7

ಕಾಲಜ್ಞಾನಿ

Published:
Updated:
ಕಾಲಜ್ಞಾನಿ

‘ಈ ಹೊಳೆ ನಿಮ್ಮೂರನ್ನು ಬಿಟ್ಟು ಹೋಗುತ್ತದೆ’ ಎಂದು ಹೇಳಿ ಹತ್ತು ವರ್ಷಗಳಲ್ಲಿ ಆತ ಹೇಳಿದ ಮಾತು ನಿಜವಾಗಿತ್ತು. ಅಂದಿನಿಂದ ಆತನಿಗೆ ‘ಪವಾಡ ಪುರುಷ’, ‘ದೈವಾಂಶ ಸಂಭೂತ’, ‘ಸನ್ಯಾಸಿ’, ‘ಜ್ಯೋತಿಷಿ’ ಎಂದೆಲ್ಲಾ ಹೆಸರಿಟ್ಟ ಊರಿನ ಜನರು ‘ಸನ್ಯಾಸಿ ಹೇಳಿದ ಮಾತುಗಳು ನಿಜವಾಗುತ್ತವೆ. ಆತ ಹೇಳಿದಂತೆಯೇ ನಡೆಯುತ್ತವೆ’ ಎಂದು ನಂಬಿದ್ದರು. ಈ ನಡುವೆ ಹೊಳೆಯ ಕುರಿತಂತೆ ಆತ ಹೇಳುತ್ತಿದ್ದ ಮಾತುಗಳೆಲ್ಲವೂ ಅಕ್ಷರಶಃ ನಿಜವಾಗಿದ್ದವು.

ಸುಮಾರು ವರ್ಷಗಳಿಂದ ಹೊಳೆಯ ದಡದಲ್ಲಿ ಪುಟ್ಟ ಪುಟ್ಟ ಗುಡಿಸಲುಗಳನ್ನು ಹಾಕಿಕೊಂಡು ಆ ಕಾಲಜ್ಞಾನಿ ವಾಸಿಸುತ್ತಿದ್ದ. ಅಲ್ಲಿ ಟಿ.ವಿ., ಕಂಪ್ಯೂಟರ್, ಪ್ರಿಂಟರ್, ಪ್ರೊಜೆಕ್ಟರ್, ಸೂಕ್ಷ್ಮದರ್ಶಕ, ವೈಜ್ಞಾನಿಕ ಪುಸ್ತಕಗಳು, ಜಗತ್ತಿನ ವಿವಿಧ ಭಾಷೆಗಳ ವಿವಿಧ ಸಾಹಿತ್ಯ ಗ್ರಂಥಗಳನ್ನು ಇಟ್ಟುಕೊಂಡಿದ್ದ. ಯಾವಾಗಲೂ ಅಧ್ಯಯನಶೀಲನಾಗಿರುತ್ತಿದ್ದ ಆತ ಬಿಡುವಿನ ವೇಳೆಯಲ್ಲಿ ಹೊಳೆಯ ದಡದಗುಂಟ ಸುತ್ತಾಡುತ್ತಿದ್ದ. ತಾನು ಓದಿನಿಂದ ಪಡೆದ ಜ್ಞಾನ, ಹೊಳೆಯ ಪಾತ್ರ ಹಾಗೂ ಅನುಭವದ ಆಧಾರದ ಮೇಲೆ ಹೊಳೆಯ ಭವಿಷ್ಯವನ್ನು ಹೇಳಿದ್ದ. ಜನರು ಕರೆಯುವ ಯಾವುದೋ ಹೆಸರುಗಳಿಗಿಂತ ಕಾಲಜ್ಞಾನಿಯೇ ವಾಸಿಯೆಂದು ಹಾಗೆ ಕರೆದುಕೊಳ್ಳುತ್ತಿದ್ದ.

ಆ ಹೊಳೆ ಊರಿನ ಬಳಿ ಹರಿಯುವಾಗ ಕುದುರೆ ಲಾಳಾಕಾರದಲ್ಲಿ ಊರನ್ನು ಬಳಸಿಕೊಂಡು ಹರಿಯುತ್ತಿತ್ತು. ಮಧ್ಯದಲ್ಲಿ ವಿಸ್ತಾರವಾದ ಬಯಲು ಮತ್ತು ಅಲ್ಲಲ್ಲಿ ಎತ್ತರವಾಗಿದ್ದ ಪ್ರದೇಶದಲ್ಲಿ ಆ ಊರಿನ ಜನರು ಮತ್ತು ಸುತ್ತಮುತ್ತಲಿನ ಜನರು ಅವ್ಯಾಹತವಾಗಿ ಮರಳನ್ನು ಬಳಸುತ್ತಿದ್ದರು ಮತ್ತು ಮಾರಾಟ ಮಾಡುತ್ತಿದ್ದರು. ಅದರ ಪರಿಣಾಮವಾಗಿ ಹೊಳೆಯ ಮಧ್ಯದಲ್ಲಿದ್ದ ನಡುಗಡ್ಡೆಯಂತಹ ಪ್ರದೇಶ ದಿನಗಳುರುಳಿದಂತೆ ಸಮತಟ್ಟಾದ ಬಯಲಿನಂತೆ ಕಾಣತೊಡಗಿತು.

ಮಳೆಗಾಲದಲ್ಲಿ ತುಂಬಿ ಹರಿದ ಹೋಳೆ ಬಯಲು ಪ್ರದೇಶದ ಕಡೆಗೆ ಹರಿದು ಮತ್ತಷ್ಟು ಮರಳನ್ನು ಕೊಚ್ಚಿಕೊಂಡು ಹೋಯಿತು. ಅದರ ಮುನ್ನೆಚ್ಚರಿಕೆ ಅರಿಯದ ಊರಿನ ಜನರು ಅಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದರು. ಹೊಳೆಯ ಮಣ್ಣನ್ನು ‘ಪವಾಡ ಪುರುಷ’ನ ಹತ್ತಿರ ತೆಗೆದುಕೊಂಡು ಹೋಗಿ ಜ್ಯೋತಿಷ್ಯ ಕೇಳಿದ್ದರು.

ಮೆಕ್ಕಲು ಮಣ್ಣಿನ ಫಲವತ್ತತೆಯನ್ನು ತಿಳಿದಿದ್ದ ಆತ ‘ಚೆನ್ನಾಗಿ ಬೆಳೆ ಬರುತ್ತದೆ’ ಎಂದು ಹೇಳಿದ್ದ. ಆದರೆ ‘ಬಹಳ ವರ್ಷಗಳ ಕಾಲ ಬೆಳೆಯಲಾರದು’ ಎಂದೂ ಹೇಳಿದ್ದ. ಪ್ರತಿದಿನವೂ ಮರಳು ಸಾಗಿಸುವುದರಿಂದ ವಾಹನಗಳ ಓಡಾಟದಿಂದ ಮಣ್ಣಿನ ಸವಕಳಿ ಹೆಚ್ಚಾಗುತ್ತದೆಯೆಂದು ಆತನಿಗೆ ಗೊತ್ತಿತ್ತು.

ಅದರಂತೆಯೇ ನಿರಂತರ ಮರಳು ಸಾಗಾಣಿಕೆ ಮತ್ತು ಕೃಷಿ ಚಟುವಟಿಕೆಗಳಿಂದ ಬಯಲುಬಯಲಾಗಿದ್ದ ಹೊಳೆಯ ಪಾತ್ರ ಬರಡಾಯಿತು. ಒಂದು ಮಳೆಗಾಲದಲ್ಲಿ ಜೋರು ಮಳೆಯಾಗಿ ಹೊಳೆ ತುಂಬಿ ಹರಿಯಿತು. ಭಾರಿ ನೆರೆ ಪ್ರವಾಹದಿಂದಾಗಿ ಲಾಳಾಕಾರದಲ್ಲಿ ಸುತ್ತಿಕೊಂಡು ಹರಿಯುತ್ತಿದ್ದ ಹೊಳೆ ನೇರವಾಗಿ ಹರಿಯಿತು. ಊರಿನಿಂದ ಸುಮಾರು ದೂರಕ್ಕೆ ಸರಿಯಿತು.

ಆ ಊರಿನ ಜನರು ಮತ್ತು ಸುತ್ತಲಿನ ಊರಿನ ಜನರು ಆ ಸನ್ಯಾಸಿಯ ಮಾಟಮಂತ್ರಗಳಿಂದಲೇ ನಮ್ಮೂರ ಹೊಳೆ ದೂರ ಹೋಗಿದೆಯೆಂದು ಆತನ ಗುಡಿಸಲು ಬಳಿ ಬಂದು ಗಲಾಟೆ ಮಾಡಿದರು. ಎಲ್ಲರನ್ನೂ ಸಮಾಧಾನಗೊಳಿಸಿದ ಕಾಲಜ್ಞಾನಿ ‘ನಾನು ಯಾವ ಸನ್ಯಾಸಿಯೂ ಅಲ್ಲ. ನನ್ನ ಹತ್ತಿರ ಯಾವುದೇ ಮಂತ್ರತಂತ್ರಗಳಿಲ್ಲ. ನನ್ನ ಬಳಿಯಿರುವ ತಾಂತ್ರಿಕ ಸಾಧನಗಳು ಮತ್ತು ಪುಸ್ತಕಗಳ ಜ್ಞಾನದಿಂದ ಹೊಳೆಯ ಬಗ್ಗೆ ಹೇಳಿದೆ ಅಷ್ಟೇ.

ನಾವು ಇದೇ ರೀತಿ ಹೊಳೆಯ ಸಂಪನ್ಮೂಲಗಳನ್ನು ಬಳಸುತ್ತಾ ಹೋದರೆ ಮುಂದಿನ ದಿನಗಳಲ್ಲಿ ಇದಕ್ಕಿಂತ ದುರ್ಗತಿ ಬರಬಹುದು. ಇದು ಭವಿಷ್ಯವಲ್ಲ ನೆನಪಿರಲಿ. ನಾವಿನ್ನೂ ಒಂದು ಮಟ್ಟಿಗಿನ ಸುರಕ್ಷಿತ ಹಂತದಲ್ಲಿದ್ದೇವೆ. ಸವಕಳಿಯಾಗಿರುವ ಹೊಳೆಯ ದಡದಲ್ಲಿ ಸಾಕಷ್ಟು ಗಿಡಮರಗಳನ್ನು ನೆಟ್ಟು ಪೋಷಣೆ ಮಾಡಬೇಕು. ಇದರಿಂದ ಹೊಳೆಯನ್ನು ಉಳಿಸಿಕೊಳ್ಳಬಹುದು’ ಎಂದು ಹೇಳಿದ. ಅರ್ಥ ಮಾಡಿಸಿದ. ಜನರಿಗೆ ತಮ್ಮ ತಪ್ಪಿನ ಅರಿವಾಗಿ ಮುಂದಿನ ದಿನಗಳಲ್ಲಿ ತಮ್ಮ ಊರಿಗೆ ಮಾರ್ಗದರ್ಶಕರಾಗಿ ಇರಬೇಕೆಂದು ವಿನಂತಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry