ಗುರುವಾರ , ಮಾರ್ಚ್ 4, 2021
18 °C
ದಾಸ ಶ್ರೇಷ್ಠ ಕನಕದಾಸರ ಸಾಹಿತ್ಯ ಚಿಂತನಗೋಷ್ಠಿ: ಶಾಸಕ ರಾಜಶೇಖರ ಪಾಟೀಲ ಸಲಹೆ

ಕನಕದಾಸರ ತತ್ವದ ಪಾಲನೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕದಾಸರ ತತ್ವದ ಪಾಲನೆಯಾಗಲಿ

ಬಸವಕಲ್ಯಾಣ: ‘ದಾಸಶ್ರೇಷ್ಠ ಕನಕದಾಸರ ತತ್ವವನ್ನು ಎಲ್ಲರೂ ಪಾಲಿಸಿದರೆ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಸಾಧ್ಯ’ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ಇಲ್ಲಿ ಶಾರದಾ ಶಿಕ್ಷಣ ಸಂಸ್ಥೆಯಿಂದ ಸಂಸ್ಥೆ ಅಧ್ಯಕ್ಷ ತುಕಾರಾಮ ಮಲ್ಲಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ಆಯೋಜಿಸಿದ್ದ ದಾಸ ಶ್ರೇಷ್ಠ ಕನಕದಾಸರ ಸಾಹಿತ್ಯ ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದುಳಿದ ಸಮಾಜದವರು ಶಿಕ್ಷಣ ಪಡೆದು ಅಭಿವೃದ್ಧಿ ಪಥದಲ್ಲಿ ಸಾಗಬೇಕು. ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ ಮಾತನಾಡಿ, ‘ಕನಕದಾಸರು ತಳ ಸಮುದಾಯದವರ ಉದ್ಧಾರಕ್ಕಾಗಿ ಪ್ರಯತ್ನಿಸಿದ್ದರು. ತಮ್ಮ ಕೀರ್ತನೆಗಳ ಮೂಲಕ ಜಾತಿ ವ್ಯವಸ್ಥೆ, ಭ್ರಷ್ಟಾಚಾರವನ್ನು ಖಂಡಿಸಿದ್ದಾರೆ’ ಎಂದರು.

ಸಾರ್ವಜನಿಕ ಗ್ರಂಥಾಲಯ ಪುಸ್ತಕ ಖರೀದಿ ಇಲಾಖೆಯ ನಿರ್ದೇಶಕಿ ಡಾ.ಜಯದೇವಿ ಗಾಯಕವಾಡ ಮಾತನಾಡಿ, ‘ಕನಕದಾಸರು ತಂಬೂರಿ ಹಿಡಿದು ಮನೆ ಮನೆ ಓಡಾಡಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿದ್ದರು. ಬರಿ ಕೀರ್ತನೆ ಹಾಡಲಿಲ್ಲ. ಸಾಹಿತ್ಯ ರಚಿಸಿದರು. ಮೂಢನಂಬಿಕೆಯನ್ನು ವಿರೋಧಿಸಿದರು. ಅವರ ರಾಮಧಾನ್ಯ ಚರಿತೆಯಲ್ಲಿ ರಾಗಿ ಬಡವರ ಪ್ರತೀಕವಾದರೆ ಅಕ್ಕಿ ಶ್ರೀಮಂತರನ್ನು ಪ್ರತಿನಿಧಿಸುತ್ತದೆ. ಈ ಮೂಲಕ ಅವರು ವರ್ಗಭೇದವನ್ನು ಖಂಡಿಸಿದ್ದಾರೆ’ ಎಂದರು.

ಉಪನ್ಯಾಸಕ ಡಾ.ಬಲರಾಂ ಹುಡೆ, ಗೊಂಡ ಕುರುಬ ಸಮಾಜದ ಹಿರಿಯ ಮುಖಂಡ ಚಂದ್ರಕಾಂತ ಮೇತ್ರೆ ಮಾತನಾಡಿದರು.

ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಕನಕ ಯುವ ಪ್ರಶಸ್ತಿ ಪಡೆದಿರುವ ಡಾ.ಗವಿಸಿದ್ದಪ್ಪ ಪಾಟೀಲ ಹಾಗೂ ತುಕಾರಾಮ ಮಲ್ಲಪ್ಪ ಅವರನ್ನು ಸನ್ಮಾನಿಸಲಾಯಿತು. ಬೇಲೂರ ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಗೌರ ಬೀರಪ್ಪ ಮುತ್ತ್ಯಾ, ಮಲ್ಲಿಕಾರ್ಜುನ ಪೂಜಾರಿ, ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮದ ನಿರ್ದೇಶಕ ಅರ್ಜುನ ಕನಕ, ಶಿವರಾಜ ನರಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ನಿರ್ಮಲಾ ಮಾನಿಗೋಪಾಳೆ, ರಾಜಶೇಖರ ಮೇತ್ರೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಯಲ್ಲಮ್ಮ ತುಕಾರಾಮ, ಜಬ್ಬಾರಸಾಬ್ ಗೋಬರೆ, ವಿಕ್ರಮ ಪಾಟೀಲ, ಧನರಾಜ ದೊಡ್ಮನಿ, ನಗರಸಭೆ ಅಧ್ಯಕ್ಷ ಅಜರ ಅಲಿ ನವರಂಗ, ವೀರಣ್ಣ ಪಾಟೀಲ ಉಪಸ್ಥಿತರಿದ್ದರು. ಕಿಣ್ಣಿವಾಡಿ ಜೈಹನುಮಾನ ಕಲಾತಂಡದಿಂದ ಜನಪದ ಗೀತೆ ಹಾಡಲಾಯಿತು. ವಿವಿಧ ಗ್ರಾಮಗಳ ತಂಡಗಳಿಂದ ಡೊಳ್ಳು ಕುಣಿತ ಪ್ರದರ್ಶಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.