ಶನಿವಾರ, ಮಾರ್ಚ್ 6, 2021
20 °C

ಅಂಗವೈಕಲ್ಯ ಮೆಟ್ಟಿ ನಿಂತ ವಿಜಯಲಕ್ಷ್ಮಿ ಕೊಳಾರ

ಶಶಿಕಾಂತ ಭಗೋಜಿ Updated:

ಅಕ್ಷರ ಗಾತ್ರ : | |

ಅಂಗವೈಕಲ್ಯ ಮೆಟ್ಟಿ ನಿಂತ ವಿಜಯಲಕ್ಷ್ಮಿ ಕೊಳಾರ

ಹುಮನಾಬಾದ್: ಸದೃಢ ಕಾಯದ ಅದೆಷ್ಟೋ ಜನ ಹಿರಿಯರಿಗೆ ಹೊರೆಯಾಗಿ ಬದುಕುತ್ತಿರುವ ಇಂದಿನ ದಿನಮಾನಗಳಲ್ಲಿ ತಾಲ್ಲೂಕಿನ ಕಲ್ಲೂರಿನ ವಿಜಯಲಕ್ಷ್ಮಿ ಕೊಳಾರ ಅಂಗವೈಕಲ್ಯದ ನಡುವೆಯೂ ಕಸೂತಿ ಕಲೆಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ.

ಪಟ್ಟಣ ಹತ್ತಿರದ ಮಾಣಿಕನಗರದ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಶಿಕ್ಷಕರ ತರಬೇತಿ ಪಡೆದಿರುವ ಇವರು ಬಿದಿರಿನ ವೈವಿಧ್ಯಮಯ ವಸ್ತುಗಳನ್ನು ಸಿದ್ಧಪಡಿಸುತ್ತಾರೆ. ಚಿತ್ರಗಳನ್ನು ಬಿಡಿಸಿ ಅದಕ್ಕೆ ತಕ್ಕ ಆಕರ್ಷಕ ಬಣ್ಣ ತುಂಬುತ್ತಾರೆ. ಸೀರೆಗಳ ಮೇಲೆ ಅಂದವಾದ ಚಿತ್ರ ಬಿಡಿಸುತ್ತಾರೆ. ಬಾಗಿಲು ಪರದೆ ತಯಾರಿಸುತ್ತಾರೆ.

ಕಸೂತಿ ಕೆಲಸದ ಜತೆಗೆ ಮದುವೆಯಲ್ಲಿ ಬಳಸುವ ಸುರಗಿ ಸಾಮಗ್ರಿ, ವಧುವಿನ ಅಲಂಕಾರಕ್ಕೆ ಬೇಕಾಗುವ ಸಾಮಗ್ರಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿ ಪ್ರತಿ ತಿಂಗಳು ಕನಿಷ್ಠ ₹ 10 ಸಾವಿರದಿಂದ ₹ 12 ಸಾವಿರ ಆದಾಯ ಪಡೆಯುತ್ತಿದ್ದಾರೆ.

ಮದುವೆ , ಸಮಾರಂಭಗಳ ಸಂದರ್ಭದಲ್ಲಿ ಹೆಚ್ಚು ಆರ್ಡರ್‌ ತೆಗೆದುಕೊಂಡು ಸಕಾಲಕ್ಕೆ ಮರಳಿಸದಿದ್ದರೆ ಗ್ರಾಹಕರಿಗೆ ತೊಂದರೆ ಕೊಟ್ಟಂತಾಗುತ್ತದೆ ಎನ್ನುವ ಕಾರಣಕ್ಕೆ ತನ್ನಿಂದ ಎಷ್ಟು ಸಾಧ್ಯವೋ ಅಷ್ಟೇ ಆರ್ಡರ್‌ ಪಡೆದು, ಸಕಾಲಕ್ಕೆ ಮರಳಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ.

‘ನಾನು ಹೊಸ ವಿನ್ಯಾಸ ಮಾಡಿದ ಸೀರೆಗೆ ಗ್ರಾಹಕರು ನೀಡಿದ್ದು ಬರೊಬ್ಬರಿ ₹ 5 ಸಾವಿರ. ಸ್ಟೋನ್‌ ಬಳಸಿ ವಿನ್ಯಾಸ ಮಾಡಿದ ರವಿಕೆಗಳು ಒಂದು ಸಾವಿರ ರೂಪಾಯಿಯಿಂದ 3 ಸಾವಿರದವರೆಗೆ ಮಾರಾಟವಾಗುತ್ತಿವೆ. ಡಿ.ಇಡಿ, ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಪಾಠ ಯೋಜನೆಗೆ ಅಗತ್ಯ ಚಿತ್ರಪಟ (ಚಾರ್ಟ್‌)ಗಳನ್ನು ಬಿಡಿಸಿಕೊಡುವಂತೆ ನನ್ನ ಬಳಿಗೆ ಬರುತ್ತಾರೆ’ ಎಂದು ವಿಜಯಲಕ್ಷ್ಮಿ ಹೆಮ್ಮೆಯಿಂದ ಹೇಳುತ್ತಾರೆ.

ಅಂಗವಿಕಲ ಕಲಾವಿದೆ ಎಂಬ ಕಾರಣಕ್ಕೆ ಅನುಕಂಪದಿಂದ ಹೆಚ್ಚಿನ ಹಣ ನೀಡಿದರೆ ಸ್ವೀಕರಿಸುವುದಿಲ್ಲ. ‘ನನ್ನ ಕಲೆಗೆ ಬೆಲೆ ನೀಡಿ, ನನಗಲ್ಲ’ ಎಂದು ಖಾರವಾಗಿ ಹೇಳುತ್ತಾರೆ. ಮೂರು ಅಡಿ ಎತ್ತರವಿರುವ ವಿಜಯಲಕ್ಷ್ಮಿ ನಡೆಯಲು ಬಾರದ ಸ್ಥಿತಿಯಲ್ಲಿದ್ದಾರೆ. ಬೆರಳುಗಳು ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಆದರೂ ಅವರು ಸುಂದರವಾಗಿ ಬರೆಯಬಲ್ಲರು.

‘ಉನ್ನತ ಶಿಕ್ಷಣ ಪಡೆಯುವ ಆಸೆ ಇತ್ತು. ಪ್ರತಿದಿನ ಕಾಲೇಜಿಗೆ ಬಂದು ಹೋಗುವುದು ಸಾಧ್ಯವಿರಲಿಲ್ಲ. ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯ ಕಾರ್ಯದರ್ಶಿ ಗುಂಡಪ್ಪ ದೊಡ್ಡಮನಿ, ಪ್ರಾಚಾರ್ಯ ವಿ.ಎನ್‌.ಜಾಧವ್‌ ಅವರು ಕಾಲಕಾಲಕ್ಕೆ ಮಾರ್ಗದರ್ಶನ ನೀಡಿದ್ದರಿಂದ ಮನೆಯಲ್ಲೇ ಅಭ್ಯಾಸ ಮಾಡಿ ಚಿತ್ರಕಲೆಯ ಕೋರ್ಸ್‌ ಪೂರ್ಣಗೊಳಿಸಿದ್ದೇನೆ’ ಎಂದು ವಿವರಿಸುತ್ತಾರೆ.

ನಮ್ಮ ಪಾಲಿನ ಭಾಗ್ಯಲಕ್ಷ್ಮಿ: ‘ಮಗಳು ಹುಟ್ಟಿದಾಗ ಅವಳ ದೇಹಸ್ಥಿತಿ ನೋಡಿಸ್ವಲ್ಪ ಬೇಸರ ಆಯಿತು. ದೇವರೇ ಯಾವ ತಪ್ಪಿಗಾಗಿ ನಮಗೆ ಈ ಶಿಕ್ಷೆ ಕೊಟ್ಟೆ ಎಂದು ಗೋಳಾಡಿದೇವು. ಈಕೆಯಿಂದ ನಿಮ್ಮ ಎಲ್ಲ ಸಂಕಷ್ಟಗಳು ಮಾಯವಾಗಲಿವೆ ಎಂದು ಕೆಲವರು ಸಮಾಧಾನದ ಮಾತು ಹೇಳಿ ಧೈರ್ಯ ತುಂಬಿದರು. ಅಂದುಕೊಂಡಂತೆ ಮಗಳ ಬೆಳವಣಿಗೆಯ ಜೊತೆಗೆ ನಮ್ಮನ್ನು ಬಹುದಿನಗಳಿಂದ ಕಾಡುತ್ತಿದ್ದ ಹತ್ತಾರು ಸಂಕಷ್ಟಗಳು ಈಗ ನಿವಾರಣೆಯಾಗಿವೆ. ಮಗಳ ನೆರವಿನಿಂದಾಗಿ ಸಾಲ ತೀರಿದೆ. ವ್ಯಾಪಾರ ವೃದ್ಧಿಯಾಗಿದ್ದು, ಮನೆಯಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ’ ಎಂದು ಹೇಳುತ್ತಾರೆ ವಿಜಯಲಕ್ಷ್ಮಿ ಪಾಲಕರಾದ ನಾಗಶೆಟ್ಟಿ ಹಾಗೂ ಚಿತ್ರಲೇಖಾ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.