ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ ಸೋಜಿಗದ ಎರಡು ಪ್ರಶ್ನೆಗಳು

Last Updated 9 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

1. ಕಡಲ ಜಲ ಲವಣಮಯ ಏಕೆ?
* ಪಾರಾವಾರದ (ಚಿತ್ರ 1, 4) ಜಲರಾಶಿಯನ್ನು ಕುರಿತ ಅತ್ಯಂತ ಕುತೂಹಲದ ಪ್ರಶ್ನೆ ಇದು. ಯಾವುದೇ ನದಿಯ ಅಥವಾ ಯಾವುದೇ ಸರೋವರದ ನೀರಿನದು ‘ಲವಣ ರಹಿತ’ವೆನಿಸುವ ರುಚಿ. ಆದರೆ ಕಡಲ ನೀರು ‘ಬಾಯಿಗೆ ಹಾಕಲಾಗದಷ್ಟು’ ಉಪ್ಪು. ಏಕೆ ಹೀಗೆ? ಕಡಲ ಜಲದಲ್ಲಿ ಏನೇನು ಲವಣಗಳಿವೆ? ಕಡಲಲ್ಲಿರುವ ಒಟ್ಟು ಲವಣ ಎಷ್ಟು? ಈ ಲವಣ ರಾಶಿ ಸಾಗರಕ್ಕೆ ಸೇರಿದ್ದು, ಕಡಲ ಜಲಕ್ಕೆ ಬೆರೆತಿದ್ದು ಹೇಗೆ?

ವಿಸ್ಮಯ ಏನೆಂದರೆ, ಧರೆಯ ಮೇಲ್ಮೈನ ಶೇಕಡ ಎಪ್ಪತ್ತೊಂದರಷ್ಟು ವಿಸ್ತಾರವನ್ನು ಆವರಿಸಿ, ಸರಾಸರಿ 3.7 ಕಿಲೋ ಮೀಟರ್ ಆಳ ಇದ್ದು, 1332 ದಶಲಕ್ಷ ಘನ ಕಿಲೋ ಮೀಟರ್‌ಗಳಷ್ಟು (1 ಘನ ಕಿಲೋ ಮೀಟರ್ = 1 ಲಕ್ಷ ಕೋಟಿ ಲೀಟರ್) ಪ್ರಮಾಣದಲ್ಲಿ ಸಂಗ್ರಹವಾಗಿರುವ ಕಡಲ ಜಲದಲ್ಲಿರುವ ಲವಣದ ಅಂಶ ಪ್ರತಿ ಲೀಟರ್‌ನಲ್ಲಿ ಸರಾಸರಿ 35 ಗ್ರಾಂ (3.5%)! ಸ್ಪಷ್ಟವಾಗಿಯೇ ಸಾಗರಾವಾರದಲ್ಲಿರುವ ಉಪ್ಪಿನ ಮೊತ್ತವಂತೂ ಕಲ್ಪನಾತೀತ. ಒಂದು ವೈಜ್ಞಾನಿಕ ಅಂದಾಜಿನಂತೆ ಕಡಲ ಜಲದಲ್ಲಿರುವ ಎಲ್ಲ ಉಪ್ಪನ್ನೂ ಬೇರ್ಪಡಿಸಿ ಧರೆಯ ಇಡೀ ನೆಲಾವಾರದ ಮೇಲೆ ಸಮನಾಗಿ ಹರಡಿದರೆ ಆ ಉಪ್ಪಿನ ಪದರದ ಎತ್ತರ ಐದು ನೂರು ಅಡಿ ಮುಟ್ಟುತ್ತದೆ! ಎಂದರೆ ನಲವತ್ತು ಮಹಡಿಗಳ ಕಟ್ಟಡದಷ್ಟು ಎತ್ತರ ಇರುತ್ತದೆ!

ಇಲ್ಲೊಂದು ಮುಖ್ಯ ವಿಷಯ: ಕಡಲಲ್ಲಿರುವುದು ‘ಅಡುಗೆ ಉಪ್ಪು’ (ಸೋಡಿಯಂ ಕ್ಲೋರೈಡ್) ಮಾತ್ರವೇ ಏನಲ್ಲ. ಅದರ ಜೊತೆಗೆ ಪೊಟಾಸಿಯಂ ಕ್ಲೋರೈಡ್, ಮೆಗ್ನೀಶಿಯಂ ಕ್ಲೋರೈಡ್, ಜಿಪ್ಸಂ, ಕ್ಯಾಲ್ಷಿಯಂ ಕಾರ್ಬನೇಟ್ ಮತ್ತು ಸಲ್ಫೇಟ್ ಲವಣಗಳೂ ಬೇರೆ ಬೇರೆ ಪ್ರಮಾಣಗಳಲ್ಲಿ ಬೆರೆತಿವೆ. ಆದರೆ ‘ಉಪ್ಪಿನ ರುಚಿ’ಯ ಸೋಡಿಯಂ ಕ್ಲೋರೈಡ್ ನದೇ ಅತ್ಯಂತ ಅಧಿಕ ಭಾಗ. ಸಾಗರದ ನೀರಲ್ಲಿರುವ ಒಟ್ಟೂ ಲವಣಗಳ ಶೇಕಡ ತೊಂಬತ್ತು ಭಾಗ ಈ ಉಪ್ಪಿನದೇ ಆಗಿದೆ! ಸಾಗರದ ನೀರು ಇಷ್ಟೊಂದು ಲವಣಮಯವಾಗಿರಲು ಹಲವು ಕಾರಣಗಳಿವೆ. ಅತ್ಯಂತ ಪ್ರಮುಖವಾಗಿ -

* ಮೋಡಗಳಿಂದ ಬೀಳುವ ಮಳೆ ನೀರಿಗೆ ಸಹಜವಾಗಿಯೇ ವಾಯುಮಂಡಲದಲ್ಲಿರುವ ಇಂಗಾಲದ ಡೈ ಆಕ್ಸೈಡ್ ಒಂದಷ್ಟು ಪ್ರಮಾಣದಲ್ಲಿ ಬೆರೆಯುತ್ತದೆ. ಹಾಗಾಗಿ ಮಳೆ ನೀರು ಅತ್ಯಂತ ದುರ್ಬಲವಾದ ‘ಕಾರ್ಬಾನಿಕ್ ಆಮ್ಲ’ವಾಗಿ ನೆಲಕ್ಕೆ ಸುರಿಯುತ್ತದೆ.
ನೆಲದ ಮೇಲೆ, ನೆಲದ ಬಂಡೆಗಳ ಮೇಲೆ, ಶಿಲಾ ಹಾಸುಗಳ ಮೇಲೆ ಪ್ರವಹಿಸುತ್ತ ಧಾರೆ ಧಾರೆಯಾಗಿ ಸಾಗುವ ಈ ಮಳೆ ನೀರು ಬಂಡೆಗಳನ್ನು ಸವೆಸುತ್ತ, ತನ್ನ ಆಮ್ಲೀಯ ಬಲದಿಂದ ಶಿಲೆಗಳಲ್ಲಿನ ಖನಿಜಾಂಶ-ಲವಣಾಂಶಗಳನ್ನೂ ಕರಗಿಸುತ್ತ, ಅವೆಲ್ಲವನ್ನೂ ಝರಿ-ತೊರೆಗಳ ಮೂಲಕ ಸಾಗಿಸುತ್ತ ನದಿಗಳಿಗೆ ಬೆರೆಸುತ್ತದೆ (ಚಿತ್ರ 2, 3). ನದೀ ದಂಡೆಗಳಿಂದಲೂ, ಪ್ರವಾಹ ಪಾತ್ರದಿಂದಲೂ ಹೀಗೆಯೇ ಕರಗಿ ಬೆರೆಯುವ ಲವಣಗಳೂ ಎಲ್ಲವೂ ಒಟ್ಟು ಸೇರಿ ಅಂತಿಮವಾಗಿ ಕಡಲನ್ನು ಸೇರುತ್ತವೆ (ಚಿತ್ರ 5).

ಹೀಗೆ ನಿರಂತರವಾಗಿ ಸಾಗರಕ್ಕೆ ಸೇರ್ಪಡೆಯಾಗುತ್ತಿರುವ ಲವಣಗಳಲ್ಲಿ ಕೆಲವನ್ನು ಸಾಗರ ಜೀವಿಗಳು ತಮ್ಮ ನೈಸರ್ಗಿಕ ಜೈವಿಕ ಕ್ರಿಯೆಗಳಿಗೆ ಬಳಸಿಕೊಳ್ಳುತ್ತವೆ (ಉದಾಹರಣೆ: ಕ್ಯಾಲ್ಷಿಯಂ ಕಾರ್ಬನೇಟ್ ಅನ್ನು ಬಳಸಿ ಮೃದ್ವಂಗಿಗಳು ತಮ್ಮ ಚಿಪ್ಪನ್ನು ನಿರ್ಮಿಸಿಕೊಳ್ಳುತ್ತವೆ). ಹಾಗೆ ಬಳಕೆಯಾಗದ ‘ಸೋಡಿಯಂ ಕ್ಲೋರೈಡ್’ನಂಥ ಲವಣಗಳು ಸಂಗ್ರಹವಾಗುತ್ತ, ಸಂಗ್ರಹವಾಗುತ್ತ ನೂರಾರು ಕೋಟಿ ವರ್ಷಗಳ ಅವಧಿಯಲ್ಲಿ ಈಗಿನ ಪ್ರಮಾಣವನ್ನು ತಲುಪಿವೆ.

* ಕಡಲ ನೀರು ಲವಣಮಯವಾಗುವಲ್ಲಿ ಆದಿ ಕಾಲದಿಂದಲೂ ಸಂಭವಿಸುತ್ತ ಬಂದಿರುವ ಜ್ವಾಲಾಮುಖಿ ಚಟುವಟಿಕೆಗಳೂ ಮತ್ತೊಂದು ಮುಖ್ಯಕಾರಣ (ಚಿತ್ರ 6). ಜ್ವಾಲಾಮುಖಿಗಳು ಸ್ಫೋಟಗೊಂಡಾಗ ಅವುಗಳಿಂದ ಭಾರೀ ಪ್ರಮಾಣದಲ್ಲಿ ಕ್ಲೋರೀನ್ ಮತ್ತು ಗಂಧಕ ಹೊರಹೊಮ್ಮಿ ವಾಯುಮಂಡಲವನ್ನು ಸೇರುತ್ತವೆ; ಮಳೆ ನೀರಲ್ಲಿ ಬೆರೆತು ಕಡಲನ್ನು ತಲುಪುತ್ತವೆ. ನೀರಲ್ಲಿ ಅತ್ಯಂತ ಸುಲಭವಾಗಿ ವಿಲೀನಗೊಳ್ಳುವ ಈ ಧಾತುಗಳ ಪರಮಾಣುಗಳು ಕಡಲಲ್ಲಿ ಕ್ಲೋರೈಡ್ ಮತ್ತು ಸಲ್ಫೇಟ್ ಲವಣಗಳನ್ನು ರೂಪಿಸುತ್ತವೆ.

* ಕಡಲ ತಳದ ಕೆಲವಾರು ನಿರ್ದಿಷ್ಟ ಪ್ರದೇಶಗಳಲ್ಲಿ ಅವಿರತ ಕ್ರಿಯಾಶೀಲವಾಗಿರುವ ’ಕುದಿ ಜಲದ ಕಂಡಿ’ ಗಳು (ಹೈಡ್ರೋ ಥರ್ಮಲ್ ವೆಂಟ್ಸ್) ಮತ್ತು ಸಾಗರಾಂತಸ್ಥ ಜ್ವಾಲಾಮುಖಿಗಳು ಕೂಡ ಬೃಹತ್ ಪ್ರಮಾಣದಲ್ಲಿ ಕಡಲಿನ ಜಲರಾಶಿಗೆ ಲವಣಾಂಶಗಳನ್ನು ಬೆರೆಸುತ್ತಿವೆ.

ಹೀಗೆ ವಿವಿಧ ಮೂಲಗಳಿಂದ ಸಾಗರಗಳಿಗೆ ಲವಣಾಂಶಗಳು ಸೇರುತ್ತ, ಸೇರುತ್ತ, ಸಂಗ್ರಹವಾಗುತ್ತ, ತತ್ಪರಿಣಾಮವಾಗಿ ಪ್ರಸ್ತುತ ಕಡಲ ನೀರೆಲ್ಲ ಲವಣಮಯವಾಗಿದೆ.

ಇಲ್ಲೊಂದು ಮುಖ್ಯ ವಿಷಯ: ಸರೋವರಗಳಲ್ಲಿ ಸಂಗ್ರಹವಾಗುವ ಜಲರಾಶಿಯೂ ಮಳೆ ನೀರು-ನದಿ ನೀರೇ ಹೌದಾದರೂ ಸರೋವರಗಳ ನೀರು ಉಪ್ಪಾಗಿಲ್ಲ. ಏಕೆಂದರೆ ಆಳ, ವೈಶಾಲ್ಯ, ಗಾತ್ರ, ಜಲಸಂಗ್ರಹ ಇತ್ಯಾದಿ ಯಾವ ಲಕ್ಷಣದಲ್ಲೂ ಯಾವುದೇ ಸರೋವರವನ್ನೂ ಅನಂತವೆನಿಸುವ ಪಾರಾವಾರಕ್ಕೆ ಕಿಂಚಿತ್ತೂ ಹೋಲಿಸುವುದೂ ಸಾಧ್ಯವಿಲ್ಲ. ಜೊತೆಗೆ, ಒಳ ಬರುವ ನದೀ ಪ್ರವಾಹಗಳಿಂದಾಗಿ ಸರೋವರಗಳ ನೀರು ಉಕ್ಕಿ, ಹೊರಹರಿದು ನವೀಕರಣಗೊಳ್ಳುತ್ತಲೇ ಇರುತ್ತದೆ. ಹಾಗಾಗಿ ಸರೋವರಗಳಲ್ಲಿ ಲವಣಗಳು ರುಚಿಗೆ ಅರಿವಾಗುವ ಪ್ರಮಾಣದಲ್ಲಿ ಶೇಖರಗೊಳ್ಳುವುದು ಅಸಾಧ್ಯ. ಆದ್ದರಿಂದಲೇ ನದಿಗಳ ಸಂಪರ್ಕದಲ್ಲಿರುವ ಸರೋವರಗಳ ನೀರು ಲವಣ ರಹಿತವಾಗಿ, ಶುದ್ಧ ನೀರಾಗಿಯೇ ಉಳಿದಿರುತ್ತದೆ.

2. ‘ಐಸ್ ಬರ್ಗ್’ಗಳು ಲವಣ ರಹಿತ - ಹೇಗೆ ?
* ‘ಐಸ್ ಬರ್ಗ್’ ಎಂದರೆ ‘ಹಿಮದ ಪರ್ವತ’ ಎಂದರ್ಥ. ಸಾಗರದಲ್ಲಿ ತೇಲುವ ಬೃಹದಾಕಾರದ, ಬೆಟ್ಟ-ಪರ್ವತ ಸದೃಶ ಹಿಮದ ಬಂಡೆಗಳೇ ಐಸ್ ಬರ್ಗ್‌ಗಳು. ಅನಂತ ವಾರಿಧಿಯಲ್ಲಿ ವಿವಿಧ ಆಕಾರ-ಗಾತ್ರಗಳಲ್ಲಿ ತೇಲುತ್ತ, ನಿಧಾನವಾಗಿ ಕರಗುತ್ತ, ಸಾಗರ ಪ್ರಾಣಿಗಳ ಹಿಂಡುಗಳನ್ನೂ ಹೊತ್ತು ಮಂದ ವೇಗದಲ್ಲಿ ಸಾಗುತ್ತ, ಚಲನಶೀಲ ‘ನೀರ್ಗಲ್ಲ ದ್ವೀಪ’ಗಳಂತೆ ಗೋಚರಿಸುವ ಐಸ್ ಬರ್ಗ್‌ಗಳದು ರುದ್ರ, ರಮ್ಯ, ಸೋಜಿಗಮಯ ದೃಶ್ಯ (ಚಿತ್ರ 9, 10, 11, 12, 13).

ಐಸ್ ಬರ್ಗ್‌ಗಳ ವಿಶೇಷ ಏನೆಂದರೆ, ಲವಣಮಯ ಸಾಗರ ಜಲದಲ್ಲೇ ತೇಲುವ ನಿರ್ಮಿತಿಗಳಾಗಿದ್ದರೂ ಅವುಗಳಲ್ಲಿ ಲವಣಗಳ ಅಂಶ ಕಿಂಚಿತ್ತೂ ಇರುವುದಿಲ್ಲ. ವಾಸ್ತವವಾಗಿ ಬರ್ಗ್‌ಗಳನ್ನು ಕರಗಿಸಿದರೆ ಲಭಿಸುವುದು ನೇರ ಕುಡಿಯಲು ಯೋಗ್ಯವಾದ ಶುದ್ಧ ನೀರು! ಏಕೆ ಹೀಗೆ?

ಅದಕ್ಕೆ ಎರಡು ಕಾರಣಗಳಿವೆ : * ಸಾಗರದ ಲವಣ ಜಲ ಐಸ್ ಬರ್ಗ್ ಆಗುವುದಿಲ್ಲ. ಸಾಗರದ ನೀರು ಘನರೂಪ ತಳೆಯಲು ಅದರ ತಾಪಮಾನ ಶೂನ್ಯಕ್ಕಿಂತ ಕನಿಷ್ಠ ಎರಡು ಡಿಗ್ರಿ ಸೆಲ್ಷಿಯಸ್‌ನಷ್ಟು ಕಡಿಮೆ ಇರಬೇಕು. ಕಡಲಿನ ಇಡೀ ಜಲರಾಶಿ ಇಷ್ಟು ಕಡಿಮೆ ತಾಪ ಮಟ್ಟವನ್ನು ತಲುಪುವುದು ಸಾಧ್ಯವೇ ಇಲ್ಲ. ಆದ್ದರಿಂದಲೇ ಧ್ರುವಗಳ ಸನಿಹದ ಅತ್ಯಂತ ಶೀತಲ ಪರಿಸರದಲ್ಲೂ ಅತಿ ಹೆಚ್ಚೆಂದರೆ ಹಿಮದ ತೆಳು ಚೂರುಗಳು ತೇಲುತ್ತ ಹರಡಿರುತ್ತವೆ. ಇಂಥ ಹಿಮ ತುಣುಕುಗಳೂ ಅತ್ಯಂತ ನಿಧಾನವಾಗಿ ರೂಪುಗೊಳ್ಳುವುದರಿಂದ ಲವಣಗಳು ಬೆರೆಯದ ಹಿಮ ಕಣಗಳು ಮಾತ್ರ - ಎಂದರೆ ‘ಸ್ಫಟಿಕ ಜಲ’ದ ಕಣಗಳು ಮಾತ್ರ - ರೂಪುಗೊಂಡು ಒಟ್ಟಾಗುತ್ತವೆ. ಸ್ಪಷ್ಟವಾಗಿಯೇ ಇಂಥ ಹಿಮದ ಚೂರುಗಳು ಮತ್ತು ಹಾಳೆಗಳು ಸಂಪೂರ್ಣ ಲವಣ ರಹಿತ.

* ಐಸ್‌ ಬರ್ಗ್‌ಗಳು ಕಡಲಲ್ಲಿ ತೇಲುತ್ತ ಗೋಚರಿಸುತ್ತವಾದರೂ ಮೂಲತಃ ಧರೆಯ ಶಾಶ್ವತ ಹಿಮಲೋಕಗಳಾದ ಅಂಟಾರ್ಕ್ಟಿಕಾ ಭೂ ಖಂಡ (ಚಿತ್ರ-8) ಮತ್ತು ಆರ್ಕ್ಟಿಕ್ ಪ್ರದೇಶದ (ಚಿತ್ರ-7) ಕಡಲಂಚುಗಳೇ ಐಸ್‌ ಬರ್ಗ್‌ಗಳ ಅವತರಣದ ಪ್ರಧಾನ ನೆಲೆಗಳು. ಆರ್ಕ್ಟಿಕ್‌ನ ಗ್ರೀನ್ ಲ್ಯಾಂಡ್ ಮತ್ತು ಅಲಾಸ್ಕಾಗಳ ಹಾಗೂ ಅಂಟಾರ್ಕ್ಟಿಕಾದ ಕಡಲ ತೀರಗಳಲ್ಲಿ ಬಹು ಸಂಖ್ಯೆಯ ಭಾರೀ ಹಿಮನದಿಗಳು ಸಾಗರಗಳನ್ನು ಸಂಧಿಸುತ್ತಿವೆ.

ಅದೇ ತಾಣಗಳಲ್ಲಿ ಕಡಲಿನ ಪ್ರಬಲ ಅಲೆಗಳ ಅವ್ಯಾಹತ ದಾಳಿಯಿಂದಲೂ, ಭೂ ತಾಪದ ಏರಿಕೆಯಿಂದಲೂ ಹಿಮನದಿಗಳ ಅಂಚುಗಳು ಸೀಳಿ, ಮುರಿದು, ಕಳಚಿ ಕಡಲಿಗೆ ಬೀಳುತ್ತವೆ (ಚಿತ್ರ-14 ). ಐಸ್ ಬರ್ಗ್‌ಗಳಾಗುತ್ತವೆ. (ಇದೇ ವರ್ಷದ ಕಳೆದ ಜುಲೈ ತಿಂಗಳಿನಲ್ಲಿ ಅಂಟಾರ್ಕ್ಟಿಕಾದ ಒಂದು ಹಿಮ ಚಾಚಿನಿಂದ ಕಳಚಿ ಕಡಲಿಗಿಳಿದ ಒಂದು ಐಸ್‌ ಬರ್ಗ್‌ನ ವಿಸ್ತಾರ ಆರು ಸಾವಿರ ಚದರ ಕಿಲೋ ಮೀಟರ್ ಆಗಿದ್ದು ಅದರ ದ್ರವ್ಯ ರಾಶಿ ಒಂದು ಲಕ್ಷ ಕೋಟಿ ಟನ್ ಆಗಿತ್ತು!) ಹೀಗೆ ಐಸ್‌ ಬರ್ಗ್‌ಗಳು ಹಿಮ ನದಿಗಳಿಂದ - ಎಂದರೆ ನೆಲ ಪ್ರದೇಶದ ಮೇಲೆ ಸಂಗ್ರಹವಾದ ಶುದ್ಧ ನೀರಿನ ಹಿಮ ರಾಶಿಗಳಿಂದ - ಮೈದಳೆಯುತ್ತವಾದ್ದರಿಂದ ಅವು ಸಂಪೂರ್ಣ ಲವಣ ರಹಿತ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT