ಶುಕ್ರವಾರ, ಮಾರ್ಚ್ 5, 2021
30 °C

ರಾಜೀವ್ ರಾಜಕೀಯಕ್ಕೆ ಬರಲು ಇಂದಿರಾಗೆ ಓಶೊ ಶಿಷ್ಯೆ ನೆರವು

ಪಿಟಿಐ Updated:

ಅಕ್ಷರ ಗಾತ್ರ : | |

ರಾಜೀವ್ ರಾಜಕೀಯಕ್ಕೆ ಬರಲು ಇಂದಿರಾಗೆ ಓಶೊ ಶಿಷ್ಯೆ ನೆರವು

ನವದೆಹಲಿ: ‘ವಿಮಾನ ಅಪಘಾತದಲ್ಲಿ ಸಂಜಯ ಗಾಂಧಿ ಮೃತಪಟ್ಟ ನಂತರ ತಮ್ಮ ಮತ್ತೊಬ್ಬ ಮಗ ರಾಜೀವ್‌ ಗಾಂಧಿ ರಾಜಕೀಯಕ್ಕೆ ಬರುವಂತೆ ಮನವೊಲಿಸಲು ಇಂದಿರಾ ಗಾಂಧಿ ಅವರು ಓಶೊ ಕಾರ್ಯದರ್ಶಿ ಲಕ್ಷ್ಮೀ ಅವರ ನೆರವು ಕೇಳಿದ್ದರು’ ಎಂಬ ಮಾಹಿತಿಯನ್ನು ಪುಸ್ತಕವೊಂದು ಬಹಿರಂಗಪಡಿಸಿದೆ.

ಕವಿ–ಕಲಾವಿದ ರಶೀದ್ ಮ್ಯಾಕ್ಸ್‌ವೆಲ್ ಅವರು ಬರೆದಿರುವ ‘ದಿ ಓನ್ಲಿ ಲೈಫ್: ಓಶೊ, ಲಕ್ಷ್ಮೀ ಅಂಡ್ ದಿ ವರ್ಲ್ಡ್‌ ಇನ್ ಕ್ರೈಸಿಸ್’ ಪುಸ್ತಕದಲ್ಲಿ ಈ ಮಾಹಿತಿ ಇದೆ. ಇದು ಲಕ್ಷ್ಮೀ ಅವರ ಜೀವನ ಚರಿತ್ರೆ.

‘ಇಂದಿರಾ ತಮ್ಮ ತಂದೆ ಜವಾಹರಲಾಲ್ ನೆಹರೂ ಅವರಂತೆಯೇ ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದರು. ತಮ್ಮ ಆರಂಭದ ದಿನದಿಂದಲೂ ಓಶೊ ಅವರ ಮಾತು ಮತ್ತು ಪ್ರತಿಪಾದನೆಗಳಿಂದ ಇಂದಿರಾ ಪ್ರಭಾವಿತರಾಗಿದ್ದರು. ಹೀಗಿದ್ದೂ ಒಮ್ಮೆಯೂ ಓಶೊ ಆಶ್ರಮಕ್ಕೆ ಭೇಟಿ ನೀಡದ ಏಕೈಕ ರಾಜಕಾರಣಿ ಇಂದಿರಾ ಗಾಂಧಿ. ಪುಣೆಗೆ ಭೇಟಿ ನೀಡಿದ್ದರೂ ಇಂದಿರಾ ಅವರು ಆಶ್ರಮಕ್ಕೆ ಬರುತ್ತಿರಲಿಲ್ಲ. ಆಗಲೇ ಓಶೊ ವಿವಾದಾತ್ಮಕ ವ್ಯಕ್ತಿಯಾಗಿದ್ದರಿಂದ ಇಂದಿರಾ ಅಂತರ ಕಾಯ್ದುಕೊಂಡಿದ್ದರು’ ಎಂದು ಪುಸ್ತಕದಲ್ಲಿ ಹೇಳಲಾಗಿದೆ.

‘ಇಂದಿರಾ ಗಾಂಧಿಯನ್ನು ಅವರ ಮನೆ ಅಥವಾ ಕಚೇರಿಯಲ್ಲಿ ಯಾವುದೇ ಸಮಯದಲ್ಲಿ ಭೇಟಿ ಮಾಡಲು ಲಕ್ಷ್ಮೀ ಅವರಿಗೆ ಅನುಮತಿ ಇತ್ತು. ಸಂಜಯ ಗಾಂಧಿ ಮೃತಪಟ್ಟ ನಂತರ ಇಂದಿರಾರನ್ನು ಅವರ ಮನೆಯಲ್ಲೇ ಲಕ್ಷ್ಮೀ ಭೇಟಿ ಮಾಡಿದ್ದರು. ಪೈಲಟ್‌ ವೃತ್ತಿಯನ್ನು ತೊರೆದು, ರಾಜಕೀಯಕ್ಕೆ ಬರುವಂತೆ ರಾಜೀವ್‌ ಗಾಂಧಿಯ ಮನವೊಲಿಸುವಂತೆ ಲಕ್ಷ್ಮೀ ಬಳಿ ಇಂದಿರಾ ಮನವಿ ಮಾಡಿಕೊಂಡಿದ್ದರು. ಆಗ ರಾಜೀವ್‌ ಕೊಠಡಿಗೆ ತೆರಳಿದ್ದ ಲಕ್ಷ್ಮೀ ದೀರ್ಘಕಾಲ ಚರ್ಚೆ ನಡೆಸಿದ್ದರು. 20 ಶತಮಾನದಲ್ಲಿ ಭಾರತವನ್ನು ಪ್ರಗತಿಯತ್ತ ಕರೆದೊಯ್ಯಲು ನಿಮ್ಮ ಕೊಡುಗೆ ಅಗತ್ಯವಿದೆ ಎಂದು ಲಕ್ಷ್ಮೀ ಹೇಳಿದ್ದರು’ ಎಂದು ಮ್ಯಾಕ್ಸ್‌ವೆಲ್ ಬರೆದಿದ್ದಾರೆ.

‘ತಮಗೆ ಇಷ್ಟವಿಲ್ಲದಿದ್ದರೂ ನಂತರದ ದಿನಗಳಲ್ಲಿ ರಾಜೀವ್ ರಾಜಕೀಯಕ್ಕೆ ಬಂದರು’ ಎಂದು ಪುಸ್ತಕ ವಿವರಿಸುತ್ತದೆ.

ಲಕ್ಷ್ಮೀ ಅವರು ಓಶೊ ಅವರ ಮೊದಲ ಶಿಷ್ಯೆ ಮತ್ತು ಕಾರ್ಯದರ್ಶಿಯಾಗಿದ್ದರು. ಓಶೊ ಪರ ಮತ್ತು ವಿರುದ್ಧ ಜಗತ್ತಿನಾದ್ಯಂತ ನಡೆದ ಚಳವಳಿ, ಲಕ್ಷ್ಮೀ ಅವರ ಗಡಿಪಾರು ಮತ್ತು ಅಲೆದಾಟದ ದಿನಗಳ ವಿವರಗಳು ಈ ಪುಸ್ತಕದಲ್ಲಿದೆ.

ಜೀವನಚರಿತ್ರೆಯಲ್ಲಿ ಮಾಹಿತಿ

* ‘ದಿ ಓನ್ಲಿ ಲೈಫ್: ಓಶೊ, ಲಕ್ಷ್ಮೀ ಅಂಡ್ ದಿ ವರ್ಲ್ಡ್‌ ಇನ್ ಕ್ರೈಸಿಸ್’ ಕೃತಿಯಲ್ಲಿ ಉಲ್ಲೇಖ

* ಓಶೊನ ಮೊದಲ ಶಿಷ್ಯೆ ಮತ್ತು ಕಾರ್ಯದರ್ಶಿಯಾಗಿದ್ದ ಲಕ್ಷ್ಮೀ ಅವರ ಜೀವನ ಚರಿತ್ರೆ

* ‘ಓಶೊ ಮಾತು, ಪ್ರತಿಪಾದನೆಗಳಿಂದ ಪ್ರಭಾವಿತರಾಗಿದ್ದ ಇಂದಿರಾ’

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.