ಉಪೇಂದ್ರ ನೇತೃತ್ವದ ಕೆಪಿಜೆಪಿಗೆ ‘ಆಟೊ’ ಚಿಹ್ನೆ

ಹುಬ್ಬಳ್ಳಿ: ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ)ಗೆ ಚಿಹ್ನೆಯಾಗಿ ಆಟೊ ಗುರುತು ಸಿಕ್ಕಿದೆ. ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ಪಕ್ಷದ ಸಂಸ್ಥಾಪಕ ಹಾಗೂ ನಟ ಉಪೇಂದ್ರ ಶನಿವಾರ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
‘ಶಿಕ್ಷಣ, ವೈದ್ಯಕೀಯ ಸೌಲಭ್ಯ, ದುಡಿಯುವ ಕೈಗಳಿಗೆ ಉದ್ಯೋಗ, ಸ್ಮಾರ್ಟ್ ವಿಲೇಜ್‌ಗಳ ನಿರ್ಮಾಣದಂತಹ ವಿಷಯಗಳು ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿರಲಿವೆ. 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು’ ಎಂದಿದ್ದಾರೆ.
‘ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ, ಇದುವರೆಗೆ ಐದಾರು ಸಾವಿರ ಅರ್ಜಿಗಳು ಬಂದಿವೆ. ಅರ್ಜಿಗಳನ್ನು ಪರಿಶೀಲಿಸಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಾಗುವುದು.
‘ಬೇರೆ ಪಕ್ಷದವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ. ಆದರೆ, ಅವರಿಗೆ ವಿಶೇಷ ಆತಿಥ್ಯ ಸಿಗುವುದಿಲ್ಲ. ಟಿಕೆಟ್ ಬೇಕಿದ್ದರೆ ಮಾನದಂಡಗಳ ಪ್ರಕಾರ ಕ್ಷೇತ್ರದ ಅಧ್ಯಯನ ಮಾಡಿರಬೇಕು. ಅಭಿವೃದ್ಧಿಯ ನೀಲನಕ್ಷೆ ಅವರ ಕೈಯಲ್ಲಿರಬೇಕು. ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂದು ನಾನಿನ್ನೂ ನಿರ್ಧರಿಸಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಪಕ್ಷ ಎಷ್ಟು ಸೀಟುಗಳನ್ನು ಗೆಲ್ಲುತ್ತದೆ ಎಂಬುದು ಮುಖ್ಯವಲ್ಲ. ಸತ್ಯದ ಹಾದಿಯಲ್ಲಿ ಇಡುವ ಒಂದೊಂದು ಹೆಜ್ಜೆಯೂ ನಮಗೆ ಗೆಲುವು. ಕಾಣಿಸುವ ರಾಜಕಾರಣ ಬೇರೆ. ಕಾಣಿಸದ ನಮ್ಮ ಪ್ರಜಾಕರಣವೇ ಬೇರೆ. ವ್ಯವಸ್ಥೆ ಬದಲಾಯಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇನೆ’ ಎಂದಿದ್ದಾರೆ.
ಪಕ್ಷಗಳಿಗೂ ರಜೆ ಬೇಕು:
‘ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಪಕ್ಷಗಳಿಗೆ ಕೆಲಸ ಮಾಡಬೇಕು. ಉಳಿದ ಸಮಯದಲ್ಲಿ ರಜೆ ಇರಬೇಕು. ಎರಡು ವರ್ಷಕ್ಕೊಮ್ಮೆ ಚಿಹ್ನೆ ಮತ್ತು ಬಾವುಟ ಬದಲಾಗಬೇಕು. ಯಾಕೆಂದರೆ, ರಾಜಕಾರಣಕ್ಕಾಗಿ ಹುಟ್ಟುಹಾಕಿದ ಪಕ್ಷಗಳನ್ನು ಬೆಳೆಸುವುದಕ್ಕಾಗಿ ನಾಯಕರು ಭ್ರಷ್ಟಾಚಾರದ ಹಾದಿ ತುಳಿಯುತ್ತಾರೆ. ಮುಂದೆ ಅಧಿಕಾರಕ್ಕೆ ಬಂದಾಗಲೂ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಾರೆ. ಆದ್ದರಿಂದ ಚುನಾವಣೆ ನಡೆಯುವ ವರ್ಷ ಮಾತ್ರ ಸಕ್ರಿಯವಾಗಿದ್ದರೆ ಒಳ್ಳೆಯದು’ ಎಂದು ಅಭಿಪ್ರಾಯಪಟ್ಟರು.
‘ಸಮಾವೇಶಗಳೇ ಜಾತಿ–ದುಡ್ಡಿನ ಮೂಲ’
‘ರಾಜಕೀಯ ದೃಷ್ಟಿಯಿಂದ ನಡೆಸುವ ದೊಡ್ಡ ಸಮಾವೇಶಗಳು ಜಾತಿ, ಧರ್ಮ ಹಾಗೂ ದುಡ್ಡಿನ ರಾಜಕಾರಣದ ಮೂಲವಾಗಿವೆ. ಜನ ಕೂಡ ವಸ್ತುಸ್ಥಿತಿ ಮರೆತು, ಅಂತಹ ರಾಜಕಾರಣಕ್ಕೆ ಹೊಂದಿಕೊಂಡಿದ್ದಾರೆ. ಆ ಮನಸ್ಥಿತಿಯನ್ನು ಬದಲಾಯಿಸಬೇಕಿದೆ. ಹಾಗಾಗಿ, ನಾನು ಹಣದ ಹೊಳೆ ಹರಿಸಿ, ಜನರನ್ನು ಸೇರಿಸಿ ಸಮಾವೇಶ ಮಾಡುವುದಿಲ್ಲ. ಎಲ್ಲಾ ಕಡೆಗೂ ನಾನೇ ಭೇಟಿ ನೀಡಿ, ಪಕ್ಷದ ವಿಚಾರಗಳನ್ನು ಹಂಚಿಕೊಳ್ಳುತ್ತೇನೆ. ನೀವೇ (ಮಾಧ್ಯಮದವರೇ) ನಮ್ಮ ಪ್ರಚಾರಕರ್ತರು. ಇದು ಸ್ಮಾರ್ಟ್‌ಫೋನ್ ಯುಗ. ಜನರಿಗೆ ನಮ್ಮ ವಿಚಾರ ತಲುಪುತ್ತದೆ ಎಂಬ ನಂಬಿಕೆ ಇದೆ’ ಎಂದಿದ್ದಾರೆ.
* ಬದಲಾವಣೆಗಾಗಿ ಈ ಹಾದಿ ತುಳಿದಿದ್ದೇನೆ. ಆ ಬಗ್ಗೆ ನನಗೆ ನಂಬಿಕೆ ಇದೆ. ನಂಬಿಕೆ ಇಲ್ಲದೆ ಬದುಕುವುದೇ ವ್ಯರ್ಥ. ಸಾಯುವವರೆಗೆ ಪ್ರಯತ್ನ ಮಾಡುತ್ತೇನೆ.
–ಉಪೇಂದ್ರ, ಕೆಪಿಜೆಪಿ ಸಂಸ್ಥಾಪಕ
ನಮ್ಮ ಪ್ರಜಾಕೀಯ ಕೆಪಿಜೆಪಿ ಪಕ್ಷದ ಅಧಿಕೃತ ಚಿಹ್ನೆ “ ಆಟೋ ರಿಕ್ಷಾ” ನಮ್ಮ ನೆಚ್ಚಿನ ಆಟೋ ರಾಜ ಶಂಕರ್ ನಾಗ್ ಸರ್ ಅವರಿಗೆ ಅರ್ಪಣೆ.
— Upendra (@nimmaupendra) December 9, 2017
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.