7

ಜೆರುಸಲೇಂ: ಟ್ರಂಪ್ ನಿಲುವು ಪ್ರಚೋದನಾತ್ಮಕ

Published:
Updated:
ಜೆರುಸಲೇಂ: ಟ್ರಂಪ್ ನಿಲುವು ಪ್ರಚೋದನಾತ್ಮಕ

ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ನಗರಕ್ಕೆ ಮಾನ್ಯತೆ ನೀಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿರುವುದು ವಿವಾದಾತ್ಮಕ. ಅಷ್ಟೇ ಅಲ್ಲ, ಈ ನಿರ್ಧಾರ ಅನೇಕರನ್ನು ಕೆರಳಿಸುವಂತಹದ್ದೂ ಆಗಿದೆ. ಅಮೆರಿಕದ ಈ ನಿರ್ಧಾರಕ್ಕೆ ಎಲ್ಲಾ ಪ್ರಮುಖ ಅರಬ್ ರಾಷ್ಟ್ರಗಳು ಪ್ರತಿಭಟನೆ ಸೂಚಿಸಿವೆ. ಜೆರುಸಲೇಂಗೆ ಅಮೆರಿಕ ರಾಯಭಾರ ಕಚೇರಿಯನ್ನು ಟೆಲ್‌ ಅವೀವ್‌ನಿಂದ ಸ್ಥಳಾಂತರಿಸುವ ಬಗ್ಗೆ 1995ರಲ್ಲೇ ಅಮೆರಿಕ ಕಾಂಗ್ರೆಸ್ ನಿರ್ಣಯ ಕೈಗೊಂಡಿತ್ತು. ಆದರೆ ಇದನ್ನು ಅನುಷ್ಠಾನಗೊಳಿಸದೆ ನಿರ್ಲಿಪ್ತ ನೀತಿಯನ್ನು ಈವರೆಗೆ ಅಮೆರಿಕ ಅನುಸರಿಸಿಕೊಂಡು ಬಂದಿತ್ತು. ಇದು, ಟ್ರಂಪ್ ಅವರಿಗೆ ಚುನಾವಣಾ ವಿಚಾರವಾಗಿತ್ತು. ಈಗ ಅವರು ತಮ್ಮ ಚುನಾವಣಾ ಭರವಸೆ ಈಡೇರಿಸಲು ಹೊರಟಿದ್ದಾರೆ ಎಂಬುದು ನಿಜ. ಆದರೆ ಮಧ್ಯಪ್ರಾಚ್ಯ ಹೊತ್ತಿ ಉರಿಯಲು ಟ್ರಂಪ್ ಅವರ ಈ ನಿರ್ಧಾರ ನೆಪವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸೂಕ್ಷ್ಮವಾಗಿರುವ ಪ್ಯಾಲೆಸ್ಟೀನ್ ಪ್ರದೇಶಗಳಲ್ಲಿ ಇದು ಕಿಚ್ಚು ಹಚ್ಚಿಸುವಂತಹದ್ದು. ಈ ಬೆಳವಣಿಗೆಗಳಿಂದಾಗಿ ಪಶ್ಚಿಮ ಏಷ್ಯಾ ಶಾಂತಿ ಪ್ರಕ್ರಿಯೆಗೆ ಭಾರಿ ಹಿನ್ನಡೆಯಾಗಲಿದೆ. ಪಶ್ಚಿಮದ ವಿರುದ್ಧ ಮುಸ್ಲಿಂ ವಿದ್ವೇಷವನ್ನೂ ಇದು ಹೆಚ್ಚಿಸಬಹುದು. ವಿಶ್ವದ ಅತ್ಯಂತ ಪುರಾತನ ನಗರಗಳಲ್ಲಿ ಒಂದಾದ ಜೆರುಸಲೇಂ– ಯೆಹೂದಿಗಳು, ಮುಸ್ಲಿಮರು ಹಾಗೂ ಕ್ರೈಸ್ತರಿಗೆ ಪವಿತ್ರ ಸ್ಥಳ. ಇಸ್ರೇಲ್ – ಪ್ಯಾಲೆಸ್ಟೀನ್ ಸಂಘರ್ಷದಲ್ಲಿ ಇತ್ಯರ್ಥವಾಗಬೇಕಿರುವ ವಿಷಯಗಳಲ್ಲಿ ಜೆರುಸಲೇಂ ಸ್ಥಾನಮಾನವೂ ಒಂದು. ಇದು ತಮ್ಮ ರಾಜಧಾನಿಯಾಗಬೇಕೆಂದು ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್‌ಗಳೆರಡೂಪ್ರತಿಪಾದಿಸುತ್ತಿವೆ.

ಶಾಂತಿ ಮಾತುಕತೆಗಳ ಸಂದರ್ಭದಲ್ಲಿ ಜೆರುಸಲೇಂ ವಿಚಾರ ಅತ್ಯಂತ ಭಾವನಾತ್ಮಕವಾದದ್ದು. ಹೀಗಾಗಿಯೇ ಶಾಂತಿ ಮಾತುಕತೆಗಳ ಅಂತಿಮ ಹಂತದಲ್ಲಿ ಜೆರುಸಲೇಂನ ಸ್ಥಾನಮಾನ ನಿರ್ಧಾರವಾಗಬೇಕೆಂಬುದು 1993ರ ಇಸ್ರೇಲ್ – ಪ್ಯಾಲೆಸ್ಟೀನ್ ಶಾಂತಿ ಒಪ್ಪಂದದ ಮುಖ್ಯ ಅಂಶ. ಆದರೆ ಇದಕ್ಕೆ ಟ್ರಂಪ್ ಬೆಲೆ ಕೊಟ್ಟಿಲ್ಲದಿರುವುದು ವಿಷಾದನೀಯ. ಜೆರುಸಲೇಂ ಬಗ್ಗೆ ಇರುವ ಅಸ್ಪಷ್ಟ ಸ್ಥಾನಮಾನದ ಕಾರಣದಿಂದಲೇ ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು ಟೆಲ್ ಅವೀವ್‌ನಲ್ಲೇ ರಾಯಭಾರ ಕಚೇರಿಗಳನ್ನು ಹೊಂದಿವೆ. ಮಾತುಕತೆ ಮೂಲಕ ಜೆರುಸಲೇಂ ಸ್ಥಾನಮಾನ ನಿರ್ಣಯವಾಗಬೇಕು ಎಂಬ ಬಗ್ಗೆ ಅಂತರರಾಷ್ಟ್ರೀಯ ಒಮ್ಮತ ಇರುವುದೂ ಈ ನಡೆಯಲ್ಲಿ ವ್ಯಕ್ತ. ಹೀಗಾಗಿ ಈಗ, ಇಸ್ರೇಲ್– ಪ್ಯಾಲೆಸ್ಟೀನ್ ವಿವಾದದಲ್ಲಿ ನಿಷ್ಪಕ್ಷಪಾತ ಮಧ್ಯಸ್ಥಿಕೆದಾರನ ಪಾತ್ರ ವಹಿಸುವ ಅವಕಾಶ ಅಮೆರಿಕಕ್ಕೆ ತಪ್ಪಿದಂತಾಗಿದೆ. ಟ್ರಂಪ್ ನಿರ್ಧಾರವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯೂ ಖಂಡಿಸಿದೆ. ಅದರಲ್ಲೂ ಅಮೆರಿಕದ ಮಿತ್ರ ರಾಷ್ಟ್ರಗಳಾದ ಬ್ರಿಟನ್ ಹಾಗೂ ಫ್ರಾನ್ಸ್, ಟ್ರಂಪ್ ನಡೆಯನ್ನು ಬಹಿರಂಗವಾಗಿ ಟೀಕಿಸಿರುವುದು ಮಹತ್ವದ್ದು. ಈಗಾಗಲೇ ಉತ್ತರ ಕೊರಿಯಾ ಜೊತೆಗೆ ಅಮೆರಿಕ ಬಾಂಧವ್ಯ ಕೆಟ್ಟ ಸ್ಥಿತಿಯಲ್ಲಿದೆ. ಅಫ್ಗಾನಿಸ್ತಾನದ ಸಮಸ್ಯೆಯೂ ಇನ್ನೂ ಬಗೆಹರಿದಿಲ್ಲ. ಹಲವು ಮಧ್ಯಪ್ರಾಚ್ಯ ರಾಷ್ಟ್ರಗಳು ಅಂತರ್ಯುದ್ಧದ ಸಂಕಷ್ಟ ಅನುಭವಿಸುತ್ತಿವೆ. ಜಾಗತಿಕ ನೆಲೆಯಲ್ಲಿ ಇಂತಹ ಸಂಘರ್ಷಮಯವಾದ ವಾತಾವರಣಕ್ಕೆ ಟ್ರಂಪ್ ಅವರ ನಿಲುವು ಮತ್ತಷ್ಟು ಕಿಚ್ಚು ಹೊತ್ತಿಸಿದಂತಾಗಿದೆ.

ಜೆರುಸಲೇಂ ಬಗ್ಗೆ ಭಾರತವೂ ತನ್ನ ನಿಲವು ಸ್ಪಷ್ಟಪಡಿಸಬೇಕು. ಪ್ಯಾಲೆಸ್ಟೀನ್ ವಿರುದ್ಧವಾಗಿ ಇಸ್ರೇಲ್‌ನತ್ತ ಭಾರತ ಇತ್ತೀಚೆಗೆ ಹೆಚ್ಚು ವಾಲುತ್ತಿರುವುದೂ ತಿಳಿದ ಸಂಗತಿ. ಈ ವರ್ಷ ಜುಲೈನಲ್ಲಿ ಇಸ್ರೇಲ್‌ಗೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದಾಗ ಪ್ಯಾಲೆಸ್ಟೀನ್‍ ಗೆ ಭೇಟಿ ನೀಡಲಿಲ್ಲ. ಸಾಮಾನ್ಯವಾಗಿ ಇಸ್ರೇಲ್‌ಗೆ ಸಚಿವ ಮಟ್ಟದ ಭೇಟಿ ಸಂದರ್ಭಗಳಲ್ಲಿ ಟೆಲ್ ಅವೀವ್ ಜೊತೆಗೆ ಪ್ಯಾಲೆಸ್ಟೀನ್ ಅಧಿಕಾರದ ನೆಲೆಯಾದ ರಾಮಲ್ಲಾಗೂ ಭೇಟಿ ನೀಡಲು ಗಮನ ನೀಡಲಾಗುತ್ತಿತ್ತು. ಆದರೆ ಈ ಬಾರಿ ಮೋದಿ ಅವರು ರಾಮಲ್ಲಾಗೆ ಭೇಟಿ ನೀಡುವ ಸಂಪ್ರದಾಯವನ್ನು ಮುರಿದಿದ್ದರು ಎಂಬುದನ್ನು ಸ್ಮರಿಸಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry