ಸೋಮವಾರ, ಮಾರ್ಚ್ 1, 2021
23 °C

ನೀರಾವರಿಗಾಗಿ ಮೋದಿ ಕಾಲು ಹಿಡಿಯಲೂ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಾವರಿಗಾಗಿ ಮೋದಿ ಕಾಲು ಹಿಡಿಯಲೂ ಸಿದ್ಧ

ಯಾದಗಿರಿ: ‘ಕೃಷ್ಣಾ ಅಚ್ಚುಕಟ್ಟು ವ್ಯಾಪ್ತಿಯ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾಲು ಹಿಡಿಯಲೂ ಸಿದ್ಧ’ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಶ್ವಾಸನೆ ನೀಡಿದರು.

ಸಮೀಪದ ಗುರುಮಠಕಲ್‌ನಲ್ಲಿ ಶನಿವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಹೇಳಿದ ಸರ್ಕಾರ ನೀರಾವರಿ ಯೋಜನೆಗಳಿಗೆ ಪ್ರತಿವರ್ಷ ₹10 ಸಾವಿರ ಕೋಟಿ ಅನುದಾನ ಮೀಸಲಿಡುವುದಾಗಿ ಕೃಷ್ಣೆಯ ಮೇಲೆ ಆಣೆ ಪ್ರಮಾಣ ಮಾಡಿತ್ತು. ಸರ್ಕಾರ ಹೇಳಿದಂತೆ ಇದುವರೆಗೂ ₹50 ಸಾವಿರ ಕೋಟಿ ಖರ್ಚು ಮಾಡಬೇಕಿತ್ತು. ಆದರೆ, ಸರ್ಕಾರದ ಲೆಕ್ಕಾಚಾರದ ಪ್ರಕಾರ ಈವರೆಗೆ ₹ 6,400 ಕೋಟಿ ಮಾತ್ರ ಖರ್ಚು ಆಗಿದೆ’ ಎಂದರು.

‘ಬಿಜೆಪಿ ಅಧಿಕಾರಕ್ಕೆ ಬಂದರೆ ಮೋದಿ ಅವರ ಕಾಲು ಹಿಡಿದಾದರೂ ₹1ಲಕ್ಷ ಕೋಟಿ ಅನುದಾನ ತಂದು ಕೃಷ್ಣಾ ವ್ಯಾಪ್ತಿಯ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ’ ಎಂದು ಭರವಸೆ ನೀಡಿದರು.

ಹಗಲು ದರೋಡೆ: ‘ತಲೆತಿರುಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹಗಲು ದರೋಡೆಯಲ್ಲಿ ತೊಡಗಿದೆ. ಕಾಂಗ್ರೆಸ್‌ ಸರ್ಕಾರ ರಾಜ್ಯಕ್ಕೆ ಮಲೇಷಿಯಾದಿಂದ ಮರಳು ತರಿಸುತ್ತಿದೆ. 50 ಕೆ.ಜಿ. ಮರಳಿಗೆ ₹260 ದರ ನಿಗದಿಪಡಿಸಿದೆ. ಸಿಮೆಂಟಿಗೂ ಅಷ್ಟೊಂದು ದರ ಇಲ್ಲ. ಸಿಎಂ ಸಿದ್ದರಾಮಯ್ಯ ಹಗಲು ದರೋಡೆ ನಡೆಸಿದ್ದಾರೆ ಎಂಬುದಕ್ಕೆ ಈ ಉದಾಹರಣೆ ಸಾಕಲ್ಲವೇ’ ಎಂದರು.

‘ಸಿಲಿಕಾನ್ ಸಿಟಿ ಆಗಿದ್ದ ಬೆಂಗಳೂರು ಕಾಂಗ್ರೆಸ್ ಆಡಳಿತಾವಧಿಯಲ್ಲಿ ರೇಪ್‌ ಸಿಟಿಯಾಗಿ ಪ್ರಸಿದ್ಧಿ ಪಡೆದಿದೆ. ಬೆಂಗಳೂರು ನಗರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆ ಹೆಚ್ಚಿದೆ ಎಂಬುದನ್ನು ಅಪರಾಧ ತನಿಖಾ ಸಂಸ್ಥೆ ಬಹಿರಂಗಪಡಿಸಿದೆ. ಇದು ನೋವು ತರುವ ಸಂಗತಿ. ಈ ರೀತಿ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳಲು ಕಾಂಗ್ರೆಸ್‌ನ ಅದಕ್ಷ ಆಡಳಿತ ಕಾರಣ’ ಎಂದು ಆರೋಪಿಸಿದರು.

‘ಹೈದರಾಬಾದ್ ಕರ್ನಾಟದ ಅಭಿವೃದ್ಧಿಗಾಗಿ ಸರ್ಕಾರ ಆರ್ಥಿಕ ವರ್ಷದಲ್ಲಿ ಎಚ್‌ಕೆಆರ್‌ಡಿಬಿಗೆ ₹4,650 ಸಾವಿರ ಕೋಟಿ ಅನುದಾನ ಮೀಸಲಿಡುವುದಾಗಿ ಆಶ್ವಾಸನೆ ನೀಡಿತ್ತು. ಆದರೆ, ₹2,350 ಸಾವಿರ ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಅದರಲ್ಲಿ ಕೇವಲ ₹1,330 ಕೋಟಿಯಷ್ಟೇ ಖರ್ಚು ಮಾಡಲಾಗಿದೆ’ ಎಂದರು.

ಸಂಸದೀಯ ವ್ಯವಹಾರ ಮಂಡಳಿ ಮತ್ತು ರಸಗೊಬ್ಬರ ಖಾತೆ ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ‘ಸ್ವಾತಂತ್ರ್ಯ ಹೋರಾಟಗಾರರಾದ ವಿದ್ಯಾಧರ ಗುರೂಜಿ ಅವರನ್ನು ಬಿಟ್ಟರೆ ಈ ನೆಲದ ಒಬ್ಬ ನಾಯಕರನ್ನೂ ಇಲ್ಲಿಯ ಜನ ಆಯ್ಕೆ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ,

ಬಾಬುರಾವ ಚಿಂಚಿನಸೂರ ಅವರಂತಹ ವಲಸೆ ಹಕ್ಕಿಗಳಿಗೆ ಆದ್ಯತೆ ನೀಡಿದ್ದಾರೆ. ಗುರುಮಠಕಲ್ ಕ್ಷೇತ್ರದಲ್ಲಿ ಅಧಿಕಾರ ಹಿಡಿದ ಈ ವಲಸಿಗರು ಜನರ ಕಷ್ಟಕಾರ್ಪಣ್ಯ ಆಲಿಸಲು ಇಲ್ಲಿ ನೆಲೆಸಿಲ್ಲ. ಅವರಿಗೆ ಇಲ್ಲಿ ಮನೆಯೂ ಇಲ್ಲ, ವಿಳಾಸವೂ ಇಲ್ಲ. ಹೀಗೆ ಏನೂ ಇಲ್ಲದ ವಲಸಿಗರ ಬದಲಿಗೆ ಈ ನೆಲದ ನಾಯಕರಿಗೆ ಅಧಿಕಾರ ನೀಡಬೇಕಿದೆ’ ಎಂದರು.

‘ಕೃಷ್ಣಾ ಮೇಲ್ದಂಡೆ, ನಂಜುಂಡಪ್ಪ ವರದಿ ಶಿಫಾರಸು ಯಾವೊಂದನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸದ ಕಾಂಗ್ರೆಸ್ ಹೈದರಾಬಾದ್ ಕರ್ನಾಟಕ ಹಿಂದುಳಿಯಲು ಕಾರಣವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಡೀ ಉತ್ತರ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸಿದೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರು, ವೆಂಟಕರೆಡ್ಡಿ ಮುದ್ನಾಳ, ರಾಜೂಗೌಡ ಮಾತನಾಡಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ,

ಶಾಸಕ ರಘುನಾಥ ರಾವ್ ಮಲಕಪುರೆ, ಎನ್‌.ಶಂಕ್ರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ರೇವುನಾಯಕ ಬೆಳಮಗಿ, ಕೆ.ಪಿ. ನಂಜುಂಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಭೀಮಣ್ಣ ಮೇಟಿ, ವೀರಬಸಂತರೆಡ್ಡಿ , ಶರಣಭೂಪಾಲರೆಡ್ಡಿ ನಾಯ್ಕಲ್, ನಾಗರತ್ನಾ ಕುಪ್ಪಿ, ಸಾಯಿಬಣ್ಣ ಬೋರಬಂಡಾ ಇತರರು ಇದ್ದರು.

ಕಡೆಗಣನೆ: ಪರಿವರ್ತನಾ ಯಾತ್ರೆ ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ ಉದ್ಘಾಟನೆಯಾಗಬೇಕಿತ್ತು. ಮೆರವಣಿಗೆಯಲ್ಲಿ ಮಧ್ಯಾಹ್ನ 12.20ಕ್ಕೆ ಬಂದ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ನೇರವಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿಯ ತತ್ವ, ಸಿದ್ಧಾಂತ ಹರಿಕಾರ ದೀನದಯಾಳ್ ಉಪಾಧ್ಯಾಯ ಮತ್ತು ಭಾರತ ಮಾತ್ರೆಯ ಭಾಚಿತ್ರಗಳಿಗೆ ಪುಷ್ಪನಮನ ಕೂಡ ಸಲ್ಲಿಸದೇ ಬಿಜೆಪಿ ನಾಯಕರು ಅವಮಾನ ಮಾಡಿದ್ದು ಕಂಡು ಬಂತು.  ಕೆಲ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ಪರಿವರ್ತನಾ ಯಾತ್ರೆ ಪ್ರಯುಕ್ತ ಪಕ್ಷದ ನಾಯಕರು ಇಡೀ ಪಟ್ಟಣದಲ್ಲಿ ಪ್ರಚಾರಕ್ಕಾಗಿ ಫ್ಲೆಕ್ಸ್, ಕಟೌಟ್‌ಗಳನ್ನು ಹಾಕಿದ್ದರು. ಪಟ್ಟಣದ ಪ್ರತಿಯೊಂದು ಬೀದಿದೀಪಗಳ ಕಂಬಗಳಲ್ಲೂ ರಾಜಕೀಯ ನಾಯಕರ ಕಟೌಟ್‌ಗಳು ರಾರಾಜಿಸಿದವು.

ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿದ್ದರೂ ರಾಜಕೀಯ ಪ್ರಚಾರದ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿದೆ. ಪುರಸಭೆ ನಿರ್ಲಕ್ಷ್ಯದ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಜರುಗಿಸಬೇಕು ಎಂದು ಪರಿಸರ ಸಂಘಟನೆಗಳು ಒತ್ತಾಯಿಸಿವೆ.

* * 

ನಾನು ಸಿಎಂ ಆಗಿದ್ದಾಗ ಬಡ ಜನರ ಉದ್ಧಾರಕ್ಕೆ ಜಾರಿಗೊಳಿಸಿದ್ದ ಜನಪರ ಯೋಜನೆಗಳನ್ನೆಲ್ಲಾ ಸಿದ್ದರಾಮಯ್ಯ ಮೂಲೆಗುಂಪು ಮಾಡಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ

ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.