ಗುರುವಾರ , ಫೆಬ್ರವರಿ 25, 2021
29 °C

ಕಾಶ್ಮೀರ ಕಣಿವೆಯ ಬೆಂಕಿಯಲ್ಲಿ ಅರಳಿದ ಅಫ್ಸಾನ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಕಾಶ್ಮೀರ ಕಣಿವೆಯ ಬೆಂಕಿಯಲ್ಲಿ ಅರಳಿದ ಅಫ್ಸಾನ

‘ಆ ದಿನ ನಾನು ಪೊಲೀಸರತ್ತ ಕಲ್ಲು ತೂರಿದ್ದು ನಿಜ. ಅವತ್ತು ಅವರ ಅಸಭ್ಯ ವರ್ತನೆಗೆ ನಾನು ಆ ರೀತಿ ಪ್ರತಿಕ್ರಿಯಿಸಿದ್ದಕ್ಕೆ ಇಂದಿಗೂ ನನಗೆ ಪಶ್ಚಾತ್ತಾಪವಿಲ್ಲ. ಹೆಣ್ಣುಮಕ್ಕಳು ಅಶಕ್ತರಲ್ಲ, ದಿಟ್ಟ ಪ್ರತಿಭಟನೆಗೆ ಹಿಂಜರಿಯುವುದಿಲ್ಲ ಎಂದು ತೋರಿಸಿದ್ದೆ. ಆದರೆ ನಾವು ಕಾಶ್ಮೀರದ ಶಾಂತಿಭಂಗ ಮಾಡಲು ಆ ರೀತಿ  ಮಾಡಿರಲಿಲ್ಲ...’

ಕೆಲವು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಮುಂದೆ ಕಾಶ್ಮೀರದ ಫುಟ್‌ಬಾಲ್‌ ಆಟಗಾರ್ತಿ ಅಫ್ಸಾನ ಆಶಿಕ್ ಅವರು ಹೇಳಿದ್ದ ದಿಟ್ಟ ನುಡಿಗಳಿವು. 21 ವರ್ಷದ ಅಫ್ಸಾನಾ ಶ್ರೀನಗರದ ಫುಟ್‌ಬಾಲ್‌ ಆಟಗಾರ್ತಿ ಮತ್ತು ಕೋಚ್ ಆಗಿದ್ದಾರೆ. ಹೋದ ಏಪ್ರಿಲ್‌ನಲ್ಲಿ ಕಾಶ್ಮೀರದಲ್ಲಿ ನಡೆದಿದ್ದ ಗಲಭೆಗಳ ಸಂದರ್ಭದಲ್ಲಿ ಅವರು ಪೊಲೀಸರತ್ತ ಕಲ್ಲು ತೂರುವಾಗ ಪತ್ರಿಕಾ ಛಾಯಾಗ್ರಾಹಕರೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿದ್ದರು. ಆ ಚಿತ್ರವು ಬಹುತೇಕ ಎಲ್ಲ ಪತ್ರಿಕೆಗಳ  ಮುಖಪುಟದಲ್ಲಿ ರಾರಾಜಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಲ್ವಾರ್ ಕಮೀಜ್ ತೊಟ್ಟಿದ್ದ ಅಫ್ಸಾನ ದುಪಟ್ಟಾದಿಂದ ಮುಖದ ಅರ್ಧ ಭಾಗ ಮುಚ್ಚಿಕೊಂಡು ರೋಷದಿಂದ ಕಲ್ಲು ತೂರುತ್ತಿದ್ದ ಚಿತ್ರ ಗಮನ ಸೆಳೆದಿತ್ತು.

ಆ ಸಂದರ್ಭದಲ್ಲಿ ಶ್ರೀನಗರದಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರ ವಿರುದ್ಧ ಕಲ್ಲು ತೂರಾಟ ಮತ್ತು ಪ್ರತಿಭಟನೆ ನಡೆಯುತ್ತಿತ್ತು. ಅಂದು ಆ ಚಿತ್ರ ನೋಡಿದವರೆಲ್ಲರೂ ಆಕೆಯನ್ನು ಗಲಭೆಕೋರರ ಗುಂಪಿನವಳು ಎಂದು ತಿಳಿದುಕೊಂಡಿದ್ದರು. ಆದರೆ ನಿಜ ಸಂಗತಿಯೇ ಬೇರೆಯಾಗಿತ್ತು. ಇದೀಗ ಅದು ಬೆಳ್ಳಿತೆರೆಯ ಮೇಲೆ ಬರುತ್ತಿದೆ. ಬಾಲಿವುಡ್ ನಿರ್ಮಾಪಕ ಮನೀಷ್ ಹರಿಶಂಕರ್‌  ಅವರು ಅಫ್ಸಾನ ಆಶಿಕ್ ಕುರಿತು ‘ಹೋಪ್ ಸೋಲೊ’ ಎಂಬ ಚಿತ್ರವನ್ನು ನಿರ್ಮಿಸಲಿದ್ದಾರೆ. ಹರಿಶಂಕರ್ ಅವರು ಈ ಹಿಂದೆ ‘ಅಜಬ್ ಪ್ರೇಮ್ ಕೀ ಗಜಬ್ ಕಹಾನಿ’ ಚಿತ್ರವನ್ನು ನಿರ್ಮಿಸಿದ್ದರು. ಇದೀಗ ಅಫ್ಸಾನ ಜೀವನಗಾಥೆಯು ಅವರ ಗಮನ ಸೆಳೆದಿದೆ. ಅವರ ಪಾತ್ರದಲ್ಲಿ ನಟಿಸಲು ನಟಿಯರಾದ ಇಲಿಯಾನಾ ಡಿಕ್ರೂಜ್ ಅಥವಾ ಆಥಿಯಾ ಶೆಟ್ಟಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಯಾರು ಈ ಅಫ್ಸಾನ: ಶ್ರೀನಗರದ ಎಂ. ಎ. ರಸ್ತೆಯಲ್ಲಿರುವ ಮಹಿಳಾ ಕಾಲೇಜಿನ ಬಿ.ಎ. ವಿದ್ಯಾರ್ಥಿನಿ ಅಫ್ಸಾನ. ಬಾಲ್ಯದಿಂದಲೂ ಓದಿಗಿಂತ ಆಟೋಟಗಳಿಗೆ ಹೆಚ್ಚು ಒತ್ತು ಕೊಟ್ಟವರು. ಕ್ರಿಕೆಟ್ ಆಟಗಾರ್ತಿಯಾಗಲು ಮಾಡಿದ್ದ ಪ್ರಯತ್ನ ಫಲಿಸಿರಲಿಲ್ಲ. ಆಗ ಫುಟ್‌ಬಾಲ್‌ ಗಮನ ಸೆಳೆದಿತ್ತು. ಆದರೆ ಅವರ ಕುಟುಂಬವು ವಿರೋಧಿಸಿತ್ತು. ‘ಹುಡುಗಿಯರು ಫುಟ್‌ಬಾಲ್‌ ಆಡಲು ಸಾಧ್ಯವಿಲ್ಲ. ನೀನು ಆಡುವುದು ಬೇಕಾಗಿಲ್ಲ’ ಎಂದು ಅಪ್ಪ–ಅಮ್ಮ ಖಡಾಖಂಡಿತವಾಗಿ ಹೇಳಿದ್ದರು.

ಆದರೆ ಅಫ್ಸಾನ ಹಟ ಬಿಡಲಿಲ್ಲ. ಫುಟ್‌ಬಾಲ್‌ ಕಲಿತರು. ಅಲ್ಲದೇ ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ತರಬೇತಿಯನ್ನೂ ಪಡೆದರು. ಕಾಶ್ಮೀರದ ಸ್ಥಳೀಯ ಟೂರ್ನಿಗಳಲ್ಲಿ ಗೋಲ್ ಕೀಪರ್  ಆಗಿ ಮಿಂಚಿದರು. ಕಿರಿಯ ಬಾಲಕಿಯರಿಗೆ ಎರಡು ವರ್ಷಗಳಿಂದ ತರಬೇತಿಯನ್ನೂ ಕೊಡುತ್ತಿದ್ದಾರೆ. ಸದ್ಯ ಕಾಶ್ಮೀರ ಮಹಿಳೆಯರ ಫುಟ್‌ಬಾಲ್‌ ತಂಡದ ನಾಯಕಿಯಾಗಿದ್ದಾರೆ. ಹೋದ ವಾರ ದೆಹಲಿಯಲ್ಲಿ ನಡೆದ ಟೂರ್ನಿಯಲ್ಲಿ ಆಡಿದ್ದರು.

ಆ ಘಟನೆ ಏನು?

ಹಗಲು ರಾತ್ರಿ ಫುಟ್‌ಬಾಲ್‌ ಕ್ರೀಡೆಯನ್ನು ಧ್ಯಾನಿಸುತ್ತಿದ್ದ ಅಫ್ಸಾನ ಕಲ್ಲು ತೂರಾಟದ ಆರೋಪಕ್ಕೆ ಗುರಿಯಾಗಿದ್ದು ತೀರಾ ಆಕಸ್ಮಿಕ. ‘ಹೋದ ಏಪ್ರಿಲ್ 24ರಂದು ನಮ್ಮ ತಂಡದ ಸಹ ಆಟಗಾರ್ತಿಯರೊಂದಿಗೆ ಅಭ್ಯಾಸ ಮುಗಿಸಿ ಮನೆಗೆ ಮರಳುತ್ತಿದ್ದೆ. ಅದೇ ಸಂದರ್ಭದಲ್ಲಿ  ವಿದ್ಯಾರ್ಥಿಗಳ ಪ್ರತಿಭಟನೆ ಭುಗಿಲೆದ್ದಿತ್ತು. ನಮ್ಮನ್ನು ನೋಡಿದ ಕೆಲವು ಪೊಲೀಸರು ತೀರಾ ಕೆಟ್ಟ ಭಾಷೆಯಲ್ಲಿ ನಿಂದಿಸಿದರು. ನಾವು ಪ್ರತಿಭಟನಾಕಾರರಲ್ಲ ಎಂದು ಹೇಳಿದರೂ ಕಿವಿಗೊಡಲಿಲ್ಲ. ನಮ್ಮ ಗುಂಪಿನ ಒಬ್ಬ ಹುಡುಗಿಯ ಕೆನ್ನೆಗೆ ಪೊಲೀಸ್ ಪೇದೆಯೊಬ್ಬ ಹೊಡೆದುಬಿಟ್ಟ. ಆಗ ನಾನು ನೀವು ಪೊಲೀಸ್ ಸಮವಸ್ತ್ರ ಧರಿಸಿದ್ದೀರಿ. ನಿಮ್ಮ ಮೇಲೆ ಕೈ ಎತ್ತಲು ಆಗುವುದಿಲ್ಲ. ಆದರೆ ಹುಡುಗಿಯರು ಅಶಕ್ತರಲ್ಲ ಎಂದು ತೋರಿಸುತ್ತೇನೆ ಎಂದು. ಕಲ್ಲೆತ್ತಿಕೊಂಡು ಬೀಸಾಡಿದ್ದೆ.  ನಮಗೆ ಆಗಿದ್ದ ಅವಮಾನಕ್ಕೆ ಪ್ರತಿಭಟನೆಯಾಗಿ ಆ ರೀತಿ ಮಾಡಿದ್ದೆ. ಬೇರೆ ಉದ್ದೇಶ ಇರಲಿಲ್ಲ’ ಎಂದು ಅಫ್ಸಾನ ಹೇಳುತ್ತಾರೆ.

‘ನಾನು ಕಾಶ್ಮೀರದ ಪ್ರತ್ಯೇಕತಾವಾದದ ವಿರೋಧಿಯಾಗಿದ್ದೇನೆ. ಪಾಕಿಸ್ತಾನಕ್ಕೆ ನಾವು ಬೇಕಿಲ್ಲ. ನಮ್ಮ ಈ ನೆಲ ಮಾತ್ರ ಬೇಕು. ಆದ್ದರಿಂದ ನಾವು ಭಾರತದಲ್ಲಿಯೇ ಇರುತ್ತೇವೆ. ಭಾರತದ ಫುಟ್‌ಬಾಲ್‌ ತಂಡದಲ್ಲಿ ಆಡುವುದು ನನ್ನ ಹೆಗ್ಗುರಿ’ ಎಂದಿದ್ದಾರೆ.

ದಶಕಗಳಿಂದ ಭಯೋತ್ಪಾದನೆ, ಪ್ರತ್ಯೇಕವಾದದ ಬೆಂಕಿಯಲ್ಲಿ ಭೂಲೋಕದ ಸ್ವರ್ಗ ಕಾಶ್ಮೀರ ಬೇಯುತ್ತಿದೆ. ಭವಿಷ್ಯದಲ್ಲಿ ಇಲ್ಲಿ ಶಾಂತಿ ನೆಲೆಸಬೇಕು ಎಂಬುದು ಆಫ್ಸಾನ ಆಶಯ. ಕೆಳಮಧ್ಯಮ ವರ್ಗದ ಕುಟುಂಬದ ಅಫ್ಸಾನ ಬಾಲ್ಯದಿಂದಲೂ ಕಾಶ್ಮೀರ ಕಣಿವೆಯ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದಾರೆ. ಜೀವ ಅಂಗೈಯಲ್ಲಿಟ್ಟುಕೊಂಡು ಓಡಾಡುವ ಅನುಭವ ಅವರಿಗೆ ಇದೆ.

ಅಂತಹ ಪರಿಸ್ಥಿತಿಯಲ್ಲಿಯೂ ಇಲ್ಲಿಯ ಕೆಲವು ಯುವಕರು ಕ್ರೀಡೆ, ಸಿನಿಮಾ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಭಾರತ ತಂಡಕ್ಕೆ ಆಡಿರುವ ಪರ್ವೇಜ್ ರಸೂಲ್, ಕಿಕ್ ಬಾಕ್ಸರ್ ತೈಜಮುಲ್ ಇಸ್ಲಾಮ್, ಬಾಲಿವುಡ್ ತಾರೆ ಝೈರಾ ವಸೀಂ ಅವರ ಸಾಲಿಗೆ ಈಗ ಅಫ್ಸಾನ ಸೇರಿದ್ದಾರೆ.

‘ಕಾಶ್ಮೀರದಲ್ಲಿ ಪ್ರತಿಭಾವಂತರು ಸಾಕಷ್ಟಿದ್ದಾರೆ. 30 ವರ್ಷದೊಳಗಿನ ಯುವಕ–ಯುವತಿಯರು ದಾರಿ ತಪ್ಪದಂತೆ ನೋಡಿಕೊಳ್ಳಲು ಕ್ರೀಡೆಯೊಂದೇ ದಾರಿ. ಉತ್ತಮ ಮೂಲಸೌಲಭ್ಯಗಳನ್ನು ಕಣಿವೆಯಲ್ಲಿ ಅಭಿವೃದ್ಧಿಪಡಿಸಬೇಕು. ಯುವಜನತೆಯು ಕ್ರೀಡೆಯಲ್ಲಿ ಭಾಗಿಯಾಗುವಂತೆ ಮಾಡಬೇಕು. ಅದರಲ್ಲಿ ಸಾಧನೆ ಮಾಡಿ ದೊಡ್ಡ ಸ್ಥಾನ ತಲುಪಿದವರು ಮತ್ತಷ್ಟು ಜನರಿಗೆ ಸ್ಫೂರ್ತಿಯಾಗುತ್ತಾರೆ. ಬಂದೂಕು, ಕಲ್ಲುಗಳಿಂದ ಸಿಗದ ಸ್ವಾತಂತ್ರ್ಯ ಮತ್ತು ಸಮಾನತೆ  ಉತ್ತಮ ಸಾಧನೆಗಳಿಂದ ಖಂಡಿತವಾಗಿಯೂ ಸಿಗುತ್ತದೆ ಎನ್ನವುದು ನನ್ನ ನಂಬಿಕೆ. ನಮ್ಮ ಒಳ್ಳೆಯ ಕೆಲಸಕ್ಕೆ ಬದ್ಧರಾಗಿರಬೇಕು. ನಮ್ಮ ಗುರಿ ಸ್ಪಷ್ಟವಾಗಿರಬೇಕು’ ಎಂದು ಅಫ್ಸಾನ ಹೇಳುತ್ತಾರೆ.

‘ಹೋಪ್ ಸೋಲೊ ಪ್ರಸಿದ್ಧ ಫುಟ್‌ಬಾಲ್‌ ಆಟಗಾರ ಒಲಿಂಪಿಯನ್ ಪದಕ ವಿಜೇತ ಆಟಗಾರ. ಅವರನ್ನೇ ಅಫ್ಸಾನ ಅನುಕರಿಸುತ್ತಾರೆ. ಅಲ್ಲದೇ ಕಾಶ್ಮೀರದ ಹೋಪ್ (ವಿಶ್ವಾಸ) ಆಗಿ ಹೊರಹೊಮ್ಮುತ್ತಿರುವ ಅಫ್ಸಾನ ಅವರ ಕುರಿತ ಸಿನೆಮಾಕ್ಕೆ ಅದೇ ಹೆಸರು ಕೂಡ ಸೂಕ್ತ’ ಎಂದು ಹರಿಶಂಕರ್ ಈಚೆಗೆ ವೆಬ್ ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಕಾಶ್ಮೀರದ ಪರಿಸ್ಥಿತಿ ಮತ್ತು ದೇಶದ ಮಹಿಳೆಯರ ಅಸ್ಮಿತೆಯ ಪ್ರತೀಕವಾಗಿ ಅಫ್ಸಾನ ಈಗ ರೂಪುಗೊಳ್ಳುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.