ಭಾನುವಾರ, ಮಾರ್ಚ್ 7, 2021
19 °C
ಜೆಡಿಎಸ್ ರಾಜ್ಯಮಟ್ಟದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಸಲಹೆ

ಜಾತ್ಯತೀತ ರಾಷ್ಟ್ರ ರಕ್ಷಿಸಿ: ಫಾರೂಕ್ ಅಬ್ದುಲ್ಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತ್ಯತೀತ ರಾಷ್ಟ್ರ ರಕ್ಷಿಸಿ: ಫಾರೂಕ್ ಅಬ್ದುಲ್ಲಾ

ತುಮಕೂರು: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಜೆಡಿಎಸ್ ರಾಜ್ಯ ಮಟ್ಟದ ಅಲ್ಪಸಂಖ್ಯಾತರ ಸಮಾವೇಶ ನಡೆಸುವ ಮೂಲಕ 2018ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷ ರಣ ಕಹಳೆ ಊದಿತು.ಈ ಸಮಾವೇಶ ರಾಜ್ಯದಲ್ಲಿ ರಾಜಕೀಯ ಬದಲಾವಣೆಯ ದಿಕ್ಸೂಚಿಯಾಗಲಿದೆ ಎಂದು ಮುಖಂಡರು ಒತ್ತಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಗಳು ಅಲ್ಪಸಂಖ್ಯಾತರ ಹಿತವನ್ನು ಹೇಗೆ ಕಡೆಗಣಿಸಿವೆ, ಕೋಮುಸಾಮರಸ್ಯ ಹಾಳು ಮಾಡುವ ಕೃತ್ಯಗಳು ನಡೆದಾಗ್ಯೂ ಈ ಎರಡೂ ಸರ್ಕಾರಗಳು ಹೇಗೆ ನಡೆದುಕೊಳ್ಳುತ್ತಿವೆ ಎಂಬುದನ್ನು ಎಳೆ ಎಳೆಯಾಗಿ  ಬಿಚ್ಚಿಟ್ಟರು.

ಅಬ್ಬುಲ್ಲಾ ಮನವಿ: ‘ದೇಶದಲ್ಲಿ ಜಾತ್ಯತೀತ ಎಂಬ ಮೂಲ ಶಕ್ತಿಗೆ ಧಕ್ಕೆ ಎದುರಾಗುತ್ತಿದೆ. ಮಹಾತ್ಮ ಗಾಂಧೀಜಿ, ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರು ಕಂಡ ಜಾತ್ಯತೀತ ರಾಷ್ಟ್ರವನ್ನು ರಕ್ಷಿಸುವ ಹೊಣೆ ನಿಮ್ಮದು’ ಎಂದು ಕರೆ ನೀಡಿದರು.

‘ಮಂದಿರ, ಮಸೀದಿ ಹೆಸರಿನಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ದೇಶದಲ್ಲಿ ಶಾಂತಿ, ಸೌಹಾರ್ದತೆ ಕದಡುವಂತಹ ಕೆಲಸ ಮಾಡುತ್ತಿವೆ. ರಾಜಕೀಯ ಲಾಭ ಪಡೆಯಲು ಇವುಗಳು ಏನನ್ನಾದರೂ ಮಾಡುತ್ತವೆ. ಮತದಾರರಾದ ನೀವು ನಮ್ಮ ದೇಶದ ಏಕತೆ, ಜಾತ್ಯತೀತ ರಕ್ಷಣೆಗೆ ಬದ್ಧವಾಗಿರುವ ಪಕ್ಷಗಳಿಗೆ ಬೆಂಬಲಿಸುವ ಕೆಲಸ ಮಾಡಿ’ ಎಂದು ಮನವಿ ಮಾಡಿದರು.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹ ಆದಾಗ ಅನೇಕ ಕಡೆ ಮಂದಿರ, ಮಸೀದಿಗಳು ನೆಲಕಚ್ಚಿದ್ದವು. ಮುಸ್ಲಿಮರೂ ಮಂದಿರ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಿದ ಸಾಕಷ್ಟು ಉದಾಹರಣೆಗಳಿವೆ. ಎಲ್ಲರೂ ಸಮಾನರು, ಏಕತೆಯ ಮನೋಭಾವ ಇದ್ದಾಗ ಇಂತಹ ಕಾರ್ಯಗಳು ನಡೆಯಲು ಸಾಧ್ಯ’ ಎಂದು ವಿವರಿಸಿದರು.

‘ಅನೇಕರು ಕಾಶ್ಮೀರಿಗಳನ್ನು ಸಂಶಯ ದೃಷ್ಟಿಕೋನದಿಂದ ನೋಡುವ ಮನೋಭಾವ ಕಾಣುತ್ತಿರುವುದು ದುರದೃಷ್ಟಕರವಾದುದು. ಕಾಶ್ಮೀರ ಎಂದರೆ ಪಾಕಿಸ್ತಾನವಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ಬರಲು ಅಲ್ಲಿನ ಜನರೂ ರಕ್ತ ಸುರಿಸಿದ್ದಾರೆ. ಈಗಲೂ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧವೇನಾದರೂ ನಡೆದರೆ ಮೊದಲು ಮತ್ತು ಹೆಚ್ಚು ಪ್ರಾಣ ಕಳೆದುಕೊಳ್ಳುವವರು ಕಾಶ್ಮೀರಿಗಳೇ ಆಗಿರುತ್ತಾರೆ’ ಎಂದು ಹೇಳಿದರು.

ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್, ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ಸೈಯದ್ ಮುಹಿದ್ ಅಲ್ತಾಫ್, ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಡ್ಯಾನಿಶ್ ಅಲಿ, ಜಫ್ರುಲ್ಲಾ ಖಾನ್‌, ಪಕ್ಷದ ಹಿರಿಯ ಮುಖಂಡರಾದ ಪಿ.ಜಿ.ಆರ್. ಸಿಂಧ್ಯಾ, ಎಚ್.ಡಿ.ರೇವಣ್ಣ, ಎಚ್. ವಿಶ್ವನಾಥ್, ಬಂಡೆಪ್ಪ ಕಾಶೆಂಪುರ,  ಶಾಸಕರಾದ ಎಸ್‌.ಆರ್‌.ಶ್ರೀನಿವಾಸ್, ಡಿ.ನಾಗರಾಜಯ್ಯ, ಸುರೇಶ್‌ಬಾಬು, ವಿಧಾನ ಪರಿಷತ್ ಸದಸ್ಯರಾದ ರಮೇಶ್‌ ಬಾಬು, ಬೆಮೆಲ್ ಕಾಂತರಾಜ್, ಅಫ್ಸರ್ ಆಗಾಖಾನ್, ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಚನ್ನಿಗಪ್ಪ, ಮುಖಂಡ ಡಿ.ಸಿ.ಗೌರಿಶಂಕರ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್ ವೇದಿಕೆಯಲ್ಲಿದ್ದರು.

ಗಾಂಧೀಜಿ ಕೊಂದವರಿಗೆ ಮಂದಿರ ನಿರ್ಮಾಣ

‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ ಗೋಡ್ಸೆ ಹೆಸರಲ್ಲಿ ಈಗ ಕೆಲವರು ಮಂದಿರ ನಿರ್ಮಾಣ ಮಾಡುತ್ತಿದ್ದಾರೆ. ದೇಶದ ಜನರಿಗೆ ಇದರಿಂದ ಏನು ಸಂದೇಶ ಹೋಗುತ್ತದೆ ಎಂಬ ಕನಿಷ್ಠ ಜ್ಞಾನವೂ ಅವರಿಗೆ ಇಲ್ಲ’ ಎಂದು ಫಾರೂಕ್ ಅಬ್ದುಲ್ಲಾ ಹರಿಹಾಯ್ದರು.

ಆದರೆ, ನಮ್ಮ ದೇಶದ ಜನರಿಗೆ, ಗಾಂಧೀಜಿ ಯಾರು, ಅವರ ಆಶಯಗಳೇನು, ದೇಶದ ಏಕತೆಯ ಶಕ್ತಿ ಗೊತ್ತಿದೆ. ಹೀಗಾಗಿ, ಕೆಲವೇ ಕೆಲವರು ನಡೆಸುವ ಇಂತಹ ಪ್ರಯತ್ನಗಳು ಫಲಿಸಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮತದ ತಾಕತ್ತು ತಿಳಿಯಿರಿ

‘ನಿಮ್ಮ ಮತದ ಮಹತ್ವ, ಅದರ ತಾಕತ್ತಿನ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಬೇಕು. ಮತ ಚಲಾಯಿಸುವ ಹಕ್ಕು ನಿಮಗೆ ಸುಮ್ಮನೆ ಬಂದಿಲ್ಲ. ಸ್ವಾತಂತ್ರ್ಯ ಹೋರಾಟಗಾರರು, ದೇಶದ ಏಕತೆ ಬಯಸಿದವರು ಮಾಡಿದ ಹೋರಾಟದ ಫಲವಾಗಿ ಬಂದಿದೆ’ ಎಂದು ಫಾರೂಕ್ ಅಬ್ದುಲ್ಲಾ ಮತದ ಮಹತ್ವ ತಿಳಿಸಿದರು.

‘ಮುಂಬರುವ ಚುನಾವಣೆಯಲ್ಲಿ ನೀವು ಮತ ಹಾಕುವ ಮುನ್ನ ಈ ಬಗ್ಗೆ ಆಲೋಚನೆ ಮಾಡಬೇಕು. ಒಬ್ಬರಿಗೆ ಒಂದೇ ಮತ ಇದ್ದರೂ ಅದು ಅತ್ಯಂತ ಶಕ್ತಿಶಾಲಿಯಾದುದು. ಎಚ್ಚರಿಕೆಯಿಂದ ಚಲಾಯಿಸಬೇಕು’ ಎಂದು ಮನವಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.