ಗುರುವಾರ , ಫೆಬ್ರವರಿ 25, 2021
24 °C

ರಾಹುಲ್‌ಗೆ ಅಧ್ಯಕ್ಷ ಪಟ್ಟ ಇಂದು ಘೋಷಣೆ ಸಾಧ್ಯತೆ; 16ರಂದು ಅಧಿಕಾರ ಸ್ವೀಕಾರ?

ಪಿಟಿಐ Updated:

ಅಕ್ಷರ ಗಾತ್ರ : | |

ರಾಹುಲ್‌ಗೆ ಅಧ್ಯಕ್ಷ ಪಟ್ಟ ಇಂದು ಘೋಷಣೆ ಸಾಧ್ಯತೆ; 16ರಂದು ಅಧಿಕಾರ ಸ್ವೀಕಾರ?

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಯ ಚುನಾವಣೆಯ ನಾಮಪತ್ರ ಹಿಂದಕ್ಕೆ ಪಡೆಯಲು ಸೋಮವಾರ ಕೊನೆಯ ದಿನ. ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮಾತ್ರ ಈ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಹಾಗಾಗಿ ಅವರ‌ ಅವಿರೋಧ ಆಯ್ಕೆಯನ್ನು ಸೋಮವಾರ ಘೋಷಿಸುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಆಧ್ಯಕ್ಷರಾಗಿ ರಾಹುಲ್‌ ಇದೇ 16ರಂದು (ಶನಿವಾರ) ಅಧಿಕಾರ ಸ್ವೀಕರಿಸಬಹುದು ಎನ್ನಲಾಗಿದೆ. ಅದೇ ದಿನ ಅಧ್ಯಕ್ಷರಾಗಿ ಆಯ್ಕೆಯಾದ ಬಗ್ಗೆ ರಾಹುಲ್‌ಗೆ ಪ್ರಮಾಣಪತ್ರ ನೀಡಲಾಗುವುದು. ಅತ್ಯಂತ ದೀರ್ಘ ಕಾಲ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ ಅವರು ಮಗ ರಾಹುಲ್‌ಗೆ ಅಧಿಕಾರ ವಹಿಸಿಕೊಡುವುದರೊಂದಿಗೆ ಅಧಿಕಾರ ಮುಂದಿನ ತಲೆಮಾರಿಗೆ ಹಸ್ತಾಂತರ ಆಗಲಿದೆ.

ನೆಹರೂ–ಗಾಂಧಿ ಕುಟುಂಬದ ಉತ್ತರಾಧಿಕಾರಿ ರಾಹುಲ್‌, ಪಕ್ಷದ ಹೊಣೆ ವಹಿಸಿಕೊಳ್ಳುವುದರೊಂದಿಗೆ ಭಾರಿ ಹೊಣೆ ಅವರ ಹೆಗಲೇರಲಿದೆ. ಸ್ವಾತಂತ್ರ್ಯದ ಬಳಿಕ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ ಹಳೆಯ ವೈಭವವನ್ನು ಮರಳಿ ತಂದು ಕೊಡುವುದು ಅವರ ಮುಂದಿರುವ ಬಹುದೊಡ್ಡ ಸವಾಲು. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್‌ ಸ್ಥಿತಿ ಬಹಳ ಕಳೆಗುಂದಿದೆ.

ಒಂದು ಕಾದಲ್ಲಿ ಇಡೀ ದೇಶವನ್ನು ಹಿಡಿತದಲ್ಲಿ ಇರಿಸಿಕೊಂಡ ಪಕ್ಷ ಈಗ ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮಾತ್ರ ಅಧಿಕಾರದಲ್ಲಿದೆ.

2014ರ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್‌ ಪಕ್ಷವು ಹಲವು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಸೋತಿದೆ. ಪಂಜಾಬ್‌ನಲ್ಲಿ ಮಾತ್ರ ಪಕ್ಷಕ್ಕೆ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಿದೆ. ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ಎರಡು ದಿನಗಳಿರುವಾಗ ರಾಹುಲ್‌ ಹೊಸ ಹುದ್ದೆಗೆ ಏರಲಿದ್ದಾರೆ.

ಗುಜರಾತ್‌ನಲ್ಲಿ ರಾಹುಲ್‌ ಭಾರಿ ಪ್ರಚಾರ ನಡೆಸಿದ್ದಾರೆ. ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆ ಇದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಅಲ್ಲಿ ಕಾಂಗ್ರೆಸ್‌ ಗೆದ್ದರೆ ಅದು ರಾಹುಲ್‌ ಅವರ ಬಹುದೊಡ್ಡ ಸಾಧನೆ ಆಗಲಿದೆ.

‘ಗುಜರಾತ್‌ ಚುನಾವಣೆ ರಾಹುಲ್‌ ಮುಂದಿರುವ ಮೊದಲ ಮತ್ತು ದೊಡ್ಡ ಪರೀಕ್ಷೆ. ರಾಜ್ಯದಾದ್ಯಂತ ಓಡಾಡಿ ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತಿರುವ ರಾಹುಲ್‌, ಇಡೀ ಪ್ರಚಾರದ ಹೊಣೆಯನ್ನು ತಮ್ಮ ಹೆಗಲೇರಿಸಿಕೊಂಡಿದ್ದಾರೆ. ಅಲ್ಲಿನ ಗೆಲುವನ್ನು ಎದುರು ನೋಡುತ್ತಿದ್ದೇವೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

‘ಒಲ್ಲದ ನಾಯಕ’

ಕಾಂಗ್ರೆಸ್‌ ಅಧ್ಯಕ್ಷತೆ ವಹಿಸಿಕೊಳ್ಳಲು ರಾಹುಲ್‌ಗೆ ಇಷ್ಟವಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಇದು ತಮ್ಮ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಎಂದು ಅಮೆರಿಕದ ಕಾರ್ಯಕ್ರಮವೊಂದರಲ್ಲಿ ರಾಹುಲ್‌ ಹೇಳಿದ್ದರು. 19 ವರ್ಷಗಳಿಂದ ಸೋನಿಯಾ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ.

ಆರನೇ ತಲೆಮಾರು

ರಾಹುಲ್‌ ಪಕ್ಷದ ಅಧ್ಯಕ್ಷರಾದರೆ, ಈ ಹುದ್ದೆ ವಹಿಸಿಕೊಳ್ಳುತ್ತಿರುವ ನೆಹರೂ–ಗಾಂಧಿ ಕುಟುಂಬದ ಆರನೇ ವ್ಯಕ್ತಿ. ಈ ಕುಟುಂಬದ ಐದು ತಲೆಮಾರಿನ ವ್ಯಕ್ತಿಗಳು ಪಕ್ಷದ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ. ಮೋತಿಲಾಲ್‌ ನೆಹರೂ, ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದರೆ ಈಗ ರಾಹುಲ್‌ ಗಾಂಧಿ ಈ ಹುದ್ದೆಗೇರಲು ಸಜ್ಜಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.