ಚೀನಾಗೆ ಹಂಬನ್‌ತೋಟ ಬಂದರು ಹಸ್ತಾಂತರ

ಕೊಲಂಬೊ: ಶ್ರೀಲಂಕಾದ ದಕ್ಷಿಣದ ಭಾಗದಲ್ಲಿರುವ ಪ್ರಮುಖ ಹಂಬನ್‌ತೋಟ ಬಂದರನ್ನು ಚೀನಾಗೆ ಹಸ್ತಾಂತರಿಸಲಾಗಿದೆ.
99 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಈ ಬಂದರನ್ನು ಚೀನಾಗೆ ನೀಡಲಾಗಿದೆ. ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಏಪ್ರಿಲ್‌ನಲ್ಲಿ ಚೀನಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಂದರು ಹಸ್ತಾಂತರಿಸುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು.
‘ಈ ಒಪ್ಪಂದದಿಂದ ಚೀನಾದ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತದೆ. ಹಿಂದೂ ಮಹಾಸಾಗರದಲ್ಲಿ ಈ ಬಂದರು ಪ್ರಮುಖವಾಗಲಿದೆ’ ಎಂದು ವಿಕ್ರಂ ಸಿಂಘೆ ತಿಳಿಸಿದ್ದಾರೆ.
ಸಂಸತ್‌ನಲ್ಲಿ ನಡೆದ ಬಂದರು ಹಸ್ತಾಂತರಿಸುವ ಪ್ರಕ್ರಿಯೆಯ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಂದರು ವಲಯದಲ್ಲಿನ ಕೈಗಾರಿಕೆಗಳಿಂದ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬಹುದು ಮತ್ತು ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ’ ಎಂದು ಪ್ರತಿಪಾದಿಸಿದರು.
ಬಂದರು ಹಸ್ತಾಂತರಿಸಿರುವುದಕ್ಕೆ ಶ್ರೀಲಂಕಾದ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಚೀನಾ ಕಂಪೆನಿಗಳಿಗೆ ಶ್ರೀಲಂಕಾ ಸರ್ಕಾರ ಭಾರಿ ತೆರಿಗೆ ವಿನಾಯಿತಿ ನೀಡಿದೆ. ಈ ನಿರ್ಧಾರದ ಮೂಲಕ ರಾಷ್ಟ್ರದ ಆಸ್ತಿಯನ್ನು ಚೀನಾಗೆ ಮಾರಾಟ ಮಾಡಲಾಗಿದೆ ಎಂದು ಟೀಕಿಸಿವೆ.
ಚೀನಾದ ಎರಡು ಪ್ರಮುಖ ಕಂಪೆನಿಗಳಾದ ಹಂಬನ್‌ತೋಟ ಇಂಟರ್‌ನ್ಯಾಷನಲ್ ಪೋರ್ಟ್ ಗ್ರೂಪ್ (ಎಚ್‌ಐಪಿಜಿ) ಮತ್ತು ಹಂಬನ್‌ತೋಟ ಇಂಟರ್‌ನ್ಯಾಷನಲ್ ಪೋರ್ಟ್ ಸರ್ವಿಸಸ್ (ಎಚ್‌ಐಪಿಎಸ್) ಬಂದರಿನ ಜವಾಬ್ದಾರಿ ತೆಗೆದುಕೊಳ್ಳಲಿವೆ.
ಹಂಬನ್‌ತೋಟ ಬಂದರನ್ನು ಚೀನಾಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಮತ್ತು ಶ್ರೀಲಂಕಾದಲ್ಲಿ ನೌಕಾ ಪಡೆಯನ್ನು ನಿಯೋಜಿಸಿರುವ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿತ್ತು. ಇದರಿಂದ ಭದ್ರತೆಗೆ ಧಕ್ಕೆಯಾಗಬಹುದು ಎಂದು ಭಾರತ ಅಭಿಪ್ರಾಯಪಟ್ಟಿತ್ತು. ಆದರೆ, ಈ ಬಂದರನ್ನು ಯಾವುದೇ ಕಾರಣಕ್ಕೂ ಸೇನಾ ನೆಲೆಯಾಗಿ ಪರಿವರ್ತಿಸಲು ಯಾವದೇ ದೇಶಕ್ಕೂ ಅವಕಾಶ ನೀಡುವುದಿಲ್ಲ ಎಂದು ವಿಕ್ರಂಸಿಂಘೆ ಭಾರತಕ್ಕೆ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.