ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್‌ ಶರ್ಮಾಗೆ ನಾಯಕತ್ವದ ಪರೀಕ್ಷೆ

ಇಂದು ಮೊದಲ ಏಕದಿನ ಪಂದ್ಯ; ವಿರಾಟ್‌ ಕೊಹ್ಲಿ ಅನುಪಸ್ಥಿತಿ; ಶ್ರೀಲಂಕಾಕ್ಕೆ ಮತ್ತೊಂದು ಸವಾಲು
Last Updated 9 ಡಿಸೆಂಬರ್ 2017, 20:14 IST
ಅಕ್ಷರ ಗಾತ್ರ

ಧರ್ಮಶಾಲಾ: ಶ್ರೀಲಂಕಾ ಎದುರಿನ ಟೆಸ್ಟ್‌ ಸರಣಿ ಗೆದ್ದು ವಿಶ್ವಾಸದಿಂದ ಪುಟಿಯುತ್ತಿರುವ ಭಾರತ ತಂಡ ಈಗ ಏಕದಿನ ಮಾದರಿಯಲ್ಲೂ ಆಧಿಪತ್ಯ ಸಾಧಿಸುವ ಹುಮ್ಮಸ್ಸಿನಲ್ಲಿದೆ.

ಉಭಯ ತಂಡಗಳ ನಡುವಣ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಭಾನುವಾರ ನಡೆಯಲಿದ್ದು, ಆತಿಥೇಯ ಭಾರತ ಗೆಲುವಿನ ಮುನ್ನುಡಿ ಬರೆಯುವ ಕನವರಿಕೆಯಲ್ಲಿದೆ. ಈ ಹೋರಾಟಕ್ಕೆ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ವೇದಿಕೆಯೂ ಸಿದ್ಧವಾಗಿದೆ.

ರೋಹಿತ್‌ಗೆ ಅಗ್ನಿ ಪರೀಕ್ಷೆ: ಬಲಗೈ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಏಕದಿನ ಮಾದರಿಯಲ್ಲಿ ಮೊದಲ ಬಾರಿಗೆ ಭಾರತ ತಂಡದ ಸಾರಥ್ಯ ವಹಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಈ ಸರಣಿ ಅಗ್ನಿ ಪರೀಕ್ಷೆಯ ಕಣವಾಗಿದೆ. ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಿರುವ ಕಾರಣ ರೋಹಿತ್‌ಗೆ ನಾಯಕತ್ವ ಒಲಿದಿದೆ. ಅವರು ತಂಡವನ್ನು ಮುನ್ನಡೆಸುತ್ತಿರುವ ಭಾರತದ 24ನೇ ಆಟಗಾರ.

ಏಕದಿನದಲ್ಲಿ ಎರಡು ದ್ವಿಶತಕ ಸಿಡಿಸಿರುವ ವಿಶ್ವ ದಾಖಲೆ ರೋಹಿತ್‌ ಹೆಸರಿನಲ್ಲಿದೆ. ಗಾಯದಿಂದ ಗುಣಮುಖವಾದ ನಂತರ ಲಂಕಾ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಮಿಂಚಿದ್ದ ರೋಹಿತ್‌, ಏಕದಿನ ಸರಣಿಯಲ್ಲೂ ರನ್‌ ಮಳೆ ಸುರಿಸುವ ವಿಶ್ವಾಸ ಹೊಂದಿದ್ದಾರೆ.

ಧವನ್‌ಗೆ ಜ್ವರ, ಕೇದಾರ್‌ ಅಲಭ್ಯ: ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಜ್ವರದಿಂದ ಬಳಲುತ್ತಿದ್ದು, ತೊಡೆಯ ನೋವಿಗೆ ಒಳಗಾಗಿದ್ದ  ಕೇದಾರ್ ಜಾಧವ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲು ವಾಷಿಂಗ್ಟನ್ ಸುಂದರ್‌ ಸ್ಥಾನ ಗಳಿಸಿದ್ದಾರೆ. ಭಾನುವಾರದ ವೇಳೆಗೆ ಧವನ್‌ ಗುಣಮುಖರಾಗದೆ ಹೋದರೆ ಆಡುವ ಬಳಗದಿಂದ ಹೊರಗುಳಿಯಬೇಕಾಗುತ್ತದೆ.

ಆಗ ಶ್ರೇಯಸ್‌ ಅಯ್ಯರ್‌ಗೆ ಪದಾರ್ಪಣೆಯ ಅವಕಾಶ ಸಿಗಬಹುದು. ಧವನ್‌ ಆಡದಿದ್ದರೆ ಅಜಿಂಕ್ಯ ರಹಾನೆ, ರೋಹಿತ್‌ ಜೊತೆ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ.

ಪ್ರಮುಖ ಆಟಗಾರ ಕೊಹ್ಲಿ ಅನುಪಸ್ಥಿತಿಯಲ್ಲಿ ಕರ್ನಾಟಕದ ಮನೀಷ್‌ ಪಾಂಡೆ ಅಥವಾ ದಿನೇಶ್‌ ಕಾರ್ತಿಕ್‌ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ದೋನಿ ಮತ್ತು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಬಲವೂ ತಂಡದ ಬೆನ್ನಿಗಿದೆ. ಜಸ್‌ಪ್ರೀತ್‌ ಬೂಮ್ರಾ ಮತ್ತು ಭುವನೇಶ್ವರ್‌ ಕುಮಾರ್‌ ಬೌಲಿಂಗ್‌ ವಿಭಾಗದಲ್ಲಿ ತಂಡದ ಆಧಾರ ಸ್ತಂಭಗಳೆನಿಸಿದ್ದಾರೆ.

ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಚಹಾಲ್‌ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಸ್ಪಿನ್‌ ಖೆಡ್ಡಾಕ್ಕೆ ಕೆಡವಲು ಹವಣಿಸುತ್ತಿದ್ದಾರೆ.

ಪುಟಿದೇಳುವ ತವಕ: ಶ್ರೀಲಂಕಾ ತಂಡ ಏಕದಿನ ಸರಣಿ ಗೆದ್ದು ಟೆಸ್ಟ್‌ನಲ್ಲಿ ಎದುರಾಗಿದ್ದ ನಿರಾಸೆ ಮರೆಯುವ ವಿಶ್ವಾಸ ಹೊಂದಿದೆ.  ಕುಶಾಲ್‌ ಪೆರೇರಾ ಮತ್ತು ಅಸೆಲಾ ಗುಣರತ್ನೆ ತಂಡಕ್ಕೆ ಮರಳಿರುವುದರಿಂದ ಬ್ಯಾಟಿಂಗ್‌ ಶಕ್ತಿ ಹೆಚ್ಚಿದೆ.

ದೆಹಲಿ ಟೆಸ್ಟ್‌ನಲ್ಲಿ ಶತಕ ಗಳಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದ ಧನಂಜಯ ಡಿಸಿಲ್ವ, ಉಪುಲ್‌ ತರಂಗ, ಲಾಹಿರು ತಿರಿಮಾನ್ನೆ ಅವರ ಮೇಲೂ ಭರವಸೆ ಇಡಬಹುದಾಗಿದೆ.ಈ ತಂಡ ಬೌಲಿಂಗ್‌ನಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಬೇಕು. ಈ ನಿಟ್ಟಿನಲ್ಲಿ ಸುರಂಗ ಲಕ್ಮಲ್‌, ನುವಾನ್‌ ಪ್ರದೀಪ ಮತ್ತು ನಾಯಕ ಪೆರೇರಾ ಮೇಲೆ ಜವಾಬ್ದಾರಿ ಹೆಚ್ಚಿದೆ.

ಉಭಯ ತಂಡಗಳ ಇದುವರೆಗಿನ ಮುಖಾಮುಖಿ ಫಲಿತಾಂಶವನ್ನು ನೋಡಿದರೆ ಭಾರತದ ಮೇಲುಗೈ ಎದ್ದುಕಾಣುತ್ತದೆ. ಹೀಗಾಗಿ ಇಲ್ಲಿಯೂ ಆತಿಥೇಯರಿಗೆ ಜಯದ ಅವಕಾಶ ಹೆಚ್ಚಿದೆ.

(ಶ್ರೀಲಂಕಾ ತಂಡದ ನಾಯಕ ತಿಸಾರ ಪೆರೇರಾ ಪಿಟಿಐ ಚಿತ್ರ)

**

ಹೊಸ ನಾಯಕರಿಗೆ ಹೊಸ ಸವಾಲು

ಭಾರತದ ರೋಹಿತ್‌ ಶರ್ಮಾ ಮತ್ತು ಶ್ರೀಲಂಕಾದ ತಿಸಾರ ಪೆರೇರಾ ಅವರು ಇದೇ ಮೊದಲ ಬಾರಿಗೆ ಏಕದಿನ ಮಾದರಿಯಲ್ಲಿ ತಂಡ ಮುನ್ನಡೆಸುತ್ತಿದ್ದಾರೆ.

ಹೀಗಾಗಿ ಇಬ್ಬರಿಗೂ ಸರಣಿ ಹೊಸ ಸವಾಲು ಎನಿಸಿದೆ. ಉಪುಲ್‌ ತರಂಗ ನಾಯಕತ್ವದಲ್ಲಿ ಸಿಂಹಳೀಯ ನಾಡಿನ ತಂಡ ಸತತವಾಗಿ ಸರಣಿ ಸೋತಿತ್ತು. ಇತ್ತೀಚಿಗೆ ಶ್ರೀಲಂಕಾ ಕ್ರಿಕೆಟ್‌ (ಎಸ್‌ಎಲ್‌ಸಿ) ಪೆರೇರಾ ಅವರನ್ನು ನಾಯಕನನ್ನಾಗಿ ನೇಮಿಸಿತ್ತು.

**

ತಂಡಗಳು ಇಂತಿವೆ

ಭಾರತ: ರೋಹಿತ್‌ ಶರ್ಮಾ (ನಾಯಕ), ಶಿಖರ್‌ ಧವನ್‌, ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ವಾಷಿಂಗ್ಟನ್‌ ಸುಂದರ್‌, ದಿನೇಶ್‌ ಕಾರ್ತಿಕ್‌, ಮಹೇಂದ್ರ ಸಿಂಗ್‌ ದೋನಿ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಾಲ್‌, ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌ ಮತ್ತು ಸಿದ್ದಾರ್ಥ್‌ ಕೌಲ್‌.

ಶ್ರೀಲಂಕಾ: ತಿಸಾರ ಪೆರೇರಾ (ನಾಯಕ), ಉಪುಲ್‌ ತರಂಗ, ದನುಷ್ಕಾ ಗುಣತಿಲಕ, ಲಾಹಿರು ತಿರಿಮಾನ್ನೆ, ಏಂಜೆಲೊ ಮ್ಯಾಥ್ಯೂಸ್‌, ಅಸೆಲಾ ಗುಣರತ್ನೆ, ನಿರೋಷನ್‌ ಡಿಕ್ವೆಲ್ಲಾ (ವಿಕೆಟ್‌ ಕೀಪರ್‌), ಚತುರಂಗ ಡಿಸಿಲ್ವ, ಅಕಿಲಾ ಧನಂಜಯ, ಸುರಂಗ ಲಕ್ಮಲ್‌, ನುವಾನ್‌ ಪ್ರದೀಪ, ಸದೀರ ಸಮರವಿಕ್ರಮ, ಧನಂಜಯ ಡಿಸಿಲ್ವ, ಧುಷಮಂತ್‌ ಚಾಮೀರಾ, ಸಚಿತ್‌ ಪತಿರಾಣಾ ಮತ್ತು ಕುಶಾಲ್‌ ಪೆರೇರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT