ಶನಿವಾರ, ಫೆಬ್ರವರಿ 27, 2021
28 °C

‘ಭರ್ತಿಯಾದ ಕೆರೆಗಳಿಗೆ ನೀರು ತುಂಬಿಸುವ ಸಚಿವ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಭರ್ತಿಯಾದ ಕೆರೆಗಳಿಗೆ ನೀರು ತುಂಬಿಸುವ ಸಚಿವ’

ಯಲಬುರ್ಗಾ: ‘ಭರ್ತಿಯಾದ ಕೆರೆಗಳಿಗೆ ನೀರು ತುಂಬಿಸುವ ಹಾಗೂ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಕೇವಲ ಪ್ರಚಾರದಲ್ಲಿ ತೊಡಗಿದ್ದಾರೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಲಪ್ಪ ಆಚಾರ ಆರೋಪಿಸಿದರು.

ತಾಲ್ಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಶನಿವಾರ ಬಿಜೆಪಿ ಪರಿವರ್ತನಾ ಯಾತ್ರೆ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಖಾಸಗಿ ವ್ಯಕ್ತಿಗಳು ಹಾಗೂ ಗ್ರಾಮಸ್ಥರು ಸೇರಿ ಅನೇಕ ಕೆರೆಗಳನ್ನು ಅಭಿವೃದ್ಧಿಗೊಳಿಸಿದ ಪರಿಣಾಮ ಈಚೆಗೆ ಸುರಿದ ಮಳೆಗೆ ತಾಲ್ಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿವೆ. ತುಂಬಿದ ಕೆರೆಗಳಲ್ಲಿ ಸಚಿವರು ಹೇಗೆ ನೀರು ತುಂಬಿಸುತ್ತಾರೆ’ ಎಂದು ಪ್ರಶ್ನಿಸಿದರು.

100 ಹಾಸಿಗೆ ಆಸ್ಪತ್ರೆಗೆ ಸಿಬ್ಬಂದಿ ಹಾಗೂ ವೈದ್ಯರ ನೇಮಕದಲ್ಲಿ ಉದಾಸೀನ ತೋರಿದ್ದಾರೆ. ರೇಷ್ಮೆ ಕೃಷಿಯನ್ನು ಅಭಿವೃದ್ಧಿಗೊಳಿಸಲು ವಿಶೇಷ ಅನುದಾನ ತರದೇ ನಿರ್ಲಕ್ಷಿಸಿ ರೇಷ್ಮೆ ಇಲಾಖೆಯ ಜಮೀನನ್ನು ಶಿಕ್ಷಣ ಇಲಾಖೆಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. ರೈಲು ಯೋಜನೆಗೆ ವಶಪಡಿಸಿಕೊಂಡ ಭೂಮಿಗೆ ಪರಿಹಾರ ಸಿಕ್ಕಿಲ್ಲ. ಭೂ ಸ್ವಾಧೀನಕ್ಕಾಗಿ ತೋರುವ ಆಸಕ್ತಿ ಪರಿಹಾರ ಕೊಡಿಸುವಲ್ಲಿ ಇರದೇ ಇರುವುದು ರೈತರ ವಿರೋಧಿ ನೀತಿಯಾಗಿದೆ’ ಎಂದು ದೂರಿದರು.

ಡಿ.19ರಂದು ಕುಕನೂರು ಪಟ್ಟಣದಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ರಾಜ್ಯಮಟ್ಟದ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ತಾಲ್ಲೂಕಿನ ಕಾರ್ಯಕರ್ತರು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಡಿವೆಪ್ಪ ಭಾವಿಮನಿ, ಬಿಜೆಪಿ ರತನ್ ದೇಸಾಯಿ, ಜಿಪಂ ಮಾಜಿ ಸದಸ್ಯ ಸಿ.ಹೆಚ್.ಪಾಟೀಲ, ರಸೂನಸಾಬ ದಮ್ಮೂರ ಮಾತನಾಡಿದರು.

ಜಿಪಂ ಮಾಜಿ ಸದಸ್ಯೆ ಶಕುಂತಲಾದೇವಿ ಮಾಲಿಪಾಟೀಲ, ಅಯ್ಯನಗೌಡ ಕೆಂಚಮ್ಮನವರ, ತಾ.ಪಂ ಸದಸ್ಯ ಶರಣಪ್ಪ ಈಳಗೇರ, ಗ್ರಾಪಂ ಉಪಾಧ್ಯಕ್ಷ ಭರಮಪ್ಪ ಅಗಸಿಮುಂದಿನ, ಲಿಂಬನಗೌಡ ಪಾಟೀಲ, ತಿರುಗುಣೆಪ್ಪ ಸಾಸ್ವಿಹಾಳ, ರಂಗಪ್ಪ ಕಟ್ಟಿಮನಿ, ರಾಮಣ್ಣ ನಾಯಕ, ಡಾ.ಶಂಕ್ರಪ್ಪ ರಾಂಪೂರ, ಬಸಪ್ಪ ಹಳ್ಳದ, ಈರಪ್ಪ ಕಟ್ಟಿಮನಿ, ದುರಗಪ್ಪ ಹರಿಜನ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.