ಭಾನುವಾರ, ಫೆಬ್ರವರಿ 28, 2021
30 °C
ತನಿಖೆಗೆ ಮಹಿಳಾ ಆಯೋಗ ಆಗ್ರಹ

ಬಾಲಿವುಡ್‌ ನಟಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ: ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ: ಆರೋಪ

ನವದೆಹಲಿ: ದೆಹಲಿಯಿಂದ ಮುಂಬೈಗೆ ಪ್ರಯಾಣಿಸಿದ ‘ವಿಸ್ತಾರ’ ವಿಮಾನದಲ್ಲಿ ಸಹಪ್ರಯಾಣಿಕನೊಬ್ಬ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ಬಾಲಿವುಡ್‌ ನಟಿಯೊಬ್ಬರು ಆರೋಪಿಸಿದ್ದಾರೆ.

ಪ್ರಕರಣ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಮಹಾರಾಷ್ಟ್ರದ ಮಹಿಳಾ ಆಯೋಗ ಆಗ್ರಹಿಸಿದೆ. 

ಈ ಮಧ್ಯೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಲಿವುಡ್‌ ನಟಿಯ ಹೇಳಿಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ನಾಗರಿಕ ವಿಮಾನಯಾನದ ಪ್ರಧಾನ ನಿರ್ದೇಶನಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ ಎಂದು ‘ವಿಸ್ತಾರ’ ಹೇಳಿದೆ.‘ಮೊದಲಿಗೆ ನನ್ನ ಹಿಂದೆ ಕುಳಿತಿದ್ದ ವ್ಯಕ್ತಿ ಏನು ಮಾಡುತ್ತಿದ್ದಾನೆ ಎನ್ನುವುದನ್ನು ತಿಳಿಯಲು ನಾನು ಫೋನಿನಲ್ಲಿ ವಿಡಿಯೊ ಮಾಡಿಕೊಳ್ಳಲು ಯತ್ನಿಸಿದೆ. ಆದರೆ ದೀಪದ ಬೆಳಕು ಮಂದವಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಆತನ ವರ್ತನೆ ಹತ್ತು ನಿಮಿಷ ಹಾಗೇ ಮುಂದುವರಿಯಿತು. ನಂತರ ಆತ ಏನು ಮಾಡುತ್ತಿದ್ದಾನೆ ಎನ್ನುವುದು ನನಗೆ ಖಾತ್ರಿಯಾಯಿತು. ಆತ ನನ್ನ ಭುಜ ಹಿಸುಕುತ್ತಿದ್ದ ಮತ್ತು ಪಾದದಿಂದ ಹಿಂಭಾಗ, ಕುತ್ತಿಗೆ ಸವರುತ್ತಿದ್ದ’ ಎಂದು ಅವರು ತನಗಾದ ಕೆಟ್ಟ ಅನುಭವವನ್ನು ಇನ್‌ಸ್ಟಾಗ್ರಾಂ ವಿಡಿಯೊದಲ್ಲಿ ಅಳುತ್ತಾ ಹಂಚಿಕೊಂಡಿದ್ದಾರೆ.

ನಾಗರಿಕ ವಿಮಾನಯಾನ ಸಚಿವಾಲಯದ ಸಹಾಯಕ ಸಚಿವ ಜಯಂತ್ ಸಿನ್ಹಾ ಅವರು ಪ್ರಕರಣವನ್ನು ಖಂಡಿಸಿದ್ದಾರೆ. ವ್ಯಕ್ತಿ ತಪ್ಪಿತಸ್ಥ ಎಂದು ಸಾಬೀತಾದರೆ ಪ್ರಯಾಣ ನಿರ್ಬಂಧ ಪಟ್ಟಿಯಲ್ಲಿ ಸೇರಿಸುವ ಸಲುವಾಗಿ ವಿಮಾನಯಾನ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ನಟಿಗೆ ಅವರು ಸಲಹೆ ನೀಡಿದ್ದಾರೆ.

‘ಈ ವರ್ತನೆ ಸರಿಯಲ್ಲ. ಹುಡುಗಿಯರ ಕುರಿತು ನೀವು ಕಾಳಜಿ ಮಾಡುವುದು ಈ ರೀತಿಯೆ? ಯಾರಿಗೂ ಈ ರೀತಿಯ ಅನುಭವ ಆಗುವಂತೆ ಮಾಡಬಾರದು. ಇದು ಭಯಾನಕ. ನಮಗೆ ನಾವು ಸಹಾಯ ಮಾಡಿಕೊಳ್ಳಲು ನಿರ್ಧರಿಸದೆ ಇದ್ದರೆ ಯಾರೂ ನಮ್ಮ ನೆರವಿಗೆ ಬರುವುದಿಲ್ಲ’ ಎಂದು ವಿಡಿಯೊದಲ್ಲಿ ನಟಿ ಹೇಳಿದ್ದಾರೆ.

ಬೆಂಬಲ

ನಟಿ ಪ್ರಯಾಣಿಸುತ್ತಿದ್ದ ‘ವಿಸ್ತಾರ’ ವಿಮಾನ, ಪ್ರಕರಣ ಕುರಿತು ಕ್ಷಮೆ ಯಾಚಿಸಿದ್ದು ನಟಿಗೆ ಸಂ‍ಪೂರ್ಣ ಬೆಂಬಲ ನೀಡುವುದಾಗಿ ಹೇಳಿದೆ. ‍ಪ್ರಕರಣ ಕುರಿತು ವರದಿ ನೀಡುವಂತೆ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನದ ಪ್ರಧಾನ ನಿರ್ದೇಶನಾಲಯ ಸೂಚನೆ ನೀಡಿದೆ.

‘ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ಅರಿಯಲು, ನಟಿಗೆ ಸೇವೆ ಸಲ್ಲಿಸಿದ ನಮ್ಮ ಸಿಬ್ಬಂದಿ ಜತೆ ಮಾತುಕತೆ ನಡೆಸುತ್ತಿದ್ದೇವೆ. ಸಹಪ್ರಯಾಣಿಕರನ್ನು ಸಹ ವಿಚಾರಿಸಲಾಗುತ್ತಿದೆ. ಅಗತ್ಯವಿರುವ ಎಲ್ಲಾ ರೀತಿಯಲ್ಲಿಯೂ ಅವರಿಗೆ ಬೆಂಬಲಿಸುತ್ತೇವೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ’ ಎಂದು ವಿಮಾನಯಾನ ಸಂಸ್ಥೆಯ ಮುಖ್ಯ ಯೋಜನೆ ಮತ್ತು ವಾಣಿಜ್ಯ ಅಧಿಕಾರಿ ಸಂಜೀವ್ ಕಪೂರ್ ತಿಳಿಸಿದ್ದಾರೆ.

ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಶ್ರೀನಗರ: ಬಾಲಿವುಡ್‌ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಶ್ಮೀರದಲ್ಲಿ ನೆಟ್‌ ಬಳಕೆದಾರರು ಆಗ್ರಹಿಸಿದ್ದಾರೆ.

ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿರುವ ತನಗೆ, ಈ ಪ್ರಕರಣ ಆಘಾತ ತಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

‘ಮಹಿಳೆಯರ ವಿರುದ್ಧದ ದೌರ್ಜನ್ಯ/ಅಪರಾಧದ ವಿರುದ್ಧ ಕಠಿಣ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟವರು ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ಇದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.