ಮಂಗಳವಾರ, ಮಾರ್ಚ್ 2, 2021
31 °C

ವಿನಯ್ ಮತ್ತು ಮುಂಬೈ ಸವಾಲು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ವಿನಯ್ ಮತ್ತು ಮುಂಬೈ ಸವಾಲು

‘ಮುಂಬೈ ತಂಡದ ಎದುರಿನ ಪಂದ್ಯವೆಂದರೆ ನನ್ನ ಕೆಚ್ಚು ಇಮ್ಮಡಿಯಾಗಿ ಬಿಡುತ್ತದೆ. ದೇಶಿ ಕ್ರಿಕೆಟ್‌ನ ದಿಗ್ಗಜ ತಂಡವಾಗಿರುವ ಮುಂಬೈನ ಕಠಿಣ ಸವಾಲು ಎದುರಿಸುವುದೆಂದರೆ ಇಷ್ಟ’‌

ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಆರ್. ವಿನಯಕುಮಾರ್ ಅವರು ಹೋದ ಗುರುವಾರ ಸಂಜೆ ಈ ಮಾತುಗಳನ್ನು ಹೇಳುವಾಗ ಅವರ ಧ್ವನಿಯಲ್ಲಿ ಛಲ ಇತ್ತು. ಮತ್ತಷ್ಟು ಸಾಧಿಸುವ ಹಸಿವು ಪ್ರತಿಧ್ವನಿಸುತ್ತಿತ್ತು.

41 ಬಾರಿ ರಣಜಿ ಟ್ರೋಫಿ ಗೆದ್ದಿರುವ ಮುಂಬೈ ತಂಡವನ್ನು ಸೋಲಿಸುವುದು ಬಹುತೇಕ ಎಲ್ಲ ತಂಡಗಳಿಗೂ ಪ್ರತಿಷ್ಠೆಯ ವಿಷಯ. ಅದರಲ್ಲೂ ಎಂಟು ಬಾರಿ ರಣಜಿ ಚಾಂಪಿಯನ್ ಕರ್ನಾಟಕಕ್ಕೆ ಇನ್ನೂ ಹೆಚ್ಚಿನದ್ದು. ಅಂತಹ ಬದ್ಧ ಪ್ರತಿಸ್ಪರ್ಧಿಯನ್ನು ಎರಡು ಸಲ ಮಣಿಸಿದ ಶ್ರೇಯ ವಿನಯಕುಮಾರ್ ನಾಯಕತ್ವಕ್ಕೆ ಇದೆ. ಅಷ್ಟೇ ಅಲ್ಲ 2011 ರಿಂದ 2015 ರ ಅವಧಿಯಲ್ಲಿ ಕರ್ನಾಟಕ ತಂಡವು ಮುಂಬೈ ವಿರುದ್ಧ ಆಡಿದ್ದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಡ್ರಾ ಸಾಧಿಸಿತ್ತು. 2010ರಲ್ಲಿ ಮೈಸೂರಿನಲ್ಲಿ ನಡೆದಿದ್ದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವು 7 ರನ್‌ಗಳಿಂದ ಗೆದ್ದಿತ್ತು. ಆಗ ಅಲ್ಪ ಅಂತರದಿಂದ ಕರ್ನಾಟಕ ಆಘಾತ ಅನುಭವಿಸಿತ್ತು. ಆ ನೋವು ವಿನಯಕುಮಾರ್ ಮನದಲ್ಲಿ ಗೆಲುವಿನ ಕೆಚ್ಚು ಹೆಚ್ಚಿಸಿತ್ತು. ಮುಂಬೈ ಪಂದ್ಯವೆಂದರೆ ವಿನಯ್ ಪುಟಿದೇಳುತ್ತಾರೆ. ಅವರ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳು ಮೊನಚುಗೊಳ್ಳುತ್ತವೆ.

ನಾಗಪುರದಲ್ಲಿ ನಡೆದ ಈ ಬಾರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರ ಅಮೋಘ ಬೌಲಿಂಗ್ ಇದಕ್ಕೆ ಸಾಕ್ಷಿ. ಈ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಅವರು ಮುಂಬೈ ವಿರುದ್ಧ ಎರಡನೇ ಬಾರಿ ಆರು ವಿಕೆಟ್‌ಗಳನ್ನು ಗಳಿಸಿದರು. ಈ ಸಂದರ್ಭದಲ್ಲಿ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡರು. ಅದರ ಸಾರಾಂಶ ಇಲ್ಲಿದೆ.

* ಮುಂಬೈ ತಂಡದ ಎದುರು  ಆಡುವಾಗ ನೀವು ವಿಭಿನ್ನ ತಂತ್ರ ಅನುಸರಿಸುತ್ತೀರಾ?

ಒಂದು ಶ್ರೇಷ್ಠ ತಂಡದ ವಿರುದ್ಧ ಆಡುವಾಗ ಅಷ್ಟೇ ಉತ್ತಮವಾಗಿ ತಂತ್ರ ಹೆಣೆಯಬೇಕು. ಮುಂಬೈ ಅತ್ಯುತ್ತಮ ತಂಡ. ಬಹಳ ವರ್ಷಗಳಿಂದ ಅವರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ವೈಯಕ್ತಿಕವಾಗಿ ನಾನು ಮುಂಬೈ ಎದುರು ಆಡುವುದನ್ನು ಸವಾಲಾಗಿ ಸ್ವೀಕರಿಸುತ್ತೇನೆ ಮತ್ತು ಚೆನ್ನಾಗಿ ಬೌಲಿಂಗ್ ಮಾಡುವತ್ತ ಗಮನ ಇಡುತ್ತೇನೆ. ಕೆಲವು ಬಾರಿ ವಿಕೆಟ್ ಲಭಿಸುತ್ತವೆ. ಕೆಲವು ಸಲ ಇಲ್ಲ. ಆದರೆ ಪ್ರಯತ್ನ ನಿರಂತರ. ಆದರೆ ಈಗ ಮುಂಬೈ ಎದುರು ವಿಕೆಟ್ ಗಳಿಸುವಲ್ಲಿ ಬಹಳಷ್ಟು ಸಫಲವಾಗಿದ್ದೇನೆ.

* ಹೋದ ಸಲ ಮುಂಬೈ ಎದುರು ನೀವು 20ಕ್ಕೆ6 ವಿಕೆಟ್ ಗಳಿಸಿದ್ದಿರಿ ಮತ್ತು ಇಲ್ಲಿಯೂ 34ಕ್ಕೆ6 ವಿಕೆಟ್ ಕಬಳಿಸಿದ್ದಿರಿ ಈ ಎರಡರಲ್ಲಿ ನೀವು ಯಾವುದಕ್ಕೆ ಹೆಚ್ಚು ಮಹತ್ವ ನೀಡುತ್ತೀರಿ?

2014–15ರಲ್ಲಿ ಬೆಂಗಳೂರಿನಲ್ಲಿ ಮುಂಬೈ ವಿರುದ್ಧ ನಡೆದಿದ್ದ ಸೆಮಿಫೈನಲ್‌ನಲ್ಲಿ  ಗಳಿಸಿದ್ದ 20ಕ್ಕೆ6 ವಿಕೆಟ್‌ಗಳ ಸಾಧನೆಯೇ ಹೆಚ್ಚು ತೃಪ್ತಿದಾಯಕ. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನಾವು 202 ರನ್‌ಗಳಿಗೆ ಆಲೌಟ್ ಆಗಿದ್ದೆವು. ನಂತರ ಮುಂಬೈ ತಂಡವನ್ನು ಕೇವಲ 44 ರನ್‌ಗಳಿಗೆ  ಆಲೌಟ್ ಮಾಡುವಲ್ಲಿ ನೆರವಾಗಿದ್ದು ನನಗೆ ಮಹತ್ವ ಎನಿಸುತ್ತದೆ. ಆ ಪಂದ್ಯದಲ್ಲಿ ನಾವು ಗೆದ್ದು ಫೈನಲ್ ತಲುಪಿದ್ದು ಅವಿಸ್ಮರಣೀಯ.

* ಇಲ್ಲಿ ಮುಂಬೈ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿರುವ ಬಗ್ಗೆ

ತುಂಬಾ ಸಂತಸವಾಗಿದೆ. ಇದು ನನ್ನ ಜೀವನದ ಶ್ರೇಷ್ಠ ಸ್ಪೆಲ್.

* ಕರ್ನಾಟಕ ತಂಡದ ಪರವಾಗಿ ಪದಾರ್ಪಣೆ ಮಾಡಿ 13 ವರ್ಷಗಳು ಸಂದಿವೆ. ಈ ಅವಧಿಯಲ್ಲಿ ನಿಮ್ಮ ಬೆಳವಣಿಗೆಯನ್ನು ಹೇಗೆ ವಿಶ್ಲೇಷಿಸುತ್ತೀರಿ?

ರಾಜ್ಯ ತಂಡವನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪ್ರತಿನಿಧಿಸುತ್ತಿರುವ 100ನೇ ಪಂದ್ಯ ಇದು. ಎರಡು ಇರಾನಿ ಟ್ರೋಫಿ ಪಂದ್ಯಗಳು ಮತ್ತು 98 ರಣಜಿ ಪಂದ್ಯಗಳು ಅದರಲ್ಲಿ ಸೇರಿವೆ. ಬೌಲಿಂಗ್‌ನಲ್ಲಿ ವೈವಿಧ್ಯತೆಯನ್ನು ರೂಢಿಸಿಕೊಂಡಿದ್ದೇನೆ. ಅದು ನನ್ನ ಪ್ರಮುಖ ಸಾಮರ್ಥ್ಯವಾಗಿ ರಕ್ಷಿಸುತ್ತಿದೆ. ಪಿಚ್ ಮತ್ತು ವಾತಾವರಣಕ್ಕೆ ತಕ್ಕಂತೆ ಸ್ವಿಂಗ್ ಮತ್ತು ಕಟರ್‌ಗಳನ್ನು ಪ್ರಯೋಗಿಸುವುದನ್ನು ರೂಢಿಸಿಕೊಂಡಿದ್ದೇನೆ. ತಂಡದ ನಾಯಕನಾಗಿ ಹೇಳುವುದಾದರೆ; ಇದೊಂದು ಆಲ್‌ರೌಂಡ್ ತಂಡವಾಗಿದೆ. ನಾವು ಕೇವಲ ಮಧ್ಯಮವೇಗಿಗಳ ಮೇಲಷ್ಟೇ ಅವಲಂಬಿತರಾಗಿಲ್ಲ. ಸ್ಪಿನ್ ಬೌಲರ್‌ಗಳು ಮತ್ತು ಬ್ಯಾಟ್ಸ್ ಮನ್‌ಗಳು ಉತ್ತಮವಾಗಿ ಆಡುತ್ತಿದ್ದಾರೆ. ಬೌಲರ್‌ಗಳು ಕೂಡ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದಕ್ಕಿಂತ ಉತ್ತಮ ಇನ್ನೇನು ಬೇಕು?

***

ದಾವಣಗೆರೆಯ ವಿನಯ್‌ ನಡೆದ ದಾರಿ..

ದಾವಣಗೆರೆಯ ವಿನಯಕುಮಾರ್ ಅವರು 2004ರಲ್ಲಿ ಬಂಗಾಳ ವಿರುದ್ಧದ ರಣಜಿ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ತಾವಾಡಿದ ಮೊದಲ ಮೂರು ಋತುಗಳಲ್ಲಿಯೂ ತಲಾ 20 ವಿಕೆಟ್ ಗಳಿಸಿ ಗಮನ ಸೆಳೆದರು.

2007-08ರಲ್ಲಿ ರಣಜಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ದ್ವಿತೀಯ ಬೌಲರ್ ಆಗಿದ್ದ ವಿನಯ್, ಇಂಡಿಯನ್ ಪ್ರೀಮಿಯರ್ ಲೀಗ್‌ನ ರಾಯಲ್ ಚಾಲೆಂಜರ್ಸ್‌ ತಂಡದ ಗಮನ ಸೆಳೆದರು. ಐಪಿಎಲ್‌ನಲ್ಲಿಯೂ ಮಿಂಚಿದರು. 2009-10ನೇ ಸಾಲಿನಲ್ಲಿ 46 ವಿಕೆಟ್ ಕಬಳಿಸುವ ಮೂಲಕ ಆ ಟೂರ್ನಿಯ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎನಿಸಿದ್ದರು. ಎಸ್. ಅರವಿಂದ್ ಮತ್ತು ಅಭಿಮನ್ಯು ಮಿಥುನ್ ಅವರ ನೆರವಿನಿಂದ ಕರ್ನಾಟಕವನ್ನು ಆ ವರ್ಷದ ರಣಜಿ ಟೂರ್ನಿಯ ಫೈನಲ್ ಪ್ರವೇಶಿಸಲೂ ಕಾರಣವಾಗಿದ್ದರು.

2010ರಲ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಜಿಂಬಾಬ್ವೆ ವಿರುದ್ಧ ಬುಲವಾಯೊದಲ್ಲಿ ನಡೆದಿದ್ದ ಪಂದ್ಯದಲ್ಲಿ ಅವರು ಆಡಿದ್ದರು. ಒಟ್ಟು 31 ಏಕದಿನ ಪಂದ್ಯಗಳಲ್ಲಿ ಆಡಿರುವ ಅವರು 38 ವಿಕೆಟ್ ಗಳನ್ನು ಪಡೆದಿದ್ದಾರೆ. ಒಂಬತ್ತು ಟ್ವೆಂಟಿ–20 ಮತ್ತು ಒಂದು ಟೆಸ್ಟ್ ಪಂದ್ಯದಲ್ಲಿಯೂ ಆಡಿದ್ದಾರೆ. ಆದರೆ 2013ರ ನಂತರ ಅವರಿಗೆ ರಾಷ್ಟ್ರೀಯ ತಂಡಕ್ಕೆ ಮರಳಲು ಸಾಧ್ಯವಾಗಿಲ್ಲ. ಆದರೂ ಛಲ ಬಿಡದೇ ಕದ ತಟ್ಟುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.