ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕತಿಮ್ಮೇಗೌಡ ಸಂಬಂಧಿಕರಿಂದ ಕೃತ್ಯ; ಪತ್ನಿ ದೂರು

ಆರು ಮಂದಿ ಪೊಲೀಸರ ವಶಕ್ಕೆ
Last Updated 10 ಡಿಸೆಂಬರ್ 2017, 20:17 IST
ಅಕ್ಷರ ಗಾತ್ರ

ಬೆಂಗಳೂರು: ರಾಜಗೋಪಾಲನಗರ ಬಳಿಯ ಹೆಗ್ಗನಹಳ್ಳಿ ವಾರ್ಡ್‌ನ ಮಾಜಿ ಕಾರ್ಪೊರೇಟರ್‌ ಗೋವಿಂದೇಗೌಡ (58) ಹತ್ಯೆ ಪ್ರಕರಣ ಸಂಬಂಧ ದೂರು ನೀಡಿರುವ ಅವರ ಪತ್ನಿ ವರಮಹಾಲಕ್ಷ್ಮಿ, ಹಳೆ ವೈಷಮ್ಯದಿಂದ ಈ ಕೃತ್ಯ ನಡೆದಿರುವುದಾಗಿ ಆರೋಪಿಸಿದ್ದಾರೆ.

ರಾಜಗೋಪಾಲ ನಗರ ಪೊಲೀಸರಿಗೆ ಶನಿವಾರ ರಾತ್ರಿ ಎರಡು ಪುಟಗಳ ಹೇಳಿಕೆ ನೀಡಿರುವ ವರಮಹಾಲಕ್ಷ್ಮಿ, ‘2016ರಲ್ಲಿ ಚಿಕ್ಕತಿಮ್ಮೇಗೌಡ ಅವರ ಕೊಲೆಯಾಗಿತ್ತು. ಆ ಸೇಡು ತೀರಿಸಿಕೊಳ್ಳಲು ಅವರ ಸಂಬಂಧಿಕರೇ ಈಗ ನನ್ನ ಪತಿಯನ್ನು ಹತ್ಯೆ ಮಾಡಿದ್ದಾರೆ. ಈ ಹಿಂದೆ ಅವರು ಹಲವು ಬಾರಿ ನಮಗೆ ಬೆದರಿಕೆ ಹಾಕಿದ್ದರು’ ಎಂದು ದೂರಿದ್ದಾರೆ.

‘ಚಿಕ್ಕತಿಮ್ಮೇಗೌಡ ಅವರ ಸಹೋದರರಾದ ಹೇಮಂತ್‌ಕುಮಾರ್‌, ನಟರಾಜ್‌, ಬಾಮೈದರಾದ ಮಂಜು ಹಾಗೂ ರಾಜಶೇಖರ್‌ ಎಂಬುವರೇ ಈ ಹತ್ಯೆ ಮಾಡಿಸಿರುವ ಅನುಮಾನವಿದೆ. ಅವರ ಜತೆ ಹಲವರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಅವರೆಲ್ಲರನ್ನೂ ಪತ್ತೆ ಹಚ್ಚಿ ಶಿಕ್ಷಿಸಿ’ ಎಂದು ವರಮಹಾಲಕ್ಷ್ಮಿ ಒತ್ತಾಯಿಸಿದ್ದಾರೆ.

‘ಅವರ ದೂರಿನನ್ವಯ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಮಾಡುತ್ತಿದ್ದೇವೆ’ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್‌ ರಾಥೋಡ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆರು ಮಂದಿ ವಶಕ್ಕೆ

ಪ್ರಕರಣದ ತನಿಖೆಗೆ ಮಲ್ಲೇಶ್ವರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ರಚಿಸಲಾಗಿರುವ ಮೂವರು ಇನ್‌ಸ್ಪೆಕ್ಟರ್‌ಗಳ ಪ್ರತ್ಯೇಕ ತಂಡಗಳು, ಆರು ಮಂದಿಯನ್ನು ಭಾನುವಾರ ವಶಕ್ಕೆ ಪಡೆದಿವೆ. ಅವರನ್ನು ವಿಚಾರಣೆಗೆ ಒಳಪಡಿಸಿ ಹತ್ಯೆ ಸಂಬಂಧ ಹಲವು ಮಾಹಿತಿ ಸಂಗ್ರಹಿಸಿರುವುದಾಗಿ ಗೊತ್ತಾಗಿದೆ.

‘ದುಷ್ಕರ್ಮಿಗಳು ಗೋವಿಂದೇಗೌಡ ಅವರನ್ನು ರಸ್ತೆಯಲ್ಲೇ ಅಟ್ಟಾಡಿಸಿದ್ದ ಹಾಗೂ ಕಲ್ಯಾಣ ಮಂಟಪಕ್ಕೆ ನುಗ್ಗಿ ಮಾರಕಾಸ್ತ್ರಗಳಿಂದ ಅವರ ಮೇಲೆ ಹಲ್ಲೆ ನಡೆಸಿದ್ದ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಆರೋಪಿಗಳ ಮುಖಚಹರೆಯು ಆ ದೃಶ್ಯಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಅದೇ ಆಧಾರದಲ್ಲಿ ಆರೋಪಿಗಳ ಗುರುತು ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಸ್ಥಳೀಯರಿಂದ ವಿಡಿಯೊ ಚಿತ್ರೀಕರಣ

ಶನಿವಾರ ಸಂಜೆ ನಡೆದ ಹತ್ಯೆ ದೃಶ್ಯಗಳನ್ನು ಕೆಲ ಸ್ಥಳೀಯರು ಮೊಬೈಲ್‌ಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಅಂಥ ದೃಶ್ಯಗಳನ್ನು ರಾಜಗೋಪಾಲನಗರ ಪೊಲೀಸರು ಸಂಗ್ರಹಿಸಿದ್ದಾರೆ. ಆರೋಪಿಗಳು ಯಾರು ಎಂಬುದು ಅವುಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿರುವುದಾಗಿ ಗೊತ್ತಾಗಿದೆ.

‘ಈಗಾಗಲೇ ಆರೋಪಿಗಳ ಬಗ್ಗೆ ಹಲವು ಸುಳಿವುಗಳು ಸಿಕ್ಕಿವೆ. ಕೆಲ ಸಾಕ್ಷಿಗಳನ್ನು ಸಂಗ್ರಹಿಸಬೇಕಿರುವುದರಿಂದ ಅವರ ಹೆಸರುಗಳನ್ನು ಗೋಪ್ಯವಾಗಿರಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT