ಸೋಮವಾರ, ಮಾರ್ಚ್ 8, 2021
31 °C

ಪರೇಶ್‌ ಮೇಸ್ತ ಹತ್ಯೆ ತನಿಖೆ ಎನ್‌ಐಎಗೆ: ಬಿಜೆಪಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರೇಶ್‌ ಮೇಸ್ತ ಹತ್ಯೆ ತನಿಖೆ ಎನ್‌ಐಎಗೆ: ಬಿಜೆಪಿ ಆಗ್ರಹ

ಬೆಂಗಳೂರು: ‘ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಪರೇಶ್ ಮೇಸ್ತ ಹತ್ಯೆಯಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಕೈವಾಡ ಇದ್ದು, ರಾಷ್ಟ್ರೀಯ ತನಿಖಾದಳಕ್ಕೆ ಕೊಲೆ ತನಿಖೆ ಜವಾಬ್ದಾರಿ ಒಪ್ಪಿಸಬೇಕು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಜಾಗತಿಕ ಭಯೋತ್ಪಾದನಾ ಸಂಘಟನೆ ಐಸಿಸ್‌ ಜತೆ ನಂಟು ಹೊಂದಿದೆ. ರಾಜ್ಯದಲ್ಲಿ ಐಸಿಸ್‌ ಮಾದರಿಯಲ್ಲೇ ಪಿಎಫ್‌ಐ ಹಿಂದುಗಳ ಹತ್ಯೆ ನಡೆಸುತ್ತಿದೆ’ ಎಂದು ಅವರು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

‘ಮೀನುಗಾರ ಕುಟುಂಬಕ್ಕೆ ಸೇರಿದ ಪರೇಶ್‌ ಮೇಸ್ತ ಅವರನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಲಾಗಿದೆ. ಅವರ ಮೇಲೆ ಕುದಿಯುವ ಎಣ್ಣೆ ಅಥವಾ ಡಾಂಬರ್‌ ಸುರಿಯಲಾಗಿದೆ. ಇದರಿಂದ ಮೇಸ್ತ ಶವ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದೆ. ಕೈ ಮೇಲೆ ಜೈಶ್ರೀರಾಮ್‌ ಎಂಬ ಹಚ್ಚೆ ಇತ್ತು. ಅದನ್ನು ಕೊಚ್ಚಿ ತೆಗೆಯಲಾಗಿದೆ. ಇಂತಹ ಅಮಾನುಷ ಹತ್ಯೆ ವಿಧಾನವನ್ನು ಐಸಿಸ್‌ ಮಾತ್ರ ಅನುಸರಿಸುತ್ತದೆ. ಪಿಎಫ್‌ಐ  ರಾಜ್ಯದಲ್ಲಿ ಐಸಿಸ್ ಹತ್ಯೆಯ ಮಾದರಿಯನ್ನು ಅನುಸರಿಸುತ್ತಿದೆ. ಆದ್ದರಿಂದ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು’ ಎಂದು ಒತ್ತಾಯಿಸಿದರು.

ಗಲಭೆ ನಡೆದ ಪ್ರದೇಶದಲ್ಲಿ ಲಾಂಗು, ಮಚ್ಚು ಹಿಡಿದುಕೊಂಡು ಓಡಾಡುತ್ತಿದ್ದ ಪಿಎಫ್‌ಐ ಗೂಂಡಾಗಳನ್ನು ಬಂಧಿಸದೇ, ಅವರ ಪರವಾಗಿ ನಿಂತ ಪೊಲೀಸ್‌ ಅಧಿಕಾರಿಗಳಾದ ಕುಮಾರಸ್ವಾಮಿ ಮತ್ತು ಗಣೇಶ್‌ ಜೊಗ್ಲೇಕರ್‌ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.