6

ಸಂಶೋಧನೆಗೇ ಬದುಕನ್ನು ಮೀಸಲಾಗಿಟ್ಟ ಡಾ. ಎಸ್. ವಿದ್ಯಾಶಂಕರ

Published:
Updated:
ಸಂಶೋಧನೆಗೇ ಬದುಕನ್ನು ಮೀಸಲಾಗಿಟ್ಟ ಡಾ. ಎಸ್. ವಿದ್ಯಾಶಂಕರ

ಡಾ.ಎಸ್. ವಿದ್ಯಾಶಂಕರರು ಜನಿಸಿದಾಗ ಅವರ ತಂದೆ ತಾಯ್ಗಳು, ಮಗುವಿಗೆ ವಿದ್ಯಾಶಂಕರ ಎಂಬ ಹೆಸರಿಟ್ಟರೂ ಅವರಿಗೆ ಆ ಹೆಸರಿನ ಸೂಚ್ಯರ್ಥ ಖಂಡಿತ ಹೊಳೆದಿರಲಿಲ್ಲ. ಮಗು ಬೆಳೆದು ಪ್ರಬುದ್ಧನಾಗಿ, ಪದವಿ ಮುಗಿಸಿ, ಕೆಲಸಕ್ಕೆ ಸೇರಿದಮೇಲೆ ಅವರು ತಮ್ಮ ತಂದೆ ತಾಯ್ಗಳು ಹೆಸರಿಟ್ಟುದನ್ನು ಸಾರ್ಥಕಪಡಿಸಿಕೊಂಡರು. ಬದುಕಲ್ಲೇ ‘ವಿದ್ಯೆ’ಯಿಂದ ‘ಶಂಕರ’ರಾದವರು, ಪವಿತ್ರರಾದವರು (ಶಂಕರ=ಪವಿತ್ರಗೊಳಿಸುವಿಕೆ, ಶಿವ).

ಬೆಂಗಳೂರಿನ ನನ್ನ ಮನೆಗೂ ಅವರ ಮನೆಗೂ ತೀರ ಸಮೀಪ. ನನ್ನ ಮನೆಯಿಂದ ಚಿಕ್ಕ ದಿಬ್ಬ ಇಳಿದು ಒಂದು ತಗ್ಗು ದಾಟಿ ಇನ್ನೊಂದು ಚಿಕ್ಕ ದಿಬ್ಬ ಏರಿದರೆ ಅವರ ಮನೆ. ಸದಾ ವ್ಯಾಸಂಗಮಗ್ನರಾಗಿದ್ದ ಅವರ ಸ್ವಂತ ಗ್ರಂಥಾಲಯ ಅಪೂರ್ವ ವಿರಳ ಗ್ರಂಥಗಳ ಸಂಗ್ರಹವಾಗಿದ್ದು, ನನಗೆ ಬೇರಾವ ಪುಸ್ತಕ ಪಡೆಯಲು ದೂರವಾಣಿ ಮಾಡಿದರೆ ಐದು-ಹತ್ತು ನಿಮಿಷಗಳಲ್ಲಿ ಅವರಿಂದ ನನಗೆ ತಲುಪುತ್ತಿತ್ತು; ನಾನೇ ಹತ್ತು ನಿಮಿಷ ನಡೆದು ಹೋಗಿ ನನಗೆ ಬೇಕಾದ್ದು ತರುತ್ತಿದ್ದೆ; ಅವರ ಪುಸ್ತಕ ವಾಪಸ್ ಕೊಡುತ್ತಿದ್ದೆ. ಅವರ ಜೊತೆ ಮುಖಾಮುಖಿಯಾಗಿ ಚರ್ಚಿಸಿದ್ದೇನೆ; ವಾದಿಸಿದ್ದೇನೆ. ಅವರು ಸದಾ ಮಂದಸ್ಮಿತರಾಗಿ ಭಿನ್ನಾಭಿಪ್ರಾಯಗಳನ್ನು ಕೇಳಿ ಗೌರವಿಸುತ್ತಿದ್ದರು-ಆದರೆ ಆ ಚರ್ಚೆ ಎಂದೂ ಮನಸ್ತಾಪಕ್ಕೆ ಅವಕಾಶ ನೀಡಲಿಲ್ಲ. ಅಭಿಪ್ರಾಯಭೇದ ಬೇರೆ, ಸ್ನೇಹ ಬೇರೆ ಎಂಬುದನ್ನು ಅಕ್ಷರಶಃ ಪರಿಪಾಲಿಸಿದವರು.

ಸದಾ ಮಂದಸ್ಮಿತರು. ಅವರ ಮನೆಗೆ ನಾನು ಹೋದಾಗಲೆಲ್ಲ ಅವರು ತಮ್ಮ ಕೊಠಡಿಯಿಂದ ತಾವು ಓದುತ್ತಿದ್ದ ಗ್ರಂಥವನ್ನೋ ಬರೆಯುತ್ತಿದ್ದ ಪೆನ್ನನ್ನೋ ಕೈಯಲ್ಲಿ ಹಿಡಿದು ನನ್ನ ಜೊತೆ ಮಾತನಾಡಿ, ಚರ್ಚಿಸಿ, ನನ್ನನ್ನು ಕಳುಹಿಸಿ ತಾವು ಮತ್ತೆ ಅದೇ ಭಂಗಿಯಲ್ಲಿ ಓದುವ ಕೋಣೆಗೆ ತೆರಳುತ್ತಿದ್ದರು. ಅವರು ಪ್ರಾಧ್ಯಾಪಕರಾಗಿ ನಿವೃತ್ತರಾದ ಮೇಲೆ ನಿಜವಾದ ‘ವಿದ್ಯಾರ್ಥಿ’ ಆದರು. ಓದು ಬರಹಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡು ಲೇಖಕರಾದರು, ಶ್ರೇಷ್ಠ ಸಂಶೋಧಕರಾದರು. ಅವರು ವಿಶೇಷವಾಗಿ ವೀರಶೈವ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಜರಾಮರ.

ಡಾ. ಎಸ್. ವಿದ್ಯಾಶಂಕರರ ವೀರಶೈವ ಪುರಾಣವನ್ನು ಕುರಿತ ಸಂಶೋಧನೆ ಬೆಂಗಳೂರು ವಿಶ್ವವಿದ್ಯಾಲಯದ ಮೊದಲ ಡಾಕ್ಟರೇಟ್ ಪದವಿ ಎಂಬುದು ವಿಶೇಷ. ಅಲ್ಲಿಂದ ನಿರಂತರವಾಗಿ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರ ಅಧ್ಯಯನದಲ್ಲಿ ಒಂದು ಶಿಸ್ತನ್ನು ಕಾಣಬಹುದು. ತಾವು ಯಾವುದೇ ವಿಷಯವನ್ನು ಮಂಡಿಸಲಿ, ಪೂರಕ ಸಾಮಗ್ರಿಗಳನ್ನು ಸಂಗ್ರಹಿಸಿ, ಆಧಾರಸಹಿತವಾಗಿ ಹೇಳುತ್ತಿದ್ದರು.

ಇವರ ‘ನಂಬಿಯಣ್ಣ ಒಂದು ಅಧ್ಯಯನ’ ಕನ್ನಡ ಸಾಹಿತ್ಯದಲ್ಲಿ ಒಂದು ಮಹತ್ವದ ತೌಲನಿಕ ಗ್ರಂಥವಾಗಿದೆ. ಈ ಸಂಶೋಧನಾ ಗ್ರಂಥವನ್ನು ಬರೆಯುವ ಸಂದರ್ಭದಲ್ಲಿ ನನ್ನೊಂದಿಗೆ ಹಲವು ಬಾರಿ ಚರ್ಚಿಸಿದ್ದಾರೆ. ಕನ್ನಡ ತಮಿಳು ಭಾಷೆಗಳಲ್ಲಿರುವ ನಂಬಿಯಣ್ಣನನ್ನು ಕುರಿತ ಗ್ರಂಥಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದರಲ್ಲದೆ, ಸ್ವತಃ ತಾವೇ ತಮಿಳುನಾಡಿನಲ್ಲಿರುವ ನಂಬಿಯಣ್ಣನಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿಕೊಟ್ಟು ಆಕರಗಳನ್ನು ಸಂಗ್ರಹಿಸಿ ಗ್ರಂಥವನ್ನು ಬರೆದರು.

ಇದೇ ರೀತಿಯಲ್ಲಿ ಅವರ ವಚನಾನುಶೀಲನ ಸಾಹಿತ್ಯಾಭ್ಯಾಸಿಗಳೆಲ್ಲರೂ ಗಮನಸಬೇಕಾದ ಕೃತಿಯಾಗಿದೆ. ವಚನ ಸಾಹಿತ್ಯವನ್ನು ಕುರಿತ ಒಳನೋಟ ಇದರಲ್ಲಿದೆ. ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯಾದ ಸಮಗ್ರ ವಚನ ಸಾಹಿತ್ಯ ಸಂಪುಟಗಳ ಸಂಪಾದಕರಲ್ಲೊಬ್ಬರಾಗಿ ಶ್ರಮಿಸಿದರು. ಈ ಸಂಪುಟಗಳಲ್ಲಿ ಸಿದ್ಧರಾಮೇಶ್ವರ ಸಂಪುಟವನ್ನು ಸಂಪಾದಿಸಿದರಲ್ಲದೆ, ಪಾರಿಭಾಷಿಕ ಪದಕೋಶವನ್ನು ಸಿದ್ಧಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ, ವಿಭಾಗದ ನಿರ್ದೇಶಕರಾಗಿ, ವಿದ್ಯಾರ್ಥಿಗಳ ಮೆಚ್ಚಿನ ಗುರುಗಳಾಗಿದ್ದರು. ನಾನು ಗಮನಿಸಿದಂತೆ ಅವರು ಎಂದಿಗೂ ಸಿದ್ಧವಾಗದೆ ತರಗತಿಗೆ ಹೋದವರಲ್ಲ. ಅಧ್ಯಾಪಕರಾದವರಿಗೆ ಅಧ್ಯಯನದ ಶಿಸ್ತಷ್ಟೇ ಸಾಲದು, ತರಗತಿಯ ಶಿಸ್ತು ಬೇಕು. ಅಂತಹ ಶಿಸ್ತು ಇವರಿಗಿತ್ತು. ಅದರಲ್ಲಿಯೂ ಗ್ರಂಥ ಸಂಪಾದನೆ, ಪ್ರಾಚೀನ ಹಾಗೂ ಮಧ್ಯಕಾಲೀನ ಸಾಹಿತ್ಯವನ್ನು ಕುರಿತ ಇವರ ಉಪನ್ಯಾಸಗಳು ವಿದ್ಯಾರ್ಥಿಗಳಿಗೆ ಪ್ರೇರಕ ಮತ್ತು ಸ್ಫೂರ್ತಿಯುತವಾಗಿರುತ್ತಿತ್ತು ಎಂದು ವಿದ್ಯಾರ್ಥಿಗಳು ನನ್ನೊಂದಿಗೆ ಮಾತನಾಡಿದ್ದು ನೆನಪಿದೆ.

ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರಿತಾಗಿ ವಸ್ತು, ವಿಷಯ, ಧರ್ಮ, ಛಂದಸ್ಸು, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಹಲವಾರು ಸಾಹಿತ್ಯ ಚರಿತ್ರೆಗಳು ಬಂದಿವೆ. ಇವುಗಳ ಸಾಲಿಗೆ ಸೇರಿದ್ದು ಡಾ. ಎಸ್. ವಿದ್ಯಾಶಂಕರ ಅವರು ಬರೆದ ವೀರಶೈವ ಸಾಹಿತ್ಯ ಚರಿತ್ರೆಯ ಸಂಪುಟಗಳು. ತಮ್ಮ ಜೀವಿತಾವಧಿಯ ಕೊನೆಯ ದಿನಗಳಲ್ಲಿ ಒಂದು ತಪಸ್ಸಿನಂತೆ, ತಮ್ಮ ಅಧ್ಯಯನ, ಸಂಶೋಧನೆ, ಪಾಂಡಿತ್ಯಗಳನ್ನೆಲ್ಲ ಮೇಳೈಸಿದಂತೆ ಈ ಬೃಹತ್ ಸಂಪುಟಗಳ ರಚನೆಯಲ್ಲಿ ತೊಡಗಿಕೊಂಡರು.

ಮೊದಲನೇ ಸಂಪುಟದಲ್ಲಿ ಬಸವಯುಗವನ್ನು, ಎರಡನೇ ಸಂಪುಟದಲ್ಲಿ ಹರಿಹರಯುಗವನ್ನು, ಮೂರನೇ ಸಂಪುಟದಲ್ಲಿ ಪ್ರೌಢದೇವರಾಯನ ಯುಗವನ್ನು, ನಾಲ್ಕನೇ ಸಂಪುಟದಲ್ಲಿ ಷಡಕ್ಷರದೇವಯುಗವನ್ನು ಕುರಿತು ರಚಿಸಿದರು.

ಇವರ ಈ ಯೋಜನೆಯ ಕೊನೆಯ ಐದನೆಯ ಸಂಪುಟವಾದ ಷಣ್ಮುಖಸ್ವಾಮಿಯುಗವೊಂದು ರಚನೆಗೊಂಡಿದ್ದರೆ, ಅವರ ಸಂಕಲ್ಪ ಪೂರ್ಣಗೊಳ್ಳುತ್ತಿತ್ತು. ಹಗಲು ರಾತ್ರಿಯೆನ್ನದೆ ದಣಿವರಿಯದೆ ಈ ಮಹತ್ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು ಆರೋಗ್ಯವನ್ನು ಲೆಕ್ಕಿಸದೆ ಹೋದರೆ ಎನ್ನುವ ಅನುಮಾನ ನನ್ನನ್ನು ತೀವ್ರವಾಗಿ ಕಾಡುತ್ತಿತ್ತು.

ಡಾ. ಎಸ್. ವಿದ್ಯಾಶಂಕರ ಅವರು ಲೇಖಕರಾದಂತೆ ಪ್ರಕಾಶಕರೂ ಆದರು, ಮುದ್ರಕರೂ ಆದರು. ಹಿಂದೂ-ವೀರಶೈವ (ಲಿಂಗಾಯಿತ) ಎಂಬ ವಿಷಯದ ಬಗ್ಗೆ ನಾನು ಕೃತಿ ರಚನೆ ಮಾಡಿದಾಗ ಅದು ವಿವಾದ ಗ್ರಸ್ತವಾದೀತೆಂಬ ಅಳುಕಿನಿಂದ ಅದರ ಪ್ರಕಾಶನಕ್ಕೆ ಪ್ರಕಾಶಕರು ಹಿಂಜರಿದರೂ, ಅದನ್ನು ಪ್ರಕಟಿಸಲು ಮುಂದೆ ಬಂದವರು ಡಾ. ವಿದ್ಯಾಶಂಕರ. ಆ ಗ್ರಂಥ ಪ್ರಕಾಶನ ನನಗೆ ಅತೀವ ಸಂತೋಷವನ್ನು ತಂದಿತು.

ಸತ್ಯವನ್ನು ಹೇಳಲು ನಿರ್ಭಯತೆಯನ್ನು ತುಂಬಿತು. ಅವರೊಬ್ಬ ಶುಭ್ರ ನಡೆ ನುಡಿಯ ಸರಸ್ವತೀ ಆರಾಧಕ; ಬಸವಾನುಯಾಯಿ; ತಾವೂ ಬೆಳೆದು ಹಲವರನ್ನು ಬೆಳಕಿಗೆ ತಂದ ಒಬ್ಬ ಶ್ರೇಷ್ಠ ವ್ಯಕ್ತಿ. ಅವರ ನಿಧನವು, ಅವರಿಗಿಂತ ವಯಸ್ಸಿನಲ್ಲಿ ಹಿರಿಯನಾದ ನನಗೆ ನೋವನ್ನು ತಂದಿತು. ಅವರು ಆಸ್ಪತ್ರೆ ಸೇರಿದ್ದಾಗ ಅವರನ್ನು ನೋಡಿಕೊಂಡು ಬಂದು ತೀವ್ರ ದುಃಖಿತನಾಗಿದ್ದೆ. ಅವರ ನೆನಹು ನನಗೆ ಸಂತೋಷವನ್ನು ತರುತ್ತಿದೆ; ದುಃಖವನ್ನೂ ಉಕ್ಕಿಸುತ್ತಿದೆ.

ಡಾ. ಎಸ್. ವಿದ್ಯಾಶಂಕರ ಅವರ ಹಿತೈಷಿಗಳು, ಸ್ನೇಹಿತರು, ವಿದ್ಯಾರ್ಥಿಗಳು ಹಾಗೂ ಕುಟುಂಬ ವರ್ಗದವರು ಸೇರಿ ಡಾ. ಎಸ್. ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನವನ್ನು ಮಾಡಿದ್ದಾರೆ. ಇದರ ವತಿಯಿಂದ ಸಂಶೋಧಕರೊಬ್ಬರಿಗೆ ಪ್ರತಿ ವರ್ಷ ವಿದ್ಯಾಶಂಕರ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಈ ವರ್ಷ ಕನ್ನಡದ ಮಹತ್ವದ ಸಂಶೋಧಕರಲ್ಲೊಬ್ಬರಾದ ಹಿರಿಯರೂ ಆದ ಪ್ರೊ. ಎಸ್. ಉಮಾಪತಿ ಅವರಿಗೆ ಈ ಪ್ರಶಸ್ತಿಯನ್ನು (ಡಿ.10ರಂದು) ನೀಡುತ್ತಿರುವುದು ಸಾರ್ಥಕವಾದುದಾಗಿದೆ. ಇದೇ ಸಂದರ್ಭದಲ್ಲಿ ‘ವಿದ್ಯಾರತ್ನ’ ಎಂಬ ವಿದ್ಯಾಶಂಕರ ಅವರ ಸಂಸ್ಮರಣಾ ಗ್ರಂಥವೂ ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry