ಶನಿವಾರ, ಮಾರ್ಚ್ 6, 2021
18 °C

‘ಜೈನರಿಂದ ಬ್ರಾಹ್ಮಣರ ಅನುಕರಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜೈನರಿಂದ ಬ್ರಾಹ್ಮಣರ ಅನುಕರಣೆ’

ಹುಬ್ಬಳ್ಳಿ: ‘ಜೈನರು ಇತ್ತೀಚೆಗೆ ಬ್ರಾಹ್ಮಣರನ್ನು ಹಾಗೂ ವೈದಿಕ ಆಚರಣೆಗಳನ್ನು ಅನುಕರಣೆ ಮಾಡುತ್ತಿದ್ದಾರೆ. ಹೀಗೆ, ಮತ್ತೊಬ್ಬರನ್ನು ಅನುಕರಿಸುವ ಬದಲಾಗಿ ಸಂಪೂರ್ಣ ವೈಜ್ಞಾನಿಕವಾದ ಜೈನಧರ್ಮದ ತತ್ವಗಳನ್ನೇ ಮೈಗೂಡಿಸಿಕೊಳ್ಳಬೇಕು’ ಎಂದು ಸಂಸದ ಎಂ.ವೀರಪ್ಪ ಮೊಯಿಲಿ ಸಲಹೆ ಮಾಡಿದರು.‌

ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಜೈನ ಸಂಪ್ರದಾಯಗಳು ಮತ್ತು ಆಚರಣೆಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಡಾ. ಬಿ.ಆರ್. ಅಂಬೇಡ್ಕರ್‌ ರಚಿಸಿದ ಸಂವಿಧಾನ ಸಮರ್ಪಕವಾಗಿ ಅನುಷ್ಠಾನವಾಗಬೇಕೆಂದರೆ, ಜೈನ ಧರ್ಮಕ್ಕೆ ಅನುಸಾರ ಬದುಕಿದರೆ ಸಾಕು’ ಎಂದು ಅಭಿಪ್ರಾಯಪಟ್ಟರು.

‘ವೈದಿಕ ಮತ್ತು ಬ್ರಾಹ್ಮಣ ಸಮಾಜದಲ್ಲಿ ಜಾತಿಯ ವರ್ಗೀಕರಣವಿದೆ. ಪ್ರಾಣಿ ಬಲಿ ಸೇರಿದಂತೆ ಹಲವು ಮೂಢನಂಬಿಕೆಗಳು ಅಲ್ಲಿವೆ. ಆದರೆ ಜೈನ ಹಾಗೂ ಬೌದ್ಧ ಧರ್ಮದಲ್ಲಿ ಜಾತಿಯ ಸುಳಿವಿಲ್ಲ’ ಎಂದರು.

‘ಜೈನಧರ್ಮದ ತತ್ವಗಳು ಸ್ಪಷ್ಟ– ತರ್ಕಬದ್ಧವಾಗಿವೆ. ಅಹಿಂಸೆಯೇ ಬುನಾದಿಯಾಗಿದ್ದು, ಕ್ರೈಸ್ತಧರ್ಮಕ್ಕಿಂತ ಎಷ್ಟೋ ವರ್ಷಗಳ ಮೊದಲು ಜಗತ್ತಿನಲ್ಲಿ ಪ್ರಕಾಶಿಸಿದೆ. ಇದು ಎಲ್ಲ ನಾಗರಿಕತೆಗಳ ಮೂಲವಾಗಿದೆ’ ಎಂದು ಮೊಯಿಲಿ ಹೇಳಿದರು.

‘ಸಹಿಷ್ಣುತೆ, ಸತ್ಯ, ಅಹಿಂಸೆಯ ತತ್ವಗಳು ಹಿಂದೆಂದಿಗಿಂತಲೂ ಈಗ ಅವಶ್ಯಕವಾಗಿವೆ. ಈ ಎಲ್ಲವೂ ಜೈನಧರ್ಮದಲ್ಲಿದ್ದು, ಇದರ ಆಚರಣೆ ಹೆಚ್ಚು ಪ್ರಸ್ತುತ’ ಎಂದು ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಮಲ್ಲಿಕಾ ಘಂಟಿ ಮಾತನಾಡಿ, ‘ಧರ್ಮಗಳನ್ನು ಈಗ ರಾಜಕೀಯ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಹಿಂಸಾನಂದಿಗಳನ್ನು ಅಹಿಂಸೆಯ ಮೂಲಕ ಸಹಿಷ್ಣುತೆಯ ಕಡೆಗೆ ತಿರುಗಿಸಿಕೊಳ್ಳಬೇಕಾಗಿದೆ’ ಎಂದರು.

‘ಜೈನರು ಮುಖ್ಯವಾಹಿನಿ ಬಿಟ್ಟು ಬದುಕುತ್ತಿದ್ದಾರೆ ಎನಿಸುತ್ತಿದೆ. ಅವರು ಮುಖ್ಯವಾಹಿನಿಯೊಂದಿಗೆ ಬೆರೆತುಕೊಳ್ಳಬೇಕು. ಬಹುತ್ವದ ಕಡೆಗೆ ಮುಖ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

ದಿಗಂಬರ ಜೈನ ಅರ್ಚಕರ ಸಮ್ಮೇಳನ

ರಿಪ್ಪನ್‌ಪೇಟೆ (ಶಿವಮೊಗ್ಗ ಜಿಲ್ಲೆ): ಮೈಸೂರಿನ ದಿಗಂಬರ ಜೈನ ಅರ್ಚಕರ ಸಂಘ ಹಾಗೂ ಹೊಂಬುಜ ಜೈನ ಮಠದ ಸಹಯೋಗದಲ್ಲಿ 4ನೇ ದಕ್ಷಿಣ ಭಾರತ ಮಟ್ಟದ ದಿಗಂಬರ ಜೈನ ಅರ್ಚಕರ ಸಮ್ಮೇಳನವನ್ನು ಡಿಸೆಂಬರ್‌ 16 ಹಾಗೂ 17ರಂದು ಹೊಂಬುಜ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಠದ ಪೀಠಾಧಿಕಾರಿ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರವಣಬೆಳಗೋಳದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳ ಭಟ್ಟಾಚಾರ್ಯರು ಪಾಲ್ಗೊಳ್ಳಲಿದ್ದಾರೆ.

ಬೆಳಗಾವಿಯ ಪ್ರತಿಷ್ಠಾಚಾರ್ಯ ಶಾಂತಿನಾಥ, ಪಾರ್ಶ್ವನಾಥ ಉಪಾಧ್ಯೆ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪೂಜಾ ವಿಧಾನ ಅನುಷ್ಠಾನ, ಜೈನ ವಾಸ್ತು, ಜೈನ ಜ್ಯೋತಿಷ್ಯ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.