7

ನಾಲಿಗೆಗೆ ರುಚಿ, ಮನಸ್ಸಿಗೆ ಹಿತ

Published:
Updated:
ನಾಲಿಗೆಗೆ ರುಚಿ, ಮನಸ್ಸಿಗೆ ಹಿತ

ಜಿಟಿ ಜಿಟಿ ಮಳೆ, ಚುಮು ಚುಮು ಚಳಿ ಇದ್ದರೆ ಕೊಟ್ಟೂರಿನ ಕಾರ, ಮಂಡಕ್ಕಿ ಮೆಣಸಿನಕಾಯಿ (ಮಿರ್ಚಿ) ಅಂಗಡಿಗಳು ಗಿರಾಕಿಗಳಿಂದ ತುಂಬಿರುತ್ತವೆ. ‘ನನಗೆ ಐದು ಮೆಣಸಿಕಾಯಿ ಮಂಡಕ್ಕಿ’, ‘ಹತ್ತು ಮೆಣಸಿನಕಾಯಿ ಕಾರ ಮಂಡಕ್ಕಿ ನನಗೆ’, ಅರ್ಜಂಟ್ ಬಾಂಡಲಿಯಲ್ಲಿ ಬೇಯುತ್ತಿರುವ ಎಲ್ಲಾ ಮೆಣಸಿನಕಾಯಿಗಳನ್ನು ಪಾರ್ಸಲ್ ಮಾಡಿ’ ಹೀಗೆ ಹತ್ತಾರು ಜನರು ಏಕಕಾಲಕ್ಕೆ ಕೇಳುತ್ತಿದ್ದರೆ ಅಂಗಡಿಯವನಿಗೆ ಎರಡು ಕೈ ಸಾಲದು.

ಎಲ್ಲಾ ಗಿರಾಕಿಗಳನ್ನು ಸಂಭಾಳಿಸಲು ಅಂಗಡಿಯವ ಸುಸ್ತಾಗುತ್ತಾನೆ. ಕಾರ ಮಂಡಕ್ಕಿ ಜತೆಗೆ ಮೆಣಸಿನಕಾಯಿ ಮೆಲ್ಲುತ್ತಿದ್ದರೆ ಆ ಮಜಾನೇ ಬೇರೆ, ನಾಲಿಗೆ ಚುರ್‌ಗುಟ್ಟಿದರೂ ಮನಸ್ಸಿಗೇನೋ ಹಿತ. ಇಲ್ಲಿಯ ಜನ ಸಿಹಿಗಿಂತ ಕಾರ ಪ್ರಿಯರು, ಹೊಲಗಳಲ್ಲಿ ದುಡಿದ ರೈತರು, ಕಾರ್ಮಿಕರಿಗೆ ಕಾರ, ಮಂಡಕ್ಕಿ, ಮೆಣಸಿನಕಾಯಿ ಅಂದ್ರೆ ಆಪ್ತ ತಿಂಡಿ, ಕಾರ, ಮಂಡಕ್ಕಿ ಮೆಣಸಿನಕಾಯಿ ತಿಂದು ಚಂಬು ನೀರು ಕುಡಿದರೆಂದರೆ, ಆವೊತ್ತಿನ ಊಟ ಮುಗಿದಂತೆ.

ಬಡವರಿಗಿದು ಮೃಷ್ಟಾನ್ನ. ಮೆಣಸಿನಕಾಯಿ ಅಂಗಡಿಗಳು, ಹೋಟೆಲ್‌ನಂತೆ ವಿಶಾಲವಾಗಿರುವುದಿಲ್ಲ. ಸಣ್ಣ ರೂಮ್‌ ಆದರೂ ಸಾಕು, ರೂಮ್‌ ಬಾಗಿಲು ಮುಂದೆ ದೊಡ್ಡದಾದ ಮಣ್ಣಿನ ಒಲೆ ಸಿದ್ದಪಡಿಸುತ್ತಾರೆ. ಆದರ ಮೇಲೆ ಬಾಂಡಲಿ ಇಟ್ಟು ಒಳ್ಳೆಣ್ಣೆ(ಶೇಂಗಾ ಎಣ್ಣೆ) ಹಾಕುತ್ತಾರೆ. ಕಟ್ಟಿಗೆ ಇಟ್ಟು ಒಲೆ ಹಚ್ಚುತ್ತಾರೆ. ಇಲ್ಲಿ ಗ್ಯಾಸ್ ಬಳಕೆ ಕಮ್ಮಿ, ಕಡ್ಲೆ ಬೆಳೆಯನ್ನು ಶುದ್ಧಗೊಳಿಸಿ, ಗಿರಣಿಗೆ ಹಾಕಿಸಿ ಕಡ್ಲಿ ಹಿಟ್ಟನ್ನು ಮೊದಲೆ ಇಟ್ಟುಕೊಂಡಿರುತ್ತಾರೆ.

ಬಾಂಡಲಿ ತುಂಬುವಷ್ಟು ಗೇಣುದ್ದ ಹಸಿರು ಮೆಣಸಿನಕಾಯಿಯ ಹೊಟ್ಟೆಯನ್ನು ಸೀಳಿ ಮಿಶ್ರಮಾಡಿದ ಉಪ್ಪು ಜೀರಿಗೆ ತುಂಬುತ್ತಾರೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುವುದಲ್ಲದೇ, ನಾಲಿಗೆಗೂ ರುಚಿ, ಕಡಾಯಿಯಂತ ಪಾತ್ರೆಯಲ್ಲಿ ನೀರಿನೊಂದಿಗೆ ಕಡಲೆಹಿಟ್ಟನ್ನು ಕಲಸುತ್ತಾರೆ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕುತ್ತಾರೆ. ಎಣ್ಣೆ ಕಾದಿರುವುದನ್ನು ಪರೀಕ್ಷಿಸಿ ಉಪ್ಪು ಜೀರಿಗೆ ತುಂಬಿದ ಹಸಿರು ಮೆಣಸಿನಕಾಯಿಯನ್ನು ನೀರು ಹಾಕಿ, ಕಲಸಿದ ಕಡಲೆಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಒಂದೊಂದೇ ಇಳಿಬಿಡುತ್ತಾರೆ.

ಹದವಾಗಿ ಬೆಂದ ಮೆಣಸಿನಕಾಯಿಗಳನ್ನು ಜಾಲಿಸೌಟಲ್ಲಿ ಹೊರತೆಗೆಯುತ್ತಾರೆ. ಕಡಲೆಹಿಟ್ಟಿನಿಂದ ತಯಾರಿಸಿದ ಬುಗ್ಗಿ, ಡಾಣಿ, ಸಿದ್ಧವಾಗಿರುತ್ತದೆ. ಇಲ್ಲಿ ಮಂಡಕ್ಕಿ ಮುಖ್ಯ. ದಾವಣಗೆರೆಯಿಂದ ಇಲ್ಲಿಗೆ ಮಂಡಕ್ಕಿ ಸರಬರಾಜು ಆಗುತ್ತದೆ. ಸ್ಥಳೀಯವಾಗಿಯೂ ಮಂಡಕ್ಕಿ ಸಿಗುತ್ತದೆ. ಇಲ್ಲಿನ ಮಂಡಕ್ಕಿಯೇ ಒಳ್ಳೆ ರುಚಿ. ಹೋಟಲ್‌ನಂತೆ ಈ ಅಂಗಡಿಗಳಲ್ಲಿ ಪ್ಲೇಟ್‌ಗಳಿಲ್ಲ. ಹಳೇ ನ್ಯೂಸ್ ಪೇಪರ್ ಹರಿದು ಅದರಲ್ಲಿ ಮಂಡಕ್ಕಿ ಮೆಣನಸಿಕಾಯಿ, ಕಾರ, ದಾಣಿ ಎರಡು ತುಂಡು ಈರುಳ್ಳಿ ತುಣುಕು ಸೇರಿಸಿ ನಿಮ್ಮ ಕೈಗಿಡುತ್ತಾರೆ.

ಕೇಲವು ಅಂಗಡಿಗಳಲ್ಲಿ ಒಂದೆರಡು ಬೆಂಚ್ ಅಥವಾ ಕುರ್ಚಿಗಳಿರುತ್ತವೆ ಇನ್ನೂ ಕೆಲವರಲ್ಲಿ ನೆಲಕ್ಕೆ ಚಾಪೆ ಹಾಸಿರುತ್ತಾರೆ. ನಾಲ್ಕೈದು ಜನರು ದೊಡ್ಡದಾದ ನ್ಯೂಸ್ ಪೇಪರ್ ಹಾಸಿ, ಅದರಲ್ಲಿ ಕಾರ, ಮಂಡಕ್ಕಿ ಮೆಣಸಿನಕಾಯಿಗಳನ್ನು ಹಾಕಿಸಿ ಸುತ್ತ ಕುಳಿತುಕೊಂಡು ತಿನ್ನುವುದುಂಟು, ಇಲ್ಲಿ ರುಚಿಯಷ್ಟೇ ಮುಖ್ಯ, ಯಾವುದೇ ಬೇಧವಿಲ್ಲ. ರೈತರು, ಕಾರ್ಮಿಕರೊಂದಿಗೆ ಚಾಪೆಯಲ್ಲಿ ಕುಳಿತು ಇಂಜಿನಿಯರ‍್ಸ್, ಡಾಕ್ಟರ್‌ಗಳು, ವಕೀಲರು, ಕಾರ– ಮಂಡಕ್ಕಿಯನ್ನು ಚಪ್ಪರಿಸುತ್ತಾರೆ.

ಇಲ್ಲಿ ಎಲ್ಲ ವರ್ಗ, ಸಮುದಾಯದವರನ್ನು ಒಂದಡೆ ಕೂಡಿಸಿ ಹೊಟ್ಟೆಯನ್ನು ತುಂಬಿಸುವ ಶಕ್ತಿ ಈ ಮಂಡಕ್ಕಿ ಮೆಣಸಿನಕಾಯಿಗಿದೆ. ರಾಜಕೀಯ ಸಭೆಗಳಿದ್ದಾಗ ಒಂದು ಚೀಲ ಮಂಡಕ್ಕಿ, ಕಾರ, ಮೆಣಸಿನಕಾಯಿ ತರಿಸಿ ಎಲ್ಲರೂ ಕುಳಿತು ತಿನ್ನುವುದೇ ಒಂದು ಸಂಭ್ರಮ. ಹೋಟಲ್ ತಿಂಡಿಗಿಂತ ಬೆಲೆಯೂ ಕಮ್ಮಿ .

ಇದ್ದಕ್ಕಿದ್ದಂತೆ ಅತಿಥಿಗಳು ಮನೆಗೆ ಬಂದುಬಿಟ್ಟರೆ ಮನೆಯೊಡತಿ ಸ್ವಲ್ಪವೂ ವಿಚಲಿತರಾಗದೆ ಅಂಗಡಿಯಿಂದ ಕಾರ, ಮಂಡಕ್ಕಿ, ಮೆಣಸಿನಕಾಯಿ ತರಸಿ ಮುಂದಿಡುತ್ತಾರೆ. ಇನ್ನೂ ಗೃಹಪ್ರವೇಶ, ನಾಮಕರಣ, ಮದುವೆಯಂತಹ ಶುಭ ಕಾರ್ಯಗಳಲ್ಲಿ ಒಂದೆರಡು ಸ್ವೀಟ್ಸ್ ಇಲ್ಲದಿದ್ದರೂ ಚಿಂತೆಯಿಲ್ಲ, ಉಪ್ಪು, ಜೀರಿಗೆ ತುಂಬಿದ ಬಿಸಿ ಬಿಸಿ ಮೆಣಸಿನಕಾಯಿ (ಮಿರ್ಚಿ) ಇರಲೇಬೇಕು.

ಚಿತ್ರದುರ್ಗ, ದಾವಣಗೆರೆ, ರಾಣೆಬೆನ್ನೂರು, ಹರಿಹರ, ಶಿವಮೊಗ್ಗ, ಗದಗ, ಹಾವೇರಿ ಸೇರಿದಂತೆ ಮಧ್ಯಕರ್ನಾಟಕದಿಂದ ಇಲ್ಲಿನ ಕೊಟ್ಟೂರೇಶ್ವರ ಸ್ವಾಮಿ ದರ್ಶನಕ್ಕೆ ಬರುವ ಭಕ್ತರು ಪ್ರವಾಸಿಗಳು ಸ್ವಾಮಿಯ ದರ್ಶನದ ತರವಾಯ ಮಂಡಕ್ಕಿ, ಮೆಣಸಿನಕಾಯಿ ಅಂಗಡಿಗೆ ಲಗ್ಗೆಯಿಡುತ್ತಾರೆ ಕಾರ, ಮಂಡಕ್ಕಿ, ಮೆಣಸಿನಕಾಯಿ ಚಪ್ಪರಿಸಿ ಪಾರ್ಸಲ್‌ ತಗೊಂಡ ಮೇಲೆಯೇ ಪ್ರಯಾಣ ಆರಂಭ.

ಕೊಟ್ಟೂರಿಗೆ ಹೋಗ್ತಾ ಇದ್ದೀವಿ, ಇಲ್ಲ ಕೊಟ್ಟೂರಿನಿಂದ ಬರ‍್ತಾ ಇದ್ದೀವಿ ಎಂಬ ಮಾತು ಕಿವಿಗೆ ಬದ್ರೆ ಸಾಕು ಕಾರ, ಮಂಡಕ್ಕಿ, ಮೆಣಸಿನಕಾಯಿ ಮರೆಯದೆ ತನ್ನಿ ಎಂದು ಹೇಳುವುದನ್ನು ಮರೆಯುವುದಿಲ್ಲ. ಇಲ್ಲಿ ಸುತ್ತಮುತ್ತಲ ಹಳ್ಳಿಗರು, ಕೊಟ್ಟೂರಿಗೆ ಬಂದರೆ ಒಂದೆರಡು ಕೆಲಸಗಳು ಆಗದಿದ್ದರೂ ಪರವಾಗಿಲ್ಲ ಮನೆಗೆ ಮಂಡಕ್ಕಿ, ಮೆಣಸಿನಕಾಯಿ ತೆಗೆದುಕೊಂಡು ಹೋಗುವುದನ್ನು ಮರೆಯುವುದಿಲ್ಲ.

ಕೊಟ್ಟೂರೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಪ್ರತಿ ಅಮವ್ಯಾಸೆಯಲ್ಲಿ ಈ ಅಂಗಡಿಗಳು ಗಿರಾಕಿಗಳಿಂದ ತುಂಬಿರುತ್ತವೆ. ಇನ್ನು ಕೊಟ್ಟೂರು ಜಾತ್ರೆಯಲ್ಲಿ ಈ ಕಾರ, ಮಂಡಕ್ಕಿ, ಮೆಣಸಿನಕಾಯಿ ಅಂಗಡಿಗಳದ್ದೇ ಕಾರುಬಾರು. ಬೆಳಿಗ್ಗೆ, ತಿಂಡಿಗೆ, ಮಧ್ಯಾಹ್ನ ಊಟಕ್ಕೆ, ಸಂಜೆಯ ಉಪಾಹಾರಕ್ಕೆ ಉಪ್ಪು, ಜೀರಿಗೆ ತುಂಬಿದ ಮೆಣಸಿನಕಾಯಿ ಇರಲೇಬೇಕು.

ಇಲ್ಲಿಯ ಜನರ ನಿತ್ಯಜೀವನ ಕಾರ, ಮಂಡಕ್ಕಿ, ಮೆಣಸಿನಕಾಯಿಯೊಂದಿಗೆ ಸಮ್ಮಿಳಿತವಾಗಿದೆ. ಮದ್ದೂರಿಗೆ ಮದ್ದೂರು ವಡೆ, ದಾವಣಗೆರೆಗೆ ಬೆಣ್ಣೆದೋಸೆ, ಧಾರವಾಡಕ್ಕೆ ಪೇಡಾ ಹೇಗೋ ಕೊಟ್ಟೂರಿಗೆ ಕಾರ, ಮಂಡಕ್ಕಿ, ಮೆಣಸಿನಕಾಯಿ ಪ್ರಸಿದ್ಧ ಎನ್ನುವ ಖ್ಯಾತಿ ತಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry