ಶುಕ್ರವಾರ, ಮಾರ್ಚ್ 5, 2021
30 °C

ಹೆಣ ಹೊರುವವರಿಗೆ ಹೆಣವಾಗುವ ಭಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಣ ಹೊರುವವರಿಗೆ ಹೆಣವಾಗುವ ಭಯ!

ಯಳಂದೂರು: ಈ ಊರಿನಲ್ಲಿ ರುದ್ರಭೂಮಿಗೆ ಹೆಣ ಸಾಗಿಸಲು ನದಿ ದಾಟುವುದು ಅನಿವಾರ್ಯ. ಸಣ್ಣ ಬಿದಿರಿನ ಸೇತುವೆ ಇದ್ದರೂ ಪ್ರಯೋಜನವಿಲ್ಲ. ಶವ ಸಂಸ್ಕಾರಕ್ಕೆ ನದಿಯ ಎದೆಮಟ್ಟದ ನೀರಿನಲ್ಲೇ ಸಾಗಬೇಕು.

ಇದು ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದ ಜನರ ಸ್ಥಿತಿ. ಕೊಳ್ಳೇಗಾಲ ಶಾಸಕ ಎಸ್‌.ಜಯಣ್ಣ ಅವರ ಸ್ವಗ್ರಾಮ. ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಶವ ಸಂಸ್ಕಾರಕ್ಕೆ ಸುವರ್ಣಾವತಿ ನದಿ ಪಕ್ಕದಲ್ಲಿರುವ ಖಾಸಗಿ ಜಮೀನು ಆಶ್ರಯಿಸಬೇಕಿದೆ.

10 ವರ್ಷಗಳಿಂದಲೂ ನದಿ ತುಂಬಿ ಹರಿಯದ ಪರಿಣಾಮ ಇಷ್ಟು ದಿನ ತೊಂದರೆಯಾಗಿರಲಿಲ್ಲ. ಕೆಲ ತಿಂಗಳ ಹಿಂದೆ ಉತ್ತಮ ಮಳೆಯಾದ್ದರಿಂದ ನದಿ ಹರಿಯುತ್ತಿದೆ. ಜೊತೆಗೆ ಕಾಲುವೆ ನೀರನ್ನು ನದಿಗೆ ಬಿಟ್ಟಿರುವುದರಿಂದ ನದಿ ನೀರಿನ ಮಟ್ಟ ಹೆಚ್ಚಾಗಿದೆ.

ಈಚೆಗೆ ಗ್ರಾಮದ ಮೇದಾರ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಶವ ಸಂಸ್ಕಾರಕ್ಕೆ ನದಿ ದಾಟುವ ಸಲುವಾಗಿ ಮರದ ಬೊಂಬು ಬಳಸಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಯಿತು. ಸೇತುವೆ ಮೇಲೆ ಹೆಣ ಸಾಗಿಸುವಾಗ ಮರದ ಸೇತುವೆ ಮುರಿಯಿತು. ಆದರೂ, ಶವ ಜಾರಿ ಬೀಳುವುದನ್ನು ತಪ್ಪಿಸಲಾಯಿತು. ಇಷ್ಟೆಲ್ಲಾ ಪ್ರಾಯಾಸದ ನಡುವೆಯೂ ಶವಸಂಸ್ಕಾರ ಮಾಡಿ ಮುಗಿಸಲಾಯಿತು ಎನ್ನುತ್ತಾರೆ ಜನಾಂಗದ ಸಂತ್ರಸ್ತರು.

ಮಾಂಬಳ್ಳಿ ಗ್ರಾಮದಲ್ಲಿ ಅಧಿಕ ಸಂಖ್ಯೆಯಲ್ಲಿ ದಲಿತರು ಹಾಗೂ ಮುಸ್ಲಿಮರು ವಾಸವಾಗಿದ್ದಾರೆ. ಇತರೆ ಜನಾಂಗದವರೂ ನೆಲೆಸಿದ್ದಾರೆ. ಆದರೆ, ಮುಸ್ಲಿಮರನ್ನು ಹೊರತುಪಡಿಸಿ ಇತರರಿಗೆ ಸ್ಮಶಾನವೇ ಇಲ್ಲ. ದಲಿತ ಜನಾಂಗದ ರುದ್ರಭೂಮಿಯ ಜಾಗ ಕೋರ್ಟ್‌ ಮೆಟ್ಟಿಲೇರಿದೆ. ಆದರೆ ಪರ್ಯಾಯ ಸ್ಮಶಾನಕ್ಕೆ ಸರ್ಕಾರಿ ಜಾಗವನ್ನು ನೀಡಿ ಎಂಬ ಕೂಗು ಹತ್ತಾರು ವರ್ಷಗಳಿಂದ ಯಾರ ಕಿವಿಗೂ ಮುಟ್ಟಿಲ್ಲ ಎನ್ನುತ್ತಾರೆ ಇಲ್ಲಿನ ನಾಗರಿಕರಾದ ಶಿವಕುಮಾರ್, ನಂಜುಂಡಸ್ವಾಮಿ, ನಾಗ, ಶಿವಮಲ್ಲು.

ಮೂವರು ಶಾಸಕರನ್ನು ನೀಡಿದ ಗ್ರಾಮ: ಮಾಂಬಳ್ಳಿ ಗ್ರಾಮದ ಕೆಂಪಮ್ಮ, ಸಿದ್ದಮಾದಯ್ಯ, ಜಯಣ್ಣ ಅವರು ಕೊಳ್ಳೇಗಾಲ ಕ್ಷೇತ್ರ ಪ್ರತಿನಿಧಿಸಿದವರು. ಜಯಣ್ಣ ಹಾಲಿ ಶಾಸಕರು. ಆದರೂ, ಗ್ರಾಮಕ್ಕೆ ಸ್ಮಶಾನ ಹಾಗೂ ಸುವರ್ಣಾವತಿ ನದಿಗೆ ಸೇತುವೆ ನಿರ್ಮಿಸುವ ವ್ಯವಸ್ಥೆ ಮಾಡುವಲ್ಲಿ ಆಸಕ್ತಿ ತೋರಿಲ್ಲ ಎಂದು ಅವರು ಆರೋಪಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.