ಶನಿವಾರ, ಫೆಬ್ರವರಿ 27, 2021
28 °C

ವಿಜಯನಗರ ಕ್ಷೇತ್ರ: ಒಂದೇ ಕುಟುಂಬದ ತೆಕ್ಕೆಯಲ್ಲಿ ಬಿಜೆಪಿ!

ಶಶಿಕಾಂತ ಎಸ್.ಶೆಂಬಳ್ಳಿ Updated:

ಅಕ್ಷರ ಗಾತ್ರ : | |

ವಿಜಯನಗರ ಕ್ಷೇತ್ರ: ಒಂದೇ ಕುಟುಂಬದ ತೆಕ್ಕೆಯಲ್ಲಿ ಬಿಜೆಪಿ!

ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಒಂದೇ ಕುಟುಂಬಕ್ಕೆ ಸೀಮಿತವಾಗಿದೆ. ಪಕ್ಷದ ಪ್ರಮುಖ ಹುದ್ದೆಗಳನ್ನು ರಜಪೂತ್‌ ಸಿಂಗ್‌ ಮನೆತನದವರೇ ಅಲಂಕರಿಸಿರುವ ಕಾರಣ ಬೇರೆಯವರಿಗೆ ಸ್ಥಾನಮಾನವೇ ಇಲ್ಲದಂತಾಗಿದೆ.

ಕ್ಷೇತ್ರದ ಹಾಲಿ ಶಾಸಕ ಆನಂದ್‌ ಸಿಂಗ್‌ ಬಿಜೆಪಿಗೆ ಸೇರಿದವರು. ಅವರ ಹಿರಿಯ ಸಹೋದರಿ (ದೊಡ್ಡಪ್ಪನ ಮಗಳು) ರಾಣಿ ಸಂಯುಕ್ತಾ ಅವರು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಹೆಚ್ಚಿನ ಸಮಯವನ್ನು ಇಲ್ಲೇ ಕಳೆಯುತ್ತಾರೆ. ತಾಲ್ಲೂಕು ಅಧ್ಯಕ್ಷರಾಗಿರುವ ಸಂದೀಪ್‌ ಸಿಂಗ್‌ ಶಾಸಕರ ಸೋದರ ಅಳಿಯ. ಪ್ರಚಾರದ ರೂಪುರೇಷೆ ಇವರೇ ಸಿದ್ಧಪಡಿಸುತ್ತಾರೆ. ಮಹಿಳಾ ಮೋರ್ಚಾ ತಾಲ್ಲೂಕು ಅಧ್ಯಕ್ಷೆ ಕವಿತಾ ಈಶ್ವರ್‌ ಸಿಂಗ್‌ ಶಾಸಕರ ಅತ್ತಿಗೆ. ಶಾಸಕರ ಅನುಪಸ್ಥಿತಿಯಲ್ಲಿ ಪ್ರತಿಯೊಂದು ಕೆಲಸ ನೋಡಿಕೊಂಡು ಹೋಗುವ ಬಿಜೆಪಿ ಮುಖಂಡ ಧರ್ಮೇಂದ್ರ ಸಿಂಗ್‌ ಅವರು ಶಾಸಕರ ಭಾಮೈದ. ಶಾಸಕರ ಹಿರಿಯ ಸಹೋದರ ರತನ್‌ ಸಿಂಗ್‌ ಈಚೆಗಷ್ಟೇ ಬಿಜೆಪಿ ಸೇರಿದ್ದಾರೆ.

ಹೀಗೆ ಆಯಾಕಟ್ಟಿನ ಸ್ಥಳಗಳಲ್ಲಿ ಕುಟುಂಬದವರು ಇರುವ ಕಾರಣ ಬೇರೆಯವರಿಗೆ ಅವಕಾಶ ಸಿಗದಂತಾಗಿದೆ. ಸದ್ಯದ ಬೆಳವಣಿಗೆ ನೋಡಿದರೆ ಭವಿಷ್ಯದಲ್ಲೂ ಇದೇ ಕುಟುಂಬದ ಪಾರಮ್ಯ ಮುಂದುವರೆಯುವಂತೆ ಕಾಣಿಸುತ್ತದೆ. ಅಷ್ಟೇ ಅಲ್ಲ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಗಿಟ್ಟಿಸಲು ಈ ಮನೆತನದ ಇಬ್ಬರ ನಡುವೆ ಈಗಿನಿಂದಲೇ ಬಿರುಸಿನ ಪೈಪೋಟಿ ನಡೆಯುತ್ತಿದೆ. ಈ ಹಿಂದಿನ ಎರಡು ಚುನಾವಣೆ

ಗಳಲ್ಲಿ ಜಯ ಗಳಿಸಿರುವ ಹಾಲಿ ಶಾಸಕ ಆನಂದ್‌ ಸಿಂಗ್‌ 3ನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಎದುರು ನೋಡುತ್ತಿದ್ದಾರೆ. ಆದರೆ, ಇತ್ತೀಚೆಗೆ ನಡೆದ ಟಿಪ್ಪು ಸುಲ್ತಾನ್‌ ಜಯಂತಿಯಲ್ಲಿ ಭಾಗವಹಿಸಿ ಪಕ್ಷದ ವರಿಷ್ಠರ ಕೋಪಕ್ಕೆ ಗುರಿಯಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಟಿಕೆಟ್‌ ಪಡೆಯಲು ರಾಣಿ ಸಂಯುಕ್ತಾ ಪ್ರಯತ್ನಿಸುತ್ತಿದ್ದಾರೆ.

ರಾಣಿ ಸಂಯುಕ್ತಾ ಅವರ ಪತಿ ಶ್ರೀನಿವಾಸ ರಡ್ಡಿ ಅವರನ್ನು ಈಗಾಗಲೇ ಈಶಾನ್ಯ ಪದವೀಧರ ಮತಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಹೀಗಿದ್ದರೂ ರಾಣಿ ಸಂಯುಕ್ತಾ ಟಿಕೆಟ್‌ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ಕುರಿತು ರಾಣಿ ಸಂಯುಕ್ತಾ ಅವರನ್ನು ಸಂಪರ್ಕಿಸಿದಾಗ, ‘ಪತಿಗೆ ಕೊಟ್ಟರೆ ಪತ್ನಿಗೆ ಕೊಡಬಾರದು ಎಂಬ ನಿಯಮ ಇದೆಯೇ? ನಾವಿಬ್ಬರೂ ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿ ಯುತ್ತಿದ್ದೇವೆ. ನಮ್ಮ ನಮ್ಮ ಕೆಲಸ ನೋಡಿಕೊಂಡು ಪಕ್ಷ ಜವಾಬ್ದಾರಿ ವಹಿಸಿದ್ದು, ಅದನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದೇವೆ. ಒಂದೇ ಕುಟುಂಬದಲ್ಲಿ ಅನೇಕ ಜನ ಅಧಿಕಾರಿಗಳು ಇರುತ್ತಾರೆ. ಹಾಗೆಂದಾ ಕ್ಷಣ ಯಾರಾದರೂ ಒಬ್ಬರೇ ಮುಂದುವರೆಯಬೇಕು ಎಂದು ಹೇಳಲು ಆಗುತ್ತದೆಯೇ? ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯ ಟಿಕೆಟ್‌ ಆಕಾಂಕ್ಷಿಗಳಲ್ಲಿ ನಾನೂ ಒಬ್ಬಳಾಗಿದ್ದೇನೆ. ತಪ್ಪೇನಿದೆ’ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಅವರನ್ನು ಸಂಪರ್ಕಿಸಿದಾಗ ಲಭ್ಯರಾಗಲಿಲ್ಲ.

ಮೊದಲಿನಿಂದಲೂ ಪ್ರಾಬಲ್ಯ: ಶಾಸಕ ಆನಂದ್‌ ಸಿಂಗ್‌ ಅವರ ದೊಡ್ಡಪ್ಪ ಸತ್ಯನಾರಾಯಣ ಸಿಂಗ್‌ 1970ರಿಂದ 1972ರವರೆಗೆ ಹಾಗೂ 1972ರಿಂದ 1977ರ ವರೆಗೆ ವಿಜಯನಗರ ಕ್ಷೇತ್ರದಿಂದ 2ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ನಂತರ ರತನ್‌ ಸಿಂಗ್‌ 1991ರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಶಾಸಕರಾಗಿದ್ದರು. ಈಗ ಆನಂದ್‌ ಸಿಂಗ್‌ 2008 ರಿಂದ ಶಾಸಕರಾಗಿದ್ದಾರೆ. ಇದೇ ಮನೆತನಕ್ಕೆ ಸೇರಿರುವ ಆನಂದ್‌ ಸಿಂಗ್‌ ಅವರ ದೊಡ್ಡಪ್ಪನ ಮಕ್ಕಳಾದ ದೀಪಕ್‌ ಸಿಂಗ್‌ ಹಾಗೂ ಪ್ರವೀಣ್‌ ಸಿಂಗ್‌ ಸದ್ಯ ಕಾಂಗ್ರೆಸ್‌ನಲ್ಲಿದ್ದು, ಆ ಪಕ್ಷದ ಟಿಕೆಟ್‌ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. 2008ರ ಚುನಾವಣೆಯಲ್ಲಿ ದೀಪಕ್‌ ಸಿಂಗ್‌ಗೆ ಕಾಂಗ್ರೆಸ್‌ಟಿಕೆಟ್‌ ಸಿಗದಿದ್ದಾಗ ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಪ್ರವೀಣ್‌ ಸಿಂಗ್‌ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ.

**

ಗವಿಯಪ್ಪಗೆ ಕಾಂಗ್ರೆಸ್‌ ಟಿಕೆಟ್‌?

ಹಿರಿಯ ಮುಖಂಡ ಎಚ್‌.ಆರ್‌. ಗವಿಯಪ್ಪ ಅವರಿಗೆ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗುವುದು ಬಹುತೇಕ ಖಚಿತವಾಗಿದೆ ಎಂದು ತಿಳಿದು ಬಂದಿದೆ.

ಕೆಲ ಹಾಲಿ ಶಾಸಕರು ಹಾಗೂ ಪ್ರಮುಖ ಟಿಕೆಟ್‌ ಆಕಾಂಕ್ಷಿಗಳಿಗೆ ಅವರವರ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸುವಂತೆ ಸೂಚಿಸಲಾಗಿದ್ದು, ಅದರಲ್ಲಿ ಗವಿಯಪ್ಪ ಅವರ ಹೆಸರು ಕೂಡ ಇದೆ ಎನ್ನಲಾಗಿದೆ.

ಈ ಕುರಿತು ಗವಿಯಪ್ಪ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಮಾಧ್ಯಮಗಳಲ್ಲಿ ಆ ರೀತಿಯ ಸುದ್ದಿ ಬಂದಿದೆ ಎಂದು ಗೊತ್ತಾಗಿದೆ. ಪಕ್ಷದಿಂದ ಇದುವರೆಗೆ ಅಂತಹ ಯಾವುದೇ ಸೂಚನೆ ಅಥವಾ ಮಾಹಿತಿ ಬಂದಿಲ್ಲ. ಆದರೆ, ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.