ಮಂಗಳವಾರ, ಮಾರ್ಚ್ 2, 2021
29 °C

ಪರಿಶಿಷ್ಟ ವಿದ್ಯಾರ್ಥಿಗಳಿಗೆ ಉಚಿತ ಟೂಲ್‌ ಕಿಟ್‌

ಭರತ್‌ ಜೋಷಿ Updated:

ಅಕ್ಷರ ಗಾತ್ರ : | |

ಪರಿಶಿಷ್ಟ ವಿದ್ಯಾರ್ಥಿಗಳಿಗೆ ಉಚಿತ ಟೂಲ್‌ ಕಿಟ್‌

ಬೆಂಗಳೂರು: ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಮೆಜಾನ್‌ ಕಿಂಡಲ್, 4 ಜಿ ಸಾಮರ್ಥ್ಯದ ಡೊಂಗಲ್, ಸೈಂಟಿಫಿಕ್‌ ಕ್ಯಾಲ್ಕುಲೇಟರ್‌ ಮತ್ತು ಪೆನ್‌ ಡ್ರೈವ್‌ ನೀಡಲು ರಾಜ್ಯ ಸರ್ಕಾರ ನೀಡಲು ನಿರ್ಧರಿಸಿದೆ.

ಈ  ಸೌಲಭ್ಯ (ಲ್ಯಾಬೊರೇಟರಿ ಟೂಲ್‌ ಕಿಟ್‌) ವಾರ್ಷಿಕ ₹ 5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಮಾತ್ರ ಸಿಗಲಿದೆ. ಸಮಾಜ ಕಲ್ಯಾಣ ಇಲಾಖೆ ‘ಎಸ್‌ಸಿಪಿ–ಟಿಎಸ್‌ಪಿ’ ಯೋಜನೆಯಿಂದ ಈ ಯೋಜನೆಗೆ ಅನುದಾನ ನೀಡಲಿದೆ.

ಈಗಾಗಲೇ ಈ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿದೆ. ಅದರ ಜೊತೆಗೆ ಲ್ಯಾಬೊರೇಟರಿ ಟೂಲ್‌ಕಿಟ್‌ ನೀಡಲಾಗುತ್ತದೆ. ಲ್ಯಾಪ್‌ಟಾಪ್‌ ಯೋಜನೆಯನ್ನು ಕಾಲೇಜು ಶಿಕ್ಷಣ ಇಲಾಖೆ ಕಾರ್ಯಗತಗೊಳಿಸಿದೆ. ಟೂಲ್‌ ಕಿಟ್‌ ಯೋಜನೆಯನ್ನು ತಾಂತ್ರಿಕ ಶಿಕ್ಷಣ ಇಲಾಖೆಗೆ ಜಾರಿಗೊಳಿಸಲಿದೆ.

ಯೋಜನೆಯ ಅನುಷ್ಠಾನಕ್ಕಾಗಿ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳ ನಿಖರ ಸಂಖ್ಯೆ ತಿಳಿಸುವಂತೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ತಾಂತ್ರಿಕ ಶಿಕ್ಷಣ ಇಲಾಖೆ ಪತ್ರ ಬರೆದಿದೆ.

‘ ಪ್ರತಿ ಟೂಲ್‌ಕಿಟ್‌ನ ಮೌಲ್ಯ ₹ 6,500. ಟೂಲ್‌ ಕಿಟ್‌ ಏನೆಲ್ಲ ಸಾಧನಗಳನ್ನು ಹೊಂದಿರಬೇಕು ಎಂಬುದನ್ನು ಸದ್ಯದಲ್ಲೇ ಅಂತಿಮಗೊಳಿಸುತ್ತೇವೆ’ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್‌.ಯು.ತಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲ್ಯಾಪ್‌ಟಾಪ್‌ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂಬ ಆರೋಪ ಕೇಳಿ ಬಂದಿರುವುದರಿಂದ, ಟೂಲ್‌ ಕಿಟ್‌ ಸೌಲಭ್ಯ ಜಾರಿಗೊಳಿಸಲು ನಾವು ತರಾತುರಿ ತೋರಿಸುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಜಾರಿಯಲ್ಲಿದೆ’ ಎಂದು ತಳವಾರ ತಿಳಿಸಿದರು.

‘ಎಸ್‌ಸಿಪಿ–ಟಿಎಸ್‌ಪಿ’ ಅಡಿ ಉನ್ನತ ಶಿಕ್ಷಣ ಇಲಾಖೆಗೆ ಈ ವರ್ಷ ₹ 196 ಕೋಟಿ ಅನುದಾನ ಬಂದಿದೆ. ಅದರಲ್ಲಿ ₹ 11.54 ಕೋಟಿ ಮಾತ್ರ ಖರ್ಚು ಮಾಡಲು ಸಾಧ್ಯವಾಗಿದೆ. ಲ್ಯಾಪ್‌ಟಾಪ್‌ ಖರೀದಿ ಅವ್ಯವಹಾರದ ವಿಚಾರ ಸದನ ಸಮಿತಿ ಮುಂದೆ ಇರುವುದರಿಂದ ಹಿನ್ನಡೆಯಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಹೇಳಿದ್ದಾರೆ.

ವಿಷಯ ತಜ್ಞರ ಸಮಿತಿ ರಚನೆ:

ಟೂಲ್‌ಕಿಟ್‌ನಲ್ಲಿ ಯಾವ ಸಾಧನಗಳು ಇರಬೇಕು ಎಂಬುದರ ಸಲಹೆ ಪಡೆಯಲು ರಾಜ್ಯ ಸರ್ಕಾರ ವಿಷಯ ತಜ್ಞರ ಸಮಿತಿ ರಚಿಸಿದೆ.  ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌, ಮೆಕ್ಯಾನಿಕಲ್‌, ಕಂಪ್ಯೂಟರ್‌ ಸೈನ್ಸ್‌ ಮತ್ತು ಟೆಕ್ಸ್‌ಟೈಲ್‌ ಟೆಕ್ನಾಲಜಿ ಎಂಜಿನಿಯರಿಂಗ್‌ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕಿಂಡಲ್ ಇ– ರೀಡರ್‌, 32 ಜಿಬಿ ಪೆನ್‌ಡ್ರೈವ್‌, ವೈಫೈ ಡೊಂಗಲ್ ಮತ್ತು ಕ್ಯಾಲ್ಕುಲೇಟರ್‌ ಒದಗಿಸಲು ಸಮಿತಿ ಸಲಹೆ ನೀಡಿದೆ. ಪಾಲಿಟೆಕ್ನಿಕ್‌( ಡಿಪ್ಲೊಮಾ) ಕೋರ್ಸ್‌ ವಿದ್ಯಾರ್ಥಿಗಳಿಗೆ ಡ್ರಾಯಿಂಗ್‌ ಬೋರ್ಡ್‌, ಮಿನಿ ಡ್ರಾಫ್ಟರ್‌, ಎಂಜಿನಿಯರಿಂಗ್‌ ಡ್ರಾಯಿಂಗ್‌ ಸಾಧನ, ಡಿಜಿಟಲ್‌ ಎಲ್‌ಸಿಆರ್‌ ಮೀಟರ್‌, ಡಿಜಿಟಲ್‌ ಅಲ್ಟ್ರಾಸೋನಿಕ್‌ ಟೇಪ್‌ ಮತ್ತಿತರ ಉಪಕರಣಗಳು ಇವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.