ಸೋಮವಾರ, ಮಾರ್ಚ್ 1, 2021
25 °C

ಕನ್ನಡದಲ್ಲಿ ‘ತಾಂತ್ರಿಕ ಶಬ್ದಕೋಶ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಕನ್ನಡದಲ್ಲಿ ‘ತಾಂತ್ರಿಕ ಶಬ್ದಕೋಶ’

ಬೆಳಗಾವಿ: ಇಂಗ್ಲಿಷ್‌ನಲ್ಲಿರುವ ತಾಂತ್ರಿಕ ಶಬ್ದಗಳನ್ನು ಹಾಗೂ ನುಡಿಗಟ್ಟುಗಳನ್ನು ಕನ್ನಡಕ್ಕೆ ಅನುವಾದಿಸಿ ‘ತಾಂತ್ರಿಕ ಶಬ್ದಕೋಶ’ ಹೊರತರಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಯೋಜನೆ ರೂಪಿಸಿದೆ.

‘ಎಂಜಿನಿಯರಿಂಗ್‌ನ ವಿವಿಧ ಕೋರ್ಸುಗಳಿಗೆ ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿಗಳು ಪ್ರತಿ ವರ್ಷ ಸೇರುತ್ತಾರೆ. ಅವರಿಗೆ ಇಂಗ್ಲಿಷ್‌ನಲ್ಲಿ ಗೊತ್ತಿರುವ ಅನೇಕ ಪದಗಳಿಗೆ ಕನ್ನಡದಲ್ಲಿನ ಸರಿಯಾದ ಅರ್ಥ ಗೊತ್ತಿರುವುದಿಲ್ಲ. ಇದರಿಂದ ಅವರ ಕಲಿಕೆಗೆ ಹಾಗೂ ವಿಷಯದ ಗ್ರಹಿಕೆಗೆ ತೊಂದರೆ ಆಗುತ್ತಿರುವುದನ್ನು ಗಮನಿಸಲಾಗಿದೆ. ಗ್ರಹಿಸುವುದು ಒಂದಾದರೆ,‌ ವಾಸ್ತವವಾದ ಅರ್ಥ ಬೇರೆಯದೇ ಆಗಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಅನುಕೂಲ ಆಗಲೆಂದು ತಾಂತ್ರಿಕ ಶಬ್ದಕೋಶವನ್ನು ಕನ್ನಡದಲ್ಲಿ ತರಲಾಗುತ್ತಿದೆ’ ಎಂದು ಕುಲಪತಿ ಪ್ರೊ.ಕರಿಸಿದ್ದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಬ್ದಕೋಶವನ್ನು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ 220 ಕಾಲೇಜುಗಳಿಗೂ ನೀಡಲಾಗುವುದು. ಗ್ರಂಥಾಲಯಗಳಲ್ಲಿ ಅವುಗಳನ್ನು ಇಡಲಾಗುವುದು. ಇದನ್ನು ವಿದ್ಯಾರ್ಥಿಗಳು ನೋಡಬಹುದು. ಪ್ರಸಾರಾಂಗದ ಮೂಲಕ ಖರೀದಿಸಲೂಬಹುದು. ಯೋಜನೆಯ ಹೊಣೆಯನ್ನು ಪ್ರಸಾರಾಂಗದ ನಿರ್ದೇಶಕ ಪುಟ್ಟಬಸಯ್ಯ ಅವರಿಗೆ ವಹಿಸಲಾಗಿದೆ. ಅನುವಾದಕರು, ತಜ್ಞರನ್ನು ಬಳಸಿಕೊಂಡು ಶಬ್ದಕೋಶ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ವರ್ಷದೊಳಗೆ ಮುದ್ರಿಸುವ ಗುರಿ ಇದೆ’ ಎಂದು ಮಾಹಿತಿ ನೀಡಿದರು.

‘ತಾಂತ್ರಿಕ ಶಿಕ್ಷಣ ಸಾಮಾನ್ಯರಿಗೂ ಅರ್ಥವಾಗಲಿ ಎನ್ನುವ ಉದ್ದೇಶದಿಂದ ಆರಂಭಿಸಿರುವ ಪುಸ್ತಕಗಳ ಮಾಲಿಕೆಯಲ್ಲಿ ಹಲವು ಪುಸ್ತಕಗಳನ್ನು ಹೊರತರಲಾಗಿದೆ. ಅಡುಗೆ ಅನಿಲ ಸಿಲಿಂಡರ್‌, ದೂರವಾಣಿ, ಮೊಬೈಲ್‌ ಫೋನ್‌ ತಂತ್ರಜ್ಞಾನ ಸೇರಿದಂತೆ 90ಕ್ಕೂ ಹೆಚ್ಚು ವಿಷಯಗಳಿಗೆ ಸಂಬಂಧಿಸಿದಂತೆ ಹೊತ್ತಿಗೆಗಳನ್ನು ಸರಳವಾದ ಕನ್ನಡದಲ್ಲಿ ಪ್ರಕಟಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಶಬ್ದಕೋಶ ಯೋಜನೆ ರೂಪಿಸಲಾಗಿದೆ. ಸರಳವಾಗಿ ಅರ್ಥವಾಗುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಇಂದಿನ ವಿದ್ಯಾರ್ಥಿಗಳು ಎಲ್ಲವನ್ನೂ ಮೊಬೈಲ್‌ನಲ್ಲಿಯೇ ಬಯಸುತ್ತಿದ್ದಾರೆ. ಪಠ್ಯವನ್ನು ಆನ್‌ಲೈನ್‌ನಲ್ಲಿ ಓದುತ್ತಾರೆ. ಹೀಗಾಗಿ ಶಬ್ದಕೋಶವನ್ನೂ ಆ್ಯಪ್ (ಅಪ್ಲಿಕೇಶನ್‌) ಮೂಲಕ ದೊರೆಯುವಂತೆ ಮಾಡುವುದಕ್ಕೆ ಸಾಧ್ಯವಿದೆಯೇ ಎಂದು ಯೋಚಿಸುತ್ತಿದ್ದೇವೆ. ಇಂಗ್ಲಿಷ್‌ ಪದ ಟೈಪ್‌ ಮಾಡಿದರೆ ಅದಕ್ಕೆ ಕನ್ನಡದ ಅರ್ಥಗಳು ತೆರೆದುಕೊಳ್ಳುವಂತೆ ಆ್ಯಪ್‌ ಅಭಿವೃದ್ಧಿಪಡಿಸುವ ಉದ್ದೇಶ ಇದೆ’ ಎಂದು ಹೇಳಿದರು.

ಎಂಜಿನಿಯರಿಂಗ್‌ ಪದವಿಯ ಮೊದಲ ಸೆಮಿಸ್ಟರ್‌ನಿಂದ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಅಭ್ಯಾಸ ಮಾಡುವುದನ್ನು ಪ್ರಸಕ್ತ ಸಾಲಿನಿಂದ ಕಡ್ಡಾಯಗೊಳಿಸಲಾಗಿದೆ. ಆ ವಿದ್ಯಾರ್ಥಿಗಳಿಗೆ ಶಬ್ದಕೋಶದಿಂದ ಹೆಚ್ಚಿನ ಪ್ರಯೋಜನ ಆಗಲಿದೆ ಎನ್ನುತ್ತಾರೆ ಅವರು.

ಪೂರ್ವಭಾವಿ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಎಷ್ಟು ಪುಟಗಳನ್ನು ಮುದ್ರಿಸಬೇಕು ಎನ್ನುವುದನ್ನು ನಿರ್ಧರಿಸಿಲ್ಲ. ಎಷ್ಟು ಮಾಹಿತಿ ಸಂಗ್ರಹ ಆಗುತ್ತದೆಯೋ ಅದನ್ನೆಲ್ಲ ಸೇರಿಸಿ ಶಬ್ದಕೋಶ ಹೊರತರಬೇಕು ಎನ್ನುವುದು ಕುಲಪತಿಗಳ ಆಶಯವಾಗಿದೆ. ನಿವೃತ್ತ ಪ್ರಾಧ್ಯಾಪಕರ ಸಲಹೆಯನ್ನೂ ಪಡೆಯಲಾಗುವುದು ಎಂದು ಪ್ರಸಾರಾಂಗ ನಿರ್ದೇಶಕ ಪುಟ್ಟಬಸವಯ್ಯ ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.