ಸೋಮವಾರ, ಮಾರ್ಚ್ 8, 2021
22 °C

ಕೂಚ್‌ ಬೆಹಾರ್‌: ಗುಜರಾತ್ ಎಚ್ಚರಿಕೆಯ ಬ್ಯಾಟಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಚ್‌ ಬೆಹಾರ್‌: ಗುಜರಾತ್ ಎಚ್ಚರಿಕೆಯ ಬ್ಯಾಟಿಂಗ್‌

ಮೈಸೂರು: ಎರಡನೇ ಇನಿಂಗ್ಸ್‌ನಲ್ಲಿ ಎಚ್ಚರಿಕೆಯ ಆಟವಾಡಿದ ಗುಜರಾತ್ ತಂಡದವರು ಕೂಚ್ ಬೆಹಾರ್ ಟ್ರೋಫಿ 19 ವರ್ಷ ವಯಸ್ಸಿನೊಳಗಿನವರ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ 250 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದಾರೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಗುಜರಾತ್ 93 ಓವರ್‌ಗಳಲ್ಲಿ 6 ವಿಕೆಟ್‌ಗೆ 196 ರನ್ ಕಲೆಹಾಕಿದೆ. ಪ್ರವಾಸಿ ತಂಡ ವಿಕೆಟ್ ನಷ್ಟವಿಲ್ಲದೆ 3 ರನ್‌ಗಳಿಂದ ಭಾನುವಾರ ಆಟ ಮುಂದುವರಿಸಿತ್ತು.

ಆರಂಭಿಕ ಆಟಗಾರ ವಿ.ಡಿ.ಶಾ (9) ಅವರನ್ನು ದಿನದ 10ನೇ ಓವರ್‌ನಲ್ಲಿ ಔಟ್ ಮಾಡಿದ ವಿದ್ವತ್ ಕಾವೇರಪ್ಪ ಕರ್ನಾಟಕಕ್ಕೆ ಮೊದಲ ಯಶಸ್ಸು ತಂದಿತ್ತರು. ತಂಡದ ಮೊತ್ತ 40 ಆಗಿದ್ದಾಗ ಮತ್ತೆರಡು ವಿಕೆಟ್‌ಗಳು ಬಿದ್ದವು.

ಈ ಹಂತದಲ್ಲಿ ಆತಿಥೇಯ ಬೌಲರ್‌ಗಳಿಗೆ ಮೇಲುಗೈ ಸಾಧಿಸುವ ಅವಕಾಶವಿತ್ತು. ಆದರೆ ವಿ.ಎ.ಸೋಲಂಕಿ (35), ಸಂಪ್ರೀತ್‌ ಬಾಗ್ಗ (35), ಎಲ್‌.ಎಂ.ಕೊಚೇರ್ (ಔಟಾಗದೆ 50) ಮತ್ತು ಎಸ್.ಎಸ್.ಸುರ್ಯಾಲ್ (23) ಅವರು ತಾಳ್ಮೆಯ ಆಟದ ಮೂಲಕ ಗುಜರಾತ್ ನೆರವಿಗೆ ನಿಂತರು. ಕೊಚೇರ್ ಮತ್ತು ಸುರ್ಯಾಲ್ ಮುರಿಯದ ಏಳನೇ ವಿಕೆಟ್‌ಗೆ ಈಗಾಗಲೇ 50 ರನ್‌ ಸೇರಿಸಿದ್ದಾರೆ.

ಎರಡನೇ ಇನಿಂಗ್ಸ್‌ನಲ್ಲೂ ನಿಧಾನ ಗತಿಯ ಬ್ಯಾಟಿಂಗ್ ಮಾಡಿದ ಗುಜರಾತ್‌ 93 ಓವರ್‌ಗಳನ್ನು ಎದುರಿಸಿ 2.11ರ ಸರಾಸರಿಯಲ್ಲಿ ರನ್ ಕಲೆಹಾಕಿತು. ಸೋಮವಾರ ಅಂತಿಮ ದಿನವಾಗಿದ್ದು, ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಸಂಕ್ಷಿಪ್ತ ಸ್ಕೋರ್: ಗುಜರಾತ್‌ ಮೊದಲ ಇನಿಂಗ್ಸ್‌ 95.2 ಓವರ್‌ಗಳಲ್ಲಿ 217. ಕರ್ನಾಟಕ ಮೊದಲ ಇನಿಂಗ್ಸ್‌ 76.4 ಓವರ್‌ಗಳಲ್ಲಿ 163. ಗುಜರಾತ್ ಎರಡನೇ ಇನಿಂಗ್ಸ್‌ 93 ಓವರ್‌ಗಳಲ್ಲಿ 6 ವಿಕೆಟ್‌ಗೆ 196 (ಅಭಿಷೇಕ್ ದೇಸಾಯಿ 21, ವಿ.ಎ.ಸೋಲಂಕಿ 35, ಸಂಪ್ರೀತ್ ಬಾಗ್ಗ 35, ಎಲ್.ಎಂ.ಕೊಚೇರ್ ಬ್ಯಾಟಿಂಗ್‌ 50 ಮತ್ತು ಎಸ್.ಎಸ್.ಸುರ್ಯಾಲ್ ಬ್ಯಾಟಿಂಗ್ 23, ಶುಭಾಂಗ್ ಹೆಗ್ಡೆ 29ಕ್ಕೆ 3, ಆದಿತ್ಯ ಗೋಯಲ್ 15ಕ್ಕೆ 2, ವಿದ್ವತ್ ಕಾವೇರಪ್ಪ 44ಕ್ಕೆ 1).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.