7

ಸಮಸ್ಯೆಗಳತ್ತ ಸಿನಿಮಾ ಕಣ್ಣು

Published:
Updated:
ಸಮಸ್ಯೆಗಳತ್ತ ಸಿನಿಮಾ ಕಣ್ಣು

ಪರ್ಯಾಯ ಸಿನಿಮಾಗಳ ಯಶಸ್ವಿ ನಿರ್ದೇಶಕ ಆಡೂರ್‌ ಗೋಪಾಲಕೃಷ್ಣನ್‌ ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುತ್ತ ‘ಪರ್ಯಾಯ ಸಿನಿಮಾಗಳ ಕಾಲ ಮುಗಿಯುತ್ತ ಬಂದಿದೆ. 1970ರ ದಶಕದಲ್ಲಿ ಕೇರಳದಲ್ಲಿ ಪರ್ಯಾಯ ಸಿನಿಮಾಗಳನ್ನು ನೋಡಲು ಜನ ಸಾಲುಗಟ್ಟಿ ನಿಲ್ಲುತ್ತಿದ್ದರು! ಈಗ ಈ ಚಿತ್ರಗಳ ಪೋಸ್ಟರ್‌ ಕಂಡರೆ ಸಾಕು ಓಡಿ ಹೋಗುತ್ತಾರೆ’ ಎಂದಿದ್ದರು.

ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ‘ಪರ್ಯಾಯ ಸಿನಿಮಾಗಳು ಬೆಲೆ ಬಾಳುವ ಆಭರಣಗಳಿದ್ದಂತೆ. ಹಬ್ಬ, ಉತ್ಸವಗಳ ಸಂದರ್ಭಗಳಲ್ಲಿ ಮಾತ್ರ ಧರಿಸಿ ನಂತರ ಅವನ್ನು ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳುವಂತೆ ಆಗಿದೆ’ ಎಂದು ಹಿಂದೊಮ್ಮೆ ಹೇಳಿದ್ದರು.

ಕನ್ನಡ ಸೇರಿದಂತೆ ಇತ್ತೀಚಿನ ಪರ್ಯಾಯ ಸಿನಿಮಾಗಳನ್ನು ನೋಡಿದರೆ ಆಡೂರ್‌ ಮತ್ತು ಕಾಸರವಳ್ಳಿ ಅವರ ಮಾತು ನಿಜವೆನ್ನಿಸುತ್ತದೆ. ಈಗ ಬರುತ್ತಿರುವ ಪರ್ಯಾಯ ಸಿನಿಮಾಗಳು ಕಮರ್ಷಿಯಲ್‌ ಸಿನಿಮಾಗಳ ಪೈಪೋಟಿ ಎದುರು ನಿಲ್ಲುತ್ತಿಲ್ಲ. ಅವು ಸಾರ್ವಜನಿಕ ವೀಕ್ಷಣೆಗೆ ಬಿಡುಗಡೆ ಆಗುತ್ತಿಲ್ಲ. ಅವಕ್ಕೆ ಹೂಡಿದ ಬಂಡವಾಳ ಹಿಂಬರುವುದಿಲ್ಲ. ಅವು ಚಿತ್ರೋತ್ಸವಗಳಿಗೆ ಸೀಮಿತ. ಹೆಚ್ಚೆಂದರೆ ಅವಕ್ಕೆ ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳು ಬರಬಹುದು. ಆದರೆ, ಪರ್ಯಾಯ ಸಿನಿಮಾಗಳಿಗೆ ಮತ್ತು ಅವುಗಳ ನಿರ್ದೇಶಕರಿಗೆ ಮಾಧ್ಯಮಗಳಲ್ಲಿ ಹೇರಳ ಪ್ರಚಾರ ಸಿಗುತ್ತದೆ.

ಆದರೆ, ಮರಾಠಿ ಭಾಷೆಯ ಪರ್ಯಾಯ ಸಿನಿಮಾಗಳ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಕಳೆದ ದಶಕದ ಅವಧಿಯಲ್ಲಿ ಪರ್ಯಾಯ ಸಿನಿಮಾ ಸೇರಿದಂತೆ ಮರಾಠಿ ಸಿನಿಮಾ ರಂಗ ಚೇತರಿಸಿಕೊಂಡಿದೆ. ಪರ್ಯಾಯ ಸಿನಿಮಾಗಳಿಗೆ ಜನರ ಪ್ರೋತ್ಸಾಹ ಸಿಗುತ್ತಿದೆ. ಅವು ಚಿತ್ರೋತ್ಸವಗಳಿಗಷ್ಟೇ ಸೀಮಿತವಾಗಿಲ್ಲ.

ಮಲ್ಟಿಪ್ಲೆಕ್ಸ್‌ ಚಿತ್ರ ಮಂದಿರಗಳಲ್ಲಿ ಒಂದು ತೆರೆಯನ್ನು ಮರಾಠಿ ಸಿನಿಮಾಗಳಿಗೆ ಮೀಸಲಿಡಬೇಕೆಂಬ ಅಲ್ಲಿನ ಸರ್ಕಾರಿ ನಿಯಮ ಪರ್ಯಾಯ ಸಿನಿಮಾಗಳಿಗೆ ಪೂರಕವಾಗಿದೆ. ಈ ವರ್ಷ ಮರಾಠಿಯಲ್ಲಿ ಹತ್ತಕ್ಕೂ ಹೆಚ್ಚು ಪರ್ಯಾಯ ಸಿನಿಮಾಗಳು ನಿರ್ಮಾಣವಾಗಿವೆ. ಅವನ್ನೆಲ್ಲ ಜನ ನೋಡುತ್ತಾರೆ. ಪರ್ಯಾಯ ಸಿನಿಮಾಗಳ ಕಾಲ ಮುಗಿಯಿತು ಎನ್ನುವಂತಹ ಈ ಸಂದರ್ಭದಲ್ಲಿ ಇದು ಆಶಾದಾಯಕ ಬೆಳವಣಿಗೆ.

ಮರಾಠಿ ಸಂಗೀತ, ರಂಗಭೂಮಿ, ಸಿನಿಮಾ ಇತ್ಯಾದಿಗಳಿಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡುವ ಮೂಲಕ ಅನ್ಯ ಭಾಷೆ, ಸಂಸ್ಕೃತಿಗಳ ದಾಳಿಯನ್ನು ಮರಾಠಿಗರು ಸ್ವಲ್ಪಮಟ್ಟಿಗೆ ತಡೆಗಟ್ಟಿದ್ದಾರೆ. ಬಾಲಿವುಡ್‌ ಸಿನಿಮಾಗಳ ಹಾವಳಿ ನಡುವೆಯೂ ಮರಾಠಿ ಸಿನಿಮಾಗಳು ಸದ್ದು ಮಾಡುತ್ತಿವೆ.–‘ಕಚ್ಚಾ ಲಿಂಬು’ ಚಿತ್ರದಲ್ಲಿ ಮನ್‌ಮೀತ್‌ ಪ್ರೇಮ್‌ ಮತ್ತು ರವಿ ಜಾಧವ್

ಈಚೆಗೆ ಪಣಜಿಯಲ್ಲಿ ನಡೆದ 48ನೆಯ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ಪ್ರದರ್ಶನಕ್ಕೆ 26 ಸಿನಿಮಾಗಳು ಆಯ್ಕೆಯಾಗಿದ್ದವು. ಈ ಪೈಕಿ ಕಳೆದ ವರ್ಷದ ನಾಲ್ಕು ಸಿನಿಮಾಗಳಿದ್ದವು. 26ರಲ್ಲಿ 9 ಮರಾಠಿ ಸಿನಿಮಾಗಳಿದ್ದವು. ಕೊನೆಯ ಕ್ಷಣದಲ್ಲಿ ಎರಡು ಸಿನಿಮಾಗಳನ್ನು ಕೈಬಿಡಲಾಯಿತು. ಅದರಲ್ಲಿ ಒಂದು ಮರಾಠಿಯದು. ಈ ವಿಭಾಗಕ್ಕೆ 9 ಮರಾಠಿ ಸಿನಿಮಾಗಳು ಆಯ್ಕೆಯಾದದ್ದು ಹೇಗೆ? ಆಯ್ಕೆ ಸಮಿತಿ ಮರಾಠಿ ಲಾಬಿಗೆ ಮಣಿದಿರಬಹುದೇ ಇತ್ಯಾದಿ ಪ್ರಶ್ನೆಗಳು ಕೇಳಿ ಬಂದಿದ್ದವು.

ಈ ಸಿನಿಮಾಗಳನ್ನು ನೋಡಿದ ಮೇಲೆ ಇಂಥ ಪ್ರಶ್ನೆಗಳನ್ನು ಯಾರೂ ಕೇಳಲಿಲ್ಲ. ಪ್ರದರ್ಶನವಾದ ಎಂಟು ಮರಾಠಿ ಸಿನಿಮಾಗಳ ಪೈಕಿ ಚಿತ್ರೋತ್ಸವದ ಪ್ರತಿನಿಧಿಗಳ ಗಮನವನ್ನು ಹೆಚ್ಚಾಗಿ ಸೆಳೆದದ್ದು ‘ಕಚ್ಚಾ ಲಿಂಬು’, ‘ಪಿಂಪಾಲ್‌’ ಮತ್ತು ‘ಕ್ಷಿತಿಜ’ ಸಿನಿಮಾಗಳು. ಕಚ್ಚಾ ಲಿಂಬು ವಯಸ್ಸಿಗೆ ಬಂದ ಬುದ್ಧಿಮಾಂದ್ಯ ಮಗನನ್ನು ನಿಯಂತ್ರಿಸಲು ಹೆಣಗುವ ಉದ್ಯೋಗಸ್ಥ ದಂಪತಿಯ ಪಡಿಪಾಟಲುಗಳನ್ನು ಕಟ್ಟಿಕೊಡುವ ಕಪ್ಪು ಬಿಳುಪು ಸಿನಿಮಾ.

1980ರ ದಶಕದಲ್ಲಿ ಪುಣೆಯಲ್ಲಿ ನಡೆದ ನೈಜ ಘಟನೆ ಆಧರಿಸಿದ್ದು. ಬುದ್ಧಿಮಾಂದ್ಯ ಮಕ್ಕಳನ್ನು ಕುರಿತ ಸಿನಿಮಾಗಳು ಎಲ್ಲ ಭಾಷೆಗಳಲ್ಲೂ ಬಂದಿವೆ. ಆದರೆ ‘ಕಚ್ಚಾ ಲಿಂಬು’ ಇಂತಹ ಸಿನಿಮಾಗಳ ಸಾಲಿನಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತದೆ.

ಗಂಡನಿಗೆ ರಾತ್ರಿ ಪಾಳಿ ಕೆಲಸ. ಹೆಂಡತಿಗೆ ಹಗಲು ದುಡಿತ. ಮಗ (ಬಚ್ಚು) ಬುದ್ಧಿಮಾಂದ್ಯನಷ್ಟೇ ಅಲ್ಲ, ದಡೂತಿ ಯುವಕ. ಅವನಲ್ಲಿ ದೈಹಿಕ ಸಹಜ ಆಸೆಗಳು ಪುಟಿಯುತ್ತಿವೆ. ಅವನ್ನು ಹತ್ತಿಕ್ಕಲಾಗದೆ ಕೊನೆಗೆ ತಾಯಿಯೊಂದಿಗೆ ಮಲಗಲು ಹವಣಿಸುತ್ತಾನೆ. ತಾಯಿ, ಮಗನ ಸಂಬಂಧದ ಅರಿವು ಅವನಿಗಿಲ್ಲ.

ಮಗ, ತಾಯಿಯ ಮೇಲೆ ಅತ್ಯಾಚಾರ ನಡೆಸುವುದನ್ನು ಅಪ್ಪ ತಪ್ಪಿಸುತ್ತಾನೆ. ಕೊನೆಗೆ ಮಗನ ಬಯಕೆ ಶಮನಗೊಳಿಸಲು ಅಪ್ಪ ವೇಶ್ಯೆಯೊಬ್ಬಳನ್ನು ಮನೆಗೆ ಕರೆ ತರುತ್ತಾನೆ! ತೋಚಿದ ಪ್ರಯತ್ನ ಮಾಡುತ್ತಾನೆ. ಹತಾಶ ಅಪ್ಪ ಕೊನೆಗೆ ಮಗನ ಸಾವು ಈ ಸಮಸ್ಯೆಗೆ ಪರಿಹಾರ ಎಂದು ಯೋಚಿಸುತ್ತಾನೆ. ಅವನ ಹೆಂಡತಿ ಸ್ವಂತ ಸುಖದ ಬಗ್ಗೆ ಯೋಚಿಸುತ್ತಾಳೆ. ಮಗನ ಆರೈಕೆಯಲ್ಲಿ ನೀವಿಬ್ಬರೂ ನಿಮ್ಮ ಸುಖ ಮರೆತಿದ್ದೀರಿ ಎಂದು ಅವಳ ಕಚೇರಿಯ ಬಾಸ್‌ ಸಹಾನುಭೂತಿಯ ಮಾತುಗಳನ್ನಾಡುತ್ತ ಅವಳು ಹಾಗೆ ಯೋಚಿಸಲು ಪ್ರೇರೇಪಿಸುತ್ತಾನೆ.

ಕಚೇರಿ ಕೆಲಸದ ನೆಪದಲ್ಲಿ ಬಾಸ್‌ ಜತೆ ಪ್ರವಾಸಿ ತಾಣವೊಂದಕ್ಕೆ ಹೊರಟು ನಿಲ್ಲುತ್ತಾಳೆ. ಅದರ ಸುಳಿವು ಅರಿತ ಗಂಡ ಪ್ರೀತಿಯ ಮಾತನಾಡಿ, ನೀನು ಪ್ರವಾಸ ಮುಗಿಸಿ ಬರುವ ವೇಳೆಗೆ ನಮ್ಮ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುತ್ತಾನೆ. ಹತಾಶ ದಂಪತಿಯ ಬದುಕು ಹಳಿ ತಪ್ಪುವ ಹಂತದಲ್ಲಿ ಒಂದು ತಿರುವು! ಬಚ್ಚುವಿನಂತಿದ್ದ ತನ್ನ ಬುದ್ಧಿಮಾಂದ್ಯ ಮಗನಿಗೆ ಹಾಲಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಂದು ಪಾಪಪ್ರಜ್ಞೆಯಲ್ಲಿ ನರಳುತ್ತಿದ್ದ ನೆರೆಮನೆಯ ಗೆಳೆಯ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬರುತ್ತದೆ.

ಮಗನಿಗೆ ವಿಷ ಹಾಕಿ ಕೊಲ್ಲಲು ಮುಂದಾಗಿದ್ದ ಅಪ್ಪ ಮನಸ್ಸು ಬದಲಾಯಿಸುತ್ತಾನೆ. ಸುಖ ಹುಡುಕಿ ಹೊರಟಿದ್ದ ಹೆಂಡತಿಗೆ ಗಂಡನ ಪ್ರೀತಿಯ ಮಾತುಗಳು ನೆನಪಾಗಿ ಮನೆಗೆ ಹಿಂದಿರುಗುತ್ತಾಳೆ. ದಂಪತಿ ಮಗನನ್ನು ಇನ್ನಷ್ಟು ಕಾಳಜಿಯಿಂದ ನೋಡಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ. ಇದಿಷ್ಟು ಚಿತ್ರದ ಕಥೆ. ಬುದ್ಧಿಮಾಂದ್ಯ ಮಕ್ಕಳು ಮತ್ತು ಅವರ ಪಾಲಕರ ಅಸಹಾಯಕ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.

ಬುದ್ಧಿಮಾಂದ್ಯರ ಪಾಲನೆಯಲ್ಲಿ ಪೋಷಕರು ಎದುರಿಸುವ ಸಮಸ್ಯೆ, ಸವಾಲುಗಳು ಬಹಳಷ್ಟು ಬಹುತೇಕ ಜನರಿಗೆ ಗೊತ್ತೇ ಇಲ್ಲ. ಅವನ್ನು ಕಚ್ಚಾ ಲಿಂಬು ಅತ್ಯಂತ ಸೂಕ್ಷ್ಮವಾಗಿ ತೆರೆದಿಡುತ್ತ ಹೋಗುತ್ತದೆ. ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತದೆ.

ಪ್ರಸಾದ್‌ ಓಕ್‌ ಈ ಸಿನಿಮಾದ ನಿರ್ದೇಶಕರು. ಬುದ್ಧಿಮಾಂದ್ಯ ಮಗನ ಅತಿರೇಕಗಳನ್ನು ನಿಯಂತ್ರಿಸಲಾಗದೆ, ಅಸಹಾಯಕರಾಗಿಬಿಡುವ ದಂಪತಿಯ ಆತಂಕಗಳನ್ನು ದೃಶ್ಯಗಳ ರೂಪದಲ್ಲಿ ಕಟ್ಟಿ ಕೊಡುತ್ತ ಎಲ್ಲವೂ ಕಣ್ಣೆದುರು ನಡೆಯುತ್ತಿವೆಯೇನೋ ಎನ್ನಿಸುವ ಮಟ್ಟಿಗೆ ಸಹಜವಾಗಿಸಿದ್ದಾರೆ.

ಬುದ್ಧಿಮಾಂದ್ಯ ಮಕ್ಕಳ ಪಾಲಕರ ಬಗ್ಗೆ ಪ್ರೇಕ್ಷಕರಿಗೆ ಸಹಾನುಭೂತಿ ಹುಟ್ಟಿಬಿಡುತ್ತದೆ. ಪ್ರಸಾದ್‌ ಸಿನಿಮಾ ಹಾಗೂ ಕಿರುತೆರೆ ನಟರಾಗಿ ಮರಾಠಿಗರಿಗೆ ಪರಿಚಿತರು. ಇದು ಅವರ ನಿರ್ದೇಶನದ ಮೊದಲ ಸಿನಿಮಾ.

ಬುದ್ಧಿಮಾಂದ್ಯ ಮಗನ ಪಾತ್ರದಲ್ಲಿ ಮನ್‌ಮೀತ್‌ ಪ್ರೇಮ್‌ ಸೊಗಸಾಗಿ ನಟಿಸಿದ್ದಾರೆ ಎನ್ನುವುದಕ್ಕಿಂತ ಪಾತ್ರವೇ ಆಗಿದ್ದಾರೆ. ಅಪ್ಪನಾಗಿ ರವಿ ಜಾಧವ್‌, ಅಮ್ಮನ ಪಾತ್ರದಲ್ಲಿ ಸೋನಾಲಿ ಕುಲಕರ್ಣಿ ನಟಿಸಿದ್ದಾರೆ.–‘ಪಿಂಪಾಲ್’ ಚಿತ್ರದಲ್ಲಿ ನಟ ದಿಲೀ‍ಪ್ ಪ್ರಭಾವಲ್ಕರ್

ಮಾನಸಿಕ ತೊಳಲಾಟ ಪಿಂಪಾಲ್‌ ಜೀವನದ ಸಂಜೆಯಲ್ಲಿ ಒಂಟಿಯಾಗಿ ಕಳೆಯುವ ಅಸಹಾಯಕ ಮುದುಕನೊಬ್ಬನ ಮಾನಸಿಕ ತೊಳಲಾಟಗಳನ್ನು ಕಟ್ಟಿ ಕೊಡುವ ಸಿನಿಮಾ. ಕೊನೆಗಾಲದಲ್ಲಿ ಮಕ್ಕಳ ಉಪೇಕ್ಷೆಗೆ ತುತ್ತಾಗಿ ಬೀದಿಗೆ ಬೀಳುವ ಮುದುಕರ ದಾರುಣ ಸ್ಥಿತಿ ಈಗ ಎಲ್ಲೆಡೆ ಕಾಣುವಂಥದ್ದು. ಅಂಥವರ ಬದುಕನ್ನು ತೋರಿಸುವ ಸಿನಿಮಾಗಳೂ ಸಾಕಷ್ಟಿವೆ. ಆದರೆ ಪಿಂಪಾಲ್‌ ಚಿತ್ರದ ನಾಯಕನಿಗೆ ಆರ್ಥಿಕ ಸಮಸ್ಯೆಗಳಿಲ್ಲ. ಅವನು ಸುಶಿಕ್ಷಿತ. ಒಂಟಿಯಾಗಿ ಬದುಕುವ ಅನಿವಾರ್ಯತೆಯನ್ನು ಅವನು ಒಪ್ಪಿಕೊಂಡಿದ್ದಾನೆ.

ಉದ್ಯೋಗ ಹುಡುಕಿಕೊಂಡು ದೇಶದ ಹಳ್ಳಿಗಳಿಂದ ನಗರಗಳಿಗೆ ಬಂದವರು ಮತ್ತು ಅದೇ ರೀತಿ ಭಾರತದಿಂದ ಅಮೆರಿಕ ಮತ್ತಿತರ ದೇಶಗಳಿಗೆ ಹೋಗಿ ನೆಲೆಸುವ ಎರಡು ತಲೆಮಾರುಗಳ ಜನ ಜೀವನವನ್ನು ನೋಡುವ ಕ್ರಮದ ಮೇಲೂ ಪಿಂಪಾಲ್‌ ಬೆಳಕು ಚೆಲ್ಲುತ್ತದೆ.

ಮುದುಕ ಅರವಿಂದ ಪುಣೆ ನಿವಾಸಿ. ಅಪಾರ್ಟ್‌ಮೆಂಟ್‌ ಒಂದರಲ್ಲಿ ಒಂಟಿಯಾಗಿ ದಿನ ದೂಡುತ್ತಿದ್ದಾನೆ. ಹೆಂಡತಿ ಸತ್ತಿದ್ದಾಳೆ. ಮಕ್ಕಳು ಸೊಸೆಯಂದಿರು, ಮೊಮ್ಮಕ್ಕಳು ಅಮೆರಿಕದಲ್ಲಿದ್ದಾರೆ. ಅರವಿಂದನ ಊಟೋಪಚಾರಕ್ಕೆ ಒಬ್ಬ ಅಡುಗೆಯವ ನಿತ್ಯ ಬರುತ್ತಾನೆ. ಆರೋಗ್ಯದ ನಿಗಾಕ್ಕೆ ಒಬ್ಬ ಯುವ ವೈದ್ಯೆ ಇದ್ದಾಳೆ. ಬೆಳಗಿನ ವಾಕ್‌ನಿಂದ ಅರವಿಂದನ ದಿನಚರಿ ಆರಂಭವಾಗುತ್ತದೆ. ಬೇಸರವಾದಾಗ ಮಕ್ಕಳು, ಮೊಮ್ಮಕ್ಕಳು ಮತ್ತು ಸೊಸೆಯಂದಿರ ಜತೆ ವಿಡಿಯೊ ಚಾಟ್‌ ಮಾಡುತ್ತಾನೆ.

ಅಪ್ಪ ಅಮೆರಿಕಕ್ಕೆ ಬಂದು ನಮ್ಮ ಜತೆ ಇರಲಿ ಎನ್ನುವುದು ಅವರ ಮಕ್ಕಳು, ಮೊಮ್ಮಕ್ಕಳ ಒತ್ತಾಯ. ಕೊನೆಗೆ ಅರೆ ಮನಸ್ಸಿನಿಂದಲೇ ಅರವಿಂದ ಅಮೆರಿಕಕ್ಕೆ ಹೋಗಲು ನಿರ್ಧರಿಸುತ್ತಾನೆ. ಹೆಂಡತಿ, ಮಕ್ಕಳ ನೆನಪಿಗಾಗಿ ಜೋಪಾನ ಮಾಡಿಕೊಂಡು ಬಂದ ಎಲ್ಲ ವಸ್ತುಗಳನ್ನೂ ಪ್ಯಾಕ್‌ ಮಾಡಿಕೊಂಡು ಹೊರಡುತ್ತಾನೆ. ಆದರೆ ವಿಮಾನ ನಿಲ್ದಾಣದಲ್ಲಿ ಮನಸ್ಸು ಬದಲಾಯಿಸಿ ತನ್ನ ಹುಟ್ಟಿದೂರಿಗೆ ಹೋಗಿ ಬಿಡುತ್ತಾನೆ!

ಹುಟ್ಟಿದೂರಿನ ಕನವರಿಕೆ, ಅಲ್ಲಿ ಕಳೆದ ಬಾಲ್ಯ. ಅಜ್ಜ, ಅಪ್ಪ, ಅಮ್ಮ, ಬಂಧುಗಳ ಅವಿಭಕ್ತ ಕುಟುಂಬದಲ್ಲಿ ಕಳೆದ ಸುಖದ ದಿನಗಳ ನೆನಪುಗಳ ಸೆಳೆತದಿಂದ ತಪ್ಪಿಸಿಕೊಳ್ಳಲು ಅವನಿಗೆ ಸಾಧ್ಯವಾಗುವುದಿಲ್ಲ. ಜೀವನದ ಸಂಜೆಯಲ್ಲಿ ಬಾಲ್ಯದ ನೆನಪುಗಳು ಪ್ರತಿಯೊಬ್ಬರನ್ನೂ ಕಾಡುತ್ತವೆ. ಅಂಥವರ ಸಂಕೇತ ಅರವಿಂದ. ಊರಿನ ಮನೆ, ತೋಟ, ಅಮ್ಮನ ತುಳಸಿಕಟ್ಟೆ, ಅಲ್ಲಿನ ಸಮುದ್ರ ಎಲ್ಲದರ ನಡುವೆ ಅರವಿಂದ ಮಗುವಿನಂತೆ ಸಂಭ್ರಮಿಸುತ್ತಾನೆ.

ನೆನಪುಗಳು ಜೀವಂತವಾಗಿರಬೇಕು ಎನ್ನುವುದರ ಸಂಕೇತವಾಗಿ ಅರಳಿ ಸಸಿಯೊಂದನ್ನು ಅಲ್ಲಿ ನೆಡುತ್ತಾನೆ. ಮುದುಕರ ಮಾನಸಿಕ ತೊಳಲಾಟಗಳನ್ನು ಪಿಂಪಾಲ್‌ ಅತ್ಯಂತ ಸೂಕ್ಷ್ಮವಾಗಿ ಹೇಳುತ್ತದೆ. ಮರಾಠಿ ಸಿನಿಮಾ ಮತ್ತು ರಂಗಭೂಮಿಯಲ್ಲಿ ಮೂರು ದಶಕಗಳಿಂದ ಸಕ್ರಿಯವಾಗಿರುವ ನಟ ದಿಲೀಪ್‌ ಪ್ರಭಾವಲ್ಕರ್‌ ಅರವಿಂದನ ಪಾತ್ರದಲ್ಲಿ ಸೊಗಸಾಗಿ ನಟಿಸಿದ್ದಾರೆ. ಗಜೇಂದ್ರ ಅಹಿರೆ ಚಿತ್ರದ ನಿರ್ದೇಶಕರು.

ಕ್ಷಿತಿಜ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಸಿನಿಮಾ. ಅದು ಮಹಾರಾಷ್ಟ್ರದ ಸಣ್ಣ ರೈತ ಕುಟುಂಬಗಳ ಬಡತನ ಹಾಗೂ ಇತರ ಬವಣೆಗಳ ಮೇಲೂ ಬೆಳಕು ಚೆಲ್ಲುತ್ತದೆ.

ಹಳ್ಳಿಯಲ್ಲಿ ಜೀವನ ನಿರ್ವಹಣೆ ದುಸ್ತರವಾದಾಗ ರೈತನೊಬ್ಬ ಪತ್ನಿ, ಇಬ್ಬರು ಮಕ್ಕಳೊಂದಿಗೆ ನೀರಾವರಿ ಪ್ರದೇಶಕ್ಕೆ ಕಬ್ಬು ಕೊಯ್ಲಿನ ಕೆಲಸಕ್ಕೆ ಹೊರಟು ನಿಲ್ಲುತ್ತಾನೆ. ಅವನ ಮಗಳು ಹನ್ನೆರಡು ವರ್ಷದ ವಚ್ಚಿಗೆ ಓದುವ ಆಸೆ. ಅವಳಪ್ಪನಿಗೆ ತನ್ನ ಕುಟುಂಬಕ್ಕೆ ಎರಡು ಹೊತ್ತಿನ ಊಟ ಸಿಕ್ಕರೆ ಸಾಕು ಎನ್ನುವ ಚಿಂತೆ. ಶಾಲೆಯ ಹೆಡ್ಮಾಸ್ಟರು ಕೆಲಸ ಮಾಡುತ್ತಲೇ ಓದಿಕೋ, ಸಕಾಲದಲ್ಲಿ ಊರಿಗೆ ಬಂದರೆ ಪರೀಕ್ಷೆ ಬರೆಯಲು ಅವಕಾಶ ಕೊಡುತ್ತೇನೆ ಎಂದು ವಚ್ಚಿಗೆ ಭರವಸೆ ನೀಡುತ್ತಾರೆ.

ವಚ್ಚಿ, ಅಮ್ಮನಿಗೆ ಸಹಾಯ ಮಾಡುತ್ತ, ಕಬ್ಬಿನ ಕೊಯ್ಲಿನಲ್ಲಿ ಅಪ್ಪನಿಗೆ ನೆರವಾಗುತ್ತ, ಬಿಡುವಿನ ವೇಳೆಯಲ್ಲಿ ಓದಿಕೊಳ್ಳುತ್ತಾಳೆ. ಹೊಲ, ಗದ್ದೆಗಳಲ್ಲಿ ನಿರಂತರವಾಗಿ ದುಡಿಯುವ ಕೃಷಿ ಕಾರ್ಮಿಕರ ಬವಣೆಗಳು, ಓದು ಬರಹ ಬಾರದ ಅವರನ್ನು ಶೋಷಿಸುವ ಮಧ್ಯವರ್ತಿಗಳು, ಭೂ ಮಾಲೀಕರ ವರ್ತನೆ ಇತ್ಯಾದಿಗಳನ್ನೂ ಸಿನಿಮಾ ಎತ್ತಿ ಹೇಳುತ್ತದೆ.

ಕಷ್ಟಪಟ್ಟು ದುಡಿದ ಕೂಲಿಕಾರರಿಗೆ ತಪ್ಪು ಲೆಕ್ಕ ತೋರಿಸಿ ಕೂಲಿ ಹಣವನ್ನು ನುಂಗಿ ಹಾಕುವ ಪ್ರಯತ್ನವನ್ನು ವಚ್ಚಿ ತಪ್ಪಿಸುತ್ತಾಳೆ. ಈ ಹಂತದಲ್ಲಿ ಮಗಳ ಬಗ್ಗೆ ಅಪ್ಪನಿಗೆ ಅಭಿಮಾನ ಮೂಡುತ್ತದೆ. ಮಕ್ಕಳಿಗೆ ಶಿಕ್ಷಣ ಅನಿವಾರ್ಯ ಎನ್ನುವುದು ಅವನಿಗೆ ಮನದಟ್ಟಾಗುತ್ತದೆ. ಇದು ಅತ್ಯಂತ ಸರಳ ಸಿನಿಮಾ. ಹೆಣ್ಣು ಮಕ್ಕಳಿಗೆ ಶಿಕ್ಷಣ ಬೇಕು ಎಂಬ ಆಶಯ ಈ ಚಿತ್ರದ್ದು. ಮನೋಜ್‌ ಕದಂ ಈ ಚಿತ್ರದ ನಿರ್ದೇಶಕರು. ಈ ಚಿತ್ರ 2017ರ ಐ.ಸಿ.ಎಫ್‌.ಟಿ ಯುನೆಸ್ಕೊ ಗಾಂಧಿ ಚಿನ್ನದ ಪದಕ ಪಡೆದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry