ಶುಕ್ರವಾರ, ಫೆಬ್ರವರಿ 26, 2021
27 °C
ಜೆಡಿಎಸ್‌ ಸಮಾವೇಶಕ್ಕೆ ಜನರನ್ನು ಆಹ್ವಾನಿಸಲು ಹೋದಾಗ ಘಟನೆ

ನಡುರಸ್ತೆಯಲ್ಲೇ ಅಟ್ಟಾಡಿಸಿ ಮಾಜಿ ಕಾರ್ಪೊರೇಟರ್‌ ಬರ್ಬರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಡುರಸ್ತೆಯಲ್ಲೇ ಅಟ್ಟಾಡಿಸಿ ಮಾಜಿ ಕಾರ್ಪೊರೇಟರ್‌ ಬರ್ಬರ ಹತ್ಯೆ

ಬೆಂಗಳೂರು: ಮಾಜಿ ಕಾರ್ಪೊರೇಟರ್‌ ಗೋವಿಂದೇಗೌಡ (59) ಅವರನ್ನು ದುಷ್ಕರ್ಮಿಗಳು ಶನಿವಾರ ಸಂಜೆ ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದಾರೆ.

ಮೋಹನ್‌ ಚಿತ್ರಮಂದಿರ ಸಮೀಪದ ನಿವಾಸಿಯಾದ ಗೋವಿಂದೇಗೌಡ, ತುಮಕೂರಿನಲ್ಲಿ ಭಾನುವಾರ ನಡೆಯಲಿರುವ ಕಾರ್ಯಕ್ರಮಕ್ಕೆ ಜನರನ್ನು ಆಹ್ವಾನಿಸಲು ಸಂಜೆ 5 ಗಂಟೆಗೆ ಕೆ.ಟಿ.ಜೆ ರಸ್ತೆಗೆ ಹೋಗಿದ್ದರು. ಅದೇ ವೇಳೆ ಎರಡು ಕಾರುಗಳಲ್ಲಿ ಅವರನ್ನು ಹಿಂಬಾಲಿಸಿ ಬಂದ ಏಳು ದುಷ್ಕರ್ಮಿಗಳು, ಕೃತ್ಯ ಎಸಗಿ ಪರಾರಿಯಾಗಿದ್ದಾರೆ.

‘2016ರಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ ಎಂಬುವರ ಕೊಲೆ ಪ್ರಕರಣದಲ್ಲಿ ಗೋವಿಂದೇಗೌಡ ಆರೋಪಿ ಆಗಿದ್ದರು. ಅದೇ ವೈಷಮ್ಯದಿಂದ ಈ ಕೊಲೆ ನಡೆದಿರಬಹುದು ಎಂಬ ಅನುಮಾನವಿದೆ. ಆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ರಾಜಗೋಪಾಲನಗರ ಪೊಲೀಸರು ತಿಳಿಸಿದರು.

ಕಲ್ಯಾಣ ಮಂಟಪದ ಗೇಟು ಮುಚ್ಚಿ ದಾಳಿ: ‘ದುಷ್ಕರ್ಮಿಗಳು ದಾಳಿ ಮಾಡುತ್ತಿದ್ದಂತೆ ಗೋವಿಂದೇಗೌಡ ಹಾಗೂ ಅವರ ಜತೆಗಿದ್ದ ಇಬ್ಬರು ಕಾರ್ಯ

ಕರ್ತರು, ದಿಕ್ಕಾಪಾಲಾಗಿ ಓಡಿದ್ದರು. ಆಗ ಇಬ್ಬರು ಆರೋಪಿಗಳು, ಮಚ್ಚು ಹಿಡಿದು ಗೋವಿಂದೇಗೌಡ ಅವರನ್ನು ರಸ್ತೆಯಲ್ಲೇ ಬೆನ್ನಟ್ಟಿದ್ದರು. ಉಳಿದ ಐವರು ಕಾರಿನಲ್ಲಿ ಹಿಂಬಾಲಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಹೆಗ್ಗನಹಳ್ಳಿಯ ಮುಖ್ಯರಸ್ತೆಗೆ ಬಂದ ಗೋವಿಂದೇಗೌಡ, ಮಾತೋಶ್ರೀ ಕಲ್ಯಾಣ ಮಂಟಪದ ಒಳಗೆ ಓಡಿದ್ದರು. ಅವರ ಹಿಂದೆಯೇ ನುಗ್ಗಿದ ದುಷ್ಕರ್ಮಿಗಳು, ಮಂಟಪದ ಗೇಟು ಮುಚ್ಚಿ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ’

(ಗೋವಿಂದೇಗೌಡ)

‘ಏಳು ಮಂದಿ ಪೈಕಿ ಒಬ್ಬ ಚಾಕುವಿನಿಂದ ಹೊಟ್ಟೆಗೆ ಐದು ಬಾರಿ ಚುಚ್ಚಿದ್ದಾನೆ. ಉಳಿದವರು ಮಚ್ಚಿನಿಂದ, ಎದೆ, ಕೈ ಹಾಗೂ ಕಾಲಿಗೆ ಹೊಡೆದಿದ್ದಾರೆ. ಗೋವಿಂದೇಗೌಡ ಎಷ್ಟೇ ಕಿರುಚಾಡಿದರೂ ಸ್ಥಳೀಯ‍ರ‍‍್ಯಾರು ಅವರ ಸಹಾಯಕ್ಕೆ ಹೋಗಿಲ್ಲ. ಅವರು ರಕ್ತಸಿಕ್ತವಾಗಿ ಕುಸಿದು ಬಿದ್ದ ಬಳಿಕ ದುಷ್ಕರ್ಮಿಗಳು, ಕಾರಿನಲ್ಲಿ ವಾಪಸ್‌ ಹೊರಟುಹೋಗಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಅದಾದ ಬಳಿಕವೇ ಸ್ಥಳೀಯರು, ಗೋವಿಂದೇಗೌಡ ಅವರನ್ನು  ಹೊರವರ್ತುಲ ರಸ್ತೆ ಸಮೀಪದ ಲಕ್ಷ್ಮಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ದಾರಿ ಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ಹೇಳಿದರು. ಸದ್ಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಅಂಗರಕ್ಷಕರು ಇರಲಿಲ್ಲ: ‘ಚಿಕ್ಕತಿಮ್ಮೇಗೌಡ ಕೊಲೆ ಪ್ರಕರಣದ ಬಳಿಕ ಗೋವಿಂದೇಗೌಡ ಅವರಿಗೆ ಜೀವ ಬೆದರಿಕೆ ಇತ್ತು. ಹೀಗಾಗಿ ಇಬ್ಬರು ಅಂಗ

ರಕ್ಷಕರನ್ನು ಅವರು ನೇಮಿಸಿಕೊಂಡಿದ್ದರು. ಶನಿವಾರ ಅವರು ಮನೆಗೆ ಬಂದಿರಲಿಲ್ಲ. ಸಮಾವೇಶಕ್ಕೆ ಜನರನ್ನು ಆಹ್ವಾನಿಸಲೇ ಬೇಕಾಗಿದ್ದರಿಂದ ಅಂಗರಕ್ಷಕರು ಇಲ್ಲದೆ ಅವರು ಹೊರಗೆ ಹೋಗಿದ್ದರು. ಅದನ್ನು ನೋಡಿಕೊಂಡೇ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ’ ಎಂದು ಜೆಡಿಎಸ್‌ ಕಾರ್ಯಕರ್ತ ತಿಮ್ಮರಾಜಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೃತರಿಗೆ ಪತ್ನಿ ವರಮಹಾಲಕ್ಷ್ಮಿ ಹಾಗೂ ಒಬ್ಬ ಸಾಕು ಮಗಳಿದ್ದು, ಅವರಿಗೆ ಮದುವೆಯಾಗಿದೆ. ಅಂಗರಕ್ಷಕರಿಲ್ಲದೆ ಹೊರಗಡೆ ಹೋಗಬೇಡಿ ಎಂದು ಪತ್ನಿ ಸಹ ಹೇಳಿದ್ದರು’ ಎಂದರು.

ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ:ಕಲ್ಯಾಣ ಮಂಟಪದ ಕಟ್ಟಡದಲ್ಲಿ ಕೆನರಾ ಬ್ಯಾಂಕ್‌ ಹಾಗೂ ಹಲವು ಅಂಗಡಿಗಳಿವೆ. ಅಲ್ಲಿಯ ಕ್ಯಾಮೆರಾಗಳಲ್ಲಿ ಹತ್ಯೆಯ ಕೃತ್ಯ ಸೆರೆಯಾಗಿದೆ. ಅವುಗಳ ಡಿವಿಆರ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

‘ಮಂಟಪದೊಳಗೆ ಯಾರೇ ಬಂದರೂ ಅದು ಕ್ಯಾಮೆರಾದಲ್ಲಿ ಗೋಚರಿಸುತ್ತದೆ. ಗೋವಿಂದೇಗೌಡ ಅವರನ್ನು ಅಟ್ಟಾಡಿಸಿಕೊಂಡು ಕೊಂದಿರುವ ದೃಶ್ಯ ಸಹ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಮಂಟಪದ ಸಿಬ್ಬಂದಿಯೊಬ್ಬರು ತಿಳಿಸಿದರು.

ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್‌ ಕೇಳಿದ್ದರು: ಜೆಡಿಎಸ್‌ ಪರವಾಗಿ ಕೆಲಸ ಮಾಡುತ್ತಿದ್ದ ಗೋವಿಂದೇಗೌಡ ಹಾಗೂ ಅವರ ಪತ್ನಿ ವರಮಹಾಲಕ್ಷ್ಮಿ, ಹೆಗ್ಗನಗಳ್ಳಿ ವಾರ್ಡ್‌ನಲ್ಲಿ ಪಕ್ಷದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದ ಅವರು, ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್‌ ಸಹ ಕೇಳಿದ್ದರು ಎಂದು ಗೊತ್ತಾಗಿದೆ.

‘ಹೆಗ್ಗನಹಳ್ಳಿಯ ಜೆಡಿಎಸ್‌ ಮುಖಂಡರ ಪೈಕಿ ಗೋವಿಂದೇಗೌಡ ಅವರೇ ಹೆಚ್ಚಿನ ಕೆಲಸ ಮಾಡುತ್ತಿದ್ದರು. ವರಿಷ್ಠರು ಸಹ ಅವರಿಗೆ ಟಿಕೆಟ್‌ ಕೊಡಲು ಚಿಂತನೆ  ನಡೆಸಿದ್ದರು. ಅಷ್ಟರಲ್ಲಿ ಈ ಘಟನೆ ನಡೆದಿದೆ’ ಎಂದು ಕಾರ್ಯಕರ್ತರೊಬ್ಬರು ಹೇಳಿದರು. ‘ಗೋವಿಂದೇಗೌಡ ಹಾಗೂ ಚಿಕ್ಕತಿಮ್ಮೇಗೌಡ ಸ್ನೇಹಿತರಾಗಿದ್ದರು. ಹೆಗ್ಗನಹಳ್ಳಿ ವಾರ್ಡ್‌ಗೆ ಸ್ಪರ್ಧಿಸಿದ್ದ ಗೋವಿಂದೇಗೌಡ, ಕಾರ್ಪೊರೇಟರ್‌ ಆಗಿ ಆಯ್ಕೆಯಾಗಲು ಚಿಕ್ಕತಿಮ್ಮೇಗೌಡ ಅವರೇ ಶ್ರಮಿ

ಸಿದ್ದರು’ ಎಂದು ಕಾರ್ಯಕರ್ತರೊಬ್ಬರು ಹೇಳಿದರು.

ಶ್ವಾನ, ಬೆರಳಚ್ಚು ದಳದ ಪರಿಶೀಲನೆ: ಮಂಟಪದ ಗೇಟಿನಿಂದ 100 ಮೀಟರ್‌ ದೂರದಲ್ಲಿ ಈ ಕೃತ್ಯ ನಡೆದಿದ್ದು, ಘಟನೆ ಬಳಿಕ ಈ ಜಾಗದಲ್ಲಿ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿತ್ತು. ಶ್ವಾನ ದಳ ಹಾಗೂ ಬೆರಳಚ್ಚು ದಳದ ಸಿಬ್ಬಂದಿ ಘಟನಾ ಸ್ಥಳದಲ್ಲಿ ತಪಾಸಣೆ ನಡೆಸಿದರು. ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಮಾಲಿನಿ ಕೃಷ್ಣಮೂರ್ತಿ, ಡಿಸಿಪಿಗಳಾದ ಚೇತನ್‌ಸಿಂಗ್‌ ರಾಥೋಡ್‌, ಅನುಚೇತ್‌ ಭೇಟಿ ನೀಡಿದರು.

ಚುನಾವಣೆಯಿಂದ ಶುರುವಾಗಿದ್ದ ದ್ವೇಷ:

‘ಗೋವಿಂದೇಗೌಡ ಹಾಗೂ ಚಿಕ್ಕತಿಮ್ಮೇಗೌಡ ಸ್ನೇಹಿತರಾಗಿದ್ದರು. ಹೆಗ್ಗನಹಳ್ಳಿ ವಾರ್ಡ್‌ಗೆ ಸ್ಪರ್ಧಿಸಿದ್ದ ಗೋವಿಂದೇಗೌಡ, ಕಾರ್ಪೊರೇಟರ್‌ ಆಗಿ ಆಯ್ಕೆಯಾಗಲು ಚಿಕ್ಕತಿಮ್ಮೇಗೌಡ ಅವರೇ ಶ್ರಮಿಸಿದ್ದರು’ ಎಂದು ಕಾರ್ಯಕರ್ತರೊಬ್ಬರು ಹೇಳಿದರು.

‘2015ರಲ್ಲಿ ನಡೆದ ಚುನಾವಣೆ ವೇಳೆ ಹೆಗ್ಗನಹಳ್ಳಿ ವಾರ್ಡ್‌ ಸ್ಥಾನಕ್ಕೆ ಮಹಿಳಾ ಮೀಸಲಾತಿ ಬಂದಿತ್ತು. ಈ ವೇಳೆ ತಮ್ಮ ಸಂಬಂಧಿ ಮಹಿಳೆಗೆ ಟಿಕೆಟ್‌ ನೀಡುವಂತೆ ಚಿಕ್ಕತಿಮ್ಮೇಗೌಡ ಕೋರಿದ್ದರು. ಅದನ್ನು ತಿರಸ್ಕರಿಸಿದ್ದ ಗೋವಿಂದೇಗೌಡ, ತಮ್ಮ ಪತ್ನಿ ವರಮಹಾಲಕ್ಷ್ಮಿ ಅವರಿಗೆ ಟಿಕೆಟ್‌ ಕೊಡಿಸಿದ್ದರು’ ಎಂದರು.

‘ಅದೇ ಕಾರಣಕ್ಕೆ ಚಿಕ್ಕತಿಮ್ಮೇಗೌಡ, ಬಿಜೆಪಿ ಅಭ್ಯರ್ಥಿ ಜತೆ ಒಳ ಒಪ್ಪಂದ ಮಾಡಿಕೊಂಡು ವರಮಹಾಲಕ್ಷ್ಮಿ ಅವರನ್ನು ಸೋಲಿಸಿದ್ದರು ಎಂಬ ಮಾತಿದೆ. ಅದಾದ ವರ್ಷದಲ್ಲೇ ಚಿಕ್ಕತಿಮ್ಮೇಗೌಡ ಅವರ ಕೊಲೆಯಾಯಿತು. ಈ ಸಂಬಂಧ ಗೋವಿಂದೇಗೌಡ, ಅವರ ಪತ್ನಿ ವರಮಹಾಲಕ್ಷ್ಮಿ, ಸುಂಕದಕಟ್ಟೆಯ ಮಣಿಕಂಠ್‌ ಕಚ್ಚಿನ್ಸ್‌, ಬಿ.ಹರೀಶ್‌, ಮಣಿಕಂಠ ಅಲಿಯಾಸ್‌ ಯೋಗೇಶ್‌, ಆರ್‌ಎಕ್ಸ್‌ ಸೂರಿ, ಎ.ಮ್ಯಾಥ್ಯೂ, ಸನಾವುಲ್ಲಾ ಹಾಗೂ ಯುವರಾಜು ಎಂಬುವರನ್ನು ಬಂಧಿಸಲಾಗಿತ್ತು. ಈಗ ಗೋವಿಂದೇಗೌಡ ಅವರ ಕೊಲೆಯಾಗಿದೆ. ಇದಕ್ಕೆ ಯಾರು ಕಾರಣ ಎಂಬುದು ಪೊಲೀಸರ ತನಿಖೆಯಿಂದಲೇ ಬಯಲಾಗಬೇಕಿದೆ’ ಎಂದು ಕಾರ್ಯಕರ್ತ ಹೇಳಿದರು.

ನವೆಂಬರ್‌ 8ಕ್ಕೆ ಹತ್ಯೆಗೆ ಸಂಚು?

ಚಿಕ್ಕತಿಮ್ಮೇಗೌಡ ಅವರನ್ನು 2016ರ ನವೆಂಬರ್‌ 8ರಂದು ನಡುರಸ್ತೆಯಲ್ಲಿ ಅಡ್ಡಗಟ್ಟಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಆ ಪ್ರಕರಣದ ಆರೋಪಿ ಗೋವಿಂದೇಗೌಡ ಅವರನ್ನು ಸಹ 2017ರ ನವೆಂಬರ್‌ 8ರಂದೇ ಹತ್ಯೆ ಮಾಡಲು ದುಷ್ಕರ್ಮಿಗಳು ಸಂಚು ರೂಪಿಸಿದ್ದರು ಎಂಬ ಸಂಗತಿ ಪೊಲೀಸರಿಗೆ ಗೊತ್ತಾಗಿದೆ.

‘ನ. 8ರಂದು ಗೋವಿಂದೇಗೌಡ ಅವರನ್ನು ಎರಡು ಕಾರಿನಲ್ಲೇ ದುಷ್ಕರ್ಮಿಗಳು ಹಿಂಬಾಲಿಸಿದ್ದರು. ಆದರೆ, ಅಂಗರಕ್ಷಕರು ಹಾಗೂ ಕಾರ್ಯಕರ್ತರು ಇದ್ದಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಅಂದಿನಿಂದಲೇ ಹತ್ಯೆ ಮಾಡಲು ದುಷ್ಕರ್ಮಿಗಳು ಪ್ರಯತ್ನಿಸುತ್ತಿದ್ದರು. ಈ ಬಗ್ಗೆ ಅಂಗರಕ್ಷಕರು ಮಾಹಿತಿ ನೀಡಿದ್ದು, ಅದರನ್ವಯ ದುಷ್ಕರ್ಮಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಚಿಕ್ಕತಿಮ್ಮೇಗೌಡ ಮನೆಗೆ ಬಿಗಿ ಭದ್ರತೆ:

ಘಟನಾ ಸ್ಥಳದಿಂದ 300 ಮೀಟರ್‌ ದೂರದಲ್ಲೇ ಚಿಕ್ಕತಿಮ್ಮೇಗೌಡ ಅವರ ಮೂರು ಮಹಡಿಯ ಮನೆ ಇದೆ. ಮಧ್ಯಾಹ್ನದಿಂದಲೇ ಈ ಮನೆಗೆ ಬೀಗ ಹಾಕಲಾಗಿದ್ದು, ಮನೆಯವರೆಲ್ಲ ಹೊರಗಡೆ ಹೋಗಿದ್ದಾರೆ.

ಘಟನೆ ಬಳಿಕ ಅಲ್ಲಿಗೆ ಭೇಟಿ ನೀಡಿದ್ದ ಪೊಲೀಸರು, ಬೀಗ ಹಾಕಿದ್ದ ಬಾಗಿಲು ನೋಡಿ ಚಿಕ್ಕತಿಮ್ಮೇಗೌಡ ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಅವರ‍್ಯಾರು ಸಂಪರ್ಕಕ್ಕೆ ಸಿಕ್ಕಿಲ್ಲ. ಮುಂಜಾಗ್ರತಾ ಕ್ರಮವಾಗಿ ಅವರ ಮನೆಗೆ ಬಿಗಿ ಭದ್ರತೆ ಒದಗಿಸಿದ್ದಾರೆ.

‘ಹತ್ಯೆಗೆ ರಾಜಕೀಯ ವೈಷಮ್ಯ ಕಾರಣ ಎಂಬ ಸುದ್ದಿ ಹರಡಿದೆ. ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಮನೆಯ ಸುತ್ತಲೂ ಸಿಬ್ಬಂದಿ ನಿಯೋಜಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

* ಕೊಲೆಗೆ ಕಾರಣ ಏನೆಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ತನಿಖೆಗೆ ಮಲ್ಲೇಶ್ವರ ಎಸಿಪಿ ನೇತೃತ್ವದಲ್ಲಿ ಮೂವರು ಇನ್‌ಸ್ಪೆಕ್ಟರ್‌ಗಳ ಪ್ರತ್ಯೇಕ ತಂಡ ರಚಿಸಿದ್ದೇವೆ.

- ಮಾಲಿನಿ ಕೃಷ್ಣಮೂರ್ತಿ, ಹೆಚ್ಚುವರಿ ಪೊಲೀಸ್ ಕಮಿಷನರ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.