4

ಗುಜರಾತ್‌: ಕಾಂಗ್ರೆಸ್ಸಿನ ತಪ್ಪು, ಬಿಜೆಪಿಯ ಇಚ್ಛೆ

Published:
Updated:
ಗುಜರಾತ್‌: ಕಾಂಗ್ರೆಸ್ಸಿನ ತಪ್ಪು, ಬಿಜೆಪಿಯ ಇಚ್ಛೆ

ಮಣಿಶಂಕರ್ ಅಯ್ಯರ್ ಅವರು ಆಡಿದ ಮಾತೊಂದು ಗುಜರಾತಿನ ಚುನಾವಣೆಯಲ್ಲಿ ಒಂದು ವಿಷಯ ಆಗುತ್ತದೆ - ಅದರಲ್ಲೂ, ಅದೊಂದು ಪ್ರಮುಖ ವಿಷಯ ಆಗುತ್ತದೆ - ಎಂದು ಯಾರು ಭಾವಿಸಿದ್ದರು? ನಾನಂತೂ ಖಂಡಿತ ಭಾವಿಸಿರಲಿಲ್ಲ. ಗುಜರಾತಿನ ಹೊರಗಿರುವ ಜನ ಇದು ಪ್ರಮುಖ ವಿಚಾರ ಎಂದು ಭಾವಿಸಿರಬಹುದು. ಆದರೆ ಗುಜರಾತಿನಲ್ಲಿರುವ ಜನ ಹಾಗೆ ಅಂದುಕೊಂಡಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ಈ ಅಪಮಾನಕರ ಹೇಳಿಕೆಯನ್ನು ಕೇಳಿಸಿಕೊಂಡ ನಂತರ ನಾನು ನನ್ನ ಬಳಿಯಿರುವ ಗುಜರಾತಿ ಶಬ್ದಕೋಶವನ್ನು ಪರಿಶೀಲಿಸಿದೆ. ಅದು 'ನೀಚ' ಎಂಬ ಪದಕ್ಕೆ 'ದುಷ್ಟ' ಎಂಬ ಅರ್ಥವಿರುವುದಾಗಿ ಹೇಳುತ್ತದೆ. ಅಯ್ಯರ್ ಅವರು ಈ ಪದವನ್ನು ಬಳಸಬೇಕಿತ್ತೇ? ಇಲ್ಲ. ರಾಜಕೀಯಕ್ಕೆ ಸಂಬಂಧಿಸಿದ ಚರ್ಚೆಗಳೂ ಸೇರಿದಂತೆ ಎಲ್ಲ ಬಗೆಯ ಚರ್ಚೆಗಳು ಸಭ್ಯತೆಯ ಚೌಕಟ್ಟಿನಲ್ಲೇ ನಡೆಯಬೇಕು. ಅಯ್ಯರ್ ಅವರು ಆಡಿದ ಮಾತುಗಳಲ್ಲಿ ಜಾತಿಯ ಜೊತೆ ತಳಕು ಹಾಕುವಂತಹದ್ದು ಇತ್ತೇ? ಇಲ್ಲ.

ಎರಡನೆಯದು ಮೋದಿ ಅವರ ಜಾತಿಗೆ ಸಂಬಂಧಿಸಿದ್ದು. ಪ್ರಧಾನಿಯವರು ‘ಗಂಚಿ’ (ಗಾಣಿಗ) ಎಂಬ ಅತ್ಯಂತ ಯಶಸ್ವೀ ಸಮುದಾಯಕ್ಕೆ ಸೇರಿದವರು. ಈ ಸಮುದಾಯಕ್ಕೆ ಸೇರಿದವರು ಕಿರಾಣಿ ಅಂಗಡಿಗಳನ್ನು ನಡೆಸುತ್ತಾರೆ, ಎಣ್ಣೆ ತೆಗೆಯುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ, ಅಂಗಡಿಗಳ ಮೂಲಕ ಧಾನ್ಯ (ಮತ್ತು ಚಹಾ) ಮಾರಾಟ ಮಾಡುತ್ತಾರೆ. ‘ಮೋದಿ’ ಎಂಬ ಹೆಸರಿನಲ್ಲೇ ‘ಕಿರಾಣಿ ಅಂಗಡಿಯ ಮಾಲೀಕ ಹಾಗೂ ಅದನ್ನು ನೋಡಿಕೊಳ್ಳುವವ’ ಎಂಬ ಅರ್ಥವಿದೆ. ‘ಗಾಂಧಿ’ ಎಂಬ ಪದವೂ ಇದೇ ಅರ್ಥವನ್ನು ನೀಡುತ್ತದೆ.

ಗಾಣಿಗ ಸಮುದಾಯವು ‘ಹಿಂದುಳಿದ ಜಾತಿ’ ಎಂದು ಗುಜರಾತಿಗಳು ಭಾವಿಸುವುದಿಲ್ಲ. ಈ ಸಮುದಾಯವು 1999ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿತು. ಹಾಗಾಗಿ ಗುಜರಾತಿನ ಹಲವರ ದೃಷ್ಟಿಯಲ್ಲಿ, 'ನೀಚ' ಎಂಬ ಪದ ಬಳಸಿದ ಮಾತ್ರಕ್ಕೇ ಪ್ರಧಾನಿಯವರ ಜಾತಿಯ ಜೊತೆ ಸಮೀಕರಿಸದಂತೆ ಆಗುವುದಿಲ್ಲ.

ಅಯ್ಯರ್ ಹೇಳಿಕೆ ವಿಚಾರವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬೆಳೆಸಲಾಗಿದೆ, ಇದು ಚುನಾವಣಾ ಅಭಿಯಾನದಲ್ಲಿ ಒಂದು ಅಸ್ತ್ರವಾಗಿ ಅಷ್ಟೇನೂ ಪರಿಣಾಮಕಾರಿ ಆಗುವುದಿಲ್ಲ ಎಂದು ನಾನು ಭಾವಿಸಿರುವುದಕ್ಕೆ ಕಾರಣಗಳು ಇವು. ಬಿಜೆಪಿಯ ಜಯಕ್ಕೆ (ನಾನು ಹಿಂದಿನ ಅಂಕಣದಲ್ಲಿ ಬರೆದಿರುವಂತೆಯೇ, ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸುತ್ತದೆ ಎಂಬುದು ನನ್ನ ನಿರೀಕ್ಷೆ) ಕಾರಣವಾದ ವಿಷಯಗಳು ನಿರ್ದಿಷ್ಟವಾಗಿ ಯಾವುವು, ಮಾಧ್ಯಮಗಳು ಆಧಾರವಿಲ್ಲದೆ ಆಡಿದ ಮಾತುಗಳು ಯಾವುವು ಎಂಬುದನ್ನು ತಿಳಿಯುವ ಬಗೆ ನಮಗೆ ಗೊತ್ತಿಲ್ಲ ಎಂಬುದು ನಿಜ. ಆದರೂ ಈ ಎಲ್ಲ ಪ್ರಶ್ನೆಗಳಿಗೆ ಕಾಲ ಉತ್ತರ ನೀಡುತ್ತದೆ.

‘ಈ ವಿಷಯ ಸಮಸ್ಯೆ ತಂದೊಡ್ಡಬಹುದು’ ಎಂದು ನಾನು ಸುದ್ದಿ ಓದಿದ ತಕ್ಷಣ ಆಲೋಚಿಸಿದ್ದು ಸೋಮನಾಥ ದೇವಸ್ಥಾನದ ನೋಂದಣಿ ಪುಸ್ತಕದ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿದ್ದಾಗ. ಆದರೆ, ಮೊದಲು ಪ್ರಕಟವಾದ ಸುದ್ದಿಗೂ, ಅಲ್ಲಿ ನಡೆದಿದ್ದಕ್ಕೂ ವ್ಯತ್ಯಾಸವಿದೆ ಎಂಬುದನ್ನು ನಂತರದ ವರದಿಗಳು ತಿಳಿಸಿವೆ. ಮೊದಲು ವರದಿಯಾದ ರೀತಿಯಲ್ಲೇ ಅಲ್ಲಿ ಆಗಿತ್ತು ಎಂದಿದ್ದರೆ, ಗುಜರಾತಿಗಳಲ್ಲಿ ಹಲವರಿಗೆ ಅದರ ಬಗ್ಗೆ ಕುತೂಹಲ ಮೂಡುತ್ತಿತ್ತು, ರಾಹುಲ್ ಅವರು ತಾವು ಹಿಂದೂ ಅಲ್ಲ ಎಂದು ಬರೆಸಿದ್ದು ಏಕೆ (ಅವರು ಹಾಗೆ ಮಾಡಿಲ್ಲ) ಎಂಬ ಬಗ್ಗೆ ಆಲೋಚಿಸುತ್ತಿದ್ದರು. ಆದರೆ, ಇವೆಲ್ಲ ಈಗ ಇತಿಹಾಸ. ಮಾಧ್ಯಮಗಳ ಗಮನ ಈಗ ಬೇರೆಡೆ ತಿರುಗಿದೆ.

ಇದಾದ ನಂತರ, ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಏರಲಿರುವುದನ್ನು ಅಯ್ಯರ್ ಅವರು ಶಹಜಹಾನ್ ಮತ್ತು ಔರಂಗಜೇಬ್‌ಗೆ ಹೋಲಿಕೆ ಮಾಡಿದ್ದು ಸುದ್ದಿಯಾಯಿತು. ಅಯ್ಯರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಅಭಿಪ್ರಾಯ ಬರೆದ ನನ್ನನ್ನೂ ಸೇರಿದಂತೆ ಹಲವರು ಅವರ ಹೇಳಿಕೆಯನ್ನು ಪೂರ್ತಿಯಾಗಿ ಉಲ್ಲೇಖಿಸಿದಂತೆ ಕಾಣುತ್ತಿಲ್ಲ. ಆದರೆ ಗಾಂಧಿ ಮತ್ತು ಔರಂಗಜೇಬ್‌ ಬಗ್ಗೆ ಆಡುವ ಮಾತುಗಳನ್ನು ಮೋದಿ ಅವರು ಬಳಸಿಕೊಳ್ಳುತ್ತಾರೆ ಎಂಬುದು ಅಯ್ಯರ್ ಅವರಿಗೆ ಗೊತ್ತಿರಬೇಕಿತ್ತು. ಮೋದಿ ಅವರು ಅದನ್ನು ಬಳಸಿಕೊಂಡಿದ್ದು ನಿಜವೂ ಹೌದು. ಇದು ಎಷ್ಟು ಪರಿಣಾಮಕಾರಿ ಆಯಿತು? ಇಂತಹ ಮಾತುಗಳನ್ನು ಆಧರಿಸಿ ಜನ ಮತ ಚಲಾಯಿಸುತ್ತಾರೆ ಎಂದು ನಾನು ಭಾವಿಸಿಲ್ಲ. ಆದರೆ ತಾನು ಎರಡು ದಶಕ ಆಡಳಿತ ನಡೆಸಿದ ರಾಜ್ಯದ ಚುನಾವಣೆ ಸಂದರ್ಭದಲ್ಲಿ ಸಾಧನೆಗಳ ಬದಲು ಕಾಂಗ್ರೆಸ್ ಬಗ್ಗೆ ಮಾತನಾಡಲು ಈ ಮಾತು ಬಿಜೆಪಿಗೆ ಅವಕಾಶ ಮಾಡಿಕೊಟ್ಟಿತು.

ಇದಕ್ಕಿಂತಲೂ ಮೊದಲು ಬಿಜೆಪಿಯು ಒಂದು ವರದಿ ಸೋರಿಕೆ ಮಾಡಿತು. ಅಹಮದ್ ಪಟೇಲ್ ಅವರು ಟ್ರಸ್ಟಿಯಾಗಿರುವ ಆಸ್ಪತ್ರೆಯೊಂದರ ಹಾಲಿ ನೌಕರ ಅಥವಾ ಮಾಜಿ ನೌಕರ ಭಯೋತ್ಪಾದನಾ ಕೃತ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಅಂಶ ಅದರಲ್ಲಿತ್ತು. ಪಟೇಲ್ ಮತ್ತು ಆರೋಪಿಯ ನಡುವೆ ಸಂಬಂಧವೇ ಇಲ್ಲವಾಗಿದ್ದ ಕಾರಣ ಅದೊಂದು ಸುಳ್ಳು ಸುದ್ದಿಯಾಗಿತ್ತು. ಕಾಂಗ್ರೆಸ್ ಪಕ್ಷವು ಭಯೋತ್ಪಾದನೆಯ ವಿಚಾರದಲ್ಲಿ ಮೃದು ಧೋರಣೆ ಅನುಸರಿಸುತ್ತಿದೆ ಎಂದು ತೋರಿಸುವುದರಿಂದ ಬಿಜೆಪಿಗೆ ಸಾಮಾನ್ಯವಾಗಿ ಲಾಭವೇ ಆಗುತ್ತದೆಯಾದ ಕಾರಣ ಈ ಸುದ್ದಿಯನ್ನು ಹರಡಲಾಯಿತು. ಕಾಂಗ್ರೆಸ್ ಹಾಗೆ ಇಲ್ಲ ಎಂಬುದನ್ನು ಇತಿಹಾಸ ಮತ್ತು ಅಂಕಿ-ಅಂಶಗಳು ತೋರಿಸುತ್ತವೆ.

ಇವೆಲ್ಲ ಆದ ನಂತರ, ಕಾಂಗ್ರೆಸ್ಸಿಗ ಮತ್ತು ವಕೀಲ ಕಪಿಲ್ ಸಿಬಲ್ ಅವರು, ಬಾಬರಿ ಮಸೀದಿ ಪ್ರಕರಣದ ತೀರ್ಪನ್ನು 2019ರ ಲೋಕಸಭಾ ಚುನಾವಣೆಗೆ ಮೊದಲು ನೀಡಬಾರದು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಕೆಲವು ದಿನಗಳ ಹಿಂದೆ ಮನವಿ ಮಾಡಿದರು. ಹೀಗಾಗಿ, ತಾನಾಗೇ ಸಿದ್ಧಪಡಿಸಿಕೊಟ್ಟ ವಸ್ತುವನ್ನಿಟ್ಟುಕೊಂಡು ಸುದ್ದಿ ಮಾಡುವ ಅವಕಾಶ ಆಗ ಮೋದಿ ಅವರಿಗೆ ಮತ್ತೊಮ್ಮೆ ದೊರೆಯಿತು. ಬಿಜೆಪಿಯು ರಾಷ್ಟ್ರೀಯ ಪಕ್ಷವಾಗಲು ಕಾರಣವಾದ, ಈಗ ರಾಜಕೀಯವಾಗಿ ಸತ್ತುಹೋಗಿರುವ ಅಯೋಧ್ಯೆಯ ವಿಚಾರವನ್ನು ಉದ್ದೇಶಪೂರ್ವಕವಾಗಿ ಪ್ರಮುಖ ವಿಚಾರವನ್ನಾಗಿ ಮಾಡಲಾಯಿತು.

ತಮ್ಮ ಬಾಯಿ ಮುಚ್ಚಿಕೊಂಡಿರುವಂತೆ ಮಾಡುವ ಶಕ್ತಿ ತಮಗೆ ಇಲ್ಲವೇ ಇಲ್ಲ ಎಂದು ಅಯ್ಯರ್ ಒಪ್ಪಿಕೊಂಡಿದ್ದಾರೆ. ಇಂತಹ ಅಯ್ಯರ್ ಅವರು ತಮ್ಮನ್ನು ಮುಗಿಸಲು ಪಾಕಿಸ್ತಾನದಲ್ಲಿ ಸುಪಾರಿ ನೀಡಿದ್ದರು ಎಂದು ಪ್ರಧಾನಿಯವರು ಆರೋಪಿಸಿದ್ದು ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿಯಾಯಿತು. ಈ ಆರೋಪ ಸತ್ಯವಲ್ಲ. ಹೀಗೆ ಆಗಿರಬಹುದು ಎಂದು ಪ್ರಧಾನಿಯವರು ನಿಜವಾಗಿಯೂ ನಂಬಿರಬಹುದು ಅಥವಾ ತಮಗೆ ಚುನಾವಣೆಯಲ್ಲಿ ಲಾಭ ಆಗಬಹುದು ಎಂಬ ಕಾರಣಕ್ಕೆ ಹೀಗೆ ಹೇಳುತ್ತಿರಬಹುದು. ಏನೇ ಇದ್ದರೂ, ಹೀಗೆ ನಂಬಿರುವುದು ಅಥವಾ ಲಾಭ ಆಗಬಹುದು ಎಂದು ಹೇಳಿರುವುದು ತಲೆಬಿಸಿ ತರುವ ವಿಚಾರ.

ಸುದ್ದಿಯಾದ ಬಹುತೇಕ ಅಥವಾ ಎಲ್ಲಾ ವಿಚಾರಗಳು ಬಿಜೆಪಿಯು ಮಾಧ್ಯಮಗಳ ಸಹಾಯದಿಂದ ಕಾಂಗ್ರೆಸ್ಸಿನ ವಿರುದ್ಧ ಮಾಡಿದ ಆರೋಪಗಳಿಗೆ ಸಂಬಂಧಿಸಿದವು. ಇವೆಲ್ಲವೂ ನಿಂದನೆ ಹಾಗೂ ಭೀತಿಯನ್ನು ಆಧರಿಸಿದ ನಕಾರಾತ್ಮಕ ಅಭಿಯಾನಗಳು. ಆಡಳಿತ ಹಾಗೂ ‘ಅಚ್ಛೇ ದಿನ್’ (ಒಳ್ಳೆಯ ದಿನ) ಆಧಾರದಲ್ಲಿ 2014ರಲ್ಲಿ ನಡೆಸಿದಂತಹ ಸಕಾರಾತ್ಮಕ ಚುನಾವಣಾ ಅಭಿಯಾನವನ್ನು ಕೈಗೊಳ್ಳುವ ಇಚ್ಛೆಯೇ ಬಿಜೆಪಿಯಲ್ಲಿ ಇಲ್ಲದಿರುವುದು ಎದ್ದು ಕಾಣುವ ಸಂಗತಿ.

ಇದು ದುರದೃಷ್ಟದ ವಿಚಾರ ಹೌದು. ಆದರೆ ಉಪಖಂಡದಲ್ಲಿ ರಾಜಕೀಯ ನಡೆಯುವುದು ಹೀಗೇ. ಬಿಜೆಪಿ ತನ್ನಿಂದ ಸಾಧ್ಯವಾದಾಗಲೆಲ್ಲ ಈ ತಂತ್ರಗಳನ್ನು ಬಳಸುತ್ತದೆ. ಮಾಧ್ಯಮಗಳಿಗೆ ಆಕರ್ಷಕವಾಗಿ ಕಾಣಿಸುವಂತಹ ವಿಷಯಗಳನ್ನು ಎತ್ತಿಕೊಳ್ಳುವುದು ಕಾಂಗ್ರೆಸ್ಸಿಗೆ ಬಿಟ್ಟ ವಿಚಾರ. ಹಾಗೆಯೇ, ಈ ಚುನಾವಣೆಯಲ್ಲಿ ಮಾಡಿದಂತೆ ತಿಳಿದೂ ತಿಳಿದೂ ತಪ್ಪು ಮಾಡದೆ ಇರುವುದು ಕೂಡ ಆ ಪಕ್ಷಕ್ಕೆ ಬಿಟ್ಟ ವಿಚಾರ.

ಲೆಖಕ ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry