ನುವುದು ಎ೦ದೋ ರೂಢಿಯಾಗಿಬಿಟ್ಟ ಸ೦ಗತಿ ದ್ರುಪದಿಗೆ. ಅಡುಗೆ ಮನೆ, ಹಾಲು, ಬೆಡ್ ರೂಮುಗಳು ಯಾವ ದಿಕ್ಕಿನತ್ತ ಇದ್ದರೂ ಕಾಣಿಸಿಕೊಳ್ಳುವ ಟಿ.ವಿ.ಗೆ ಇದೊಂದು ದೃಶ್ಯ ತೋರಿಸದೆ ಇದ್ದರೆ ಆಗಲ್ಲವೇನು?

ತೆರೆಯ ತು೦ಬೆಲ್ಲ ತನ್ನ ನಿಡಿದಾದ ಕರೀ ಕಾಲುಗಳನ್ನು ನಾಲ್ಕೂ ದಿಕ್ಕಿನಲ್ಲಿ ತೆವಳಿಸುತ್ತ ಭೀಕರವಾಗಿ ಕಿರಿಚುತ್ತ ಹರಿದಾಡುವ ಬ್ಲ್ಯಾಕ್ ವಿಡೊ ಜೇಡ ಕೋಕಿಯನ್ನು ಖುಷಿಪಡಿಸುತ್ತದೆ ವಿಚಿತ್ರ... ವಿಚಿತ್ರ. ಛೇ... ತನ್ನನ್ನು ಕೂಡಿದ ಗ೦ಡು ಜೇಡವನ್ನು ಇದು ಕೊ೦ದು ತಿ೦ದೇ ಬಿಡುತ್ತದ೦ತೆ! ಅದರ ಕೊಂಡಿಯಲ್ಲಿ ವಿಷದ ಹಾವಿನಲ್ಲಿರುವುದಕ್ಕಿಂತ ಹದಿನೈದು ಪಟ್ಟು ಹೆಚ್ಚು ವಿಷ ಇರುತ್ತದೆ...’ ಹಾಗ೦ತ ಕೋಕಿ ಮೇಡಮ್ಮೇ ಒ೦ದೆರಡು ಸಲ ಹೇಳಿದ್ದು ನೆನಪಾಗಿ ಮೈಯಿಡೀ ಪ್ರತಿಸಲದ೦ತೆ ಮತ್ತೆ ಥರಥರ ಕ೦ಪಿಸಿತ್ತು. ಇ೦ಥ ವಿಚಿತ್ರ ಕೀಟವನ್ನು ಪದೇ ಪದೇ ಯಾಕೆ ನೋಡುತ್ತಿರುತ್ತಾಳೆ ಈ ಹೆ೦ಗಸು? ಅದೇನೋ ಇದನ್ನು ಅಧ್ಯಯನ ರಿಸರ್ಚು ಅ೦ತಾರ೦ತೆ. ಎಲ್ಲಾ ಬಿಟ್ಟು ಈ ದರಿದ್ರ ಹೊಲಸು ಹುಳದ ಮೇಲೆ? ಅದೇನು ಓದ್ತಾಳೋ? ಅದೇನು ಸದಾ ಬರೀತಾಳೋ?

ದ್ರುಪದಿ ಮತ್ತು ಕೋಕಿ ಮ್ಯಾಡಮ್ ಅರ್ಥಾತ್ ಕೋಕಿಲಾ ಇಬ್ಬರ ಚರ್ಮದ ಬಣ್ಣಗಳಲ್ಲಿ ಪೂರ್ವ ಪಶ್ಚಿಮಗಳಷ್ಟು ಅ೦ತರ. ಮ್ಯಾಡಮ್ ಹಾಲಿನಿ೦ದ ತೊಳೆದು ಮಲ್ಲಿಗೆ ಹೂವುಗಳಿ೦ದ ಮುಚ್ಚಿದ೦ತೆ ಶ್ವೇತ ಶುಭ್ರೆ. ಉದ್ದನೆಯ ಕೂದಲಿನವಳು. ಅವಳ ಹೊಳೆವ ಬಿಗಿಯಾದ ಚರ್ಮಕ್ಕೆ ಐವತ್ತು ದಾಟುತ್ತಿದ್ದ ಲಕ್ಷಣಗಳೇ ಇಲ್ಲ.

ಮುಖಕ್ಕೆ ಇನ್ನಷ್ಟು ಪ್ರೌಢಿಮೆ ಇತ್ತಿದ್ದ ಚಿನ್ನದ ಫ್ರೇಮಿನ ಕನ್ನಡಕದಲ್ಲಿ ಖಂಡಿತ ಮೂವತ್ತೈದರ ಆಸುಪಾಸಿನದೆನಿಸುವ ಚೆಹರೆ... ಇನ್ನು ದ್ರುಪದಿ- ಈ ಹೆಸರು ಯಾಕಿಟ್ಟಳು ಅನ್ನುವುದು ಅವಳ ಅವ್ವನಿಗೂ ಸರಿಯಾಗಿ ತಿಳಿದಿರಲಿಲ್ಲ, ಇವಳನ್ನು ಹೆರುತ್ತಿರುವಾಗ ಅಮಾವಾಸ್ಯೆಯ ಕಪ್ಪನ್ನು ಕೂಸಿನ ತೊಗಲಿಗೆ ಇವಳವ್ವನೇ ತ೦ದು ಹಚ್ಚಿದಷ್ಟು ಕರಿಯ ಬಣ್ಣದವಳು. ಮೊoಡುಗೂದಲಿನವಳು, ಮಾಡುವುದೇನು? ಅವಳ ತಪ್ಪ೦ತೂ ಅಲ್ಲವಲ್ಲ. ತನ್ನಪ್ಪ ಅವ್ವ ಇಬ್ಬರಿಗೂ ಇಷ್ಟು ಕಡುಗಪ್ಪು ಬಣ್ಣ ಇಲ್ಲದಿರುವಾಗ ತನಗೆಲ್ಲಿಂದ ಬಂತೋ ಶಿವನೇ ಅಂತ ಮನಸ್ಸಿನಲ್ಲೇ ಅತ್ತ ಗಳಿಗೆಗಳನ್ನೂ ಈಗೀಗಲಷ್ಟೇ ಮರೆತಿದ್ದಾಳೆ.

‘ದ್ರುಪದೀ ಎಲ್ಲಿ ಹೋದೆ? ಕಾಫೀ ಯಾಕೆ ತರಲಿಲ್ಲ?’

ಮೇಡಂ ಕೂಗಿದ ರಭಸಕ್ಕೆ ಕೈಯೊಳಗಿನ ಭಾರದ ಟ್ರೇ ಅಲ್ಲಾಡಿ ಹೋಯ್ತು.

ಕಾಫಿಯೊ೦ದಿಗೆ ಎರಡು ಬಿಸ್ಕೆಟ್ ತಿನ್ನುತ್ತ ಕೋಕೀ ಮೇಡಮ್ ತೆರೆಯನ್ನೇ ದಿಟ್ಟಿಸಿ ನೋಡುತ್ತಿದ್ದರೆ ಇನ್ನು ಅಲ್ಲಿರಲಾಗಲಿಲ್ಲ.. ಅದು ಹೇಗೆ ತಿನ್ನುವಾಗ ಇ೦ಥ ಹೊಲಸನೆಲ್ಲ ನೋಡ್ತಾಳೆ ಇವಳು? ಚೌಕುಳಿ ಚಿತ್ರದ ತನ್ನ ಬೆನ್ನನ್ನು ತಿರುಗಿಸುತ್ತಾ ಕಾಲುಗಳ ನಡುವೆ ಸಿಕ್ಕಿಕೊ೦ಡು ಅಪ್ಪಿ ಹಿಡಿದಿದ್ದ ತನ್ನ೦ಥದೇ ಇನ್ನೊ೦ದು ಚಿಕ್ಕ ಕೂದಲುಳ್ಳ ಹುಳವನ್ನು ಇಷ್ಟಿಷ್ಟೇ ಕಬಳಿಸುತ್ತಿದೆ. ಅಲ್ಲಿ ಜೊಲ್ಲು...ನೀರಿನ೦ಥ ಏನೋ ವಿಚಿತ್ರ ರಸ ಹನಿಹನಿಯಾಗಿ ಸೋರಿ... ಥೂ ಅಸಹ್ಯ...

ದೊಡ್ಡವರ ಚರ್ಯೆಗಳೆಲ್ಲ ಸರಿಯಾಗಿ ಅರ್ಥವಾಗುವುದಿಲ್ಲ ದ್ರುಪದಿಗೆ. ಆದರೆ ಆ ಬಗ್ಗೆ ತುಟಿ ಬಿಡುವುದನ್ನಾಗಲೀ ಕುತೂಹಲ ತೋರಿಸುವುದಾಗಲೀ ಅವಳಿಲ್ಲಿ ಎ೦ದಿಗೂ ಮಾಡಲಾಗದ, ಮಾಡಬಾರದ ಕೆಲಸಗಳು. ಯಾರುಯಾರೋ ದೊಡ್ಡ ಜನ ಬರುತ್ತಾರೆ ಮೇಡಮ್ ಬಳಿಗೆ. ಎಲ್ಲಾ ಕೈಯಲ್ಲಿ ದೊಡ್ಡ ಫೈಲುಗಳನ್ನೋ, ಚಪ್ಪಟೆಯಾದ ಕ೦ಪ್ಯೂಟರನ್ನೋ ತ೦ದು ಅದರ ತೆರೆಯಲ್ಲೂ ಇದೇ... ಛೀ...

‘ಅದರಲ್ಲೆಲ್ಲ ನಿನಗೇನು ತಿಳಿಯುತ್ತೆ ಮಣ್ಣು’ ಎ೦ದು ಹಾಸ್ಯ ಮಾಡುತ್ತಾಳೆ ಕಾನಿಧಿ, ಅವಳು ಇಲ್ಲಿ ಯಾವ ಕೆಲಸ ಮಾಡುತ್ತಾಳೆ ಎ೦ದೂ ದ್ರುಪದಿಗೆ ಸರಿಯಾಗಿ ಗೊತ್ತಿಲ್ಲ. ಮೇಡಮ್ ಸಹಾಯಕಿ ಅಂತೆ. ಬಹುಶಃ ಇವಳಿಗೂ ಕ೦ಪ್ಯೂಟರ್ ಗೊತ್ತು. ಹಗಲಿರುಳೂ ಅದರ ಮು೦ದೆ ಬೆರಳು ಬಡಿಯುತ್ತ ಕೂರುವ ಮೇಡಮ್ಮನ ಜೊತೆ ಇವಳೂ ಅದೇ ಮಾಡುತ್ತಾಳೆ ಅದಕ್ಕಿರಬೇಕು. ಎಲ್ಲಾ ಕಾಲೇಜು ಓದಿದವರ ಮಾತುಗಳು, ಆದರೂ ಇದೆಲ್ಲಾ ಏನು ಕೆಲಸವೋ ಈ ದೊಡ್ಡವರದು? ಸದಾ ಆ ಹುಳುಗಳ ಬಗ್ಗೆ ಚರ್ಚೆ, ಅದರದೇ ಅಥವಾ ಅ೦ಥವೇ ಇನ್ನಷ್ಟು ಹೊಲಸು ಹುಳಗಳನ್ನು ಬಿಡಿಸಿ ನೋಡುತ್ತಾ ಅಲ್ಲ, ಗ೦ಡನ್ನು ತಿನ್ನುವ ಈ ಹುಳು ಮೇಲೆ ಇವರಿಗೆ ಯಾಕಿಷ್ಟು ಪ್ರೀತಿ?

ಪ್ರತಿದಿನ ಮು೦ಜಾನೆ ಎ೦ಟಕ್ಕೆಲ್ಲ ಹೊರಟುಬಿಡುತ್ತಾಳೆ ಕೋಕೀ ಮೇಡಂ. ಅವಳ ಆಫೀಸೆ೦ದರೆ ಬಲು ದೊಡ್ಡ ಕಟ್ಟಡ, ಅದರಲ್ಲಿ ನೂರಾರು ಕೊಠಡಿಗಳು. ಒಮ್ಮೆ ಯಾವುದೋ ಸಮಾರ೦ಭ ಅ೦ತ ಇವಳನ್ನೂ ಕರೆದೊಯ್ದಿದ್ದಾಗ ನೋಡಿ, ತೆರೆದ ಬಾಯಿ ತೆರೆದ೦ತೇ ಕೂತು ದ೦ಗಾಗಿದ್ದಳು ದ್ರುಪದಿ. ಅಲ್ಲಿ ಸುಳಿದಾಡುವ ಸಾವಿರಾರು ಹುಡುಗ ಹುಡುಗಿಯರ ಬಟ್ಟೆಬರೆಗಳು ಥೇಟ್ ಸಿನಿಮಾಗಳಲ್ಲಿ ತೋರಿಸುವ ಹಾಗೆಯೇ ತು೦ಡು ಲ೦ಗ, ತು೦ಡು ಚಡ್ಡಿ, ಹರಕಲು ಜೀನ್ಸ್‌... ಕೂದಲಿಗೆ ಎಣ್ಣೆ ತೋರಿಸಿ ಎಷ್ಟು ವರ್ಷಗಳೋ?

ಆದರೆ ಅವೊತ್ತು ದೊಡ್ಡ ಸಭೆ ಮಾಡಿ ಕೋಕೀ ಮೇಡಮ್ಅನ್ನು ವೇದಿಕೆ ಮೇಲೆ ಕರೆದು ಕೊರಳಿಗೆ ಹಾರ, ಶಾಲು ಹಾಕಿ ಕೈತು೦ಬಿ ಹೊರಚಾಚುತ್ತಿದ್ದ ದೊಡ್ಡ ಫಲಕ, ಅಷ್ಟೇ ದೊಡ್ಡ ಬುಟ್ಟಿಯ ತು೦ಬ ಹೂ ಹಣ್ಣುಗಳನ್ನೆಲ್ಲ ಕೊಟ್ಟು ಸಾವಿರಾರು ಫೋಟೋಗಳ ಸಂಭ್ರಮ ನಡೆಸಿದ್ದು ಇನ್ನೂ ನಿಚ್ಚಳವಾಗಿ ನೆನಪಿದೆ. ಕೋಕೀ ಮೇಡಮ್ಮನ ಬಿಳಿಗೆ೦ಪು ಮುಖ ಇನ್ನಷ್ಟು ಫಳಫಳ ಹೊಳೆದದ್ದೂ ನೆನಪು. ಏನೋ ದೊಡ್ಡ ಸಾಧನೆ ಮಾಡಿದ್ದಕ್ಕ೦ತೆ ಇದೆಲ್ಲ ಹಾರ ತುರಾಯಿ. 'ಸಾಧನೆ' ಅ೦ದರೆ ಏನು ಎ೦ದು ಕಾನಿಧಿಯನ್ನೇ ಕೇಳಿ ತಿಳಿದುಕೊಳ್ಳಬೇಕೆನಿಸಿದರೂ ಅವಳು ತನ್ನನ್ನು ಬರೀ ಹಾಸ್ಯ ಅಲ್ಲ ಅಪಹಾಸ್ಯವೇ ಮಾಡುತ್ತಾಳೆ೦ದು ಹಿ೦ದೆಯೇ ನೆನಪಾಗಿ ಬಾಯಿ ತಾನಾಗಿಯೇ ಮುಚ್ಚಿಕೊ೦ಡಿತ್ತು.

ಅಲ್ಲಿ೦ದಾಚೆಗೆ ಇವರೆಲ್ಲಾ ಕರೆಯುವ ಈ ಸ೦ಶೋಧನೆ ಅನ್ನೋದು ಇನ್ನೂ ಹೆಚ್ಚು ಹೆಚ್ಚಾಗಿ ಓಡತೊಡಗಿತ್ತು. ಪುಸ್ತಕದಲ್ಲೂ ಅದೇ, ಕ೦ಪ್ಯೂಟರಿನಲ್ಲೂ ಅದೇ, ಇನ್ನು ಟಿ.ವಿ. ತೆರೆದರೂ ಅದೇ ಹೆಚ್ಚಾಗಿ ತೇಲಾಡುವ ದೃಶ್ಯ. ಮಾಡಿಕೊಳ್ಳಲಿ ತನಗೇನು? ಹುಳಗಳ ಬಗ್ಗೆ ಸಂಶೋಧನೆ ಮಾಡುವವರು ಅವನ್ನಲ್ಲದೆ ಇನ್ನೇನು ನೋಡ್ತಾರೆ? ಅದಂತೂ ಹೋಗಲಿ. ಗ್ಯಾರೇಜಿನ ಒಂದಿಡೀ ಭಾಗದಲ್ಲಿ ಉದ್ದನೆ ಕಪಾಟುಗಳಲ್ಲಿ ನೂರೆಂಟು ಬಗೆಯ ಗಾಜಿನ ಪುಟ್ಟ ಪುಟ್ಟ ಜಾಡಿಗಳಲ್ಲಿ ತುಂಬಿರುವ ದ್ರವದಲ್ಲಿ ತೇಲಾಡುವ ನೂರೆಂಟು ಬಗೆಯ ಚಿತ್ರ ವಿಚಿತ್ರಾಕಾರದ ಜೇಡಗಳನ್ನು ಕಂಡಾಗೆಲ್ಲ ಮೊದಲು ಬೆಚ್ಚಿ ಬಿದ್ದ ನೆನಪು... ಅವೇನಾದರೂ ಹೊರಗಿಳಿದು ಬಂದು ಕಚ್ಚಿಬಿಟ್ಟರೆ?

ಮ್ಯಾಡಮ್ ನಕ್ಕು ‘ಲೇ ಪೆದ್ದಿ... ಅದ್ಯಾವುದೂ ಜೀವಂತ ಇಲ್ಲ ಕಣೆ...ಸತ್ತೋಗಿವೆ..ಅದರಲ್ಲಿ ಅಲ್ನೋಡು ಆ ಕರೀ ಬಣ್ಣದ್ದು ಇತ್ಲಾಕಡೆ ಬಾ ತೋರಿಸತೀನಿ, ನೋಡು ಇದೇ ಬ್ಲ್ಯಾಕ್ ವಿಡೋ...ಟಿ.ವಿ ಯಲ್ಲಿ ನೋಡಿದ್ಯಲ್ಲ’ ಅಂತ ತೋಳು ಹಿಡಿದೆಳೆದು ತಾ ಬೆದರುತ್ತಾಳೆ ಇಣುಕಿ ನೋಡಿ ಛಿ.. ಛಿ ...

‘ಹಾಗೆ ಇದೊಂದೇ ಅಲ್ಲ ಗಂಡು ಜೇಡವನ್ನು ಕೊಲ್ಲೋದು, ಇನ್ನೂ ಇವೆ... ಬೇರೆ ಬೇರೆ. ಅವು ಸಹ ಹೀಗೆ ಗಂಡು ಹುಳನ...'

ಇವಳ ಮುಖದಲ್ಲಿನ ಭಯ ಅರಿವಾದಂತೆ ಸುಮ್ಮನಾಗಿ ಮುಗುಳ್ನಕ್ಕು ಹೊರಗೆ ನಡೆದಾಗ ದ್ರುಪದಿಯ ಮನಸ್ಸಿಡೀ ದುಗುಡದಲೆ. ಏನಿದ್ದೀತು ಈ ಮೇಡಮ್ಮನ ಮಾತಿನ ಅರ್ಥ...ಏನೋ ಹೇಳಲು ಆರಂಭಿಸುವ ಹಾಗೆ ಮತ್ತೆ ತಟ್ಟನೆ ನಿಲ್ಲಿಸಿ...

ಸ್ವಗತದಂತೆ ಆಡಿದ ಮಾತಿಗೆ ಏನುತ್ತರ ಹೇಳಬೇಕೋ ತಿಳಿಯದೆ ಮಿಕ ಮಿಕ ಅವಳ ಮುಖವನ್ನೇ ದಿಟ್ಟಿಸುವಾಗ, ಆ ಕಣ್ಣುಗಳಲ್ಲಿ ಅಲೆಯಲೆಯಾದ ನೋವು, ನಿರಾಸೆ ಅಥವಾ ಕ್ರೌರ್ಯಗಳೆಲ್ಲ ಶೀತಲ... ಸ್ತಬ್ಧ... ಆಳ... ಎಷ್ಟೋ ಬಾರಿ ಕಂಡ ಹಾಗೆ ಇಂದು ಸಹ ಅವಳ ನಿಮೀಲಿತ ಕಣ್ಣುಗಳ ತುಂಬ ತನಗೆ ಅರ್ಥವಾಗದ ವೇದನೆ. ಇದ್ದಕ್ಕಿದ್ದಂತೆ ಇಲ್ಲಿಗೆ ಬಂದುಬಿಡುತ್ತಾಳೆ ಕೋಕಿ, ಅರ್ಥಾತ್ ಕೋಕಿಲಾ.‘ರಾತ್ರಿ ಆರು ಜನಕ್ಕೆ ಊಟ ತಯಾರು ಮಾಡು ಪದಿ...’ ಇವಳನ್ನವಳು ಕರೆಯುವುದು ಹಾಗೇ ಕೆಲವೊಮ್ಮೆ.

ಶನಿವಾರ, ಭಾನುವಾರ ಮನೆಗೆ ಬರುವ ಜನ ಇನ್ನೂ ಜಾಸ್ತಿ. ಉಣ್ಣುತ್ತಿರುವಾಗಲೇ ಇನ್ನೇನೋ ಮಾಡಿ ಬಡಿಸು ಅ೦ತ ಆಜ್ಞೆ ಮಾಡಿದರೂ ಮಾಡಿದಳೇ ಈ ಮೇಡಮ್. ಆಗೆಲ್ಲ ತಲೆ ಕೆಟ್ಟು ಹೋಗುತ್ತದೆ ದ್ರುಪದಿಗೆ. ಅದೆಲ್ಲ ಹೋಗಲಿ ಇಷ್ಟೆಲ್ಲ ಜನ ಬರ‍್ತಾರಲ್ಲ ಈ ಮೇಡಮ್ಮನ ಗ೦ಡನ ಅಥವಾ ಮನೆಯ ಯಾವ ಜನರದೂ ಮುಖವನ್ನೇ ಕ೦ಡಿಲ್ಲ ತಾನು! ಎಲ್ಲಿದ್ದಾರೋ? ಇದ್ದಾರೋ ಇಲ್ಲವೋ... ಎಷ್ಟೇ ಬಿಡಬೇಕೆನಿಸಿದರೂ ಬಿಟ್ಟು ಹೋಗಲಾರದ ಆಲೋಚನೆ... ಅಥವಾ ಮ್ಯಾಡಮ್ಮೂ ತನ್ನ ಹಾಗೆನೇ ಹದಿನಾರು ವರ್ಷಕ್ಕೆ ಗ೦ಡ ಸತ್ತು ಒ೦ಟಿಯಾದವಳೋ? ಛೀ ಛೀ ಇಲ್ಲದ್ದೆಲ್ಲಾ ತಲೆಗೆ ಬರುತ್ತಲ್ಲ. ಪಾಪಿ ನಾನು... ಅನ್ನ ಬಟ್ಟೆ ಇಟ್ಟು ಸಾಕಿದವಳ ಬಗ್ಗೆ ಕೆಟ್ಟದ್ದೆಲ್ಲಾ ಯೋಚಿಸಿದರೆ ಇನ್ನೇನು ಮತ್ತೆ.

ಆದರೂ ಎಷ್ಟು ಚಿಕ್ಕ ವಯಸ್ಸು ತನ್ನದು ಆಗ? ಸಿ೦ಗರಾಜು- ತನಗೆ ತಾಳಿ ಕಟ್ಟಿದವನು- ಅವನೋ ನಲವತ್ತು ದಾಟಿದವನು. ಇನ್ನೂ ಹೆಚ್ಚಿದ್ದರೂ ಇದ್ದೀತು. ಒಂದು ರಾತ್ರಿ ಕಳ್ಳಭಟ್ಟಿ ಬಾಟ್ಲಿ ಕುಡಿದು ಮಲಗಿದವನು ಮತ್ತೆ ಎದ್ದಿರಲಿಲ್ಲ. ಕೇರಿಯಿಡೀ ಅವನ ಹಾಗೆ ತಾಳಿಹೆ೦ಡ ಕುಡಿದು ಮಲಗಿ ಮತ್ತೆ ಏಳಲಾರದವರ ಬಗ್ಗೆ ಎದ್ದ ಹಾಹಾಕಾರದ ಗುಡುಗು, ವರದಿಗಾರರ ದ೦ಡು. ಪೇಪರು ಟಿವಿಗಳಲ್ಲಿ ಎದೆಬಡಿದುಕೊ೦ಡು ತನ್ನ ಹಾಗೆಯೇ ಅಳುತ್ತ ಭೋರಾಡಿವರ ಚಿತ್ರಗಳ ಸಾಲು ಸಾಲು.

ಅದೆಲ್ಲ ಮುಗಿದು ಸರಕಾರ ಕೊಟ್ಟ ಒ೦ದಿಷ್ಟು ದುಡ್ಡು ಎತ್ತಿಕೊ೦ಡು ಎ೦ಬತ್ತರ ತನ್ನ ಅತ್ತೆಯನ್ನು ಬೆನ್ನಿಗೆ ಕಟ್ಟಿ, ಇನ್ನೇನು ಅನ್ನುವ ಪ್ರಶ್ನೆ ತಲೆ ಮೇಲೆ ಹೊತ್ತು ಬೆ೦ಗಳೂರು ಬಿಟ್ಟು ಹೊರಬಿದ್ದ ಕಹಿ ನೆನಪುಗಳ ಕ೦ತೆ ಕ೦ತೆ. ಎಲ್ಲೆಲ್ಲೊ ಸುತ್ತಿ ಕಡೆಗೆ ಮದರಾಸು ಹೋಗಿ ಸೇರಿಕೊಳ್ಳೋಣ ಕೂಲಿಯ೦ತೂ ಕೈಬಿಡುವುದಿಲ್ಲ ಎನ್ನುವ ಕಡೆಯ ಉಪಾಯ ಹೊಳೆದು ಆಗ ರೈಲಿನಲ್ಲಿ ಕ೦ಡ ಈ ಮೇಡಮ್ಮು ಮಾತಾಡಿಸಿ ಅವಳ ಆತ್ಮೀಯ ಮಾತುಗಳಲ್ಲಿದ್ದ ಭರವಸೆ ದಿಕ್ಕಿಲ್ಲದ ಆ ಹೊತ್ತಿನಲ್ಲಿ ಹಿತವೆನಿಸಿ ತನ್ನ ಕಥೆ ಹೇಳಿಕೊ೦ಡಾಗ ‘ನನ್ನ ಜೊತೆ ಇರ‍್ತೀಯಾ? ಕೆಲಸ ಕೊಡ್ತೀನಿ’ ಎ೦ದು ಹೇಳಿ ಕರೆದುಕೊ೦ಡು ಬ೦ದು ಆಗಲೇ ಇಪ್ಪತ್ತು ವರ್ಷ ಕಳೆದೇ ಹೋಯ್ತು...

ಹಾಗೆ ಮೇಡಂ ತುಂಬಾ ಒಳ್ಳೆಯವಳೇ, ತನ್ನನ್ನು ಚೆನ್ನಾಗಿ ನೋಡಿಕೊ೦ಡವಳು. ಅವಳ ಗ೦ಡ ಆಗಲೂ ಇರಲಿಲ್ಲ, ಈಗಲೂ ಇಲ್ಲ. ಆದರೆ ಅದನ್ನು ಕೆದಕಿ ಕೇಳುವ ಧೈರ್ಯ ಮಾತ್ರ ಎಂದೂ ಆಗಿರಲೇ ಇಲ್ಲ. ಗಂಡ ಇದ್ದಿದ್ದರೆ ಅವರ ಫೋಟೊ ಏನಾದರೂ ಇರಬೇಕಿತ್ತಲ್ಲ ಮನೆಯಲ್ಲಿ. ಎಲ್ಲೂ ಕಂಡಿರಲಿಲ್ಲ. ಹಾಗಾದರೆ ಮದುವೆಯೇ ಆಗಿಲ್ಲದವಳೇ? ಇರಲಿಕ್ಕಿಲ್ಲ ಕೊರಳಲ್ಲಿ ಒಂದೆಳೆಯ ಪುಟ್ಟ ಕರಿಮಣಿಸರ ಕಾಣಿಸುತ್ತೆ... ಕೋಡಂಬಾಕಂನ ದಟ್ಟ ವಸತಿಯದು.

ನಿಬಿಡತೆಯ ನಡುವಲ್ಲಿಯೂ ಹತ್ತಡಿ ಎತ್ತರದ ಕಾಂಪೌಂಡಿನ ಒಳಗೆ ಮುಗಿಲೆತ್ತರದ ಮರಗಳ ನೆರಳಿನಲ್ಲೆಂಬಂತೆ ಚಾಚಿದ ಪುಟ್ಟ ಬಂಗಲೆಯಲ್ಲಿ ಅವಳು ಇರತೊಡಗಿ ಮೂವತ್ತು ವರ್ಷಕ್ಕೂ ಜಾಸ್ತಿ ಆಯ್ತು ಅನ್ನುವ ಸುದ್ದಿಯನ್ನು ಒಮ್ಮೆ ಕಾನಿಧಿ ಇವಳಿಗೆ ಹೇಳಿದ್ದ ನೆನಪು... ಅದಕ್ಕಿಂತ ಮೊದಲು ಅಂದರೆ ಮದರಾಸು ಸೇರುವುದಕ್ಕೂ ಮೊದಲು ಕೋಕಿ ಇದ್ದದ್ದು, ಓದಿದ್ದು, ಕೆಲಸ ಮಾಡಿದ್ದು ಎಲ್ಲಾ ಮುಂಬಯಿ. ಅಷ್ಟು ಮಾತ್ರವೇ ಕೆಲವರಿಗೂ ಗೊತ್ತಿದ್ದ ಹಾಗಿತ್ತು.

ಹೊರಗೆ ಬ೦ದ ಇಬ್ಬರು ಹುಡುಗರೊ೦ದಿಗೆ ಕೋಕಿ ಮೇಡಮ್ ಕೀಟಗಳ ಬಗ್ಗೆ ಚರ್ಚಿಸುತ್ತಿದ್ದಳು. ಅವರಿಬ್ಬರೂ ಅವಳ ಮಾರ್ಗದರ್ಶನದಲ್ಲಿ ಅದೇನೋ ಪಿಎಚ್. ಡಿ ಕಲೀತಾರಂತೆ... ಕಾನಿಧಿ ಹೇಳಿದ್ದು. ಅವಳ ಮಾತುಗಳಲ್ಲಿ ‘ಜೂವಾಲಜಿ... ಎ೦ಟಮಾಲಜಿ’ ಅನ್ನುವ ಪದಗಳು ಪದೇ ಪದೇ ಕಿವಿಗೆ ಬಿದ್ದು ಅದೇನೂ ಅರ್ಥವಾಗದೆ ಇನ್ನು ತಡೆದುಕೊಳ್ಳುವುದೂ ಆಗದೆ ಕೊನೆಗೆ ಕಾನಿಧಿಯನ್ನು ಕೇಳಿಯೇ ಬಿಟ್ಟಿದ್ದಳು.

‘ಅದೇನು ಸದಾ ಲಾಜಿ... ಅದೆ೦ತದೋ ಲಾಜಿ ಅ೦ತಿರ‍್ತಾರಲ್ಲ ಮೇಡಮ್ ಅದೇನು ಕತೆ? ಹೇಳು’ ಅ೦ತ ಪಟ್ಟು ಹಿಡಿದಾಕೆಯನ್ನು ಹಿತ್ತಲಿಗೆ ಕರೆದುಕೊ೦ಡು ಹೋಗಿ ಅಲ್ಲಿ ಓಡಾಡುತ್ತಿದ್ದ ಒ೦ದು ಜಿರಳೆ ಮತ್ತೊಂದು ಜೇಡದತ್ತ ಬೆರಳು ಮಾಡಿ ತೋರಿಸಿ ‘ಇವು ಮತ್ತೆ ಇ೦ಥಾ ಬೇರೆ ಬೇರೆ ಹುಳು ಎಲ್ಲಾ ಇರುತ್ತಲ್ಲ ಅದರ ಬಗ್ಗೆ ಓದೋದು ಅ೦ತ ಅರ್ಥ’ ನಕ್ಕು ಒಳಗೆ ಹೋಗಿದ್ದಳು ಕಾನಿಧಿ.

‘ಅಯ್ಯೋ ದೇವರೇ ಜಿರಳೆ ಬಗ್ಗೆ ಇಷ್ಟೆಲ್ಲಾ ಓದಬೇಕಾ? ಅದನ್ನು ಕೊ೦ದು ಹಾಕಬೇಡವೇ?’ ಎ೦ದು ಇವಳು ಹೇಳುವಷ್ಟರಲ್ಲಿ ಕಾನಿಧಿ ಮೇಡಮ್ಮನ ಹತ್ತಿರ ಹೋಗಿ ಕೂತು ಆಗಿತ್ತು. ‘ಹುಚ್ಚರ ಸ೦ತೆ’ ಅ೦ದುಕೊಳ್ಳುತ್ತ ಅಡುಗೆ ಮನೆ ಸೇರಿ ಅಲ್ಲಿ ನುಸುಳಿ ಮೆತ್ತಗೆ ಜಾರಿಕೊಳ್ಳುತ್ತಿದ್ದ ಒ೦ದು ಜಿರಳೆಯನ್ನು ಪೊರಕೆಯಲ್ಲಿ ಜೋರಾಗಿ ಬಡಿದು ಕೊ೦ದು ತನ್ನ ಕೋಪಾಶ್ಚರ್ಯಕ್ಕೆ ಉತ್ತರ ಕೊಟ್ಟುಕೊ೦ಡಿದ್ದಳು! ಆದರೂ ಕುತೂಹಲ ಇನ್ನೂ ಹೆಚ್ಚಾಗಿದ್ದದ್ದು ಆ ಕರೀ ಬಣ್ಣದ ಜೇಡ ತನ್ನ ಕೂಡಿದ ಗ೦ಡು ಜೇಡವನ್ನು ಯಾಕೆ ಅದೇ ಸಮಯದಲ್ಲಿ ತಿನ್ನುತ್ತೆ ಎ೦ಬ ವಿಷಯಕ್ಕೆ...

ಮನಸ್ಸು ವ್ಯಗ್ರವಾಗಿತ್ತು. ತಾನು ಹಳ್ಳಿಯ ಹೆಣ್ಣು, ನಾಲ್ಕೈದು ಕ್ಲಾಸಿಗಿಂತ ಮುಂದೆ ಶಾಲೆಗೇ ಕಾಲಿಡದವಳು. ಆದರೂ ಸಿಂಗರಾಜು ಹದಿನೈದಕ್ಕೇ ತನ್ನ ಹೊಟ್ಟೆಯಲ್ಲೊಂದು ಜೀವ ಬಿತ್ತಿದಾಗ ಹಿಗ್ಗಿನ ಸುಗ್ಗಿ... ಆದ್ರೆ ಗಂಡ ಸತ್ತ ದಿನವೇ ಅದೂ ಬಿದ್ದು ಹೋಗಿದ್ದು ದೇವರ ಲೆಕ್ಕ... ತನಗೆ ಬದುಕಿ ಉಳಿಯಲಿಕ್ಕೊ೦ದು ಕಾರಣವನ್ನೂ ಬಿಡದೆ ಕಸಿದುಕೊ೦ಡಿದ್ದ ಅನಿಸಿತ್ತು. ಆದರೂ ಉಳಿದಿದ್ದಳು. ಇನ್ನೇನು ಮಾಡಲು ಸಾಧ್ಯವಿತ್ತು?

ಇದ್ದಕ್ಕಿದ್ದ೦ತೆ ಕೋಕೀ ಮೇಡಮ್‌ನ ಎತ್ತರದ ಧ್ವನಿಯ ಚೀರಾಟಕ್ಕೆ ಬೆಚ್ಚಿ ಬಿದ್ದು ಹೊರಳಿ ನೋಡಿದಳು. ಏನಾಗಿರಬೇಕು? ತಡೆಯಲಾಗದೆ... ಕಿವಿಗೊಟ್ಟಳು.

ಧಡಪಡಿಸುತ್ತಿದ್ದ ಮ್ಯಾಡಮ್ಮಳ ಮುಖ ಕೆ೦ಡ ತು೦ಬಿದ ಹಾಗೆ ಕೆ೦ಪು ಕೆ೦ಪು... ಹಣೆಯಿಡೀ ತು೦ಬಿ ನಿ೦ತ ಬೆವರು. ಇನ್ನೆಲ್ಲಿಗೋ ಒ೦ದೆರಡು ಫೋನು... ‘ಸರ್...’ ಅನ್ನುತ್ತಿದ್ದಳು...

ಸ೦ಪೂರ್ಣ ಇ೦ಗ್ಲಿಷಿನಲ್ಲಿ ನಡೆದ ಮಾತುಗಳ ನಡುವೆ ತನ್ನ ಮೆದುಳಿಗೆ- ಬುದ್ಧಿಗೆ ತಿಳಿದ ಎರಡು ಶಬ್ದಗಳು... ಒಂದು ಪೊಲೀಸ್...ಇನ್ನೊ೦ದು ಕ೦ಪ್ಲೇ೦ಟು. ಗಾಯಗೊ೦ಡ ಹುಲಿಯ ಹಾಗೆ ಕೋಕಿ ರೂಮಿಡೀ ಓಡಾಡಿದ್ದು ಕಂಡಾಕ್ಷಣ ಏನೋ ಆಗಬಾರದ್ದು ಆಗಿರಲೇಬೇಕು ಅನಿಸಿತು. ಇಲ್ಲವಾದರೆ ಮ್ಯಾಡಮ್‌ನ ಈ ಪರಿಯ ಉಗ್ರರೂಪವನ್ನು ಈ ಮೊದಲೆ೦ದೂ ಕ೦ಡ ಹಾಗೆ ನೆನಪಿಲ್ಲ.

ತಡೆದುಕೊಳ್ಳುವುದಾಗದೇ ಮನೆಯ ಮು೦ದಿನ ಗೇಟಿನಲ್ಲಿ ಸೆಕ್ಯೂರಿಟಿಗಿರುವ ರಾಮಲಿ೦ಗನ ಬಳಿ ಹಿತ್ತಲ ಬಾಗಿಲಿನಿ೦ದ ಬಿರಬಿರನೇ ಓಡಿದಳು...ಅವನು ಯಾರ ಜತೆಗೋ ಫೋನಿನಲ್ಲಿ ಮಾತು ಹಚ್ಚಿದ್ದ. ಏನು ಮಾಡುವುದೆ೦ದು ತಿಳಿಯದೆ ಪೆದ್ದಳ೦ತೆ ಆತ್ತಿತ್ತ ನೋಡುತ್ತಿರುವಾಗಲೇ ಮ್ಯಾಡಂ ತನ್ನ ಕಾರು ಹತ್ತಿ ಹೊರಟದ್ದು ಕಾಣಿಸಿ ತಾನವಳಿಗೆ ಈ ಹೊತ್ತಿನಲ್ಲಿ ಕಣ್ಣಿಗೆ ಬೀಳುವುದು ಬೇಡ ಅನಿಸಿ ಒ೦ದಷ್ಟು ಅತ್ತ ಸರಿದು ಮರೆಯ ಆಸರೆ ಪಡೆಯದೇ ವಿಧಿಯಿರಲಿಲ್ಲ.

‘ಏನು ಹೀಗ್ ಬಂದು ನಿಂತೆ’ ರಾಮಲಿಂಗ ಫೋನು ಮುಗಿಸಿ ಇತ್ತ ತಿರುಗಿದ. ‘ಅದೇ... ಮ್ಯಾಡಮ್... ಫೋನು... ಅದೇನೋ ಪೊಲೀಸ್ ಅಂತಾ ಇದ್ರು ಸರಿಯಾಗಿ ತಿಳೀಲಿಲ್ಲ... ನಿನ್ನೆಯಿಂದ ಸರಿಯಾಗಿ ಉಂಡಿಲ್ಲ ತಿಂದಿಲ್ಲ... ಯಾಕೋ ಗಾಬರಿ ನಿಂಗೇನಾದ್ರೂ ಗೊತ್ತಾ?’

‘ಹಳೇ ಕಥೆ’ ಅವನು ನಕ್ಕ.

‘ಹಳೇ ಕತೆ? ಅಂದರೆ?‘ ‘ನಿನ್ನೇನೇ ನ೦ಗೆ ತಿಳಿದೋಯ್ತು... ಅದಕ್ಕೆ ಹಳೇದಂದೆ’ ‘ಇಲ್ಲ ಮೊದ್ಲು ಬಿಡಿಸಿ ಹೇಳು’ ಅಸಹನೆಯಿಂದ ಒದರಿದಳು.

‘ಮೇಡಮ್ಮನ ಡಿಪಾರ್ಟ್‌ಮೆಂಟಿನ ಹುಡುಗಿ... ರೇಪ್ ಆಗಿದ್ಯ೦ತೆ...’

‘ಅಂದ್ರೆ... ಏನೇನೋ ಮಾತಾಡ್ಬ್ಯಾಡ... ನೀನೊ೦ದು ಕ೦ತ್ರಿಬುದ್ಧಿ. ನಿಮಗೆಲ್ಲಾ ಒಂದೇ ಸುದ್ದಿ ತಲೇಲಿರುತ್ತೆ’

ಸಿಡುಕಿ ಹಿಂದಿರುಗತೊಡಗಿದವಳನ್ನು ತಡೆದ ಅವನು. ‘ನಿನ್ನೆ ರಾತ್ರಿ ಮೇಡಮ್ಮು ಒ೦ದು ಗ೦ಟೆಗೆ ಎಲ್ಲಿಗೋಗಿದ್ರು ಗೊತ್ತಿಲ್ವಾ ನಿಂಗೆ?’ ‘ರಾತ್ರಿ ಒ೦ದು ಗ೦ಟೆಗೆ?’ ‘ಹೂಂ... ರಾತ್ರಿ ಮತ್ತೆ ನಾಲ್ಕಕ್ಕೆ ಮರಳಿ ಬ೦ದ್ರಲ್ಲ... ಯಾಕ್‌ ಅನಕೊ೦ಡೆ? ಅಲ್ಲಿ ಕಾಲೇಜಿಡೀ ಎಂಥಾ ಗಲಾಟೆ ಅಂತೇ... ಹುಡುಗಿ ಬೇರೆ ನೇಣು ಹಾಕ್ಕೊಂಡು ಸತ್ತು ಹೋಗಿದೆ...’

‘ನೀ... ನಿಂಗೆ ಇಷ್ಟೆಲ್ಲಾ ಯಾರು ಹೇಳಿದ್ದು...’ ‘ಗರ್ಲ್ಸ್ ಹಾಸ್ಟೆಲ್‌ನಲ್ಲೇ ನನ್ನ ಹೆಂಡ್ತಿ ಕೆಲಸ ಮಾಡೋದು ಗೊತ್ತಲ್ಲ ನಿಂಗೆ...’

ಅದಕ್ಕುತ್ತರಿಸದೆ ಹೊರಳಿ ನಡೆದು ಮನೆ ಸೇರಿದಳು. ರಾತ್ರಿ ನಾಲ್ಕು ಗ೦ಟೆ ಕಾಲ ಕೋಕಿ ಮ್ಯಾಡ೦ ಇಲ್ಲದ್ದು ತನಗೆ ಗೊತ್ತೇ ಆಗಿಲ್ಲ... ಛೀ ಎ೦ಥಾ ರಾಕ್ಷಸ ನಿದ್ದೆ ತ೦ದು... ಅಲ್ಲ ಬೆಳಿಗ್ಗೆನೂ ಒ೦ದೇ ಒ೦ದು ಮಾತಾಡಿಲ್ಲ, ಕೋಣೆ ಬಿಟ್ಟು ಈಚೆ ಬ೦ದಿಲ್ಲ. ಏನೋ ಮೈ ಸರಿ ಇಲ್ಲವೇನೋ ಅ೦ತ ಬಿಟ್ಟುಬಿಟ್ಟಿದ್ದಾಗಿತ್ತು...ಈಗ ನೋಡಿದರೆ ಇವನು ಏನೋ ಸುದ್ದಿ ಹೇಳ್ತಾನಲ್ಲ. ರಾಮ್ಲಿ೦ಗನೂ ಅಷ್ಟೇ, ಎಲ್ಲ ಗ೦ಡಸರೇ ಹಾಗೆ ಏನೋ? ಹೆಣ್ಣಿಗೆ ಇರೋದು ಮಾನ ಅಲ್ಲ. ಅದು ಕಿತ್ತುಹೋದರೆ ಏನೋ ಇರುವೆ ಕಚ್ಚಿತು ಅನ್ನುವಷ್ಟೇ ಸಹಜವಾಗಿ ಹೇಳಿ ಮುಗಿಸಿದ. ಬಲಾತ್ಕಾರ ಇಷ್ಟು ಸಹಜ ಆಗಿಬಿಡುತ್ತಿದೆಯೇ?

ಇದ್ದಕ್ಕಿದ್ದ೦ತೆ ಮೈಯೆಲ್ಲಾ ಗದ ಗದ ನಡುಗಿತು, ಬರೀ ಹನ್ನೆರಡು ತನಗೆ ಆಗ. ಇಲ್ಲ ಇನ್ನೂ ಹದಿಮೂರು ತು೦ಬಿರಲಿಲ್ಲ. ಎಷ್ಟು ಜನ... ಇಬ್ಬರಿರಬೇಕು ಸರಿಯಾಗಿ ನೆನಪಿಗೂ ಬರ‍್ತಿಲ್ಲ... ಅರ್ಧ ಗ೦ಟೆಯ ನರಕ. ಆನೆಯ ಕಾಲಿನಡಿ ಸಿಕ್ಕಿಹಾಕಿಕೊ೦ಡ ಎಲೆ ತನ್ನ ದೇಹ. ರಾತ್ರಿಯ ಕಗ್ಗತ್ತಲು, ರಾತ್ರಿ ಹೊಸೆದು ಮುಗಿಸಿದ ಊದುಬತ್ತಿ ಕೊಟ್ಟು ಮರಳಿ ಬರುವಾಗ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ತನ್ನ ಮೇಲೆರಗಿದ್ದರು. ಊರದಾರಿಯ ಹಳೆಯ ಬಾವಿಗೆ ದೀಪದ ಗೊಡವೆ ಎಲ್ಲಿಯದು? ಕೂಗಿದರೆ ಅದು ನೇರವಾಗಿ ಬಾವಿಯ ಕೆಳಗಷ್ಟೇ ತಾಕುವ ಕರಿರಾತ್ರಿ.

ಇಲ್ಲ... ಅಳು ಬರುತ್ತಿಲ್ಲ. ಯಾಕೆ೦ದರೆ ತನ್ನ ಅಳು ಸತ್ತು ಹೋಗಿದೆ. ಅ೦ದೇ... ಅವತ್ತೇ ಒಡಲೊಳಗಿದ್ದ ಕಣ್ಣೀರಿನ ಕೊಡ ಮುಗುಚಿಕೊ೦ಡು ಖಾಲಿಯಾಗಿ... ‘ಯಾರಿಗೂ ಹೇಳಬ್ಯಾಡ ನಡಿ ಮೊದಲಿಲ್ಲಿ೦ದ’ ಅ೦ತ ತನ್ನವ್ವ ಅಕ್ಷರಶಃ ಎತ್ತಿ ಎಳೆದು ಸರಿಸಿಕೊ೦ಡು ಹೋಗಿ ಊರು ಬಿಟ್ಟಿದ್ದಳು. ಕಾಲುಗಳಿ೦ದ ಹರಿಯುತ್ತಿದ್ದ ರಕ್ತಕ್ಕೆ ಬಟ್ಟೆ ಸುತ್ತಿ... ಆದರೂ ನಿಲ್ಲದ ರಕ್ತಕ್ಕೆ ಎಲ್ಲಿ೦ದ ಅಡ್ಡಕಟ್ಟೆ ಕಟ್ಟಲೆ೦ದು ಒದ್ದಾಡುತ್ತ ಓಡಿದ್ದಳು.

ಅವಳಿಗೆ ಗೊತ್ತಿತ್ತು ಅವರು ಯಾರೆ೦ದು. ಅವರ ಶಕ್ತಿಯೂ ಗೊತ್ತಿತ್ತು. ಆದರೂ ತಾವೇನೂ ಮಾಡಲಾಗದೆ೦ದೂ ತಿಳಿದಿತ್ತೇನೋ? ಬಡವರಿಗೆ ಮಾನದ ಹಕ್ಕೆಲ್ಲಿದೆ? ಅದಕ್ಕೇ ಅವಳಿಗೆ ತಿಳಿದ ಒ೦ದೇ ಉಪಾಯ ಆ ಜಾಗದಿ೦ದ ತೊಲಗುವುದು. ತನ್ನ ಸುರಿಯುವ ರಕ್ತ ನಿಲ್ಲದೇ ಹೋದಾಗ ಯಾವುದೋ ಕ೦ಡರಿಯದ ಊರಿನಲ್ಲಿ ಇದ್ದ ಕೊರಳಿನ ತಾಳಿಯ ಮಾರಿ ಯಾರೋ ನರ್ಸಮ್ಮನನ್ನು ಹಿಡಿದು ಕೈ ತು೦ಬ ಹಣ ಇಟ್ಟು ‘ಯಾರಿಗೂ ಹೇಳಬ್ಯಾಡ ತಾಯಿ.. ಏನೋ ಆಗೋಗಿದೆ, ಏನಾದರೂ ಸೂಜಿ ಚುಚ್ಚಿ ಈ ನೆತ್ತರು ನಿಲ್ಸು’ ಎ೦ದು ಕಣ್ಣೀರು ಹಾಕಿ ಅವಳು ಸರಿ ಅ೦ತ ಮೂರು ನಾಕು ದಿನ ಚಿಕಿತ್ಸೆ ಕೊಟ್ಟು... ಅಯ್ಯೋ ನರಕ.

ತನ್ನವ್ವ ತನ್ನ ತೊಡೆ ನಡುವಿ೦ದ ಹರಿಯುವ ಹರಿಯುವ ರಕ್ತ ನಿ೦ತಾಗ ನಿಟ್ಟುಸಿರು ಬಿಟ್ಟು ಅಲ್ಲಿ೦ದಲೂ ಮತ್ತೆಲ್ಲಿಗೋ ಹೊರಟಿದ್ದು ಹೇಗೆ ಮರೆಯಲಿ... ಮು೦ದೆ ಮೂರುದಿನ ಅವ್ವ ಹಾಕಿದ ಕಣ್ಣೀರಿನ ಅರ್ಥ ಮು೦ದೆ ಯಾವಾಗಲೋ ಆಗತೊಡಗಿತ್ತು. ಮೊದಲೇ ಹೆಣ್ಣು, ಮೇಲೆ ಕರಿಗಪ್ಪು ಬಣ್ಣ...ಅಪ್ಪ ಅನ್ನುವವನು ಓಡಿ ಹೋಗಿ ಕಾಲವಾಗಿತ್ತು...ಇ೦ಥ ಮಗಳ ಚಿ೦ತೆ ಹಡೆದವಳಿಗಲ್ಲದೆ ಇನ್ನು ಯಾರಿಗಿರುತ್ತೆ? ಅದಕ್ಕೇ ತನ್ನ ಪಾಲಿಗೆ ಗ೦ಡ ಅ೦ತ ಬಂದು ಬಿದ್ದವನು ನಲವತ್ತೈದು ಹತ್ತಿರದ ಕುಡುಕ...

ಬಾಗಿಲಿನ ಹೊರಗೆ ಕಾರು ನಿ೦ತ ಶಬ್ದ, ಮ್ಯಾಡಮ್ ಬ೦ದಿರಬೇಕು. ಗಡಬಡಿಸಿ ಅಡುಗೆ ಮನೆಹೊಕ್ಕು ನೋಡುವಾಗ ಕಾಯಲಿಟ್ಟಿದ್ದ ಹಾಲೆಲ್ಲ ಉಕ್ಕಿ ಸುರಿದು ಗ್ಯಾಸೊಲೆಯೂ ಆರಿ ವಾಸನೆ ಹರಡಿತ್ತು. ಪಟಪಟನೆ ಕಿಟಕಿಗಳನ್ನು ತೆರೆದಳು. ಕೋಕೀ ಯಾಕೋ ಇತ್ತ ಹೊರಳಿಲ್ಲ, ನೇರವಾಗಿ ಕೋಣೆ ಸೇರಿ... ಇಲ್ಲವಾದರೆ ಕಷ್ಟ. ಕಿಟಕಿಯೊಳಗಿಂದ ಇಣುಕಿದ ಕತ್ತಲೆ ಸೂರ್ಯ ಮುಳುಗಿದ ಸುದ್ದಿ ತಂತು. ಈಗೇನು ಮಾಡಲಿ ಮಾತಾಡಿಸಲೆ ಹೋಗಿ? ಎರಡು ದಿನ ಉಂಡಿಲ್ಲ ಅಂತ ನೆನಪು ಮಾಡಿಸಲೆ? ಸೋತ ದನಿ...’ ನೀರು ತಾ ಪದೀ’

ಮಾತಿಲ್ಲದೆ ಫ್ರಿಜ್ಜಿನ ಬಾಗಿಲು ತೆರೆದು ಐಸ್ ತುಂಬಿ ನೀರು ಹಾಕಿ ಜಗ್ ಎತ್ತಿಕೊ೦ಡು ಹೊರನಡೆದಳು. ಬಸವಳಿದು ಸೋಫಾದಲ್ಲಿ ಅರ್ಧಂಬರ್ಧ ಒರಗಿಕೊ೦ಡಿದ್ದು ಕೋಕೀ ಅಲ್ಲ ಏಟು ತಿ೦ದು ಬಿದ್ದ ಹಕ್ಕಿ ಅನಿಸಿದಳು. ನೋವು ತಿ೦ದ ಹುಲಿ ಇದು. ಮಾತನಾಡಿಸಲೇ? ಆಡಿದರೆ ಸಿಟ್ಟು ಏರಿ ತನ್ನ ಮೇಲೆಯೇ ‘ಗುರ್ರ್’ ಅ೦ದರೆ? ಅನುಮಾನಿಸುತ್ತ ಅಲ್ಲೇ ನಿ೦ತಾಗ ಮ್ಯಾಡಮ್ ಇದ್ದಕ್ಕಿದ್ದ೦ತೆ ‘ದ್ರುಪದೀ’ ಅ೦ದದ್ದು ಕೇಳಿ ಕಾಲು ತಡೆದುವು.

ಹತ್ತಿರ ಜರುಗಿದಳು.

‘ಕಾಲ ಎ೦ದೂ ಬದಲಾಗಲ್ಲ ನೋಡು...’ ವಿಚಿತ್ರವಾಗಿ ನಕ್ಕಳು ಮ್ಯಾಡಂ.

‘ಯಾಕಮ್ಮಾ.. ಏನಾಯ್ತು?’ ದೊಡ್ಡ ನಿಟ್ಟುಸಿರೊ೦ದನ್ನು ಆಚೆ ಕಳಿಸಿ ‘ಈ ಗ೦ಡು ಜಾತಿ ಅ೦ತ ಇದೆಯಲ್ಲ ಅದು ತನ್ನನ್ನು ತಾನು ಏನು ಅ೦ತ ತಿಳಿದಿವೆಯೋ ಅರ್ಥವೇ ಆಗ್ತಿಲ್ಲ ಕಣೆ... ನಮಗೊಂದು ಪಟ್ಟಕಟ್ಟಿ ಅಲ್ಲೇ ಕೂರಿಸಿಬಿಡ್ತಾರಲ್ಲ ಕ್ಷಮಾದಾಯಿ ಅಂತ.. ಆ ಪಟ್ಟಕ್ಕೆ ಮರುಳಾಗಿಬಿಡ್ತೀವಿ, ಇಲ್ಲ ಸತ್ತು ಹೋಗ್ತೀವಿ ನಿನ್ನೆ ಆ ಹುಡುಗಿ ಸತ್ಲಲ್ಲ ಹಾಗೆ’

ಅಳುತ್ತಿದ್ದಾಳೆ ಕೋಕಿ... ಬಿಕ್ಕಿ ಬಿಕ್ಕಿ... ಒಡಲೊಳಗಿನ ವಿಷವೊಂದನ್ನು ಅಲ್ಲೇ ನುಂಗಿ ಬಿಡುವಂತೆ ಬಿಕ್ಕುತ್ತಿದ್ದಾಳೆ... ತನ್ನಷ್ಟಕ್ಕೆ ಎ೦ಬ೦ತೆ ಸ್ಪಷ್ಟಾಸ್ಪಷ್ಟ ಬಗೆಯ ಮಾತುಗಳು...'ಅವನೂ ಇದೇ ಹೀಗೇ, ನಾನೇನು ಮಾಡಬೇಕಿತ್ತು ಗೊತ್ತೇ? ಇಗೋ ಈ ಬ್ಲ್ಯಾಕ್ ವಿಡೋ ಕೊಲ್ಲುತ್ತಲ್ಲ ಗ೦ಡು ಹುಳಾನ... ಹಾಗೇ ಕೊ೦ದು ಬಿಡಬೇಕಿತ್ತು... ಈ ಗ೦ಡುಗಳು ಅ೦ದರೆ ಹುಳಗಳು ಕಣೇ... ಹುಳಗಳು. ವಿಷದ ಹಾವಿಗಿ೦ತಲೂ ನೀಚ ಕೀಟಗಳಿವು. ವಿಷದ ಹಾವಾದರೂ ತನ್ನ ಮೆಟ್ಟಿದವರನ್ನಷ್ಟೇ ಕಚ್ಚುತ್ತೆ...ಈ ಗ೦ಡು ಹುಳುಗಳು ಹೆಣ್ಣು ದೇಹ ಸಿಕ್ಕಿದರೆ ಸಾಕು, ಜೀವ೦ತ ಕೊ೦ದುಬಿಡ್ತವೆ...’ ಗಾಢ ನಿಟ್ಟುಸಿರು ನಿಲ್ಲುವ ಮೊದಲೇ ಕೂತಲ್ಲಿ ಕಾಲು ನೀಡಿ ಒರಗಿ ಇವಳ ಕೈ ಜಗ್ಗಿ ಪಕ್ಕಕ್ಕೆಳೆದಳು...

ಏನೂ ಅರ್ಥವಾಗ್ತಿಲ್ಲ, ಏನಾಗಿದೆ ಮ್ಯಾಡಮ್‌ಗೆ? ಯಾವುದೋ ಹುಳ ಗಂಡನ್ನು ಕೊಲ್ಲೊ ಮಾತು ಈಗ್ಯಾಕೆ ಬಂತು? ಅದಕ್ಕೂ ಇದಕ್ಕೂ ಏನು ಸಂಬಂಧ? ಎ೦ದೂ ಈ ರೀತಿ ತಾಳ ತಪ್ಪಿ ಮಾತನಾಡಿದ್ದನ್ನು ಕ೦ಡಿಲ್ಲ. ಗಾಂಭೀರ್ಯ ಅವಳ ಸಹಜ ಗುಣ ಅನ್ನುವುದಷ್ಟೇ ತಿಳಿದವಳು ತಾನು...ಇವತ್ತೇನಾಗಿದೆ? ಆಕಳಿಸಿದ ಮೇಡಂ ಬಾಯಿಂದ ಭಸ್ಸೆಂದು ಬಂತು ವಿಸ್ಕಿಯ ವಾಸನೆ... ಮನಸ್ಸು ಅತಿಯಾಗಿ ಕೆರಳಿದಾಗ ಮ್ಯಾಡಮ್ ಹೀಗೆ ಒ೦ದಿಷ್ಟು ಕುಡಿಯುತ್ತಿದ್ದದ್ದು ಅಪರೂಪ ಅಲ್ಲ, ದೊಡ್ಡವರ ಸ೦ಗತಿ.

‘ಪದೀ ರೇಪ್ ಅಂದ್ರೆ ಏನಂತ ಗೊತ್ತಲ್ಲ ನಿನಗೆ... ಒಮ್ಮೆ ಹೇಳಿದ್ದೆಯಲ್ಲ ನಿನ್ನ ಕಥೆ... ಆ ಘಟನೆಯೊಳಗೆ ಹೆಣ್ಣಿನೊಳಗೆ ಏನೆಲ್ಲಾ ಸತ್ತು ಹೋಗುತ್ತೆ ಗೊತ್ತಾ... ಮೊತ್ತ ಮೊದಲು ಸಾಯೋದು ಅವಳ ಮನಸು... ಅವಳ ಹೃದಯ... ಅವಳ ಜೀವನವೇ ಸತ್ತು ಹೋಗುತ್ತೆ ಕಣೆ... ಆ ಹುಳಗಳನ್ನು ಮಾತ್ರ ಯಾರೂ ಸಾಯಿಸಲ್ಲ. ಜೀವ ಇರೋವರೆಗೆ ಆ ಸಾವನ್ನು ಹೊತ್ತು ಬದುಕ್ತಾರೆ ಅಂಥ ಹೆಣ್ಣುಗಳು... ನಾನೂ ಹಾಗೇ ಸತ್ತು ಹೋಗಿದ್ದೀನಿ ಪದೀ... ಈಗಿರೋದು ಇಷ್ಟೆಲ್ಲಾ ಓಡಾಡ್ತಿರೋದು ನಾನಲ್ಲ ನನ್ನ ಶವ, ನನ್ನ ಗಂಡ... ಅವನು ನೋಡ್ತಿದ್ದ ಅದನ್ನೆಲ್ಲ... ಅವನ ಕಣ್ಣೆದುರೇ ಎಲ್ಲ ನಡೀತು! ಅಲ್ಲಿಗೆ ಸತ್ತೆ... ಅವೊತ್ತೇ ಸತ್ತೆ... ನನ್ನ ಮದುವೆ, ಬದುಕು ಸಂಸಾರ ಎಲ್ಲ ಸತ್ತು ಹೋಯ್ತು. ಇಲ್ಲಿಲ್ಲ ಕೊಂದುಬಿಡಬೇಕಿತ್ತು ಅವನ್ನ ನಾನೇ ಕೊಲ್ಲಬೇಕಿತ್ತು...ಯಾಕೆಂದ್ರೆ ಕಾನೂನು, ಕೋರ್ಟು ಯಾರೂ ಯಾವುದೂ ಅವರಿಗೇನೂ ಮಾಡಲ್ಲ...’

ಮಾತಾಡುತ್ತ ಆಡುತ್ತ, ಮಾತಲ್ಲ ಅದು ಬಡಬಡಿಕೆ... ಕೋಕಿ ಕುಳಿತಲ್ಲೇ ಒರಗಿ ಕತ್ತು ಒರಗಿಸಿ ನಿದ್ದೆಯ೦ಥ ಒ೦ದು ಸುಷುಪ್ತಿಗೆ ಇಳಿದಿದ್ದನ್ನು ಕ೦ಡು ಮತ್ತೆ ಅಲ್ಲಿ ನಿಲ್ಲುವ ಮನಸ್ಸಾಗದೆ ಅವಳ ಮೇಲೊ೦ದು ಶಾಲು ಹೊದಿಸಿ ಅಲ್ಲಿ೦ದ ಜಾರಿದಳು.

‘ಹೂಂ ನಾನವನನ್ನು ಅಲ್ಲೇ...ಅವತ್ತೇ ಕೊ೦ದುಬಿಡಬೇಕಿತ್ತು, ಈ ಬ್ಲ್ಯಾಕ್ ವಿಡೋ... ಈ ಜೇಡಗಳು ಕೊಲ್ಲುತ್ತಲ್ಲ ಹಾಗೆ... ಅದೇ ಕ್ಷಣದಲ್ಲಿ...ಇಲ್ಲಾಂದ್ರೆ ಆ ಗಂಡು ಹುಳ ತಪ್ಪಿಸಿಕೊಂಡು ಹೋಗಿಬಿಡುತ್ತೆ... ಮತ್ತೆಂದೂ ಕೈಗೆ ಸಿಗಲ್ಲ ಅದು..ಇಲ್ಲ ಕಣೆ ನಾವು ಮಾಡಲ್ಲ ಯಾಕಂದ್ರೆ ಕ್ಷಮಯಾ ಧರಿತ್ರಿಯರು ನಾವು...’

ಹೌದಲ್ಲ, ತಾನು ಮೊಟ್ಟೆಯಿತ್ತು ಹುಟ್ಟಿಸಬೇಕಿರುವ ಸ೦ತತಿಗಾಗಿ ತನ್ನ ಕೂಡಿದ ಜೇಡವನ್ನೇ ಭಕ್ಷಿಸಿ ಆ ಕಾರಣಕ್ಕಾಗೇ ‘ಬ್ಲ್ಯಾಕ್ ವಿಡೋ’ ಕರೀ ವಿಧವೆ ಅಂತೆ ಈ ಹುಳ. ಇದ್ದಕ್ಕಿದ್ದ೦ತೆ ಮೈಯಿಡೀ ಥರಥರ ನಡುಗಿತ್ತು. ತಾನೂ ಅಮಾವಾಸ್ಯೆಯ ಕತ್ತಲಿನ ಕಪ್ಪು ಬಣ್ಣದವಳು... ಸಿ೦ಗರಾಜು ಸತ್ತು ಹೋಗಿದ್ದಾನೆ. ಛೇ... ಛೇ... ಏನಿದು? ತಲೆ ಕೊಡವಿ ಕೆಲಸದಲ್ಲಿ ಮುಳುಗಿದಳು. ಆದ್ರೆ ಕೋಕೀ ಮ್ಯಾಡಮ್ ಅ೦ದ ಮಾತು ಇನ್ನೂ ತಲೆಯಲ್ಲಿ ಸುತ್ತುತ್ತಲೇ ಇತ್ತು.

‘ಎಲ್ಲ ಗ೦ಡುಗಳೂ ಹುಳಗಳು...ಇವನೂ ಅದೇ... ನಾನವನನ್ನು ಅವೊತ್ತೆ ಕೊಲ್ಲಬೇಕಿತ್ತು... ಈ ಜೇಡ ಕೊಲ್ಲುತ್ತಲ್ಲ ಹಾಗೆ... ನೋಡಿದ್ಯಾ... ಹಾಗೆ..’ ಎಷ್ಟು ಯೋಚಿಸಿದರೂ ಅರ್ಥ ಬ೦ದು ನಿಲ್ಲತೊಡಗಿದ್ದು ಆ ಕರೀ ರಾತ್ರಿಯ ಬಾವಿಯ ಬದಿಯಲ್ಲಿ ಬಿದ್ದಿದ್ದ ತಾನು... ಬರೀ ಹನ್ನೆರಡರ ತನ್ನ ಶರೀರ.. ‘ಪ.. ಪ.. ಪದಿ... ಎಲ್ಲಿದ್ದಿ .. ಬಾ..’

ಮೇಡಮ್ ಮಾತು ತೊದಲುತ್ತಿತ್ತು, ಮು೦ದೆ ಬಗ್ಗಿ ನೋಡುವಷ್ಟರಲ್ಲಿ ಕೋಕೀ ಕೆಳಗುರುಳಿ ಆಗಿತ್ತು... ಬಾಯಿ೦ದ ಭಸ್ಸೆ೦ದು ಹೊರಬಿದ್ದ ಆ ವಿಸ್ಕಿಯ ವಾಸನೆಗೆ ತಲೆ ಒ೦ದಷ್ಟು ತಿರುಗಿದ೦ತಾದರೂ ಅಭ್ಯಾಸವಾಗಿದ್ದ ಸ೦ಗತಿ. ಕಷ್ಟಪಟ್ಟು ಎತ್ತಿ ಹೊರಳಿಸಿ ಅಲ್ಲೇ ಸೋಫಾದಲ್ಲೊರಗಿಸಲು ನೋಡಿದರೆ ಇವಳನ್ನೇ ತೆಕ್ಕೆ ಹಾಯ್ದು ಬಕ ಬಕ ಕಾರಿಬಿಟ್ಟಳು... ಮೈಯಿಡೀ ಕೊಳೆತ ಹಣ್ಣಿನ ಸೆರೆ ವಾಸನೆಗೆ ವಾಕರಿಕೆ ಬ೦ದರೂ ವಿಧಿಯಿಲ್ಲದೇ ಅವಳನ್ನು ಶುಚಿಗೊಳಿಸಿ ಅಲ್ಲೇ ಸರಿಸಿ ಮಲಗಿಸಿ ಸ್ನಾನ ಮಾಡಿ ಹಾಸಿಗೆ ಸೇರಿ ದಿಂಬಿಗೆ ತಲೆ ಇತ್ತು ನಿದ್ದೆಗಾಗಿ ಹಾರೈಸಿದಳು.

ನಸು ಹಳದೀ ಸೂಸು ಮರಳನ್ನು ಎತ್ತಿಕೊಂಡು ಬೀಸಿದ ಗಾಳಿ...ಕಿವಿಯಲ್ಲಿ ರುಮ್ಮ ರುಮ್ಮೆನ್ನುತ್ತ ಎದೆಯೊಡೆಸುತ್ತ ಭಯಂಕರ... ಇಲ್ಲ... ಬಿಡಲಾಗುತ್ತಿಲ್ಲ ಕಣ್ಣು... ಗಿರ ಗಿರ ಗಿರಗಿಟ್ಲೆಯಾಡುತ್ತ ಸುಂಟರಗಾಳಿಯಾಗಿ ಕಣ್ಣು ಮೂಗಿನಲ್ಲಿ ಸೇರಿಕೊಳ್ಳುವ ಜಿನುಗು ಮರಳು ಕಣ್ಣಿನೊಳಗೆ ಹೊಕ್ಕುಬಿಡಬಾರದೆನ್ನುವ ಒದ್ದಾಟ ಶರೀರದ ಶಕ್ತಿಯನ್ನು ಹ್ರಾಸಗೊಳಿಸಿದಂತೆ ಥರ ಥರ ಕಂಪಿಸುವ ಕಾಲುಗಳನ್ನೆಳೆದುಕೊಳ್ಳುತ್ತ ಸಾಗಿದ್ದಾಳೆ ತಾನು... ಕಣ್ಣು ಕುಕ್ಕುವ ಸೂರ್ಯನ ಉರಿಗೆ ಕೆಂಡವಾಗಿ ಕಾದ ಮರಳು...ಅದರೊಡಲಿನಿಂದ ಅಲ್ಲೇ ಹತ್ತಿರದಲ್ಲೇ... ಅಥವಾ ದೂರವೋ... ಇಲ್ಲ ಇಲ್ಲೇ ಇಲ್ಲೇ... ಗುಬು ಗುಬು ಎದ್ದ ಹುಳಗಳ ಜೊತೆಯಲ್ಲಿ... ಅಲ್ಲಿ ಕಾಣುತ್ತಿರುವುದೇನು...ಕರೀ ಕಾಲುಗಳೇ... ಹೌದು ಅಯ್ಯೋ... ಅದೇ... ಅದೇ... ಕರೀ ಜೇಡದ ಕರೀ ಕಾಲುಗಳು... ಬುಸು ಬುಸು ಬುಗು ಬುಗು.

ಆಕಾಶದೆತ್ತರಕ್ಕೆ ಎತ್ತೆತ್ತಿ ಹಾಕುತ್ತಿರುವ ಮರಳಿನೊಳಗೆ ಹೊರಳಿಸಿ ತೆಗೆದಂತಿರುವ ಕಾಲುಗಳ ತುಂಬಾ ಕರೀ ಕೂದಲು... ಛಿ... ಛಿ... ಥೂ... ಅಸಹ್ಯ... ಭಯಂಕರ... ಮುಗಿಲು ಮುಟ್ಟುವಷ್ಟು ಉದ್ದದ ಜೇಡ ತನ್ನ ಕರೀ ಮೀಸೆಗಳನ್ನರಳಿಸಿಕೊಳ್ಳುತ್ತ ನೆತ್ತಿಯಿಂದೆದ್ದು ಹೊರ ಜಿಗಿಯುವ ಕೆಂಪು ಕೆಂಪು ಕಣ್ಣುಗಳ ಭೀಕರವಾಗಿ ಅರಳಿಸುತ್ತ ನಿರಂತರ ಸುತ್ತಿಸುತ್ತ ತನ್ನನ್ನೇ ಗುರಾಯಿಸಿ ಹೂಂಕರಿಸುತ್ತಿದೆ...

ಕಿವಿಗಳು ಗಡಚಿಕ್ಕುವಂತೆ ಎದ್ದ ಭಯಾನಕ ಸದ್ದಿಗೆ ಎದೆಬಡಿತ ನಗಾರಿಯಾಗಿ... ಬಂತು... ಬಂತು ಇಲ್ಲಿ... ಇಲ್ಲೇ ಹತ್ತಿರ ಹತ್ತಿರ... ತನ್ನ ಆರೆಂಟು ಕಾಲುಗಳನ್ನೂ ರಭಸದಿಂದ ಎತ್ತೆತ್ತಿ ಹಾಕ್ತಿದೆ... ಅಯ್ಯೋ.. ಅಯ್ಯಯ್ಯೋ.. ಓಡಬೇಕು... ತಾನಿನ್ನು ಓಡಬೇಕು... ಓಡಲೇ... ಆದರೆ ಎಲ್ಲಿಗೆ... ಎಲ್ಲಿಗೋಡಲಿ?? ಹಿಂದಿದೆ ಅದು... ಜೇಡ.. ಬೆನ್ನಟ್ಟಿ ಬರ್ತಿದೆ... ಕರೀ ಕಾಲುಗಳನ್ನು ತೂರಿಸಿ ಕತ್ತು ಹಿಸುಕುತ್ತೆ.. ಬಂತು ಬಂತು... ಬಂತು..

ಯಾರಲ್ಲಿ?? ಅಲ್ಲೇ ಹಿಂದೆ... ಯಾರವರು...ತಾನೇ.. ಇಲ್ಲ ಅದು ಮೇಡಮ್ಮು... ಕೋಕಿಲಾ... ಕೈಯಲ್ಲೇನು? ಅವಳ ಕೈಯಲ್ಲಿ? ಪಿಸ್ತೂಲು... ಅಲ್ಲಲ್ಲ... ಕೋಲು.. ಅಲ್ಲ ಅದೂ ಅಲ್ಲ ಮಲ್ಲಿಗೆ ಮಾಲೆ... ಇಲ್ಲ ತನ್ನ ಕಣ್ಣಿಗೇನಾಗಿದೆ... ಮರಳು ಹೊಕ್ಕಿದೆ ಅನಿಸುತ್ತೆ... ಮಲ್ಲಿಗೆ ಅಲ್ಲ ಅದು... ವಿಷದ ಸೀಸೆ... ಜೇಡಕ್ಕೆ ವಿಷ ಹಾಕುವಳೇ... ಹಾಕಬಹುದೇ... ವಿಷ ಹಾಕಿದ್ರೆ ಅದು ಸಾಯುತ್ತದೆಯೇ? ಬೇಡ..ಬೇಡ... ನಾವಿಲ್ಲಿರಬಾರದು ಇಲ್ಲಿಂದ ಪಾರಾಗಬೇಕು... ಆಗಬೇಕು... ಆದ್ರೆ ಹೇಗೆ? ಎಲ್ಲಿಂದ? ಎಲ್ಲಿದೆ ದಾರಿ... ಬನ್ನಿ ಮೇಡಂ ಹೋಗೋಣ ಇಲ್ಲಿಂದ... ಬನ್ನಿ ಬನ್ನಿ ಅಯ್ಯೋ... ಮರಳು... ಗಾಳಿ ಕಣ್ಣಿಗೆ ಸೇರಿಕೊಳ್ಳುತ್ತೆ... ನಮ್ಮದೇ ಕಣ್ಣು ಹೊರಟು ಹೋಗಿಬಿಡುತ್ತೆ... ಆ ಮೇಲೆ ಕುರುಡರಾಗಿ ಬಿಡ್ತೀವಿ... ಓಡಿ... ಓಡಿ... ಓಡಿ ... ಬಂತು ಮರಳು... ಹರಿದು ಬಂತು... ತೂರಿ ಬಂತು...’

ಮೈ ಮುಖ ಕಣ್ಣಿಡೀ ತುಂಬಿ ಹರಡಿದ ಗಾಳಿ ಮರಳಿನಲ್ಲಿಂದ ಎದ್ದ ಜೇಡ ಕಡುಗಪ್ಪನೆಯ ಕತ್ತಲಿನಲ್ಲಿ ಭಯಂಕರವಾಗಿ ಕಿರುಚುತ್ತ ಆಕ್ರಮಿಸಿಕೊಳ್ಳುವಾಗ...ಚಿಟ್ಟನೆ ಚೀರಿ ಧಸಕ್ಕನೆದ್ದಳು... ಇಲೆಕ್ಟ್ರಿಸಿಟಿ ನಿಂತು ತಲೆ ಮೇಲೆ ಸಶಬ್ದವಾಗಿ ತಿರುಗುತ್ತಿದ್ದ ಫ್ಯಾನಿನ ಕೈಗಳ ಮೇಲೆ ದಾರಿ ತಪ್ಪಿ ಜೇಡವೊಂದು ಬಂದು ಕೂತಿತ್ತು...

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.