ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 25ರಷ್ಟು ಸಿಬ್ಬಂದಿ ಆಯ್ಕೆಯಲ್ಲಿ ನಿಯಮ ಉಲ್ಲಂಘನೆ

ನಿಯಮ ಪಾಲನೆಗೆ ಸೂಚನೆ
Last Updated 10 ಡಿಸೆಂಬರ್ 2017, 19:52 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ರೈಲುಗಳನ್ನು ನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಯನ್ನು (ಚಾಲಕರು, ಸಹಾಯಕ ಚಾಲಕರು ಮತ್ತು ಗಾರ್ಡ್‌) ಕೆಲಸಕ್ಕೆ ನಿಯೋಜಿಸುವಾಗ ನಿಯಮ ಪಾಲನೆ ಆಗುತ್ತಿಲ್ಲ. ಶೇ 25ರಷ್ಟು ಮಂದಿಯನ್ನು ನಿಯಮಾನುಸಾರವಾಗಿ ಸೇವೆಗೆ ನಿಯೋಜನೆ ಮಾಡುತ್ತಿಲ್ಲ ಎಂದು ರೈಲ್ವೆಯ ಅಧಿಕೃತ ಅಂಕಿ–ಅಂಶಗಳು ತಿಳಿಸಿವೆ.

ರೈಲ್ವೆಯ ಸಿಬ್ಬಂದಿ ನಿರ್ವಹಣಾ ವ್ಯವಸ್ಥೆಯಲ್ಲಿ (ಸಿಎಂಎಸ್‌) 89 ಸಾವಿರ ಚಾಲನಾ ಸಿಬ್ಬಂದಿಯ ಮಾಹಿತಿ ಇದೆ. ಈ ವ್ಯವಸ್ಥೆಯು ರೈಲುಗಳ (ಪ್ರಯಾಣಿಕ ಅಥವಾ ಸರಕು ಸಾಗಣೆ ರೈಲು) ಕಾರ್ಯಾಚರಣೆಗೆ ಲಭ್ಯವಿರುವ ಸಿಬ್ಬಂದಿಯ ವಿವರಗಳನ್ನು ನೀಡುತ್ತದೆ.

ರೈಲ್ವೆಯ ವಿವಿಧ ವಲಯಗಳು ಸಿಎಂಎಸ್‌ ಮೂಲಕವೇ ಚಾಲನಾ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳಬೇಕು.

ರೈಲ್ವೆ ಮಂಡಳಿಯು ಇತ್ತೀಚೆಗೆ ಹೊರಡಿಸಿರುವ ನಿರ್ದೇಶನದ ಪ್ರಕಾರ, ವಿವಿಧ ರೈಲ್ವೆ ವಲಯಗಳು ಶೇ 75ರಷ್ಟು ಸಿಬ್ಬಂದಿಯನ್ನು ನಿಯಮಾನುಸಾರ ಆಯ್ಕೆ ಮಾಡುತ್ತವೆ. ಆದರೆ, ಇದು ತೃಪ್ತಿಕರ ಮಟ್ಟಕ್ಕಿಂತ ಕೆಳಗಿದೆ.

ಸೇವೆಗೆ ನಿಯೋಜನೆ ಮಾಡಲು ಚಾಲನಾ ಸಿಬ್ಬಂದಿ ಆಯ್ಕೆ ಮಾಡುವುದಕ್ಕಾಗಿ ಸಿಎಂಎಸ್‌ನಲ್ಲಿ ಎರಡು ಆಯ್ಕೆಗಳಿವೆ. ಒಂದು ‘ನಿಯಮಾನುಸಾರ ಆಯ್ಕೆ’ ಮತ್ತು ಇನ್ನೊಂದು ‘ಎಲ್ಲರ ಆಯ್ಕೆ’.

‘ನಿಯಮಾನುಸಾರ ಆಯ್ಕೆ’ ಅಡಿಯಲ್ಲಿ ಸಿಬ್ಬಂದಿಯನ್ನು ಆಯ್ಕೆ ಮಾಡುವಾಗ ವಲಯಗಳು ಕೆಲವು ಮಾನದಂಡಗಳನ್ನು ಪರಿಗಣಿಸಬೇಕಾಗುತ್ತದೆ.

ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದ ಅಥವಾ ಪುನಶ್ಚೇತನ ತರಬೇತಿಯನ್ನು ಇನ್ನಷ್ಟೇ ಪಡೆಯಬೇಕಾದ ಸಿಬ್ಬಂದಿಯನ್ನು ಆಯ್ಕೆ ಮಾಡುವಂತಿಲ್ಲ. ಜೊತೆಗೆ, ಆಯ್ಕೆ ಮಾಡಿದ ವಿಭಾಗದಲ್ಲಿ ಕೆಲಸ ಮಾಡಲು ಸಿಬ್ಬಂದಿ ಸಮರ್ಥರಾಗಿರಬೇಕು, ರೈಲು ಸಾಗುವ ಮಾರ್ಗದ ಬಗ್ಗೆ ಮಾಹಿತಿ ಹೊಂದಿರಬೇಕು, ರೈಲ್ವೆ ಎಂಜಿನ್‌ಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಇರಬೇಕು ಮತ್ತು ಸಾಕಷ್ಟು ವಿಶ್ರಾಂತಿ ಪಡೆದಿರಬೇಕು.

‘ಎಲ್ಲರ ಆಯ್ಕೆ’ ಅಡಿಯಲ್ಲಿ ಚಾಲನಾ ಸಿಬ್ಬಂದಿ ಆಯ್ಕೆ ಮಾಡುವಾಗ ಕೇವಲ ಎರಡು ಮಾನದಂಡಗಳನ್ನು ಪಾಲಿಸಿದರೆ ಸಾಕು.

ಸಿಬ್ಬಂದಿಯು ವೈದ್ಯಕೀಯ ತಪಾಸಣೆಗೆ ಒಳಪಟ್ಟಿರಬೇಕು ಮತ್ತು ಪುನಶ್ಚೇತನಾ ತರಬೇತಿಯನ್ನು ಪೂರ್ಣಗೊಳಿಸಿರಬೇಕು.

‘ಸರಕು ಸಾಗಣೆ ರೈಲು ಆಗಿರಲಿ ಅಥವಾ ಪ್ರಯಾಣಿಕ ರೈಲೇ ಆಗಿರಲಿ, ರೈಲುಗಳನ್ನು ನಿರ್ವಹಿಸುವ ಸಿಬ್ಬಂದಿಯು ಆರೋಗ್ಯವಾಗಿ ಇರಬೇಕು ಮತ್ತು ಪರಿಣತಿಯನ್ನೂ ಹೊಂದಿರಬೇಕು ಎಂದು ಮಂಡಳಿ ಬಯಸುತ್ತದೆ. ಹಾಗಾಗಿ ನಿಯಮಾನುಸಾರವೇ ಸಿಬ್ಬಂದಿಯನ್ನು ಆಯ್ಕೆ ಮಾಡಿ’ ಎಂದು ನಿರ್ದೇಶನದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT