ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವಿದ್ಯಾಲಯದ ಸ್ವಾಯತ್ತ ಸುತ್ತಮುತ್ತ ವಿಶೇಷ ಸ್ಥಾನಮಾನ ಸಾಕೆ ಶ್ರೇಷ್ಠತೆಯ ಕನಸು ಬೇಕೆ?

Last Updated 10 ಡಿಸೆಂಬರ್ 2017, 9:50 IST
ಅಕ್ಷರ ಗಾತ್ರ

ಜನರ ಅಂತರಂಗದೊಳಗೆ ಇಳಿಯಲು ವಿಶ್ವವಿದ್ಯಾಲಯಗಳು ಮುಂದಾಗಬೇಕು ಎನ್ನುವ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ.

ಒಂದು ವಿಶ್ವವಿದ್ಯಾಲಯ ನಮ್ಮ ಒಳಗೆ ಇಳಿಯುವುದೇ ಹಾಗೆ: ಅಧ್ಯಾಪಕರ ಬೋಧನೆಯ ಕ್ರಮ, ಸಂಶೋಧನೆಯ ನಾವೀನ್ಯ, ಸಂಯೋಜಿಸುವ ಕಾರ್ಯಕ್ರಮಗಳ ವೈವಿಧ್ಯ, ಪ್ರಕಟಿಸುವ ಪುಸ್ತಕಗಳ ಗುಣಮಟ್ಟ- ಇವೆಲ್ಲದರ ಕಾರಣದಿಂದ ವಿಶ್ವವಿದ್ಯಾಲಯವೊಂದು ಜನರ ಹತ್ತಿರವಾಗುತ್ತದೆ. ಅಂತರಂಗದೊಳಗೆ ಇಳಿಯುತ್ತದೆ.

ಲಂಡನ್ ವಿಶ್ವವಿದ್ಯಾಲಯ ಪ್ರತಿವರ್ಷ ಟಿ.ಎಸ್. ಎಲಿಯಟ್ ಇಂಟರ್‌ನ್ಯಾಷನಲ್ ಸಮ್ಮರ್ ಸ್ಕೂಲ್ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸುತ್ತಿದೆ. 2013ರ ಅದರ ಐದನೆಯ ಆವೃತ್ತಿಯಲ್ಲಿ ಪಾಲ್ಗೊಂಡ ಅನುಭವ ಅತ್ಯಂತ ಚೇತೋಹಾರಿ. ಎಲಿಯಟ್‌ನನ್ನು ಜಗತ್ತಿಗೆ ತಲುಪಿಸುವ ರೀತಿ ಅದು. ವಿಶೇಷ ಉಪನ್ಯಾಸ, ವಿಚಾರಗೋಷ್ಠಿ, ಕಾರ್ಯಾಗಾರ, ಕಾವ್ಯವಾಚನ, ಸಾರ್ವಜನಿಕ ಸಮ್ಮಿಲನ, ಪೇಂಟಿಂಗ್ ಪ್ರದರ್ಶನ, ಪುಸ್ತಕ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಸಾಕ್ಷ್ಯಚಿತ್ರ ಪ್ರದರ್ಶನ, ಎಲಿಯಟ್ ಸ್ಮಾರಕಗಳಿಗೆ ಪ್ರವಾಸ, ಎಲಿಯಟ್ ಕಾವ್ಯದ ನಗರ ನಡಿಗೆ- ಹೀಗೆ ನಾನಾ ನಮೂನೆಯಲ್ಲಿ ಎಲಿಯಟ್ ಕೃತಿಗಳನ್ನು ಅರ್ಥೈಸುವ ಹೊಸ ವಿಧಾನ. ಜಗತ್ತಿನ ಅತ್ಯುತ್ಕೃಷ್ಟ ಎಲಿಯಟ್ ಸಂಶೋಧಕರೊಂದಿಗೆ ಅನುಸಂಧಾನ ಮಾಡುವ ಅಪೂರ್ವ ಅವಕಾಶ.

ಭಾಗವಹಿಸುವ ಕಿರಿಯ ಸಂಶೋಧಕರಿಗೆ ಬರ್ಸರಿ ಅವಾರ್ಡ್ ಅನ್ನೂ ನೀಡಿ ಪ್ರೋತ್ಸಾಹಿಸುವ ಔದಾರ್ಯ. ಇಂತಹ ಅನೇಕ ಬೇಸಿಗೆ ಶಿಬಿರಗಳನ್ನು ಲಂಡನ್ ವಿ.ವಿ. ಆದಿಯಾಗಿ ವಿವಿಧ ವಿಶ್ವವಿದ್ಯಾಲಯಗಳು ಸಂಯೋಜಿಸುತ್ತಿವೆ. ಇದು ಒಂದು ಮಾದರಿ. ಕವಿ–ಕವಿತೆಗಳನ್ನು ಗ್ರಹಿಸುವ ‘ಕವಿರಾಜಮಾರ್ಗ’.

ಜಗತ್ತಿಗೇ ಸಲ್ಲಬಹುದಾದ ಕನ್ನಡದ ಗೋವಿಂದ ಪೈ ಅವರ ಬಗೆಗಾಗಲೀ, ಕುವೆಂಪು, ಕಾರಂತ, ಮಾಸ್ತಿ, ಅಡಿಗ, ಬೇಂದ್ರೆ, ಅನಂತಮೂರ್ತಿ, ಲಂಕೇಶ್, ರಾಮಾನುಜನ್, ಡಿ.ಆರ್. ನಾಗರಾಜ್, ಭೈರಪ್ಪ, ಕಾರ್ನಾಡ, ಕಂಬಾರ ಮತ್ತಿತರ ಸಾಹಿತಿ- ಸಂಶೋಧಕರ ಬಗೆಗಾಗಲೀ ಕರ್ನಾಟಕದ ವಿಶ್ವವಿದ್ಯಾಲಯಗಳಿಂದ ಇಂತಹದ್ದೊಂದು ಅಂತರರಾಷ್ಟ್ರೀಯ ಬೇಸಿಗೆ ಶಿಬಿರ? ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ ಎನ್ನಿಸುತ್ತದೆ.

ಹಿಂದೆ ಕನಿಷ್ಠ ನೀನಾಸಂನಂತಹ ಸಂಸ್ಥೆಗಳಾದರೂ ರಾಜ್ಯಮಟ್ಟದಲ್ಲಿ ತೇಜಸ್ವಿ, ಕಾರಂತ, ಅನಂತಮೂರ್ತಿ ಅಧ್ಯಯನ ಶಿಬಿರಗಳನ್ನು ನಡೆಸುತ್ತಿದ್ದವು. ಅಕಾಡೆಮಿಗಳು ಜೀವಂತಿಕೆಯಿಂದ, ಲವಲವಿಕೆಯಿಂದ ಇದ್ದವು ಎನ್ನಿ. ಈಗೀಗ ಎಲ್ಲವೂ ವಿರಳವಾಗಿದೆ; ಮಾಯವಾಗಿದೆ. ವಿಶ್ವವಿದ್ಯಾಲಯ ಮಾಡಬೇಕಾದದ್ದು ಇದನ್ನೇ ಅಲ್ಲವೇ? ಜಗತ್ತಿನ ಜನಮಾನಸದಲ್ಲಿ ಉಳಿಯಬಹುದಾದ ಉತ್ಕೃಷ್ಟ ಕಾರ್ಯಕ್ರಮ ಸಂಯೋಜಿಸುವುದೇ ಅಲ್ಲವೆ? ತನ್ನ ನಾಡಿನ ಅತ್ಯುನ್ನತ ವಿಚಾರವನ್ನು ಜಗತ್ತಿಗೆ ತಲುಪಿಸಬೇಕಾದ ಕೆಲಸವನ್ನೇ ಅಲ್ಲವೆ? ಕನ್ನಡವನ್ನು ವಿಶ್ವಪ್ರಜ್ಞೆಯಾಗಿಸುವುದು ಎಂದರೆ ಅದೇ ಅಲ್ಲವೆ?

ಇಂತಹದ್ದೊಂದು ಬೇಸಿಗೆ ಶಿಬಿರ ಏನೆಲ್ಲ ಮಾಡುತ್ತದೆ ನೋಡಿ: ಜಗತ್ತಿನ ಚಿಂತಕರನ್ನು ಒಂದೇ ಚಾವಡಿಗೆ ಎಳೆದು ತರುತ್ತದೆ. ಸಾಂಸ್ಕೃತಿಕ ಅನುಸಂಧಾನ ಸಾಧ್ಯವಾಗುತ್ತದೆ. ಹೊಸ ಆಲೋಚನೆಗಳಿಗೆ ಪ್ರಚೋದನೆ ನೀಡುತ್ತದೆ. ಹೊಸ ಬರವಣಿಗೆಗೆ ಉತ್ತೇಜನ ಸಿಗುತ್ತದೆ. ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಜಾಗತಿಕ ಪುಸ್ತಕೋದ್ಯಮದ ಪರಿಚಯವೂ ಆಗುತ್ತದೆ. ಹೊಸ ಗೆಳೆತನ- ಹೊಸ ಲೋಕ ಎಲ್ಲವೂ ತೆರೆದುಕೊಳ್ಳುತ್ತದೆ. ಲಂಡನ್ ವಿಶ್ವವಿದ್ಯಾಲಯವೊಂದೇ ಅಲ್ಲ ಜಗತ್ತಿನ ವಿವಿಧ ವಿಶ್ವವಿದ್ಯಾಲಯಗಳು ನಿತ್ಯನಿರಂತರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇವೆ.

ಎರಡು ವರ್ಷದ ಹಿಂದೆ ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆ.ಎನ್‌.ಯು)ದ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಆಯೋಜಿಸಿದ ಜಾಗತಿಕ ಅಧ್ಯಯನ ಕುರಿತ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದೆ. ಆಗ ಸದಾ ತೆರೆದಿರುತ್ತಿದ್ದ ಅಲ್ಲಿನ ಗ್ರಂಥಾಲಯವೇ ಒಂದು ವಿಸ್ಮಯ ಅನ್ನಿಸಿ ಬಿಡುತ್ತಿತ್ತು. ನಿತ್ಯ ನಿರಂತರ ಅಧ್ಯಯನ, ಡಾಬಾ- ಹಾಸ್ಟೆಲ್‌ಗಳಲ್ಲೂ ನಡೆಯುತ್ತಿದ್ದ ಘನಗಂಭೀರ ಚರ್ಚೆ. ಅಂತಹ ಚಿಂತನ- ಮಂಥನಗಳಿಗೆ ಹಗಲು, ರಾತ್ರಿಗಳ ಪರಿವೆಯೇ ಇರುತ್ತಿರಲಿಲ್ಲ.

ದೇಶ-ಕಾಲದ ಹಂಗೂ ಇರುತ್ತಿರಲಿಲ್ಲ. ಸದಾ ಸಂಶೋಧನೆಯ ಸಾಗರದಲ್ಲೇ ಮುಳುಗೇಳುವ ಮನಸ್ಸುಗಳು, ಹೊಸ ಹೊಸ ಐಡಿಯಾ ಚಿಮ್ಮುವ ಪ್ರಾಧ್ಯಾಪಕರು- ಹೀಗೆ ಒಟ್ಟಿನಲ್ಲಿ ಮಹಾಭಾರತದ ಖಾಂಡವವನ ಪ್ರದೇಶದ ಜೆ.ಎನ್‌.ಯು ಈಗಲೂ ಪ್ರಖರ ವೈಚಾರಿಕತೆಯೊಂದಿಗೆ ಜ್ವಲಿಸುತ್ತದೆ; ಅದು ಕೆಲವೊಮ್ಮೆ ಅತಿರೇಕ ಎನ್ನಿಸಿದರೂ ಕೂಡ.

ಇಂತಹ ಶೈಕ್ಷಣಿಕ ವಾತಾವರಣ ಇರುವುದರಿಂದಲೇ ಜೆ.ಎನ್‌.ಯು ‘ಯುನಿವರ್ಸಿಟಿ ಆಫ್ ಎಕ್ಸೆಲೆನ್ಸ್’ ಅರ್ಥಾತ್ ‘ಶ್ರೇಷ್ಠ ವಿಶ್ವವಿದ್ಯಾಲಯ’ ಎಂಬ ಸ್ಥಾನಮಾನವನ್ನು ಪಡೆದುಕೊಂಡಿದೆ. ಇದು ಬೋಧನೆ ಮತ್ತು ಸಂಶೋಧನೆಯ ಪ್ರಕ್ರಿಯೆಗಳನ್ನು ಒಳಗೊಂಡ ವಿ.ವಿ. ನ್ಯಾಕ್ (ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತೆಯ ಮಂಡಳಿ) ಮೌಲ್ಯಮಾಪನ ಮಾಡಿ 4ರಲ್ಲಿ 3.91 ಗ್ರೇಡ್ ಪಾಯಿಂಟ್ ಅನ್ನು ನೀಡಿದೆ; ಮೊದಲ ರ‍್ಯಾಂಕ್‌ ಕೊಟ್ಟಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್‌ನ ರ‍್ಯಾಂಕ್ ಪಟ್ಟಿಯಲ್ಲಿ 2016ರಲ್ಲಿ ಜೆ.ಎನ್‌.ಯುಗೆ 3ನೇ ಸ್ಥಾನ, 2017ರಲ್ಲಿ 2ನೇ ಸ್ಥಾನ ಸಂದಿದೆ. 2017ರಲ್ಲಿ ಇದೇ ಜೆ.ಎನ್‌.ಯು. ಅತ್ಯುತ್ತಮ ವಿ.ವಿ. ಪ್ರಶಸ್ತಿಯನ್ನೂ ತನ್ನದಾಗಿಸಿದೆ.

1966ರ ಸಂಸತ್ ಕಾಯ್ದೆ ಪ್ರಕಾರ ಸ್ಥಾಪನೆಗೊಂಡ ಈ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ವಿದ್ಯಾರ್ಥಿ ಅನುಪಾತ 1:10 ರಷ್ಟು ಇದೆ. ಸಾಮಾನ್ಯ ವಿಶ್ವವಿದ್ಯಾಲಯಗಳ ಸಂಕುಚಿತ ವಿಭಾಗಗಳ ಕ್ರಮ ಇಲ್ಲಿ ಇಲ್ಲ.

ನಿರಂತರ ಮೌಲ್ಯಮಾಪನ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದ ಮೊದಲ ವಿ.ವಿ. ಎಂಬ ಹೆಗ್ಗಳಿಕೆ ಕೂಡಾ ಈ ವಿಶ್ವವಿದ್ಯಾಲಯಕ್ಕೆ ಇದೆ. ಕೊನೆಯ ಪರೀಕ್ಷೆ ಮಾತ್ರ ಮುಖ್ಯ ಅಲ್ಲ; ಎಲ್ಲ ಪರೀಕ್ಷೆಗಳೂ ಪ್ರಧಾನ ಎನ್ನುವುದು ಅದರ ತಾತ್ಪರ‍್ಯ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪ್ರಾಧ್ಯಾಪಕರು ಇಲ್ಲಿದ್ದಾರೆ.

ಜೆ.ಎನ್‌.ಯುನಿಂದ ರಾಯಭಾರಿಗಳಾಗಿ, ಯೋಜನಾ ಆಯೋಗದಂತಹ ಸರ್ಕಾರಿ ಸಂಸ್ಥೆಗಳ ಸದಸ್ಯರಾಗಿ ಸೇವೆ ಸಲ್ಲಿಸಿದವರು ಅದೆಷ್ಟೋ ಮಂದಿ. ಭಾರತ ಮತ್ತು ವಿದೇಶಗಳಿಗೂ ತಲುಪುತ್ತಿರುವ ನಾಲ್ಕು ಜರ್ನಲ್‌ಗಳನ್ನು ಹೊರತರುತ್ತಿದೆ ಜೆ.ಎನ್‌.ಯು. ಪ್ರಾಧ್ಯಾಪಕರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜರ್ನಲ್‌ಗಳನ್ನು ಸಂಪಾದಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಈ ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ ಕೇಂದ್ರಗಳನ್ನು ಯು.ಜಿ.ಸಿ (ವಿಶ್ವವಿದ್ಯಾಲಯ ಅನುದಾನ ಆಯೋಗ) ‘ಸೆಂಟರ್ ಆಫ್ ಎಕ್ಸೆಲೆನ್ಸ್ ಎಂದು ಗೌರವಿಸಿದೆ. ಚಾರಿತ್ರಿಕ ಅಧ್ಯಯನ, ಸಾಮಾಜಿಕ ವ್ಯವಸ್ಥೆಯ ಅಧ್ಯಯನ, ರಾಜಕೀಯ ಅಧ್ಯಯನ, ಆರ್ಥಿಕ ಮತ್ತು ಯೋಜನಾ ಅಧ್ಯಯನ, ಸ್ಥಳೀಯ ಅಭಿವೃದ್ಧಿಯ ಅಧ್ಯಯನ ಕೇಂದ್ರಗಳೆಲ್ಲ ಇಂತಹ ಗೌರವಕ್ಕೆ ಭಾಜನವಾಗಿರುವ ಕೇಂದ್ರಗಳಾಗಿವೆ.

ರಾಜೀವ್‌ಗಾಂಧಿ, ಅಪ್ಪಾದೊರೈ, ನೆಲ್ಸನ್ ಮಂಡೇಲ, ಡಾ.ಬಿ.ಆರ್. ಅಂಬೇಡ್ಕರ್, ಆರ್‌ಬಿಐ, ಎಸ್‌ಬಿಐ, ಸುಖೋಮಯ್ ಚಕ್ರವರ್ತಿ, ಎನ್ವಿರಾನ್‌ಮೆಂಟ್ ಲಾ ಮತ್ತಿತರ ಹೆಸರಿನ ಅಧ್ಯಯನ ಪೀಠಗಳು ಇಲ್ಲಿವೆ. ಜತೆಗೆ ಗ್ರೀಕ್, ತಮಿಳು, ಕನ್ನಡ ಮತ್ತಿತರ ಪೀಠಗಳೂ ಇವೆ. ಅಂತಹ ಕನ್ನಡ ಪೀಠದಲ್ಲಿ ಕನ್ನಡವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಲು- ಹಾರಿಸಲು ಸನ್ನದ್ಧರಾಗಿರುವ ಡಾ.ಪುರುಷೋತ್ತಮ ಬಿಳಿಮಲೆ ಅವರೂ ಇದ್ದಾರೆ.

ಆನ್‌ಲೈನ್ ಮೂಲಕ ಜಗತ್ತಿಗೆ ಕನ್ನಡ ಕಲಿಸುವ ಅವರ ಪ್ರಯತ್ನವೇ ಅತ್ಯಂತ ಅಪ್ಯಾಯಮಾನ. ಕನ್ನಡ ಕೃತಿಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡುವ, ಕನ್ನಡ ಸಾಹಿತ್ಯ- ಸಂಸ್ಕೃತಿಗೆ ಸಂಬಂಧಿಸಿ ನಿಜ ಅರ್ಥದಲ್ಲಿ ರಾಷ್ಟ್ರೀಯ- ಅಂತರರಾಷ್ಟ್ರೀಯ ವಿಚಾರ ಸಂಕಿರಣ ಸಂಯೋಜಿಸುವ ಅವರ ದೃಷ್ಟಿಕೋನವೇ ಹೊಸ– ಹೊಸತು. ಇಂತಹದ್ದೊಂದು ಸಾಹಸಕ್ಕೆ ಜೆ.ಎನ್‌.ಯುನ ಕನ್ನಡ ಪೀಠ ಮತ್ತು ಬಿಳಿಮಲೆ ಅವರ ಅಧ್ಯಕ್ಷಗಿರಿಯವರೆಗೆ ಕನ್ನಡ ಕಾಯಬೇಕಾಯಿತೆನ್ನಿ.

ಬಿಳಿಮಲೆ ಅವರ ಆತಂಕ ಇರುವುದೇ ಕನ್ನಡ ಸಂಶೋಧನೆಗೆ ಸೂಕ್ತ ಉತ್ತರಾಧಿಕಾರಿಗಳಿಲ್ಲ ಎನ್ನುವಲ್ಲಿ. ಇದೇ ಆತಂಕವನ್ನು ಮೊನ್ನೆ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲೂ ತೋಡಿಕೊಂಡಿದ್ದಾರೆ: ‘ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಕನ್ನಡ ಸಂಶೋಧನೆ ಈಗ ಅಧೋಮುಖಿಯಾಗಿದೆ. ಈಗ ಬರುತ್ತಿರುವ ಬಹುತೇಕ ಪಿಎಚ್‌.ಡಿ ಪ್ರಬಂಧಗಳು ಕಳಪೆಯಾಗಿವೆ. ಸೂಕ್ತ ಮಾರ್ಗದರ್ಶನದ ಕೊರತೆ, ತಮ್ಮ ಸಂಶೋಧನಾ ವಿದ್ಯಾರ್ಥಿಗಳ ಪ್ರಬಂಧ ಓದದ ಮಾರ್ಗದರ್ಶಕರು, ಸಂವಾದ ಇಲ್ಲದ ಸ್ಥಿತಿ, ದ್ವೇಷ- ಅಸೂಯೆ- ಇಂತಹ ಪರಿಸ್ಥಿತಿಯಿಂದ ಕನ್ನಡ ಸಂಶೋಧನೆಯ ಗುಣಮಟ್ಟ ಕಡಿಮೆ ಆಗುತ್ತಿದೆ ಎಂಬ ಸಹಜ ಆತಂಕ ಅವರದು.

ಈವತ್ತು ಜಗತ್ತಿನ ಅತ್ಯುತ್ಕೃಷ್ಟ ರೆಫರೆನ್ಸ್ ಪುಸ್ತಕಗಳಿಗಾಗಿ ಆಕ್ಸ್‌ಫರ್ಡ್- ಕೇಂಬ್ರಿಜ್- ಲಂಡನ್ ಮತ್ತಿತರ ವಿದೇಶಿ ವಿ.ವಿ.ಗಳ ಕಡೆಗೆ ನೋಡಬೇಕಾದ ಪರಿಸ್ಥಿತಿ ಇದೆ. ಯಾಕೆ ಭಾರತದ ವಿಶ್ವವಿದ್ಯಾಲಯಗಳಲ್ಲಿ ಇಂತಹ ಗುಣಮಟ್ಟದ ಗ್ರಂಥಗಳನ್ನು ಪ್ರಕಟಿಸಬಲ್ಲ ವಿಶ್ವವಿದ್ಯಾಲಯಗಳಿಲ್ಲವೆ? ಅಥವಾ ಸಂಪಾದಕರೋ- ಸಂಪನ್ಮೂಲ ವ್ಯಕ್ತಿಗಳೋ ಇಲ್ಲವೆ? ಅವರೆಲ್ಲ ಯಾಕೆ ವಿದೇಶಿ ವಿಶ್ವವಿದ್ಯಾಲಯಗಳಿಗೆ ಬರೆಯುತ್ತಾರೆ? ಕೃತಿ ಸಂಪಾದಿಸಿ ಕೊಡುತ್ತಾರೆ? ಇವು ಯಾವುದೇ ವಿಶ್ವವಿದ್ಯಾಲಯ ಶ್ರೇಷ್ಠತೆಯ ಹಾದಿಯನ್ನು ಕ್ರಮಿಸುವಲ್ಲಿ ಎದುರಾಗುವ ಪ್ರಶ್ನೆಗಳೇ ಆಗಿವೆ. ಇಂತಹ ಗಂಭೀರ ಸಮಸ್ಯೆಗಳನ್ನು ಬಗೆ ಹರಿಸದ ಹೊರತು ನಮ್ಮ ವಿಶ್ವವಿದ್ಯಾಲಯಗಳಿಗೆ ಉಳಿಗಾಲವಿಲ್ಲ.

ಪಂಪ ಹೇಳುವ ‘ಗೇಯದ ಗೊಟ್ಟಿಯಲಂಪಿನ ಇಂಪಿಗೆ ಆಗರಮಾದ ಮಾನಿಸರೆ ಮಾನಿಸರ್’. ಬನವಾಸಿ ಬಹುಶಃ ಅಂತಹವರ ವಿಶ್ವವಿದ್ಯಾಲಯ ಆಗಿದ್ದಿರಬೇಕು. ವಿದ್ಯಾಕೇಂದ್ರವಂತೂ ಆ ಕಾಲದಲ್ಲೇ ಆಗಿತ್ತು. ವಿಶ್ವವಿದ್ಯಾಲಯ ವಿಶ್ವದ ವಿದ್ಯೆಗಳ ಆಗರ ಆಗಬೇಕು. ಜಗತ್ತಿನ ಜ್ಞಾನಗಳ ವಿನಿಮಯದ ಬಂದರು ಆಗಬೇಕು. ಅಂದರೆ ಪ್ರತಿಯೊಂದು ವಿಶ್ವವಿದ್ಯಾಲಯಕ್ಕೂ ಶ್ರೇಷ್ಠತೆಯ ಕನಸನ್ನು ಹಚ್ಚುವ ಕೆಲಸವನ್ನು ನ್ಯಾಕ್ ಅರ್ಥಾತ್ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ ಮಾಡುತ್ತಿದೆ.

ಇಲ್ಲೂ ಸಮಸ್ಯೆಗಳಿವೆ. ಸಂಶೋಧನೆ ಮಾತ್ರ ಶ್ರೇಷ್ಠ ಎಂದೂ, ಸೃಜನಶೀಲ ಕನಿಷ್ಠ ಎಂದೂ ಪರೋಕ್ಷವಾಗಿ ಪ್ರಾಧ್ಯಾಪಕರು ಭಾವಿಸುವಂತಾಗಿದೆ. ಯಾಕೆಂದರೆ ಕಥೆ, ಕವಿತೆ, ಕಾದಂಬರಿಯಂತಹ ಸೃಜನಶೀಲ ಪ್ರಕಾರಗಳಲ್ಲಿ ಬರೆದರೆ ಶೈಕ್ಷಣಿಕ ನಿರ್ವಹಣೆಯ ಸೂಚ್ಯಂಕ(ಎ.ಪಿ.ಐ)ದಲ್ಲಿ ಯಾವುದೇ ಅಂಕ ಲಭಿಸುವುದಿಲ್ಲ. ಅಷ್ಟೇ ಅಲ್ಲ, ಪ್ರಶಸ್ತಿಗಳನ್ನು ಕೂಡ ಇದೇ ಸೂಚ್ಯಂಕದಲ್ಲಿ ಪ್ರಮುಖವಾಗಿ ಪರಿಗಣಿಸಿದ್ದು ಶೈಕ್ಷಣಿಕ ವಾತಾವರಣದಲ್ಲಿ ಅಪಾಯಕಾರಿ ಎಂದೇ ಎನ್ನಿಸುತ್ತಿದೆ.

ಕೇಂದ್ರ- ರಾಜ್ಯಗಳ ಸ್ವಾಯತ್ತತೆ
ಸ್ವಾಯತ್ತತೆಯ ಚರ್ಚೆಯಲ್ಲಿ ಎರಡು ಅಂಶಗಳನ್ನು ಅಗತ್ಯ ಗಮನಿಸಬೇಕಾಗಿದೆ. ಒಂದು ಯು.ಜಿ.ಸಿ ಪ್ರತಿಪಾದಿಸುವ ಸ್ವಾಯತ್ತತೆ. ಇನ್ನೊಂದು ಹಂಪಿ ವಿ.ವಿ. ಪ್ರತಿಪಾದಿಸುವ ಸ್ವಾಯತ್ತತೆ. ಯು.ಜಿ.ಸಿ ಪ್ರತಿಪಾದಿಸುವ ಸ್ವಾಯತ್ತತೆ ಆರ್ಥಿಕ ಸ್ವಾವಲಂಬನೆಯನ್ನು ಕೂಡಾ ಹೊಂದಿದೆ. ಹಂಪಿ ವಿ.ವಿ. ಪ್ರತಿಪಾದಿಸುವ ಸ್ವಾಯತ್ತತೆ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲಿರುವ ಹೊಸ ವಿಶ್ವವಿದ್ಯಾಲಯ ಕಾಯ್ದೆಗೆ ಸಂಬಂಧಿಸಿದೆ. ಹೊಸ ಕಾಯ್ದೆಯಿಂದ ತನಗೆ ವಿನಾಯಿತಿ ನೀಡಬೇಕೆಂದು ಹೇಳುತ್ತಿದೆ.

ಹಂಪಿ ವಿವಿ ಉಳಿದ ವಿಶ್ವವಿದ್ಯಾಲಯಗಳಂತಲ್ಲ. ಅದು 1991ರ ವಿಶೇಷ ಕಾಯ್ದೆಯ ಪ್ರಕಾರ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಆಮೂಲಾಗ್ರ ಅಧ್ಯಯನಕ್ಕೆ ಹುಟ್ಟಿಕೊಂಡ ವಿದ್ಯಾಕೇಂದ್ರ. 1925ರ ಹೊತ್ತಿಗೇ ಇಂತಹದ್ದೊಂದು ಕನಸು ಏಕೀಕರಣದ ಕಟ್ಟಾಳುಗಳಲ್ಲಿ ಚಿಗುರಿಕೊಂಡದ್ದೂ ಇದೆ. ಅದರ ಫಲವೇ ಹಂಪಿಯ ಕನ್ನಡ ವಿ.ವಿ.

ಈ ವಿಶ್ವವಿದ್ಯಾಲಯ ಇಪ್ಪತ್ತೈದು ವರ್ಷಗಳನ್ನು ಪೂರೈಸಿದೆ. ಬಾಲ್ಯ ಕಳೆದು ಪ್ರೌಢಾವಸ್ಥೆ ತಲುಪಿದೆ. ಈಗ ಹಂಪಿ ವಿ.ವಿ.ಯ ದೃಷ್ಟಿ ಅಂತರರಾಷ್ಟ್ರೀಯ ಕನ್ನಡ ಕೇಂದ್ರವಾಗುವತ್ತ ಹೊರಳಬೇಕಾಗಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಗ್ರಂಥ ಪ್ರಕಟಣೆ, ದೇಸಿ- ಮಾರ್ಗಗಳ ಅತಿರೇಕಗಳ ನಿವಾರಣೆ, ದ್ರಾವಿಡ ಭಾಷೆಗಳ ನಡುವೆ ಪರಸ್ಪರ ಸಂವಹನ-ಅನುವಾದ, ಜಾಗತಿಕ ಸಾಹಿತ್ಯ- ಸಾಂಸ್ಕೃತಿಕ ವಿಚಾರ ಸಂಕಿರಣಗಳಲ್ಲಿ ಕನ್ನಡ ಸಂಶೋಧನಾ ಪ್ರಬಂಧಗಳ ಮಂಡನೆ, ಜಾಗತಿಕಮಟ್ಟದ ವಿಚಾರ ಸಂಕಿರಣ- ಬೇಸಿಗೆ ಶಿಬಿರಗಳ ಆಯೋಜನೆ- ಇತ್ಯಾದಿಗಳನ್ನು ನಡೆಸಬೇಕಾಗಿದೆ.

ಜಾಗತಿಕ ನೆಲೆಯಲ್ಲಿ ಬೆಳೆಯಬೇಕಿದ್ದರೆ ಸರ್ಕಾರ ಈ ವಿ.ವಿ.ಗೆ ಹೆಚ್ಚಿನ ಅನುದಾನ- ಆರ್ಥಿಕ ಸ್ವಾಯತ್ತತೆಯನ್ನು ನೀಡಬೇಕಾಗಿದೆ. ಜತೆಗೆ ಕನ್ನಡ ವಿ.ವಿ. ಶ್ರೇಷ್ಠ ವಿವಿಯಾಗಿ ಮಾನ್ಯತೆಯನ್ನೂ ಆರ್ಜಿಸಿಕೊಳ್ಳಬೇಕಾಗಿದೆ. ಈಗಾಗಲೇ ಕನ್ನಡ ವಿ.ವಿ. ಕನ್ನಡ ಮೌಖಿಕ ಕಾವ್ಯಗಳ ಅನುವಾಧ ‘ಸ್ಟ್ರಿಂಗ್ಸ್ ಅಂಡ್ ಸಿಂಬಲ್ಸ್, ವಚನಗಳ ಅನುವಾದದ ಸೈನ್’ ನಂತಹ ಉತ್ಕೃಷ್ಟ ಕೃತಿಗಳನ್ನು ಹೊರತಂದಿದೆ. ಇಂತಹ ಸಂಪಾದಿತ ಕೃತಿಗಳು ಹೆಚ್ಚು ಹೆಚ್ಚು ಬೆಳಕು ಕಾಣಬೇಕಾಗಿದೆ. ಕೃತಿಗಾಗಿ ಕೃತಿ ಪ್ರಕಟಣೆಗಿಂತ ಇಂತಹ ಮೌಲಿಕ ಕೃತಿಗಳ ಪ್ರಕಟಣೆಯೇ ವಿವಿಗೆ ಶೋಭೆ ತರುತ್ತದೆ.

ಜಾಗತಿಕ ವಿಶ್ವವಿದ್ಯಾಲಯಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುವ ವಿಚಾರ ಸಂಕಿರಣಗಳಲ್ಲಿ ಇಲ್ಲಿನ ಜಾತಿ ರಾಜಕರಾಣವಾಗಲೀ, ಸ್ಥಳೀಯ ಪುಢಾರಿಗಿರಿಯಾಗಲೀ, ವಶೀಲಿಬಾಜಿ, ಗುಂಪುಗಾರಿಕೆ ಇತ್ಯಾದಿ ಯಾವುದೂ ನಿಲ್ಲುವುದಿಲ್ಲ. ಸಂಶೋಧನಾ ಪ್ರಬಂಧವೊಂದರ ಶ್ರೇಷ್ಠತೆಯೇ ಅಲ್ಲಿ ಮಾನದಂಡ. ಅತ್ಯುತ್ಕೃಷ್ಟ ಆಲೋಚನೆಗಳಿಗೇ ಅಲ್ಲಿ ಮಣೆ- ಮನ್ನಣೆ. ಕಣ್ಣುಮುಚ್ಚಿ ಗುಣಮಟ್ಟದ ಸಂಶೋಧನಾ ಪ್ರಬಂಧಗಳನ್ನು ಆಯ್ಕೆ ಮಾಡುವ ತಜ್ಞರ ತಂಡ ಅಲ್ಲಿರುತ್ತದೆ. ಅಂತಹ ಸಂಕಿರಣಗಳಲ್ಲಿ ಪಾಲ್ಗೊಳ್ಳುವಂತೆ ವಿ.ವಿ ಪ್ರೋತ್ಸಾಹ ನೀಡಬೇಕಾಗಿದೆ.

ತನ್ನ ವಿಚಾರ ಸಂಕಿರಣಗಳಲ್ಲಿ ಉದಯೋನ್ಮುಖ ಸಂಶೋಧಕರಿಂದ ಪ್ರಬಂಧಗಳ ಸಾರಲೇಖಗಳನ್ನು ಆಹ್ವಾನಿಸಿ ಆಯ್ಕೆ ಮಾಡಿ ಉತ್ತೇಜಿಸಬೇಕಾಗಿದೆ. ಅದು ವಿ.ವಿ. ಪ್ರಜಾಪ್ರಭುತ್ವೀಕರಣಕ್ಕೆ ಒಳಗಾಗುವ ನಿಜವಾದ ಮಾದರಿ. ಕನ್ನಡ ವಿ.ವಿ. ಜಾಗತಿಕ ವಿದ್ಯಾಸಂಸ್ಥೆಗಳ ಜತೆಗೆ ಸಾಹಿತ್ಯಿಕ- ಸಾಂಸ್ಕೃತಿಕ ಯೋಜನೆಗಳ- ಪ್ರಕಟಣೆಗಳ ಒಪ್ಪಂದಗಳನ್ನು ಮಾಡಿಕೊಳ್ಳಬೇಕಾಗಿದೆ.

ಸಂಶೋಧನೆಯ ಒತ್ತಡ ಕೃತಿಚೌರ್ಯಕ್ಕೆ ಎಡೆಮಾಡಿಕೊಡದಂತೆ ನೋಡಿಕೊಳ್ಳಬೇಕಾಗಿದೆ. ಪುನಶ್ಚೇತನ- ಬೇಸಿಗೆ ಶಿಬಿರಗಳನ್ನು ಆಯೋಜಿಸುವ ಯು.ಜಿ.ಸಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಅಗತ್ಯವಂತೂ ಇದ್ದೇ ಇದೆ. ಉಳಿದ ದ್ರಾವಿಡ ವಿವಿಗಳ ಜತೆಗೆ ಸೇರಿ ಆಯೋಜಿಸಬಹುದಾದ ಕಾರ್ಯಕ್ರಮಗಳು, ಅನುಷ್ಠಾನಗೊಳಿಸಬಹುದಾದ ಯೋಜನೆಗಳೂ ಸಾಕಷ್ಟಿವೆ.

ತಮಿಳುನಾಡಿನ ತಂಜಾವೂರಿನಲ್ಲಿರುವ ತಮಿಳು ವಿಶ್ವವಿದ್ಯಾಲಯವಾಗಲೀ, ತೆಲಂಗಾಣದ ಹೈದರಾಬಾದ್‌ನಲ್ಲಿರುವ ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯವಾಗಲೀ ಕೇರಳದ ತಿರೂರ್‌ನಲ್ಲಿರುವ ತುಂಜತ್ತ್ ಎೞುತ್ತಚ್ಚನ್ ಮಲಯಾಳಂ ವಿಶ್ವವಿದ್ಯಾಲಯವಾಗಲೀ ಕೇವಲ ಸಂಶೋಧನೆಗೆ ಸೀಮಿತಗೊಳಿಸಿಕೊಂಡ ವಿಶ್ವವಿದ್ಯಾಲಯಗಳಲ್ಲ. ಅವು ಭಾಷೆ- ಸಾಹಿತ್ಯ- ಸಂಸ್ಕೃತಿಗೆ ಸಂಬಂಧಿಸಿದ ಎಲ್ಲ ಆಯಾಮಗಳನ್ನು ಒಳಗೊಳ್ಳುತ್ತವೆ. ಹಾಗಾಗಿಯೇ ತೆಲುಗು ವಿಶ್ವವಿದ್ಯಾಲಯದ ಜಾಗತಿಕ ಕೇಂದ್ರ ಜಗತ್ತಿನಾದ್ಯಂತ ಇರುವ ತೆಲುಗು ಭಾಷಿಕರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ತಮಿಳು ವಿಶ್ವವಿದ್ಯಾಲಯ ಜಗತ್ತಿನ ತಮಿಳರನ್ನು ತಬ್ಬಿಕೊಳ್ಳುತ್ತದೆ. ಮಲಯಾಳ ವಿ.ವಿ. ಲೋಕದಾದ್ಯಂತ ಇರುವ ಮಲಯಾಳಿಗಳನ್ನು ಆವರಿಸಿಕೊಳ್ಳುತ್ತದೆ. ಕನ್ನಡ ವಿಶ್ವವಿದ್ಯಾಲಯವೊಂದು ವಿಶ್ವವ್ಯಾಪಕ ಆಗುವುದನ್ನು ಕನ್ನಡಿಗರೂ ನಿರೀಕ್ಷಿಸುವುದು ಸಹಜ.

*
ತಮಿಳು ವಿಶ್ವವಿದ್ಯಾಲಯ
ನ್ಯಾಕ್ ಬೆಂಚ್‌ಮಾರ್ಕ್ ಫೋರ್ ಎಕ್ಸಲೆನ್ಸ್ ತಂಜಾವೂರು ತಮಿಳುನಾಡು
ಧ್ಯೇಯ ವಾಕ್ಯ:
ಉಳುವುದೆಲ್ಲಾಂ ಉಯರ್‌ವುಳ್ಳೈ (ನೀವೇನು ಯೋಚಿಸುತ್ತೀರೋ ಉನ್ನತವಾದದ್ದನ್ನೇ ಯೋಚಿಸಿ)
ತಮಿಳು ಭಾಷೆ- ಸಾಹಿತ್ಯ- ಸಂಸ್ಕೃತಿ ಅಧ್ಯಯನಕ್ಕಾಗಿ ರೂಪುಗೊಂಡ ವಿ।ವಿ ತಂಜಾವೂರಿನ ತಮಿಳು ವಿಶ್ವವಿದ್ಯಾಲಯ. ತಮಿಳು ವಿ.ವಿ ಕಾಯ್ದೆಯ ಪ್ರಕಾರ 1981ರಲ್ಲಿ ಸ್ಥಾಪನೆಗೊಂಡಿದೆ. 1925ರಲ್ಲಿ ತಮಿಳುನಾಡಿನ ಮಧುರೈಯಲ್ಲಿ ನಡೆದ ಜಾಗತಿಕ ತಮಿಳು ಸಮ್ಮೇಳನದಲ್ಲೇ ಈ ವಿವಿಗೆ ಬೀಜಾಂಕುರ. ಆರಂಭದಲ್ಲಿ ಸಂಶೋಧನೆಗೆ ಮಾತ್ರ ಗಮನಕೊಡುತ್ತಿದ್ದ ವಿಶ್ವವಿದ್ಯಾಲಯ ಅನಂತರ 1992ರಲ್ಲಿ ಎಂ.ಫಿಲ್, ಪಿಎಚ್‌.ಡಿ, 2002ರಲ್ಲಿ ಮಾನವಿಕದಲ್ಲಿ ಸ್ನಾತಕೋತ್ತರ ತರಗತಿ, 2005ರಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ, ಸರ್ಟಿಫಿಕೇಟ್, ಡಿಪ್ಲೊಮ, ದೂರಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸಿದೆ.

ತಮಿಳಿನಿಂದ ಇತರ ಭಾಷೆಗಳಿಗೆ, ಇತರ ಭಾಷೆಗಳಿಂದ ತಮಿಳಿಗೆ ಭರಪೂರ ಅನುವಾದ ಕಾರ್ಯ ನಡೆಯುತ್ತಿದೆ. ಕಲಾ ನಿಕಾಯದಲ್ಲಿ ಶಿಲ್ಪ, ಸಂಗೀತ, ನಾಟಕ, ಹಸ್ತಪ್ರತಿ ವಿಭಾಗಗಳಿವೆ. ತಮಿಳು ಅಭಿವೃದ್ಧಿಯಲ್ಲಿ ವಿದೇಶದ ತಮಿಳು ಅಧ್ಯಯನ, ಅನುವಾದ, ನಿಘಂಟು, ಸಮಾಜ ವಿಜ್ಞಾನ, ವೈಜ್ಞಾನಿಕ ತಮಿಳು, ಶಿಕ್ಷಣ- ಆಡಳಿತ ನಿರ್ವಹಣೆ ವಿಭಾಗಗಳಿವೆ. ಹೀಗೆ ತಾಳೆಗರಿ, ಅಪೂರ್ವ ಕಾಗದ, ಶಾಸನ- ಪುರಾತತ್ವ, ಸಾಗರ ಚರಿತ್ರೆ, ಸಾಗರ ಪುರಾತತ್ವ ವಿಭಾಗಗಳನ್ನೊಳಗೊಂಡ ಹಸ್ತಪ್ರತಿ ನಿಕಾಯ, ಪ್ರಾಚೀನ ವಿಜ್ಞಾನ, ಕೈಗಾರಿಕೆ, ಸಿದ್ಧೌಷಧ ವಾಸ್ತುಶಾಸ್ತ್ರ, ಗಣಕ, ಪರಿಸರ ವಿಭಾಗಗಳನ್ನೊಳಗೊಂಡ ವಿಜ್ಞಾನ ನಿಕಾಯ. ಇಲ್ಲಿನ ಭಾಷಾ ನಿಕಾಯದಲ್ಲಿ ಸಾಹಿತ್ಯ, ಭಾಷಾವಿಜ್ಞಾನ, ತತ್ವಶಾಸ್ತ್ರ, ಬುಡಕಟ್ಟು, ಜಾನಪದ, ಭಾರತೀಯ ಭಾಷೆಗಳ ಅಧ್ಯಯನಕ್ಕೆ ಸಂಬಂಧಿಸಿದ ವಿಭಾಗಗಳಿವೆ.

*
ಕನ್ನಡ ವಿಶ್ವವಿದ್ಯಾಲಯ
ನ್ಯಾಕ್ ಎ ಗ್ರೇಡ್ (3.02)
ಹಂಪಿ ಕರ್ನಾಟಕ
ಧ್ಯೇಯವಾಕ್ಯ: ಮಾತೆಂಬುದು ಜ್ಯೋತಿರ್ಲಿಂಗಂ
ಕನ್ನಡದ ಜ್ಞಾನವನ್ನು ಜಗತ್ತಿಗೆ ಮತ್ತು ಜಗತ್ತಿನ ಜ್ಞಾನವನ್ನು ಕನ್ನಡಕ್ಕೆ ಒದಗಿಸಬೇಕೆಂಬ ಉದ್ದೇಶದೊಂದಿಗೆ ಆರಂಭಗೊಂಡ ವಿಶ್ವವಿದ್ಯಾಲಯ ಇದು. ಕನ್ನಡವನ್ನು ವಿಶ್ವಪ್ರಜ್ಞೆಯಾಗಿಸುವತ್ತ ಇದರ ತುಡಿತ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆ ಒಳಗೊಂಡ ಅನನ್ಯ ಅಭಿವ್ಯಕ್ತಿಯ ಕಡೆಗೆ ಇದರ ಗಮನ.

ಕನ್ನಡ ವಿ.ವಿ. ಅಧಿನಿಯಮ 1991ರ ಕಾಯ್ದೆ ಪ್ರಕಾರ ‘ಕನ್ನಡ ಭಾಷೆ-ಸಾಹಿತ್ಯ ಸಂಶೋಧನೆಯ ಉನ್ನತ ಕೇಂದ್ರವಾಗಬೇಕೆಂಬ ಹಂಬಲ ಇಟ್ಟುಕೊಂಡು ಹುಟ್ಟಿಕೊಂಡ ಈ ವಿವಿಯಲ್ಲಿ ಭಾಷೆ, ಲಲಿತ ಕಲೆ, ಸಮಾಜ ವಿಜ್ಞಾನ ನಿಕಾಯಗಳಲ್ಲಾಗಿ 17 ವಿಭಾಗಗಳಿವೆ. ಸಂಯೋಜಿತ ಕೋರ್ಸ್‌ಗಳಾದ ಎಂ.ಎ+ ಪಿ.ಎಚ್‌ಡಿ. ಇಲ್ಲಿನ ವೈಶಿಷ್ಟ್ಯ. ವಿವಿಧ ಅಧ್ಯಯನ ಪೀಠಗಳೂ ಇಲ್ಲಿವೆ. ದೂರಶಿಕ್ಷಣದ ಕೋರ್ಸ್‌ಗಳು ಇಲ್ಲಿವೆ. 1,400ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಗೊಳಿಸಿದ ಪ್ರಸಾರಾಂಗ ಇದೆ. ವಿವಿಧ ನಿಯತಕಾಲಿಕೆಗಳ ಪ್ರಕಟಣೆ ಕೂಡ ನಡೆಯುತ್ತಿದೆ.

*
ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯ
ನ್ಯಾಕ್ ಬಿ ಗ್ರೇಡ್ (2.57)
ಹೈದರಾಬಾದ್, ತೆಲಂಗಾಣ
೧೯೭೫ರಲ್ಲಿ ಹೈದರಾಬಾದ್‌ನಲ್ಲಿ ನಡೆದ ವಿಶ್ವತೆಲುಗು ಸಮ್ಮೇಳನದ ನಿರ್ಣಯದಂತೆ ಆರಂಭಗೊಂಡ ಅಂತರರಾಷ್ಟ್ರೀಯ ತೆಲುಗು ಕೇಂದ್ರ ಅನಂತರ ತೆಲುಗು ವಿವಿಯಲ್ಲಿ ವಿಲೀನಗೊಂಡಿದೆ. ಈ ಕೇಂದ್ರ ಮೊದಲಿಗೆ ಅನಿವಾಸಿ ತೆಲುಗರಿಗೆ ಪಠ್ಯಪುಸ್ತಕಗಳನ್ನು ಒದಗಿಸುವ ಕೆಲಸಮಾಡಿತು. ದೇಶವಿದೇಶದಲ್ಲಿರುವ ತೆಲುಗು ಮೂಲದವರಿಗೆ ತೆಲುಗು ಕಲಿಸುವ, ಹೊರರಾಜ್ಯ-ದೇಶಗಳಲ್ಲಿ ತೆಲುಗು ಕಲಿಸುವ ಶಾಲೆಗಳಿಗೆ ಅನುದಾನ, ಪುಸ್ತಕ ಖರೀದಿಗೆ ನೆರವು, ತೆಲುಗೇತರ ಪ್ರದೇಶದಲ್ಲಿ ತೆಲುಗು ಡಿಪ್ಲೊಮ ಕೋರ್ಸ್ ಆಯೋಜಿಸಿತು. ಆಧುನಿಕ ತೆಲುಗು, ಕರ್ನಾಟಕ ಸಂಗೀತ, ಕೂಚಿಪುಡಿಗಳಲ್ಲಿ ಸರ್ಟಿಫಿಕೇಟ್ ಕೋರ್ಸ್ ನಡೆಸುತ್ತಿದೆ. ಈಗ ಈ ಕೇಂದ್ರ ತೆಲುಗು ವಿ.ವಿಯ ಭಾಗ.

ತೆಲುಗು ವಿವಿಗೆ ವಾರಂಗಲ್‌ನಲ್ಲಿ ಜನಪದ, ಬುಡಕಟ್ಟು ನಿಕಾಯ ಇದೆ, ರಾಜಮಂಡ್ರಿಯಲ್ಲಿ ನನ್ನಯ ಸಾಹಿತ್ಯ ಪೀಠ ಇದೆ. ಕೂಚಿಪುಡಿಯಲ್ಲಿ ಶ್ರೀಸಿದ್ಧೇಂದ್ರ ಯೋಗಿ ಕಲಾಪೀಠ ಇದೆ. ಶ್ರೀಶೈಲಂನಲ್ಲಿ ಚರಿತ್ರೆ, ಸಂಸ್ಕೃತಿ, ಪುರಾತತ್ವ ಶಾಸ್ತ್ರಗಳ ನಿಕಾಯ ಇದೆ. ಡಿಪ್ಲೊಮ, ಸ್ನಾತಕೋತ್ತರ, ಪಿಎಚ್‌.ಡಿ ಅಧ್ಯಯನಕ್ಕೆ ಅವಕಾಶ ಇದೆ. ತೆಲುಗು, ಪತ್ರಿಕೋದ್ಯಮ, ಚರಿತ್ರೆ, ನೃತ್ಯ, ಚಿತ್ರಕಲೆ, ಜ್ಯೋತಿಷ, ಪ್ರದರ್ಶನ ಕಲೆ, ಸಮಾಜ ವಿಜ್ಞಾನ, ಜನಪದ-ತೌಲನಿಕ ಅಧ್ಯಯನಕ್ಕೆ ಅವಕಾಶ ಒದಗಿಸಲಾಗಿದೆ. ತೆಲುಗು ವಿ.ವಿ 100 ಎಕರೆ ಪ್ರದೇಶದಲ್ಲಿ ಕ್ಯಾಂಪಸ್ ಹೊಂದಿದೆ.

*
ತುಂಜತ್ ಎೞುತ್ತಚ್ಚನ್ ಮಲಯಾಳಂ ವಿಶ್ವವಿದ್ಯಾಲಯ
ತಿರೂರ್ ಕೇರಳ
ಧ್ಯೇಯವಾಕ್ಯ: ಶ್ರೇಷ್ಠಂ ಮಲಯಾಳಂ
2012ರಲ್ಲಿ ಕೇರಳ ಸರ್ಕಾರದ ಸುಗ್ರೀವಾಜ್ಞೆ ಪ್ರಕಾರ ಆರಂಭಗೊಂಡ ವಿಶ್ವವಿದ್ಯಾಲಯ ಇದು. ಮಲಯಾಳ ಭಾಷೆ, ಸಾಹಿತ್ಯ, ಕೇರಳ ಸಂಸ್ಕೃತಿ ಅಧ್ಯಯನಕ್ಕೆ ಉತ್ತೇಜನ ಮುಖ್ಯ ಉದ್ದೇಶ. ಮಲಯಾಳ ಮಾಧ್ಯಮದಲ್ಲೇ ಸ್ನಾತಕೋತ್ತರ ಮತ್ತು ಸಂಶೋಧನಾ ಅಧ್ಯಯನ ಕೈಗೊಳ್ಳಬಹುದಾಗಿದೆ. ಭಾಷಾ ವಿಜ್ಞಾನ, ಸಾಹಿತ್ಯ, ಮಲಯಾಳ ಸಾಹಿತ್ಯ, ಮಲಯಾಳ ಸೃಜನಶೀಲ ಬರಹ, ಪತ್ರಿಕೋದ್ಯಮ, ಸಮೂಹ ಮಾಧ್ಯಮ, ಸಮಾಜ ವಿಜ್ಞಾನ ವಿಭಾಗಗಳು ಇಲ್ಲಿವೆ. ಇವೇ ವಿಷಯಕ್ಕೆ ಸಂಬಂಧಿಸಿದ ಸ್ನಾತಕೋತ್ತರ ಕೋರ್ಸ್‌ಗಳೂ ಇಲ್ಲಿವೆ. ಇವೆಲ್ಲ ಸೇರಿದಂತೆ ಸ್ಥಳೀಯಾಭಿವೃದ್ಧಿ, ಚರಿತ್ರೆ, ಸಿನಿಮಾ ಅಧ್ಯಯನ, ಪರಿಸರ ಅಧ್ಯಯನಗಳಲ್ಲಿ ಸ್ನಾತಕೋತ್ತರ ಪದವಿ, ಎಂ.ಫಿಲ್, ಪಿಎಚ್‌.ಡಿ ಅಧ್ಯಯನಕ್ಕೆ ಅವಕಾಶ ಇದೆ.

*
ದ್ರಾವಿಡ ವಿಶ್ವವಿದ್ಯಾಲಯ
ಕುಪ್ಪಂ ಆಂಧ್ರಪ್ರದೇಶ
ಇದು ಅಂತರ್‌ರಾಜ್ಯ ವಿಶ್ವವಿದ್ಯಾಲಯ. ದ್ರಾವಿಡ ಭಾಷೆಗಳ ಸಮಗ್ರ ಅಭಿವೃದ್ಧಿ ಈ ವಿವಿಯ ಮುಖ್ಯ ಉದ್ದೇಶ. ಉನ್ನತ ತರಬೇತಿ, ಆಧುನಿಕ ತಂತ್ರಜ್ಞಾನ ಬಳಕೆ, ವಿವಿಧ ವಿವಿಗಳ ಜತೆಗೆ ಸಹಕಾರ, ದೇಶದಾದ್ಯಂತ ವಿಸ್ತರಣಾ ಕಾರ್ಯಕ್ರಮ ಆಯೋಜನೆ ಇತ್ಯಾದಿ ಈ ವಿ.ವಿಯ ಗುರಿ. ದ್ರಾವಿಡ ಭಾಷೆ- ಸಾಹಿತ್ಯದ ಜತೆಗೆ ಆಧುನಿಕ ವೈದ್ಯಕೀಯ, ಎಂಜಿನಿಯರಿಂಗ್, ವಿಜ್ಞಾನ, ತಂತ್ರಜ್ಞಾನ ವಿಷಯಗಳ ಅಧ್ಯಯನ ಕೂಡ ಒಳಗೊಂಡಿದೆ. ಅನುವಾದ ಕೂಡ ಈ ವಿವಿಯ ಮುಖ್ಯ ಚಟುವಟಿಕೆ.

ಮೂರು ಭಾಷೆಗಳ ಸಂಗಮಭೂಮಿಯಾದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ 1997ರಲ್ಲಿ ಈ ವಿ.ವಿಯ ಸ್ಥಾಪನೆ. ಎಂಟು ಕಿಲೋಮೀಟರ್ ದೂರದಲ್ಲಿ ತಮಿಳುನಾಡು, ನಾಲ್ಕು ಕಿ.ಮೀ. ದೂರದಲ್ಲಿ ಕರ್ನಾಟಕ, ನಾಲ್ಕು ಗಂಟೆ ಸಾಗಿದರೆ ಕೇರಳದಲ್ಲಿ ಸಿಗುವ ಊರು ಕುಪ್ಪಂ.

ಆಂಧ್ರವಿಧಾನ ಸಭೆಯ ನಿರ್ಣಯದಂತೆ ಆರಂಭಗೊಂಡ ವಿ.ವಿ ಇದು. ಕರ್ನಾಟಕ, ಕೇರಳ, ತಮಿಳುನಾಡು ಸರ್ಕಾರಗಳ ಸಹಕಾರ ಕೂಡ ಇದೆ. ವೇಮನ ಭವನ, ತಿರುವಳ್ಳುವರ್ ಭವನ, ನಾರಾಯಣ ಗುರುಭವನ, ಬಸವ ಭವನ ಸ್ಥಾಪಿಸಲಾಗಿದೆ. ಸಾವಿರ ಎಕರೆ ಪ್ರದೇಶದಲ್ಲಿ ಚಾಚಿಕೊಂಡಿರುವ ವಿ.ವಿ ಇದು.

ವಾಣಿಜ್ಯ- ಆಡಳಿತ ನಿರ್ವಹಣೆ, ತೌಲನಿಕ ಸಾಹಿತ್ಯ- ಅನುವಾದ, ಶಿಕ್ಷಣ- ಮಾನವ ಸಂಪನ್ಮೂಲ, ಗಿಡಮೂಲಿಕೆ ಔಷಧ- ನೈಸರ್ಗಿಕ, ಮಾನವ- ಸಮಾಜ ವಿಜ್ಞಾನ, ವಿಜ್ಞಾನ- ತಂತ್ರಜ್ಞಾನ ನಿಕಾಯಗಳು ಇಲ್ಲಿವೆ. ದ್ರವಿಡಿಯನ್ ಸ್ಟಡೀಸ್ ಎಂಬ ಇಂಗ್ಲಿಷ್ ಜರ್ನಲ್ ಪ್ರಕಟವಾಗುತ್ತಿದೆ. ಜಗತ್ತಿನ ಮೊತ್ತಮೊದಲ ತುಳು ವಿಭಾಗವನ್ನು ಆರಂಭಿಸಿದ ಹೆಮ್ಮೆಯೂ ಈ ವಿಶ್ವವಿದ್ಯಾಲಯಕ್ಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT